ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಉಸಿರಾಟದ ಮಂಡಲದ ರೋಗಗಳು

ವಿಕಿಸೋರ್ಸ್ದಿಂದ

ಉಸಿರಾಟದ ಮಂಡಲದ ರೋಗಗಳು ಮೂಗು, ಅದರ ಹೆಚ್ಚಿನ ಎಲುಗುಳಿಗಳು (ಸೈನಸಸ್), ಗಂಟಲ್ಕುಳಿ (ಫ್ಯಾರಿಂಕ್ಸ್), ಧ್ವನಿನಾಳ, ಉಸಿರ್ನಾಳ, ಪಂಗುಸಿರ್ನಾಳ (ಬ್ರಾಂಕಸ್), ಕೊನೆಯದಾಗಿ ಪುಪ್ಪುಸಗಳಲ್ಲಿ ಎಲ್ಲಾದರೂ ಹತ್ತುವ ರೋಗಗಳಿವು. ಮೊದಲಿಂದ ಕೊನೆಯತನಕ ಉದ್ದಕ್ಕೂ ಲೋಳ್ಪೊರೆ (ಮ್ಯುಕೋಸ) ಒಂದೇ ಸಮನಾಗಿದೆ. (ನೋಡಿ- ಉಸಿರಾಟದ-ಮಂಡಲದ-ಅಂಗರಚನೆ) (ನೋಡಿ- ಅಳ್ಳೆಪರೆಯ-ರೋಗಗಳು) (ನೋಡಿ- ಉಸಿರಾಟ)

ಅಡಚಣೆಗಳಂತಿರುವ ಮೂಗಿನ ಬುಗರಿಕಗಳನ್ನು (ಟರ್ಬಿನೇಟ್ಸ್) ಹಾಯ್ದು ಒಳಬರುವಾಗ ಗಾಳಿ ಬೆಚ್ಚಗಾಗಿ ತೇವಗೂಡುವುದು. ಮೂಗಿನ ಒಳವರಿಯಾದ ಲೋಳ್ಪೊರೆಯಲ್ಲಿ ಬಲು ಚೆನ್ನಾಗಿ ರಕ್ತ ಹರಿವುದೇ ಇದರ ಮುಖ್ಯ ಕಾರಣ. ಆದ್ದರಿಂದಲೇ ಸೋಂಕಿನಿಂದಲೋ ಒಗ್ಗದಿಕೆಯಿಂದಲೋ (ಅಲರ್ಜಿ) ಲೋಳ್ಪೊರೆ ಊದಿಕೊಂಡರೆ ಹೀಗಾಗುವುದು ತಪ್ಪುವುದು. ಒಳಸೇರಿಕೊಳ್ಳುವ ಗಾಳಿಯಲ್ಲಿ ದೂಳುಕಣಗಳಿದ್ದರೆ ಮೂಗಿನಲ್ಲೇ ಸಿಕ್ಕಿಬಿದ್ದು ಆಮೇಲೆ ಸೀನಿದಾಗ ಹೊರಬೀಳುತ್ತವೆ. ಗಂಟಲುಕುಳಿಯ ಸುತ್ತಲೂ ಇರುವ ಮೆಂಡಿಕೆಗಳು, ಮೂಗಳ್ಳೆಗಳ (ಟಾನ್ಸಿಲ್ ಅಡೆನಾಯ್ಡ್‍ಸ್) ರೂಪದ ಹಾಲುರಸತೆರ ಊತಕ (ಲಿಂಫಾಯ್ಡ್ ಟಿಷ್ಯೂ) ಅಲ್ಲಿಂದ ಮುಂದಕ್ಕೆ ಸೋಂಕು ಒಳನುಗ್ಗದಂತೆ ತಡೆಹಿಡಿಯುತ್ತವೆ. ಉಸಿರ್ನಾಳ, ಪಂಗುಸಿರ್ನಾಳಗಳಲ್ಲಿನ ಬಲು ಕಿರಿಯ ಕೂದಲಂತಿರುವ ಬಾಸೆಗಳು (ಸಿಲಿಯ) ಫುಪ್ಪುಸದಿಂದ ಹೊರಗಡೆ ಅಲುಗಾಡಿ ಬೀಸುವುದರಿಂದ ಹೆರವಸ್ತು ಏನು ಹೊಕ್ಕರೂ ಗಂಟಲುಕುಳಿ ಕಡೆಗೆ ತಳ್ಳಿದಂತಾಗುವುದು. ಕ್ಯಾಕರಿಸಿ ಉಗುಳಿದಾಗ ಕೆಮ್ಮಿದಾಗ ಅಲ್ಲಿಂದ ಹೊರಬೀಳುತ್ತದೆ. ವಿಷಕಾರಕಗಳು ಬಾಸೆಗಳನ್ನು ನಿಧಾನಿಸುವಂತೆ ಆಡದಂತೆ ಮಾಡಬಹುದು. ಯಾವ ಕಾರಣದಿಂದಲಾದರೂ ಮೈನೀರ್ಗಳೆತ (ಡಿಹೈಡ್ರೇಷನ್) ಆದರೆ, ಸೋಂಕು ಹತ್ತಿದರೆ ಸುರಿತ ತೀರ ಗಟ್ಟಿದುವಾಗಿ ಬಾಸೆಗಳು ಸರಾಗವಾಗಿ ಆಡದಂತಿರಲೂಬಹುದು. ಕೆಲವು ಕೆಡಕಿನ ಪದಾರ್ಥಗಳು ಫುಪ್ಪುಸಗಳ ಗಾಳಿಗೂಡುಗಳನ್ನೇ ಹೊಕ್ಕರೆ, ಕೂಡಲೇ ಹೊರದೂಡಲಾಗದಿದ್ದರೂ ವಿಶೇಷ ಜೀವಕಣಗಳು ಅವನ್ನು ಸುತ್ತುಗಟ್ಟಿ ಒಡೆಕೆಡವಿ ಬಾಸೆಗಳ ಹರಿವಿಗೆ ಹಾಕುವುವು. ಹೆರವಸ್ತುಗಳು ಸೋಂಕಿನ ಸುರಿತಗಳನ್ನು ಬಲವಂತದಿಂದ ಹೊರತೆಗೆವ ಯತ್ನವೇ ಕೆಮ್ಮು. ಈ ಯಾಂತ್ರಿಕತೆಗಳಲ್ಲಿ ಯಾವುದಕ್ಕೆ ಅಡ್ಡಿಯಾದರೂ ರೋಗಕ್ಕೆ ದಾರಿ. ಇವಲ್ಲದೆ ಪೋಷಣೆ, ಚೋದನಿಕಗಳು (ಹಾರ್ಮೋನ್ಸ್), ಅನುಭವಿಸಿದ ರೋಗ, ಚಳಿಗೊಡ್ಡಿಕೆ, ಅರಿವಳಿಕೆಯಿಂದ (ಅನೀಸ್ತೀಸಿಯ) ಅರಿವಿಲ್ಲದಿರುವಿಕೆ, ಅಮಲೇರಿಕೆ ಇತ್ಯಾದಿಗಳಿಂದ ಒಂದು ತಾವಿನಲ್ಲೋ ಇಡೀ ಮೈಯಲ್ಲೋ ರೋಗತಡೆವ ಬಲದ ಇಳಿವೂ ಮುಖ್ಯ. ಸೋಂಕುಗಳು : ವಿಷಕಣ ರೋಗಗಳು : ಉಸಿರಾಟ ಮಂಡಲದ ರೋಗಕಾರಕಗಳಾಗಿ ವಿಷಕಣಗಳನ್ನು (ವೈರಸಸ್) ಗುರುತಿಸುವುದೂ ಪತ್ತೆಹಚ್ಚುವುದೂ ಸುಲಭವಲ್ಲ. ಹಲವಾರು ಬೇರೆ ಬೇರೆ ರೋಗಗಳಿಗೂ ಒಂದೇ ವಿಷಕಣ ಕಾರಣವಾಗಿರಬಹುದು. ಹಲವಾರು ಬೇರೆ ಬೇರೆ ವಿಷಕಣಗಳಿಂದ ಒಂದೇ ರೋಗ ಕಾಣಿಸಿಕೊಳ್ಳಬಹುದು. ಸಂಶೋಧನೆಗಳು ನಡೆದು ಇನ್ನೂ ಹೊಸ ವಿಷಕಣಗಳು ಗೊತ್ತಾಗುತ್ತಿವೆ.

