ಪುಟ:Mysore-University-Encyclopaedia-Vol-1-Part-1.pdf/೧೭೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಡಕವಾಗಿರುತ್ತದೆ. ಅದನ್ನು ಇಂಟರ್ ಗ್ರಾನ್ಯುಲಾರ್ (ಅಂತರ್‍ಕಣೀಯ) ವಿನ್ಯಾಸ ಎಂದು ಕರೆಯುತ್ತಾರೆ. ಹಾಗಿರದೇ, ಪ್ಲೇಜಿಯೊಕ್ಲೇಸ್ ಚೌಕಟ್ಟುಗಳೊಳಗೆ ಅಸ್ಫಟಿಕ ವಸ್ತುಗಳು ಅಥವಾ ಬಹು ಸೂಕ್ಷ್ಮ ಕ್ಲೊರಿಟಿಕ್ ಅಥವಾ ಸರ್ಪೆಂಟಿನ್ ಖನಿಜಗಳಿದ್ದರೆ, ಇಂತಹ ವಿನ್ಯಾಸವನ್ನು ಇಂಟರ್‍ಸರ್ಟಲ್ ವಿನ್ಯಾಸ ಎಂದು ಕರೆಯುತ್ತಾರೆ. ಬಸಾಲ್ಟ್ ಶಿಲೆಗಳಲ್ಲಿ ಕೆಲವೊಮ್ಮೆ ಯಾವ ತರಹದ ಅಸ್ಫಟಿಕ ವಸ್ತುವಾಗಲೀ ಅಥವಾ ಸೂಕ್ಷ್ಮ ಖನಿಜಾಂಶವಾಗಲೀ ಇರದೆ, ಸಂಪೂರ್ಣ ಸೂಕ್ಷ್ಮ ಕಣಗಳ ರಚನೆಯನ್ನು ಯಾವೊಂದೂ ಕಣ ರಚೆನಯು ಗೋಚರವಾಗದೆ ಗಾಜಿನಂತಹ ಅಸ್ಫಟಿಕ ವಿನ್ಯಾಸ ಹೊಂದಿದ್ದರೆ, ಇದಕ್ಕೆ ಟ್ಯಾಕಿಲಿಟಿಕ್ ವಿನ್ಯಾಸ ಎಂದು ಹೆಸರು. ಪ್ರವಾಹ ರಚನೆ: ಮಾತೃಶಿಲಾದ್ರವವು ಹೊರಹೊಮ್ಮಿ ಪ್ರವಾಹದಂತೆ ಹರಿಯುತ್ತದೆ (ಭೂಮಿಯ ಇಳಿವೋರೆಯನ್ನನುಸರಿಸಿ). ಈ ಕ್ರಿಯೆಯು ಬಾಹ್ಯಸ್ಥ ಶಿಲೆಗಳಲ್ಲಿ ವಿಶಿಷ್ಟ ರಚನೆಗಳಿಗೆ ಕಾರಣವಾಗುತ್ತದೆ. ಈ ರಚನೆಗಳನ್ನು ಪ್ರವಾಹ ರಚನೆ ಎಂದು ಕರೆಯುತ್ತಾರೆ. ಪ್ರವಾಹದಿಂದ ಉಂಟಾದ ಸೂಕ್ಷ್ಮ ಗೆರೆಗಳು, ಪ್ರವಾಹ ಶಿಲೆಗಳಲ್ಲಿ ಮೊತ್ತಮೊದಲಿಗೆ ಉದ್ಭವಿಸುವ ಕ್ರಿಸ್ಟಲೈಟ್‍ಗಳು, ಮೈಕ್ರೊಲೈಟ್‍ಗಳು ಮತ್ತು ಸೂಕ್ಷ್ಮಹರಳುಗಳು ಪ್ರವಾಹದ ತುಯ್ತಕ್ಕೆ ಸಿಕ್ಕಿ ನಿರ್ದಿಷ್ಟ ದಿಕ್ಕುಗಳಲ್ಲಿ ಅಥವಾ ಜಾಡುಗಳಲ್ಲಿ ಸಂಗ್ರಹಿಸಿ ಪರಸ್ಫರ ಸಮಾಂತರವಾಗಿ ಓರೆಗೊಂಡಿರುತ್ತವೆ. ಈ ವಿನ್ಯಾಸಗಳು ಟ್ರ್ಯಾಕಿಲೈಟ್ ಎಂಬ ಬಗೆಯ ಬಾಹ್ಯಸ್ಥ ಶಿಲೆಗಳಲ್ಲಿ ಅತ್ಯಂತ ಉತ್ತಮವಾಗಿ ಕಾಣಬಹದು. ಅದಕ್ಕಾಗಿಯೇ ಈ ವಿನ್ಯಾಸದ ಟ್ರ್ಯಾಕಿಲಿಟಿಕ್ ವಿನ್ಯಾಸ ಎಂದು ಕರೆಯಲಾಗಿದೆ. ಫೆಲ್ಡ್‍ಸ್ಟಾರ್ ಖನಿಜದ ಪಟ್ಟಕಗಳು ಪ್ರವಾಹ ರಚನೆಯನ್ನು ತೋರುತ್ತ ಗಾಜುವಸ್ತುವಿನ ಮಾತೃಕೆಯಲ್ಲಿ ಕಂಡುಬರುವ ವಿನ್ಯಾಸವನ್ನು ಹಯಲೊಫಿಲಿಟಿಕ್ ರಚನೆ ಎಂದು ಕರೆದಿದೆ. ಇದರಲ್ಲಿ ಗಾಜಿನ ಅಂಶವಿರದೆ ಉತ್ತಮ ಬಗೆಯ ಪ್ರವಾಹ ವಿನ್ಯಾಸ ತೋರಿಬಂದಲ್ಲಿ ಅದನ್ನು ಪೈಲೊಟ್ಯಾಕ್ಸಿಟಿಕ್ ವಿನ್ಯಾಸ ಎಂದು ಕರೆಯುತ್ತಾರೆ. ಟ್ರ್ಯಾಕೈಟ್ ಶಿಲೆಗಳನ್ನು ಹೋಲುವಂತಹ ಶಿಲೆಗಳಲ್ಲಿ (ಉದಾ: ಸಯನೈಟ್) ಈ ವಿನ್ಯಾಸ ಕಂಡುಬಂದರೆ ಅಂತಹವುಗಳನ್ನು ಟ್ರ್ಯಾಕಿಟಾಯಿಡ್ ವಿನ್ಯಾಸ ಎನ್ನುತ್ತಾರೆ. ಹೆಣಿಗೆ ವಿನ್ಯಾಸ: ಶಿಲೆಯ ಖನಿಜ ಘಟಕಗಳು ಪರಸ್ಫರ ಹೆಣೆದು ಬೆಳೆದುಕೊಂಡಿ ರುವುದನ್ನು ಹೆಣಿಗೆ ವಿನ್ಯಾಸ ಎನ್ನುತ್ತಾರೆ. ಶಿಲೆ ಘನೀಕರಿಸುವಾಗ ಎರಡು ಖನಿಜ ಘಟಕಗಳು ಒಂದು ನಿರ್ದಿಷ್ಟ ಉಷ್ಣತೆಯಲ್ಲಿ ಒಮ್ಮೆಗೆ ಸ್ಫಟಿಕೀಕರಿಸಿ ಬೆಳದಾಗ ಈ ಹೆಣಿಗೆ ವಿನ್ಯಾಸ ಸೃಷ್ಟಿಯಾಗುತ್ತದೆ. ಪೆಗ್ಮಟೈಟ್ ಎಂಬ ಶಿಲೆಯಲ್ಲಿ ಕ್ವಾಟ್ರ್ಜ್ ಮತ್ತು ಫೆಲ್ಡ್‍ಸ್ಪಾರ್ ಖನಿಜಗಳು ಪರಸ್ಫರ ಹೆಣೆದುಕೊಂಡಿರುವುದನ್ನು ನಿಚ್ಚಳವಾಗಿ ಕಾಣಬಹುದು. ಆದ್ದರಿಂದಲೇ ಈ ವಿನ್ಯಾಸದ ಪೆಗ್ಮಟಿಟಿಕ್ ಅಥವಾ ಗ್ರಾಫಿಕ್ ವಿನ್ಯಾಸವೆಂತಲೂ ಕರೆಯುತ್ತಾರೆ. ಇವು ಗಾತ್ರದಲ್ಲಿ ಸೂಕ್ಷ್ಮವಾಗಿದ್ದಲ್ಲಿ, ಶಿಲೆಯನ್ನು ಮೈಕ್ರೊಪೆಗ್ಮಟೈಟ್ ಎಂದೂ ಮತ್ತು ವಿನ್ಯಾಸವನ್ನು ಮೈಕ್ರೊಪೆಗ್ಮಟಿಟಿಕ್ ವಿನ್ಯಾಸವೆಂದು ಕರೆಯುತ್ತಾರೆ. ಹೆಣಿಗೆಯು, ಸೂಕ್ಷ್ಮ ಮತ್ತು ಅಸ್ಫಷ್ಟವಾಗಿ ದ್ದರೆ ಅದನ್ನು ಗ್ರ್ಯಾನೊಫಿರಿಕ್ ವಿನ್ಯಾಸ ಎನ್ನುತ್ತಾರೆ. ಕೆಲವೊಮ್ಮೆ ಹೆಣಿಗೆ ವಿನ್ಯಾಸವು ಫೆಲ್ಡ್‍ಸ್ಪಾರ್ ಘಟಕದ ವಿವಿಧ ಪ್ರಬೇಧಗಳ ನಡುವೆ ಕಾಣಿಸಬಹುದು. ಆರ್ಥೊಕ್ಲೇಸ್ ಹರಳಿನಲ್ಲಿ (ಪೊಟ್ಯಾಶಿಯಮ್-ಫೆಲ್ಡ್‍ಸ್ಪಾರ್) ಸಣ್ಣ ಸಣ್ಣ ಕಣಗಳ ಆಲ್ಬೈಟ್ ಕಣಗಳು (ಸೋಡಿಯಮ್-ಫೆಲ್ಡ್‍ಸ್ಪಾರ್) ಅಡಕವಾಗಿದ್ದು ಒಂದು ರೀತಿಯ ಹೆಣಿಗೆ ಕಂಡುಬರುತ್ತದೆ. ಇದನ್ನು ಪರ್ಥಿಟಿಕ್ ವಿನ್ಯಾಸ ಎನ್ನುತ್ತಾರೆ. ಆರ್ಥೊಕ್ಲೇಸ್ ಬದಲಾಗಿ ಮೈಕ್ರೊಕ್ಲೀನ್ (ಆರ್ಥೊಕ್ಲೇಸ್‍ನ ಇನ್ನೊಂದು ರೂಪ) ಇದ್ದಲ್ಲಿ ಮೈಕ್ರೊಕ್ಲೀನ್ ಪರ್ಥೈಟ್ ಎಂತಲೂ ಸೋಡಮೈಕ್ರೊಕ್ಲೀನ್ ಅಥವಾ ಸೋಡ ಆರ್ಥೊಕ್ಲೇಸ್ ಇದ್ದಲ್ಲಿ ಕ್ರಿಪ್ಟೊಪರ್ಥೈಟ್ ಎಂತಲೂ ಕರೆಯುತ್ತಾರೆ. ಹೆಣಿಗೆಯ ವಿನ್ಯಾಸವನ್ನು ಅನುಸರಿಸಿ ಪ್ಯಾಚ್‍ಪರ್ಥೈಟ್, ಸ್ಟ್ರಿಂಗ್‍ಪರ್ಥೈಟ್ ಮತ್ತು ಬೀಡ್‍ಪರ್ಥೈಟ್ ಎಂಬ ರಚನೆಗಳನ್ನು ಗುರುತಿಸಬಹುದು. ಈವಿನ್ಯಾಸಕ್ಕೆ ಪ್ರತಿಯಾಗಿ ಪ್ಲೇಜಿಯೊಕ್ಲೇಸ್‍ನಲ್ಲಿ ಆರ್ಥೊಕ್ಲೇಸ್‍ನ ಕಣಗಳು ಹುದುಗಿ ಹೆಣೆದುಕೊಂಡಿದ್ದಲ್ಲಿ ಅದನ್ನು ಆಂಟಿ-ಪರ್ಥೈಟ್ ವಿನ್ಯಾಸವೆಂದು ವಿವರಿಸಬೇಕು. ಪರ್ಥಿಟಿಕ್ ಮತ್ತು ಆಂಟಿ-ಪರ್ಥಿಟಿಕ್ ವಿನ್ಯಾಸಗಳು ಹೊರಹೊಮ್ಮುವಿಕೆ ಕ್ರಿಯೆಯಿಂದ ಸೃಷ್ಟಿಯಾಗಿರುತ್ತವೆ. ಅಧಿಕ ಉಷ್ಣ / ಒತ್ತಡ ಮಟ್ಟದಲ್ಲಿ ಕೆಲವು ಖನಿಜಗಳು ಒಂದೇ ಪ್ರಬೇಧವಾಗಿ ಸೃಷ್ಟಿಯಾಗಿದ್ದು ಅದರ ಉಷ್ಣತೆಯು ಕಡಿಮೆಯಾದಂತೆ ಒಂದು ನಿರ್ದಿಷ್ಟ ಕೆಳಮಟ್ಟದ ಉಷ್ಣತೆಯಲ್ಲಿ / ಒತ್ತಡದಲ್ಲಿ ಎರಡು ಪ್ರಬೇಧಗಳಾಗಿ ವಿಭಜನೆಗೊಳ್ಳುವ ಕ್ರಿಯೆಯನ್ನು ಹೊರಹೊಮ್ಮುವಿಕೆ (exsoಟuಣioಟಿ) ಎನ್ನುತ್ತಾರೆ. ಈ ಹೆಣಿಗೆ ರಚನೆಯು ಕೇವಲ ಶ್ವೇತಖನಿಜಗಳಿಗೆ ಸೀಮಿತವಾಗಿರದೆ ಕೆಲವು ಬಾರಿ ಕೃಷ್ಣಖನಿಜಗಳು ಆಗಾಗ್ಗೆ ಪರಸ್ಫರ ಹೆಣೆದುಕೊಂಡಿರುತ್ತವೆ. ಪ್ರತಿಕ್ರಿಯಾ ರಚನೆಗಳು : ಶಿಲಾದ್ರವವು ಘನೀಕರಿಸುವಾಗ ವಿವಿಧ ಖನಿಜಗಳು ಒಂದಾದ ಮೇಲೊಂದರಂತೆ ಒಂದು ಕ್ರಮದಲ್ಲಿ ಜನಿಸುತ್ತವೆ. ಈ ರೀತಿಯ ಸ್ಫಟಿಕೀಕರಣ ಕ್ರಿಯೆ ಜರಗುವ ಸಮಯದಲ್ಲಿ ಮೊದಲು ಜನಿಸಿದ ಖನಿಜಗಳು ಶಿಲಾದ್ರವದೊಂದಿಗೆ ಪ್ರತಿಕ್ರಿಯಿಸಿ, ಒಂದು ಹೊಸ ಖನಿಜವನ್ನು ಸೃಷ್ಟಿಸುವ ಸಾಧ್ಯತೆಯಿರುತ್ತದೆ. ಈ ಪ್ರತಿಕ್ರಿಯೆ ಸಂಪೂರ್ಣವಾಗದೆ, ಮಧ್ಯಭಾಗದಲ್ಲಿ ಮೊದಲು ಜನಿಸಿದ ಖನಿಜವಿದ್ದು ಅದರ ಸುತ್ತಲೂ ಮೇಲೆ ಹೇಳಿದ ಪ್ರತಿಕ್ರಿಯೆಯಿಂದ ಉಂಟಾದ ಮತ್ತೊಂದು ಖನಿಜ ಘಟಕದ ವಲಯ ನಿರ್ಮಾಣವಾಗುತ್ತದೆ. ಈ ರಚನೆಯನ್ನು ಪ್ರತಿಕ್ರಿಯಾ ರಚನೆ ಎಂದು ಹೆಸರಿಸಲಾಗಿದೆ.