ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಪಾಣಿನಿ

ವಿಕಿಸೋರ್ಸ್ದಿಂದ

ಪಾಣಿನಿ ಸುಪ್ರಸಿದ್ಧ ಸಂಸ್ಕøತ ವ್ಯಾಕರಣ ಕರ್ತೃ. ತಾಯಿ ದಾಕ್ಷಾ ಅಥವಾ ದಾಕ್ಷೀ. ತಂದೆ ಶಲಂಕ, ಗಾಂಧಾರದೇಶದ ಶಲಾತುರಗ್ರಾಮದವ. ಆ ಗ್ರಾಮವನ್ನು ಸ್ವತಃ ನೋಡಿ ಬಂದ ಹ್ಯುಯೆನ್ ತ್ಸಾಂಗ್ ಈಗಿನ ಓಹಿಂಡ್ (ಉದ್ಭಾಂಡ) ನಗರದಿಂದ ನಾಲ್ಕು ಮೈಲಿ ದೂರದಲ್ಲಿ ಆ ಗ್ರಾಮ ಇದ್ದುದಾಗಿಯೂ ಅಲ್ಲಿ ಪಾಣಿನಿಯ ಸ್ಮಾರಕವಾಗಿ ಸ್ಥಾಪಿತವಾಗಿದ್ದ ಪ್ರತಿಮೆಯೊಂದನ್ನು ತಾನು ಕಂಡುದಾಗಿಯೂ ಬರೆದಿಟ್ಟಿದ್ದಾನೆ. ಪಾಣಿನಿಯನ್ನು ಅವನ ತಾಯಿಯ ಹೆಸರಿನ ಮೇಲೆ ದಾಕ್ಷಾ (ದಾಕ್ಷೀ) ಪುತ್ರನೆಂದೂ ತಂದೆಯ ಹೆಸರಿನ ಮೇಲೆ ಶಾಲಂಕನೆಂದೂ ಗ್ರಾಮದ ಹೆಸರಿನ ಮೇಲೆ ಶಾಲಾತುರೀಯ ಎಂದೂ ಕರೆಯುತ್ತಿದ್ದುದುಂಟು. ಶಾಲಾ ತುರೀಯ ಎಂಬ ರೂಪವನ್ನು ಪಾಣಿನಿಯೇ ತನ್ನ ಗ್ರಂಥದಲ್ಲಿ ವಿವರಿಸಿದ್ದಾನೆ. ಈತನಿಗೆ ಅಹಿಕ ಎಂಬ ಇನ್ನೊಂದು ಹೆಸರೂ ಇತ್ತು. ಚಂದ್ರಗುಪ್ತನ ತಂದೆ ನಂದನ ಕಾಲದಲ್ಲಿ (ಕ್ರಿ.ಪೂ 215-291) ಪಾಟಲೀಪುತ್ತದಲ್ಲಿದ್ದ ವರ್ಷ ಎಂಬ ಆಚಾರ್ಯರಲ್ಲಿ ಪಾಣಿನಿ ಶಿಷ್ಯನಾಗಿದ್ದುದಾಗಿ ಕಥಾಸರಿತ್ಸಾಗರದಲ್ಲಿ ಹೇಳಿದೆ. ಪಾಣಿನಿ ಸಿಂಹದ ಬಾಯಿಗೆ ತುತ್ತಾಗಿ ಮರಣಕ್ಕೀಡಾದನೆಂದು ಕಥೆಯೊಂದರಿಂದ ತಿಳಿದುಬರುತ್ತದೆ.