ಉರಿಶೀತದ (ಇನ್‍ಫ್ಲೂಯೆಂಜ) ಕಾವುಕಾಲ (ಇನ್ಕುಬೇಷನ್ ಪೀರಿಯಡ್) ಮೊಟಕಾಗಿದ್ದು ಸಾಂಕ್ರಾಮಿಕವಾಗಿ ಕಾಣಿಸಿಕೊಂಡರೂ 1918, 1957ರಲ್ಲಿ ಕಂಡಂತೆ ಮಹಾ ಸಾಂಕ್ರಾಮಿಕವಾಗದಿದ್ದರೆ ಅಷ್ಟಾಗಿ ಇದು ದಿನವೂ ಲೆಕ್ಕಕ್ಕೆ ಬರದ ಬೇನೆ. ಉರಿಶೀತದ ವಿಷಕಣದಿಂದಾಗುವ ಫುಪ್ಪುಸುರಿತಕ್ಕೆ (ನ್ಯೂಮೋನಿಯ) ಸರಿಯಾದ ಚಿಕಿತ್ಸೆಯೇ ಇಲ್ಲ. ಸಿಡುಬು, ಹಳದಿಜ್ವರ, ನಾಯಿ ಹುಚ್ಚುಗಳ (ರೇಬೀಸ್) ಎದುರು ಇರುವಂಥ ಪೂರ್ತಿ ನಿರೋಧಕ ವಿಧಾನ ಇಲ್ಲಿಲ್ಲ. ಆದರೆ ಆಗ ಕಂಡಿರುವ ಸೋಂಕಿಗೆ ಕಾರಣವಾದ ವಿಷಕಣದ ತಳಿ ಲಸಿಕೆಯಲ್ಲಿ ಸೇರಿದ್ದರೆ ಮಾತ್ರ ರೋಗ ಎದುರಾಗಿರುವ ರೋಧವಸ್ತುಗಳು (ಅಂಟಿಬಾಡೀಸ್) ಅದೇ ತಳಿಯ ಇನ್ನೊಂದು ಮಾದರಿಯ ಎದುರಾಗಿ ಕೆಲಸಕ್ಕೆ ಬರವು. ಉರಿಶೀತದ ಎದುರಿನ ಮರೆವಣಿ (ಇಮ್ಯೂನಿಟಿ) ಬಹುಕಾಲ ಇರದು. (ನೋಡಿ- ಉರಿಶೀತ)

ಸಣ್ಣ ಸಾಂಕ್ರಾಮಿಕವಾಗಿ ಬರುವ, ಕಾಕ್ಸ್‍ಸಾಕಿ ಬಿ ವಿಷಕಣದಿಂದಾಗುವ ಪಕ್ಕೆಶೂಲೆ (ಪ್ಲೂರೊಡೈನಿಯ) ಇನ್ನೊಂದು ವಿಷಕಣರೋಗ. ಉಸಿರೆಳೆದುಕೊಂಡರಂತೂ ಎದೆ ಉರಿ ಜೋರಾಗುವುದು.

ಚಿಕಿತ್ಸೆ ಗೊತ್ತಿಲ್ಲದ, ಮೊದಲ ಬೇಮಾದರಿ (ಪ್ರೈಮರಿ ಎಟಿಪಿಕಲ್) ಫುಪ್ಪುಸುರಿತಕ್ಕೆ ಒಂದಕ್ಕಿಂತಲೂ ಹೆಚ್ಚು ವಿಷಕಣಗಳು ಕಾರಣ : ಬಿಳಿಯ ರಕ್ತಕಣಗಳ ಅಂಕಿ ಎಂದಿನಂತಿದ್ದು ಬೇರೆ ರೋಗಗಳಲ್ಲಿ ಅಷ್ಟಾಗಿರದ ತಣ್ಣ ರಕ್ತಂಟಣಿಕಗಳೂ (ಹೀಮಗ್ಲೂಟಿನಿನ್ಸ್) ರೋಧವಸ್ತುಗಳೂ ಈ ರೋಗದಲ್ಲಿ ಕಾಣಬರುತ್ತವೆ.

