ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ನವಶಿಲಾಯುಗ

ವಿಕಿಸೋರ್ಸ್ದಿಂದ

ನವಶಿಲಾಯುಗ ಶಿಲಾಯುಗದ ಕೊನೆಯ ಭಾಗ (ನಿಯೋಲಿತಿಕ್ ಏಜ್). ಚಕ್ಕೆ ತೆಗೆದು ಮಾಡಿದ ಒರಟಾದ ಪೂರ್ವಶಿಲಾಯುಗದ ಆಯುಧಗಳಿಗಿಂತ ಬೇರಾದ, ಅಂಚುಗಳನ್ನು ಅಥವಾ ಇಡೀ ಆಯುಧಗಳನ್ನು ಕಲ್ಲು ಬಂಡೆಗಳ ಮೇಲೆ ತಿಕ್ಕಿ ನಯಗೊಳಿಸಿ ಬಳಸುತ್ತಿದ್ದುದು ಈ ಯುಗದ ವೈಶಿಷ್ಟ್ಯ. ಜಾನ್ ಲಬಕ್ (ಲಾರ್ಡ್ ಆವೆಬರಿ) 1865ರಲ್ಲಿ ನಿಯೋಲಿತಿಕ್ ಏಜ್ ಎಂಬ ಪದವನ್ನು ಮೊದಲಿಗೆ ಬಳಸಿದ. ಆಯುಧ ತಯಾರಿಕೆಯಲ್ಲಿ ಹೊಸ ವಿಧಾನಗಳನ್ನು ಬಳಸಿದುದನ್ನು ಅದು ಪ್ರಧಾನವಾಗಿ ಸೂಚಿಸುತ್ತದೆ. ನಯಗೊಳಿಸಿದ ಕಲ್ಲಿನ ಆಯುಧಗಳ ಬಳಕೆ ಮೊದಲ ಬಾರಿಗೆ ಮಣ್ಣಿನ ಪಾತ್ರೆಗಳ ತಯಾರಿಕೆ ಮತ್ತು ಉಪಯೋಗ, ಮೊದಲ ಹಂತದ ಬೇಸಾಯ ಮತ್ತು ಪ್ರಾಣಿಗಳ ಸಾಕಾಣಿಕೆ-ಇವು ಈ ಹಂತದ ವಿಶಿಷ್ಟ ಲಕ್ಷಣಗಳೆಂದು ಈಚಿನವರೆಗೂ ಪರಿಗಣಿಸಲಾಗಿತ್ತು. ಆದರೆ ಈಚಿನ 3-4 ದಶಕಗಳಿಂದ ಗೋರ್ಡನ್ ಚೈಲ್ಡ್ ಮುಂತಾದ ಪ್ರಾಕ್ತನ ವಿದ್ವಾಂಸರು ಅಂಥ ತಾಂತ್ರಿಕ ಲಕ್ಷಣಗಳಿಗಿಂತಲೂ ಸಾಂಸ್ಕøತಿಕ ಹಿನ್ನೆಲೆಯನ್ನು ಸೂಚಿಸುವ ಆರ್ಥಿಕ ಸಾಮಾಜಿಕ ಅಂಶಗಳ ಆಧಾರದ ಮೇಲೆ ನವಶಿಲಾಯುಗದ ಸಂಸ್ಕøತಿಯನ್ನು ಗುರುತಿಸುವುದು ಸೂಕ್ತವೆಂದು ವಾದಿಸಿದ್ದಾರೆ. ಅವರ ಪ್ರಕಾರ ಆಹಾರ ಸಂಗ್ರಹಣೆಯಲ್ಲಿ ತೊಡಗಿದ್ದ ಶಿಲಾಯುಗದ ಮಾನವ ಈ ಹಂತದಲ್ಲಿ ಆಹಾರೋತ್ಪಾದನೆಯತ್ತ ಮೊದಲ ಹೆಜ್ಜೆ ಇಟ್ಟ. ಪ್ರಕೃತಿಯನ್ನು ತನ್ನ ಹಿಡಿತದಲ್ಲಿಟ್ಟುಕೊಳ್ಳುವುದರ ಮೂಲಕ ಆರಂಭ ಹಂತದ ಬೇಸಾಯ, ಪಶು ಸಂಗೋಪನೆಗಳನ್ನು ರೂಢಿಸಿಕೊಂಡು, ತನ್ನ ಅಲೆಮಾರಿ ಜೀವನಕ್ರಮವನ್ನು ಬಿಟ್ಟು ಒಂದೆಡೆಯಲ್ಲಿ ನೆಲೆನಿಂತು ವಾಸಿಸುವಂತಾಯಿತು. ನೆಲೆನಿಂತ ಜೀವನದ ಫಲವಾಗಿ ಗ್ರಾಮೀಣ ಜೀವನ ಮತ್ತು ವಸತಿ ನಿರ್ಮಾಣಗಳು ರೂಢಿಗೆ ಬಂದುವು. ಧಾನ್ಯ, ಮಾಂಸ, ಮತ್ತಿತರ ಪಾನೀಯಗಳನ್ನೂ ಸಂಗ್ರಹಿಸಿಡಲು ಸುಟ್ಟಮಣ್ಣಿನ ಪಾತ್ರೆಗಳನ್ನು, ಬೆತ್ತದಲ್ಲಿ ಹೆಣೆದ ಬುಟ್ಟಿಗಳನ್ನು ತಯಾರಿಸಲಾರಂಭಿಸಿದ. ಇವೆಲ್ಲವುಗಳಿಂದ ಮಾನವ ಸಂಸ್ಕøತಿ ಪ್ರಗತಿಪಥದಲ್ಲಿ ಸಾಗಲು ಸಾಧ್ಯವಾಯಿತು. ಮಾನವನ ಜೀವನ ರೀತಿಯಲ್ಲಿ ತಲೆದೋರಿದ ಇಂಥ ಪ್ರಮುಖ ಬದಲಾವಣೆಗಳು ಅವನ ಸರ್ವತೋಮುಖ ಪ್ರಗತಿ ಮತ್ತು ನಾಗರಿಕತೆಗೆ ಭದ್ರಬುನಾದಿಯನ್ನೊದಗಿಸಿದವು. ಆದುದರಿಂದ ಚೈಲ್ಡ್ ಆ ಹಂತವನ್ನು ಆಹಾರೋತ್ಪಾದನಾಕ್ರಾಂತಿ ಮತ್ತು ಮಾನವ ಪ್ರಗತಿಯ ಮೊದಲ ದಿಟ್ಟಹೆಜ್ಜೆಯೆಂದು ವರ್ಣಿಸಿದ್ದಾನೆ.