ಪಾಣಿನಿಯ ಕಾಲವೂ ನಿಷ್ಕøಷ್ಟವಾಗಿ ತಿಳಿದು ಬಂದಿಲ್ಲ. ಕ್ರಿಸ್ತಪೂರ್ವದಲ್ಲಿ ಇದ್ದನೆಂಬುದರಲ್ಲಿ ಅಭಿಪ್ರಾಯಭೇದವಿಲ್ಲವಾದರೂ ಬ್ರಾಹ್ಮಣಗಳ ಕಾಲಕ್ಕಿಂತ ಈಚಿನವನೆಂದೂ ಪ್ರಾಯಃ ಪ್ರಾಚೀನ ಉಪನಿಷತ್ತುಗಳ ಕಾಲದವನಿರಬೇಕೆಂದೂ ಒಬ್ಬರು ಹೇಳಿದರೆ ಗೋಲ್ಡ್ ಸ್ಟಕರ್ ಎಂಬ ಪಾಶ್ಚಾತ್ಯ ಪಂಡಿತ ಬೌದ್ಧರ ಕಾಲಕ್ಕಿಂತ ಹಿಂದೆ ಅಂದರೆ ಕ್ರಿ.ಪೂ ಏಳನೆಯ ಶತಮಾನದವನಿರಬೇಕೆಂದೂ ವೀಬರ್ ಎಂಬಾತ ಅಲೆಗ್ಜಾಂಡರನ ದಂಡಯಾತ್ರೆಗಳಿಗಿಂತ (ಕ್ರಿ.ಪೂ 326) ಹಿಂದೆ ಪಾಣಿನಿಯ ವ್ಯಾಕರಣ ರಚಿತವಾಗಿದ್ದಿರಲು ಸಾಧ್ಯವೇ ಇಲ್ಲವೆಂದೂ ಹೇಳುತ್ತಾರೆ. ವೀಬರನ ವಾದ ಹೀಗಿದೆ-ಯವನರ ಲಿಪಿ ಎಂಬರ್ಥದಲ್ಲಿ ಯವನಾನೀ ಎಂಬ ಪದವನ್ನು ಪಾಣಿನಿ ಬಳಸಿದ್ದಾನೆ. ಅಲೆಗ್ಜಾಂಡರನ ದಂಡಯಾತ್ರೆಗಳಿಗಿಂತ ಹಿಂದೆ ಭಾರತೀಯರಿಗೆ ಯವನರ ಪರಿಚಯವಿರಲಿಲ್ಲ. ಪಾಣಿನಿ ಯವನಾನೀ ಪದ ಬಳಸಿರುವುದರಿಂದ ಅವನಿಗೆ ಯವನರ ಮತ್ತು ವಾಯವ್ಯ ಪ್ರಾಂತ್ಯಗಳ ಪರಿಚಯವಿತ್ತೆಂಬುದು ಸ್ಪಷ್ಟವಾಗುತ್ತದೆ. ಇದಕ್ಕೆ ಪೂರಕವಾಗಿ ಪಾಣಿನಿಯ ಗಣಪಾಠದಲ್ಲಿ ಆಂಭಿ, ಭಗಲ ಎಂಬ ಹೆಸರುಗಳೂ ಬರುತ್ತವೆ. ಇದರಿಂದ ಪಾಣಿನಿ ಕ್ರಿ.ಪೂ ನಾಲ್ಕನೆಯ ಶತಮಾನಕ್ಕಿಂತ ಹಿಂದಿನವನೆಂದು ಹೇಳಲು ಸಾಧ್ಯವೇ ಇಲ್ಲ. ಇದೂ ಅಲ್ಲದೆ ಪತಂಜಲಿಯ (ವ್ಯಾಕರಣ) ಮಹಾಭಾಷ್ಯ ಕ್ರಿ.ಪೂ ಎರಡನೆಯ ಶತಮಾನದಲ್ಲಿ ರಚಿತವಾದುದೆಂದು ಸ್ಥಿರಪಟ್ಟಿರುವುದರಿಂದ ಪಾಣಿನಿ ಕ್ರಿಪೂ 400ಕ್ಕಿಂತ ಈಚಿನವನಾಗಿರಲೂ ಅವಕಾಶವಿಲ್ಲ. ಸ್ವಲ್ಪ ಹೆಚ್ಚು ಕಮ್ಮಿ ಹೀಗೆಯೇ ವಿಚಾರಮಾಡಿ ಕೀತ್, ವೀಲರ್, ಮ್ಯಾಕ್ಸ್ ಮುಲ್ಲರ್ ಮುಂತಾದವರು ಪಾಣಿನಿಯ ಕಾಲ ಸುಮಾರು ಕ್ರಿ.ಪೂ 350 ಇರಬೇಕೆಂದು ಸಿದ್ಧಾಂತ ಮಾಡಿದ್ದಾರಾದರೂ ಗೋಲ್ಡ್ ಸ್ಟಕರ್ ಕ್ರಿ.ಪೂ ಏಳನೆಯ ಶತಮಾನದವನಿರಬೇಕೆಂದೂ ಭಂಡಾರ್ಕರ್ ಕ್ರಿ.ಪೂ ಐದನೆಯ ಶತಮಾನಕ್ಕಿಂತ ಈಚಿನವನಿರಬೇಕೆಂದೂ ಬೆಲ್ವಲ್ಕರ್ ಅವರು ಕ್ರಿ.ಪೂ 700ರಿಂದ 600 ರೊಳಗಿರಬೇಕೆಂದೂ ನಾಮಾಶ್ರಯೀ ಅವರು ಕ್ರಿ.ಪೂ 2400 ರಲ್ಲಿದ್ದಿರಬೇಕೆಂದೂ ವಾಸುದೇವ ಶರಣ್ ಅಗ್ರವಾಲಾ ಕ್ರಿ.ಪೂ 480ರಿಂದ 410 ರೊಳಗಿರಬೇಕೆಂದೂ ಬೇರೆ ಬೇರೆ ಅಭಿಪ್ರಾಯ ಹೊಂದಿದ್ದಾರೆ.

ಪಾಣಿನಿಯ ವ್ಯಾಕರಣ ಸೂತ್ರಾತ್ಮಕವಾಗಿದೆ. ಅದರಲ್ಲಿ ಒಟ್ಟು 3,981 ಸೂತ್ರಗಳಿವೆ. ಈ ಎಲ್ಲ ಸೂತ್ರಗಳೂ ಒಂದೊಂದರಲ್ಲಿಯೂ ನಾಲ್ಕು ನಾಲ್ಕು ಪಾದಗಳುಳ್ಳ ಎಂಟು ಅಧ್ಯಾಯಗಳಾಗಿ ವಿಭಾಗಿಸಲ್ಪಟ್ಟಿವೆ. ಆದ್ದರಿಂದ ಈ ವ್ಯಾಕರಣ ಗ್ರಂಥಕ್ಕೆ ಅಷ್ಟಾಧ್ಯಾಯಿ ಎಂಬ ಹೆಸರೇ ಬಳಕೆಯಲ್ಲಿದೆ. ಅಷ್ಟಕ, ಪಾಣಿನೀಯ ವೃತ್ತಿ ಸೂತ್ರ, ಅಕಾಲಕವ್ಯಾಕರಣ, ಶಾಲಾತುರೀಯತಂತ್ರ ಎಂಬುದು ಈ ಅಷ್ಟಾಧ್ಯಾಯಿಯ ಇತರ ಹೆಸರುಗಳು. ವೃದ್ಧಿರಾದೈಚ್ ಎಂಬುದು ಇದರ ಮೊದಲನೆಯ ಸೂತ್ರ. `ಅಅ' ಎಂಬುದು ಕೊನೆಯ ಸೂತ್ರ. ಮಾಹೇಶ್ವರ ಸೂತ್ರಗಳೆಂದು ಕರೆಯಲ್ಪಡುವ `ಅ ಇ ಉಣ್ ಇತ್ಯಾದಿ ಹದಿನಾಲ್ಕು ಸೂತ್ರಗಳೂ ಪಾಣಿನಿಯವೇ. ಇದಲ್ಲದೆ ಅಷ್ಟಾಧ್ಯಾಯಿಗೆ ಅನುಬಂಧವಾಗಿ ಪಾಣಿನಿಯಿಂದಲೇ ಗಣಪಾಠ, ಧಾತುಪಾಠ, ಲಿಂಗಾನುಶಾಸನ ಮತ್ತು ಶಿಕ್ಷಾ-ಇವೂ ರಚಿತವಾಗಿವೆ.

ಅಷ್ಟಾಧ್ಯಾಯಿಯ ಪ್ರಥಮಾಧ್ಯಾಯದ ಮೊದಲ ಎರಡು ಪಾದಗಳಲ್ಲಿ ಸಂಜ್ಞಾ ಪರಿಭಾಷಾ, ಮೂರನೆಯ ಪಾದದಲ್ಲಿ ಆತ್ಮನೇಪದಪ್ರಕ್ರಿಯೆ, ನಾಲ್ಕನೆಯ ಪಾದದಲ್ಲಿ ವಿಭಕ್ತಿ ಸಂಜ್ಞೆ, ದ್ವಿತೀಯಾಧ್ಯಾಯದ ಮೊದಲ ಎರಡು ಪಾದಗಳಲ್ಲಿ ಸಮಾಸ, ಮೂರನೆಯ ಪಾದದಲ್ಲಿ ಕಾರಕ, ನಾಲ್ಕನೆಯ ಪಾದದಲ್ಲಿ ಸಮಾಸ ಮತ್ತು ಲುಕ್ ಪ್ರಕ್ರಿಯೆ, ಮೂರನೆಯ ಅಧ್ಯಾಯದಲ್ಲಿ ಧಾತು ಪ್ರತ್ಯಯಗಳು ಮತ್ತು ಕೃದಂತ ನಿಷ್ಪತ್ತಿ, ನಾಲ್ಕನೆಯ ಅಧ್ಯಾಯದಲ್ಲಿ ಸ್ತ್ರೀಪ್ರತ್ಯಯ, ತದ್ಧಿತಸಮಾಸಾಂತಗಳು, ಆರು ಏಳನೆಯ ಅಧ್ಯಾಯಗಳಲ್ಲಿ ಸ್ವರವಿಧಿಗಳು, ಎಂಟನೆಯ ಅಧ್ಯಾಯದಲ್ಲಿ ಸಂಧಿಗಳು-ಮುಂತಾದ ಪದಗಳಿಗೆ ಸಂಬಂಧಿಸಿದ ಪ್ರಕರಣಗಳಿವೆ. ಕೆಲವೇ ಅಕ್ಷರಗಳುಳ್ಳ ಪುಟ್ಟ ಪುಟ್ಟ ಸೂತ್ರಗಳಿಂದ ಮಹತ್ತರವಾದ ವಿಷಯಗಳನ್ನು ಪ್ರತಿಪಾದಿಸಿರುವುದು ಪಾಣಿನಿಯ ವೈಶಿಷ್ಟ್ಯ. ಇದರ ಎಂಟೂ ಅಧ್ಯಾಯಗಳ ಎಲ್ಲ ಸೂತ್ರಗಳನ್ನೂ ಅದೇ ಅನುಪೂರ್ವಿಯಲ್ಲಿ ಕಂಠಪಾಠಮಾಡಿದ್ದಾದರೆ ಸೂತ್ರಾರ್ಥಗಳನ್ನು ಅಷ್ಟು ಕಷ್ಟವಿಲ್ಲದಂತೆ ಗ್ರಹಿಸಬಹುದು. ಪಾಣಿನಿಯ ಪ್ರತ್ಯಾಹಾರ ವಿಧಾನ, ಮುಂದಿನ ಸೂತ್ರಗಳಿಗೆ ಹಿಂದು ಹಿಂದಿನ ಸೂತ್ರಗಳಿಂದ ಪದಗಳನ್ನು ಅನುವರ್ತನ ಮಾಡಿಕೊಳ್ಳುವುದು, ಸ್ವರಜ್ಞಾನಕ್ಕೆ ಚ್ ತ್ ನ್ ಮೊದಲಾದ ಇತ್ ಸಂಜ್ಞೆಗಳು, ಬಹ್ವಕ್ಷರ ಸಂಜ್ಞೆಗಳಿಗೆ ಬದಲಾಗಿ, ಟಿ, ಭ, ಘ ಮೊದಲಾದ ಏಕಾಕ್ಷರ ಸಂಜ್ಞೆಗಳು, ಲಟ್ ಲಿಟ್ ಇತ್ಯಾದಿ ಸಂಜ್ಞೆಗಳು ಕಾಲ ನಾಮಗಳಾಗಿ ಏರ್ಪಟ್ಟಿರುವುದು- ಇಂಥವೆಲ್ಲ ಈ ಶಾಸ್ತ್ರದಲ್ಲಿ ಲಾಘವವನ್ನು ಅಳವಡಿಸಿಕೊಳ್ಳುವುದಕ್ಕಾಗಿ. ಆದರೆ ಇದೆಲ್ಲದರಿಂದ ಈ ಶಾಸ್ತ್ರ ಅಭ್ಯಾಸಿಸುವವರಿಗೆ ಮೊದಮೊದಲು ತುಂಬ ಜಟಿಲವಾಗಿ ಕಾಣುವುದರಲ್ಲಿ ಸಂಶಯವಿಲ್ಲ.