ರಿಕೆಟ್ಸ್ ರೋಗಾಣುಗಳ ಪುಪ್ಪುಸುರಿತಗಳು : ರಿಕೆಟ್ಸಿಯ ಪ್ರೋವಜಿûಕಿಯೈನಿಂದಾಗಿ ಪ್ರಪಂಚದಲ್ಲಿ ಎಲ್ಲೆಡೆಯಲ್ಲಿಯೂ ಹರಡಿರುವ ಕೂರೆಗಳಿಂದ ಅಂಟುವ ಸೊಕ್ಕಿನ (ಟೈಫಸ್) ಜ್ವರದಲ್ಲಿ ಇಪುಪ್ಪುಸುರಿತ (ಬ್ರಾಂಕೊ ನ್ಯುಮೋನಿಯ) ಆಗಬಹುದು. ಮೊತ್ತಮೊದಲು ಆಸ್ಟ್ರೇಲಿಯದಲ್ಲಿ ಗೊತ್ತಾದ ಕ್ಯು ಜ್ವರದ ಅನೇಕ ರೋಗಿಗಳಲ್ಲೂ ಪುಪ್ಪುಸುರಿತ ಏಳಬಹುದು. ಪ್ರಯೋಗಾಲಯದಲ್ಲಿ ಈ ರೋಗಾಣುಗಳನ್ನು ಬಳಸುವವರಲ್ಲೂ ಸೋಂಕು ಹತ್ತಿರುವ ಕುರಿ, ದನ, ಮೇಕೆ ಸಾಕುವುದರಲ್ಲೂ ಉಸಿರೆಳೆತದ ಕಸಬಿನ ಬೇನೆಯೂ ಇದೆ. ಇದು ಯೂರೋಪ್, ಅಮೆರಿಕ, ಆಫ್ರಿಕ, ನಡು ಏಷ್ಯ, ಪನಾಮಗಳಲ್ಲಿ ಸಾಮಾನ್ಯ. ಕ್ಲೋರಾಂಫೆನಿಕಾಲ್, ಟೆಟ್ರಸೈಕ್ಲೀನುಗಳಿಂದ ಈ ರೋಗ ವಾಸಿಯಾಗುವುದು.

ದಂಡಾಣುಜೀವಿಕ ಸೋಂಕುಗಳು : ರಕ್ತಲಯಿಕ ಸರಕಾಯ್ಜೀಜಿಗಳೂ (ಹೀಮೋಲಿಟಿಕ್ ಸ್ಟ್ರೆಪ್ಟೊಕಾಕೈ) ಗುತ್ತಿಕಾಯ್ಚೀಜಿಗಳೂ (ಸ್ಟೆಫೈಲೊಕಾಕೈ) ಗಾಳಿ ಕಾಯ್ಚೀವಿಗಳಿಂದ (ನ್ಯೂ.-ಮೊಕಾಕೈ) ಮೂಗಂಟಲಿನ (ನೇಸೊಫ್ಯಾರಿಂಕ್ಸ್) ಸಾಮಾನ್ಯ ದಂಡಾಣುಜೀವಿಕ (ಬೆಸಿಲರಿ) ಸೊಂಕುಗಳು ಹತ್ತುತ್ತವೆ.

