ಪುಟ:Rangammana Vathara.pdf/೭೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

60

ಸೇತುವೆ

ದೀಪದ ಅವಸ್ಥೆ ಏನೆಂಬುದನ್ನು ಮೊದಲೇ ತಿಳಿದಿದ್ದ ಚಂಪಾ ಗಂಡನಿಗೆ
ಹೇಳಿದಳು:
"ದೀಪ ಹಾಕ್ಕೋಬಾರ್ದೆ? ಸಾಮಾನುಗಳೆಲ್ಲ ಇವೆಯೋ ಇಲ್ವೋ ಏನೂ ಕಾಣಿ
ಸೋದೇ ಇಲ್ಲ."
ಹೆಂಡತಿಯ ಆ ಮಾತಿಗಾಗಿ ಮನಸ್ಸಿನಲ್ಲೆ ಖುಷಿಯಾದ ಗಂಡ, "ಕರೆಂಟ್
ಇಲ್ಲಾಂತ ತೋರುತ್ತೆ" ಎಂದು ಹೇಳುತ್ತ, ರಂಗಮ್ಮನ ಮುಖ ನೋಡುತ್ತ, ವಿದ್ಯುತ್
ಗುಂಡಿಯನ್ನು ಮುಟ್ಟಿದ.
ರಂಗಮ್ಮ, ಆ ಸಂಭಾಷಣೆ ತಮಗೆ ಕೇಳಿಸದವರಂತೆ ಅತ್ತಿತ್ತ ನೋಡಿದರು.
ಚಂಪಾ ಕೇಳಿಸುವ ಹಾಗೆ ಅಂದಳು:
"ಸ್ವಲ್ಪ ದೀಪ ಹಾಕ್ತೀರಾ?"
ರಂಗಮ್ಮ 'ಹೂಂ' ಅನ್ನಲಿಲ್ಲ; 'ಊಹೂಂ' ಅನ್ನಲಿಲ್ಲ. ಚಕಾರವೆತ್ತದೆ ತಮ್ಮ
ಮನೆಗೆ ಹೋಗಿ ವಿದ್ಯುತ್ ಹಿಡಿಯನ್ನೆಳೆದರು. ಎಳೆದ ಮೇಲೆ "ದೀಪ ಬಂತೆ?"
ಎಂದು ಕೇಳಲೂ ಇಲ್ಲ. ಹುಬ್ಬುಗಂಟಿಕ್ಕಿ ಮನೆಯಲ್ಲೆ ಕುಳಿತರು.
ಇದನ್ನೆಲ್ಲ ನೋಡುತ್ತಿದ್ದ ವಠಾರದ ಹೆಂಗಸರು ಪೆಚ್ಚಾಗಿ ಹೋದರು.
ಕಾಂತಿಹೀನವಾಗಿದ್ದ ಬೆಳಕನ್ನು ನೋಡುತ್ತ ಚಂಪಾ ಅಂದಳು:
"ಎಷ್ಟೊಂದು ಶುಭ್ರವಾಗಿದೆ?"
ಗಂಡ ಹೇಳಿದ:
"ಪ್ರಚಂಡೆ ಕಣೇ ನೀನು. ಆ ವಯಸ್ಸಾದೋರ್ನ ಗೋಳು ಹುಯ್ಕೊಂಡೆಯಲ್ಲ!
ನರಕಕ್ಕೆ ಹೋಗ್ತಿ ನೋಡು!"
"ಮೆತ್ತಗೆ ಮಾತ್ನಾಡಿ..."
ಇಷ್ಟೆಲ್ಲವೂ ನಡೆಯುತ್ತದ್ದಾಗ ಮಗು ಸುತ್ತು ಮುತ್ತಲೆಲ್ಲ ಪಿಳಿ ಪಿಳಿ ನೋಡು
ತ್ತಲೇ ಇತ್ತು. ಉರಿಯತೊಡಗಿದ ದೀಪ ಕ್ಷಣ ಕಾಲ ಅದರ ಪಾಲಿಗೆ ದೊಡ್ಡ
ಆಕರ್ಷಣೆಯಾಯಿತು. ಆದರೆ, ಎಷ್ಟು ಹೊತ್ತಾದರೂ ತನ್ನ ಕಡೆಗೆ ಯಾರೂ ಗಮನ
ಕೊಡುತ್ತಿಲ್ಲವೆಂದು ಬೇಸರಗೊಂಡು ಅಳತೊಡಗಿತು.
ಶಂಕರನಾರಾಯಣಯ್ಯ ರೇಗುತ್ತ ಹೇಳಿದ:
"ಅಳಿಸ್ಬೇಡ ಮಗೂನ. ಯಾವ ಡಬ್ಬದಲ್ಲಿಟ್ಟಿದೀಯಾ ಬಿಸ್ಕತ್ತು ಪೊಟ್ಣಾನ?
ತೆಕ್ಕೊಡ್ಬಾರ್ದೇನು?"
ಚಂಪಾ ಪ್ರಯಾಸಪಟ್ಟು ಆ ಡಬ್ಬವನ್ನು ಗುರುತಿಸಿ, ಬಿಸ್ಕತ್ತು ಹೊರತೆಗೆದು,
ಮಗಳ ಬಾಯಿಗೆ ತುರುಕಿದಳು. ಕೈಗೊಂದು ಚೂರು ಕೊಟ್ಟು ಮಗುವನ್ನು ಚಾಪೆಯ
ಮೇಲೆ ಆಡಲು ಬಿಟ್ಟಳು. ತಾನು ಸೆರಗನ್ನು ಸೊಂಟಕ್ಕೆ ಬಿಗಿದು ಗಂಡನ ಜತೆಯಲ್ಲಿ
ಸಾಮಾನುಗಳನ್ನು ಎತ್ತಿಡತೊಡಗಿದಳು.
ವಠಾರಕ್ಕೆ ಒಬ್ಬೊಬ್ಬರಾಗಿ ಗಂಡಸರು ಹಿಂತಿರುಗು ಬಂದರು. ಕತ್ತಲಾಯಿತು.