ಪಾಣಿನಿಯ ಕಾಲದಲ್ಲಿ ಸಂಸ್ಕøತ ಆಡುಭಾಷೆಯಾಗಿತ್ತು. ಅಲ್ಲದೆ ಗ್ರಾಂಥಿಕ ಸಂಸ್ಕøತ ಭಾಷೆಗೂ ವ್ಯಾವಹಾರಿಕ ಸಂಸ್ಕøತ ಭಾಷೆಗೂ ಅಷ್ಟಾಗಿ ವ್ಯತ್ಯಾಸವಿರಲಿಲ್ಲ. ಈ ಭಾಷೆಗೇ ಲೌಕಿಕ ಭಾಷೆ ಎನ್ನುವುದು. ಇದು ವೇದಗಳ ವೈದಿಕ ಭಾಷೆಗಿಂತ ತುಂಬ ಭಿನ್ನವಾಗಿತ್ತು. ಈ ವೈದಿಕ (ಸಂಸ್ಕøತ) ಮತ್ತು ಲೌಕಿಕ (ಸಂಸ್ಕøತ) ಭಾಷೆಗಳೆರಡಕ್ಕೂ ಅನ್ವಯಿಸುವಂತೆ ಒಂದೆ ವ್ಯಾಕರಣವನ್ನು (ಶಬ್ದಾನುಶಾಸನ) ರಚಿಸಿದ ಕೀರ್ತಿ ಸಲ್ಲುವುದು ಪಾಣಿನಿಯೊಬ್ಬನಿಗೇ. ಅಲ್ಲದೆ ಈವರೆಗೆ ಉಪಲಬ್ಧವಾಗಿರುವ ಶಬ್ದಾನುಶಾಸನಗಳಲ್ಲಿ ಸಮಗ್ರವಾಗಿರುವುದು ಪಾಣಿನಿಯ ಅಷ್ಟಾಧ್ಯಾಯಿಯೊಂದೇ. ಇದರಲ್ಲಿನ ಸಾಂಕೇತಿಕ ಪರಿಶುದ್ಧತೆ ಮತ್ತು ಸೂತ್ರನಿರ್ಮಾಣ ಚಾತುರ್ಯ ಅನ್ಯಾದೃಶವಾದುದು.