ಮೂತ್ರಪಿಂಡದ ಸೋಂಕುಗಳೂ ಕೀಲುವಾತದ (ರುಮ್ಯಾಟಿಕ್) ಜ್ವರದ ಕೆರಳೂ ಇದರಿಂದ ಆಗಬಹುದಾದ ಕೀಲುವಾತದ ಗುಂಡಿಗೆ ರೋಗ ಇವೆಲ್ಲ ತೀವ್ರ ರೋಗಗಳು. ದೂರದ ಅಂಗಗಳಲ್ಲಿ ಕಾಣಿಸಿಕೊಳ್ಳುವುದರಿಂದ ಸರಕಾಯ್ಜೀವಿಗಳಿಂದೇಳುವ ಗಂಟಲುರಿಗಳು (ಸೋರ್‍ಥ್ರೋಟ್ಸ್) ಬಲು ಮುಖ್ಯವಾದುವು. ಈ ರೋಗಾಣುಗಳನ್ನು ಚೆನ್ನಾಗಿ ಅಣಗಿಸುವ ಪೆನಿಸಿಲಿನ್ ಮದ್ದು ಇರುವುದು ಪುಣ್ಯವೇ ಸರಿ. ರೋಗವನ್ನು ಎಳೆಯದರಲ್ಲೇ ಕಂಡುಕೊಳ್ಳುವುದು ಮುಖ್ಯ. ಕೀಲುವಾತದ ಜ್ವರ ಆಗಾಗ್ಗೆ ಅನುಭವಿಸುವವರಿಗೆ ಚಳಿಗಾಲದಲ್ಲಿ ರೋಗ ತಡೆವ ಮದ್ದಿನ ಚಿಕಿತ್ಸೆ ಮಾಡಬೇಕು.

ಪುಪ್ಪುಸುರಿತಗಳಲ್ಲಿ ಬೇಗನೆ ಜೋರಾಗುವ ಹಲವೇಳೆ ಸಾಯಿಸುವ ಗುತ್ತಿಕಾಯ್ಜೀವಿಕ ಸೋಂಕುಗಳು ಕೆಡುಕಿನವು. ಆದರೆ ಚಿಕಿತ್ಸೆಯಲ್ಲಿ ಬಳಸುವ ಪ್ರಬಲವಾದ ಜೀವವಿರೋಧಕಗಳಿಗೂ ಜಗ್ಗದ ಗುತ್ತಿಕಾಯ್ಜೀವಿಗಳು ತಲೆಹಾಕುತ್ತಿರುವುದು ಈಗೀಗ ದೊಡ್ಡ ತೊಡಕಾಗುತ್ತಿದೆ. ಈ ತೆರೆದ ಸೋಂಕುಗಳು ಬಲು ಮಟ್ಟಿಗೆ ಆಸ್ಪತ್ರೆಗಳಲ್ಲಿ, ಬಟ್ಟೆ ಬರೆ, ಪಾತ್ರೆ ಪರಿಕರಗಳು, ಕೆಲಸಗಾರರ ಮೂಗು, ಗಂಟಲು, ಉಗುರುಸಂದುಗಳಿಂದ ಅಂಟುತ್ತವೆ. ಇದಕ್ಕಾಗಿ ಮುಂದುವರಿದ ನಾಡುಗಳ ಅನೇಕ ಆಸ್ಪತ್ರೆಗಳಲ್ಲಿ ತಲೆದೋರುವ ಈ ಬಗೆಯ ಸೋಂಕು ರೋಗದ ವಿಚಾರಣೆ ನಡೆಸಿ ಮತ್ತೆ ಹಾಗಾಗದಂತೆ ತಡೆವ ಮುನ್ನೆಚ್ಚರಿಕೆಗಳನ್ನು ಕೈಗೊಳ್ಳಲು ಸಮಿತಿಗಳಿವೆ.

ಗಾಳಿಕಾಯ್ಜೀವಿಕ ಪುಪ್ಪುಸುರಿತಗಳು ಎರಡನೆಯ ಮಹಾಯುದ್ಧದ ಹಿಂದಿದ್ದಷ್ಟು ಸಾಮಾನ್ಯವಾಗಿಲ್ಲ. ರೋಗವೇ ಇಳಿದುಹೋಯಿತೋ, ಈಗ ದೊರೆವ ಗುಣಕಾರಕ ಜೀವಿರೋಧಕಗಳಿಂದ ಮನೆಗಳಲ್ಲೇ ಗುಣವಾಗುತ್ತಿವೆಯೋ ಗೊತ್ತಿಲ್ಲ. ಫ್ರೀಡ್‍ಲ್ಯಾಂಡರನ ಪುಪ್ಪುಸುರಿತ ಬಹುವಾಗಿ ಮುದುಕರಲ್ಲೂ ಕುಡುಕರಲ್ಲೂ ವಿಪರೀತ ಪುಷ್ಟಿಗೆಟ್ಟಿರುವವರಲ್ಲೂ ಕಟ್ಟುನಿಟ್ಟಿನ ರೋಗ. (ನೋಡಿ- ಏಕಾಣುಜೀವಿಕ,-ಸೋಂಕಿನ-ರೋಗಗಳು)

ಕ್ಷಯ : ಸಾಮಾನ್ಯವಾಗಿ ಪುಪ್ಪುಸಗಳಿಗೆ ಹತ್ತುವ ಈ ರೋಗದಿಂದ ಸಾಯುವವರ ಸಂಖ್ಯೆ ಕಡಿಮೆ ಆಗುತ್ತಿದ್ದರೂ ಮೂಡಲ ಯೂರೋಪ್, ಏಷ್ಯಗಳಲ್ಲಿ ಇದರ ಹಾವಳಿ ಇನ್ನೂ ತಗ್ಗಿಲ್ಲ. ಜನಸಂದಣಿ ದಟ್ಟವಾಗಿರುವ ಹಿಂದುಳಿದ ನಾಡುಗಳಲ್ಲಿ ಈ ರೋಗವನ್ನು ಸರಿಯಾಗಿ ಪತ್ತೆಹಚ್ಚದೆ, ಅಂಕೆಅಂಶಗಳು ಸರಿಯಾಗಿಲ್ಲದ್ದರಿಂದ ಈ ಸಮಸ್ಯೆಯ ಹರವಿನ ಕಲ್ಪನೆ ಸರಿಯಾಗಿ ಸಿಕ್ಕುವಂತಿಲ್ಲ. ಇಂದಿನ ಮದ್ದು ಚಿಕಿತ್ಸೆ ಒಳ್ಳೆಯ ಗುಣಕಾರಿಯಾದ್ದರಿಂದ ಕ್ಷಯದಿಂದಾಗುವ ಸಾವುಗಳ ಲೆಕ್ಕಕ್ಕಿಂತಲೂ ರೋಗಿಗಳ ಎಣಿಕೆಯಿಂದ ನಿಜಸ್ಥಿತಿ ಅರಿವಾಗುವುದು. ಆಸ್ಪತ್ರೆಗೆ ಸೇರಿಸದೆಯೇ ಮನೆಯಲ್ಲಿ ಮಾಡುವ ಮದ್ದಿನ ಚಿಕಿತ್ಸೆಯಿಂದ ಬಹಳ ಮಂದಿ ರೋಗಿಗಳಿಗೆ ಕಾಯಿಲೆ ವಾಸಿಯಾಗುತ್ತಿದೆ. (ನೋಡಿ- ಕ್ಷಯ-2)

ಅಣಬೆ ರೋಗಗಳು : ಕೆಲವು ನಾಡುಗಳಲ್ಲಿ ಇವುಗಳ ಕೇಂದ್ರ ಜನಾಂತರ (ಎಂಡೆಮಿಕ್) ಆಗಿದ್ದು ಅನೇಕವು ಪುಪ್ಪುಸಕ್ಕೂ ಹತ್ತುತ್ತವೆ. ಅಮೆರಿಕದ ತೆಂಕಲಲ್ಲಿ ಜಾಲರಸಣಬೇನೆ (ಹಿಸ್ಟೊಪ್ಲಾಸ್ಮೋಸಿಸ್) ಸೋಂಕು ಶಾಲಾಮಕ್ಕಳಲ್ಲಿ ಕ್ಷಯಕ್ಕಿಂತಲೂ ಹೆಚ್ಚಾಗಿದೆ. ಆ ನಾಡುಗಳಲ್ಲಿ ಇದೊಂದು ದೊಡ್ಡ ಸಮಸ್ಯೆ. ಬಲುಮಟ್ಟಿಗೆ ಇದೂ ಕ್ಷಯದ ಹಾಗೇ ವರ್ತಿಸುವುದು. ಇದರ ರೋಗ ಚಿಕಿತ್ಸೆಯಲ್ಲಿ ಆಂಫೊಟೆರಿಸಿನ್ ಬಿ ಗುಣಕಾರಕ. ಮೆಲುಪಿನದಾಗಿ ಎಲ್ಲೆಲ್ಲೂ ಹರಡಿದಾಗ ಆಗುವ ಸಾಸಿವೆತರ ಸುಣ್ಣಗೂಡಿಕೆಗಳು (ಮಿಲಿಯರಿ ಕ್ಯಾಲ್ಸಿಫಿಕೇಷನ್ಸ್) ಕೆಲವು ವರ್ಷಗಳ ಕಾಲ ಎಕ್ಸ್-ಕಿರಣಗಳಲ್ಲಿ ಕಾಣುತ್ತಿರುವುವು. ಕೋಳಿಮರಿಗಳ, ಬಾವಲಿಗಳ ಹಿಕ್ಕೆಗಳಿಂದಲೂ ಕೆಲವಡೆ ಸಾಂಕ್ರಾಮಿಕಗಳು ಏಳುವುದುಂಟು.