ಈ ಕ್ರಾಂತಿಯ ಮೊದಲ ಕುರುಹುಗಳು ಪಶ್ಚಿಮ ಏಷ್ಯದ ಇರಾಕ್, ಪ್ಯಾಲಿಸ್ಟೈನ್ ಮತ್ತು ಸಿರಿಯ ಪ್ರದೇಶಗಳಲ್ಲಿ ಕ್ರಿ.ಪೂ. 9ನೆಯ ಸಹಸ್ರಮಾನದಲ್ಲಿ ತಲೆದೋರುತ್ತವೆ. ಕ್ರಮೇಣ ಇತರ ಪ್ರದೇಶಗಳಿಗೂ ಹಬ್ಬುತ್ತದೆ. ಈಜಿಪ್ಟಿನಲ್ಲಿ ಕ್ರಿ.ಪೂ. 6-5ನೆಯ ಸಹಸ್ರಮಾನಗಳಲ್ಲೂ ಇರಾನಿನಲ್ಲಿ ಕ್ರಿ. ಪೂ. 7-6ನೆಯ ಸಹಸ್ರಮಾನಗಳಲ್ಲೂ ಮೆಡಿಟರೇನಿಯನ್ ಭೂಭಾಗದಲ್ಲಿ ಕ್ರಿ.ಪೂ. 5ನೆಯ ಸಹಸ್ರ ಮಾನದಲ್ಲೂ ಯೂರೋಪಿನಲ್ಲಿ ಕ್ರಿ.ಪೂ. 4ನೆಯ ಸಹಸ್ರಮಾನದಲ್ಲೂ ನವಶಿಲಾಯುಗ ಸಂಸ್ಕøತಿಯ ಕುರುಹುಗಳು ಕಾಣಬರುತ್ತವೆ. ಆದರೆ ಈ ಎಲ್ಲ ಪ್ರದೇಶಗಳಲ್ಲೂ ಆಯಾ ಕಾಲಗಳಲ್ಲಿ, ಚೈಲ್ಡನ ಸ್ಪಷ್ಟೀಕರಣಕ್ಕೆ ಸರಿಹೊಂದುವ ಗ್ರಾಮೀಣ ಜೀವನ ಆರಂಭವಾಯಿತೆಂದು ಹೇಳಲು ಸಾಧ್ಯವಿಲ್ಲ.

ಭಾರತದ ವಾಯವ್ಯ ಗಡಿಪ್ರದೇಶ, ಆಫ್ಘಾನಿಸ್ತಾನ ಬಲೂಚಿಸ್ತಾನ, ಮತ್ತು ಸಿಂಧ್ ಪ್ರದೇಶಗಳಲ್ಲಿ ಕ್ರಿ.ಪೂ. 5ನೆಯ ಸಹಸ್ರಮಾನದ ಕೊನೆಯ ಭಾಗದಲ್ಲಿ ಈ ಗ್ರಾಮೀಣ ಜೀವನದ ಕುರುಹುಗಳು ಕಂಡುಬರುತ್ತವೆ. ಕ್ರಿ.ಪೂ. 3ನೆಯ ಸಹಸ್ರಮಾನದ ವೇಳೆಗೆ ಕಾಶ್ಮೀರ, ಪೂರ್ವಭಾರತ ಮತ್ತು ಕರ್ನಾಟಕ-ಆಂಧ್ರ ಪ್ರದೇಶಗಳಲ್ಲಿ ಈ ಸಂಸ್ಕøತಿಯ ಹೆಜ್ಜೆಗಳನ್ನೂ ಗುರುತಿಸಲಾಗಿದೆ. (ಬಿ.ಕೆ.ಜಿ.)