ಪಾಣಿನಿಯೇ ತನಗಿಂತ ಹಿಂದಿನ ಹತ್ತು ವೈಯಾಕರಣಿಗಳನ್ನೂ ಪ್ರಾಂಚ, ಉದಂಚ, ಎಂಬ ಎರಡೂ ವ್ಯಾಕರಣ ಪದ್ಧತಿಗಳನ್ನೂ ಹೆಸರಿಸಿದ್ದಾನೆ. ಆಪಿಶಲಿ, ಕಾಶಕೃತ್ಸ್ನ ಎಂಬುವರು ಪಾಣಿನಿಗಿಂತ ಹಿಂದೆಯೇ ಪ್ರಸಿದ್ಧಿಪಡೆದಿದ್ದ ಪ್ರಾಂಚ ವೈಯಾಕರಣಿಕಗಳು. ಕಾಶ್ಯಪ, ಗಾಗ್ರ್ಯ, ಗಾಲವ, ಚಾಕ್ರವರ್ಮ, ಭಾರದ್ವಾಜ ಶಾಕಟಾಯನ, ಶಾಕಲ್ಯ, ಸೇನಕ, ಸ್ಫೋಟಾಯನರು ಉದಂಚರು. ಪಾಣಿನಿಗಿಂತ ಹಿಂದಿನವನಾದ ಯಾಸ್ಕನೂ ಔದುಂಬರಾಯಣ, ಔಪಮನ್ಯು, ಶಾಕಟಾಯನ ಮುಂತಾದ ವೈಯಾಕರಣಿಗಳ ಹೆಸರುಗಳನ್ನು ಉಲ್ಲೇಖಿಸಿದ್ದಾನೆ. ಇವರೆಲ್ಲರಲ್ಲಿ ಶಾಕಟಾಯನನೇ ಪ್ರಧಾನನೆನ್ನಬಹುದು. ಆದರೆ ಅವನ ವ್ಯಾಕರಣ ಗ್ರಂಥ ಉಪಲಬ್ಧವಾಗಿಲ್ಲ.

ಪಾಣಿನಿಗಿಂತ ಹಿಂದೆಯೇ ಆಪಿಶಲಿ ಮತ್ತು ಕಾಶಕ್ರತ್ಸ್ನರ ವ್ಯಾಕರಣಗಳು ಪ್ರಚಲಿತವಾಗಿದ್ದುವೆಂದು ಹೇಳಿದೆವು. ಕಾಶಕೃತ್ಸ್ನವ್ಯಾಕರಣದಲ್ಲಿ ಮೂರು ಅಧ್ಯಾಯಗಳೂ ಆಪಿಶಲಿ ವ್ಯಾಕರಣದಲ್ಲಿ ಎಂಟು ಅಧ್ಯಾಯಗಳೂ ಇದ್ದುವು. ಆಪಿಶಲಿ ವ್ಯಾಕರಣ ಕ್ಲಿಷ್ಟ, ಕಾಶಕೃತ್ಸ್ನ ವ್ಯಾಕರಣ ಕಾತಂತ್ರವ್ಯಾಕರಣಕ್ಕೆ ಮೂಲವಾಗಿದ್ದಂತೆ, ಆಪಿಶಲಿಯ ಅಷ್ಟಾಧ್ಯಾಯಿ ಪಾಣಿನಿಯ ಅಷ್ಟಾಧ್ಯಾಯಿಗೆ ಮೂಲವೆನಿಸಿಕೊಂಡಿದೆ. ವಿಭಕ್ತ್ಯಂತಂ ಪದಂ ಎಂಬ ಆಪಿಶಲಿಯ ಸೂತ್ರವೇ ಸುಪ್ತಿಙಂತಂ ಪದಂ ಎಂದು ಪಾಣಿನಿಯಿಂದ ರೂಪಾಂತರಗೊಂಡಿರುವುದು. ಆಪಿಶಲಿಯೇ ಪಂಚಪಾದಿ ಉಣಾದಿ ಸೂತ್ರಕರ್ತಾ ಎಂಬುದು ಅಭಿಜ್ಞರ ಮತ. ಪಾಣಿನಿಯ ಪ್ರತ್ಯಾಹಾರಸೂತ್ರಗಳಿಗೂ ಆಪಿಶಲಿಯೇ ಮಾರ್ಗದರ್ಶಿ ಎಂದು ತೋರುತ್ತದೆ. ಹೀಗೆ ಸಂಸ್ಕøತ ವ್ಯಾಕರಣ ಗ್ರಂಥಗಳಲ್ಲಿ ಆಪಿಶಲಿ ಮೂಲವಾದ ಪಾಣಿನೀಯ ಪದ್ಧತಿ ಮತ್ತು ಕಾಶಕೃತ್ಸ್ನ ಮೂಲವಾದ ಕಾತಂತ್ರಪದ್ಧತಿ ಎಂಬ ಎರಡು ಪದ್ಧತಿಗಳು ಕಂಡುಬರುತ್ತವೆ. ಚಾಂದ್ರ, ಜೈನೇಂದ್ರ, ಸರಸ್ವತೀ ಕಂಠಾಭರಣಗಳು ಪಾಣಿನೀಯ ಪದ್ಧತಿಗೂ ಹೈಮ ಶಬ್ಬಾನುಶಾಸನ, ಮುಗ್ಧಬೋಧ, ಸಂಕ್ಷಿಪ್ತಸಾರ, ಸಾರಸ್ವತ, ಸುಪದ್ಮ, ಪ್ರಯೋಗ ರತ್ನಮಾಲಾಗಳು ಕಾತಂತ್ರಪದ್ಧತಿಗೂ ಸೇರಿದುವು. ಕಾಲಕ್ರಮದಲ್ಲಿ ಪಾಣಿನಿಯ ಅಷ್ಟಾಧ್ಯಾಯಿಯಲ್ಲಿ ತಮಗೆ ಕಂಡುಬಂದ ಕೆಲವು ಲೋಪದೋಷಗಳನ್ನು ಕ್ರಮಪಡಿಸುವುದಕ್ಕಾಗಿಯೂ ಕೆಲವು ಕಡೆ ಕ್ಲಿಷ್ಟವಾದ ಸೂತ್ರಗಳ ಅರ್ಥವನ್ನು ವಿವರಿಸುವುದಕ್ಕಾಗಿಯೂ ಅನಾವಶ್ಯಕವಾದುವನ್ನು ಪರಿಹರಿಸುವುದಕ್ಕಾಗಿಯೂ ಹೆಚ್ಚು ಲಾಘವವನ್ನು ಸಾಧಿಸುವುದಕ್ಕಾಗಿಯೂ ಕಾತ್ಯಾಯನ, ಭಾರದ್ವಾಜ, ಸುನಾಗ ಮುಂತಾದವರು ಪಾಣಿನಿಯ ಸೂತ್ರಗಳಿಗೆ ವಾರ್ತಿಕ ಎಂಬ ಅಡಕವಾದ ಟಿಪ್ಪಣಿಗಳನ್ನು ಬರೆದರು. ಇವರಲ್ಲಿ ಕಾತ್ಯಾಯನನೇ (ಕ್ರಿ. ಪೂ. ಮೂರನೆಯ ಶತಮಾನ) ಪ್ರಧಾನ. ಇವನಿಗೆ ವರರುಚಿ ಎಂಬುದು ಅಂಕಿತನಾಮ. ಕಾತ್ಯಾ ಎಂಬ ವಂಶದವನಾದುದರಿಂದ ಕಾತ್ಯಾಯನ ಎಂಬ ಹೆಸರೂ ರೂಢಿಯಲ್ಲಿದೆ. ಇವನನ್ನೇ ವಾರ್ತಿಕಾಚಾರ್ಯ, ವೃತ್ತಿಕಾರ ಎನ್ನುವುದು. ಈ ಕಾತ್ಯಾಯನನ ವಾರ್ತಿಕವನ್ನು ಆಧಾರವಾಗಿಟ್ಟುಕೊಂಡು ಪಾಣಿನಿಯ ಸೂತ್ರಗಳನ್ನು ಮಥಿಸಿ (ವ್ಯಾಕರಣ) ಮಹಾಭಾಷ್ಯವನ್ನು ಅನಂತರ ರಚಿಸಿದವ ಪತಂಜಲಿ. ಈತ ಕ್ರಿ.ಪೂ 144-142ರಲ್ಲಿ ಗುಹಾಭಾಷ್ಯ ರಚಿಸಿರಬೇಕೆಂದು ನಂಬಲಾಗಿದೆ. ಸಂಸ್ಕøತ ವ್ಯಾಕರಣದಲ್ಲಿ ಈತನದೇ ಕೊನೆಯ ಮಾತೆಂದು ಈಗಲೂ ಪರಿಗಣಿಸಲಾಗುತ್ತಿದೆ. ಪಾಣಿನಿ, ವರರುಚಿ, ಪತಂಜಲಿ-ಈ ಮೂವರನ್ನೂ ವ್ಯಾಕರಣ ಶಾಸ್ತ್ರದಲ್ಲಿ ಧುರೀಣರಾದ ಮುನಿತ್ರಯರೆಂದು ಭಾವಿಸಲಾಗಿದೆ. ಈ ಮೂವರೂ ಮುನಿಗಳೇ ಆಗಿದ್ದರೆಂಬುದು ಸಾಂಪ್ರದಾಯಿಕ ನಂಬಿಕೆ.