ಪಡುವಲ ಅಮೆರಿಕ, ತೆಂಕಲ ಅಮೆರಿಕದ ಕೆಲವೆಡೆಗಳಲ್ಲಿ ಕಾಯಣಬೇನೆ (ಕಾಕ್ಸಿಡಿಯಾಯ್ಡಿಸ್) ಸೋಂಕು ಹರಡಿದೆ. ಕೆಲವರಿಗೆ ರೋಗಲಕ್ಷಣಗಳು ಹೊರಕಾಣದಿದ್ದರೂ ದೂಳಿನ ಮೂಲಕ ಬಲುಪಾಲು ಎಲ್ಲರಿಗೂ ಅಂಟಿರುವುದು. ಸುಮಾರು ಅರೆಪಾಲು ಜನರಲ್ಲಿ ಉಸಿರಾಟದ ರೋಗಲಕ್ಷಣಗಳು ತೋರುತ್ತವೆ. ಇದರಿಂದಾಗುವ ಪುಪ್ಪುಸ ಉರಿತ ಪೂರ್ತಿ ಗುಣವಾಗಬಹುದು. ಇಲ್ಲವೆ ತೆಳುಗೋಡೆಯ ವಿಶೇಷ ಪೊಳ್ಳುಗಳು ಪುಪ್ಪುಸದಲ್ಲಿ ಉಳಿಯಬಹುದು. ಪೊಳ್ಳಿನ ಗೂಡುಗಳು ಸಣ್ಣವಾಗಿದ್ದರೆ ಮುಚ್ಚಿಹೋಗುತ್ತವೆ. ದೊಡ್ಡವುಗಳಿಂದ ರಕ್ತಬೆರೆತ ಕಫ ಕೆಮ್ಮಿದಾಗ ಬೀಳಬಹುದು. ಕೆಲವೇಳೆ ಈ ಗೂಡುಗಳು ಒಡೆಯಲೂಬಹುದು. ಇದಕ್ಕಾಗಿಯೇ ಶಸ್ತ್ರಕ್ರಿಯೆ ಆಗಬೇಕು ಎನ್ನುವುದು. ಆಂಫೊಟೆರಿಸಿನ್ ಮದ್ದು ಕೆಲವೇಳೆ ಗುಣಕಾರಿ. ಅದರಲ್ಲೂ ಒಣಕಲ, ದೂಳೇಳುವ ಕಾಲಗಳಲ್ಲಿ ಜನಾಂತರ ರೋಗ ಇರುವೆಡೆಗೆ ಹೋಗದಿರುವುದೇ ರೋಗದಿಂದ ತಪ್ಪಿಸಿಕೊಳ್ಳುವ ಉಪಾಯ.