ಪಾಣಿನಿಯ ಸೂತ್ರಗಳಿಗೆ ರಚಿತವಾಗಿರುವ ಟೀಕೆಗಳಲ್ಲಿ ಅತ್ಯಂತ ಪ್ರಾಚೀನವೂ ಪ್ರಧಾನವೂ ಆದುದು ಕಾಶಿಕಾವೃತ್ತಿ. ಇದನ್ನು ಜಯಾದಿತ್ಯ, ವಾಮನ ಎಂಬ ಇಬ್ಬರು ಜೈನಪಂಡಿತರು ಕ್ರಿ.ಶ. ಏಳನೆಯ ಶತಮಾನದ ಪೂರ್ವಾರ್ಧದಲ್ಲಿ ರಚಿಸಿದರು.

ಪಾಣಿನಿಯ ಅಷ್ಟಾಧ್ಯಾಯಿ ಸೂತ್ರಗಳ ಮೂಲಕ ವ್ಯಾಕರಣಶಾಸ್ತ್ರ ಅಭ್ಯಸಿಸುವುದು ಇತ್ತೀಚಿನವರೆಗೂ ತುಂಬ ಕಷ್ಟಕರವಾಗಿತ್ತು. ಕ್ರಿ.ಶ. ಹದಿನೇಳನೆಯ ಶತಮಾನದಲ್ಲಿ ಭಟ್ಟೋಜಿ ದೀಕ್ಷಿತ ಬೇರೆ ಬೇರೆ ಪ್ರಕರಣಗಳಿಗೆ ಸಂಬಂಧಿಸಿದ ಸೂತ್ರಗಳನ್ನೆಲ್ಲ ಬೇರೆಬೇರೆ ಒಟ್ಟುಗೂಡಿಸಿ ಸಿದ್ಧಾಂತ ಕೌಮುದಿಯನ್ನು ರಚಿಸಿದ ಮೇಲೆ ಅದು ತುಂಬ ಜನಪ್ರಿಯವಾಗಿ ಆಸೇತುಹಿಮಾಚಲದವರೆಗೆ ಅದರ ಮೂಲಕವಾಗಿಯೇ ಶಾಸ್ತ್ರಾಭ್ಯಾಸ ಮಾಡುವ ಕ್ರಮ ಆರಂಭವಾಯಿತು.

ಈ ಪಾಣಿನಿಯೂ ಜಾಂಬವತೀ ಪರಿಣಯ ಕರ್ತೃವಾದ ಪಾಣಿನಿಯೂ ಇಬ್ಬರೂ ಒಂದೇ ಎಂಬುದು ಕೆಲವರ ಮತ. ಉಪಜಾತಿ ಛಂದಸ್ಸಿನಲ್ಲಿ ಪಾಣಿನಿ ಸಿದ್ಧಹಸ್ತನಾಗಿದ್ದನೆಂದು ಕ್ಷೇಮೇಂದ್ರ ತನ್ನ ಸುವೃತ್ತತಿಲಕದಲ್ಲಿ ಹೇಳಿದ್ದಾನೆ. (ಎಸ್.ಆರ್.ಎಎನ್.)