ಅನೇಕರ ಬಾಯಿಗಳಲ್ಲಿರುವ ಅಣಬೆಯಾದ ದನದ ಕಿರಣಣಬೆಯಿಂದ (ಆಕ್ಟಿನೊಮೈಸಿಸ್ ಬೊವಿಸ್) ಏಳುವ ಕಿರಣಬೇನೆ (ಆಕ್ಟಿನೊಮೈಕೋಸಿಸ್), ನೊಕಾರ್ಡ್‍ಬೇನೆ (ನೊಕಾರ್ಡಿಯೋಸಿಸ್), ಮೊಳೆಯಣ ಬೇನೆ (ಬ್ಲಾಸ್ಟೊಮೈಕೋಸಿಸ್) ಕೂಡ ಪುಪ್ಪುಸಗಳ ರೋಗಗಳಲ್ಲಿ ಸೇರಿವೆ. ಕಿರಣಬೇನೆಯ ಹುಣ್ಣುಗಳು ಎದೆಗೂಡನ್ನು ಕೊರೆದು ಒಳಹೋಗುವಂತಿರುವುವು. ಈ ಬೇನೆಗೆ ಕೆಲವೇಳೆ ಪೆನಿಸಿಲಿನ್, ಸಲ್ಫಡಯಜಿûೀನುಗಳಿಂದ ಅನುಕೂಲ. ನೊಕಾರ್ಡ್‍ಬೇನೆಗೆ ಸಲ್ಫರ್ ಮದ್ದುಗಳು ಸಾಕು. ಮೊಳೆಯಣಬೇನೆಗೆ ಆಂಫೊಟೆರಿಸಿನ್ ಬಿ ಸರಿಯಾದ ಮದ್ದು. ಕುರುಗಳು ಎದ್ದಿದ್ದರೆ ಕೀವು ಹೊರಡಿಸಬೇಕು. ಮೊಟಕಾಯ್ಜೀವಿಬೇನೆ (ಕ್ರಿಪ್ಟೊಕಾಕೋಸಿಸ್) ತುಸು ನೆಗಡಿ ಕೆಮ್ಮಿಂದ ಮೊದಲಾಗಿ ಆಮೇಲೆ ಪುಪ್ಪುಸಗಳಿಗೂ ಹರಡಿಕೊಂಡು ಮಿದುಳ್ಪೊರೆಯುರಿತಕ್ಕೂ (ಮೆನಿಂಜೈಟಿಸ್) ಹೋಗಬಹುದು. ಆಂಫೊಟೆರಿಸಿನ್ ಬಿ ಯಿಂದ ಸ್ವಲ್ಪ ಚೇತರಿಸಿಕೊಂಡರೂ ಈ ರೋಗದಲ್ಲಿ ಸಾವು ಸಾಮಾನ್ಯ. (ನೋಡಿ- ಅಣಬೆ-ಸೊಂಕುಗಳು)

ತೀವ್ರಹಠಾತ್ ಉಸಿರಾಟ ಲಕ್ಷಣಾವಳಿ (ಸಾರ್ಸ್) ಕಿರೀಟಮಾದರಿಯ ವೈರಸ್ ರೋಗ ಎರಡರಿಂದ ಹತ್ತು ದಿನಗಳ ಕಾಲ ಹುದುಗಿ ಕುಳಿತು ತುಂಬ ಹೆಚ್ಚಿನ ಜ್ವರ, ಒಣಕೆಮ್ಮು, ಚಳಿ, ತೀವ್ರತೆರ ಉಬ್ಬಸ ಮತ್ತು ಕಫದ ಲಕ್ಷಣಗಳೊಡನೆ ಪ್ರಕಟಗೊಳ್ಳುತ್ತದೆ. ಈ ರೋಗ ಈಚೆಗೆ ಚೀನಾದ ದಕ್ಷಿಣ ಭಾಗ, ಹಾಂಗ್‍ಕಾಂಗ್, ವಿಯೆಟ್ನಾಂ ಸಿಂಗಪುರಿನಲ್ಲಿ ಕಾಣಿಸಿಕೊಂಡು ಜಗತ್ತಿನ ಗಮನ ಸೆಳೆಯಿತು. ಈ ರೋಗಿಗಳನ್ನು ಬೇರ್ಪಡಿಸಿ ಇರಿಸಿ ಚಿಕಿತ್ಸೆಗೊಳಪಡಿಸಬೇಕು.

ಮಿಕ್ಕ ರೋಗಗಳು : ಪರಪಿಂಡಿಗಳ ಮುಸುರಿಕೆ : ಈಜಿಪ್ಟ್ ಬ್ರೆಜಿûಲ್ ಮತ್ತಿತರ ದೇಶಗಳಲ್ಲಿ ಪುಪ್ಪುಸದ ಬೇರೂರಿದ ಸೀಳೊಡಲಿ ಬೇನೆ (ಷಿಸ್ಟೊಸೋಮಿಯಾಸಿಸ್) ಸಾಮಾನ್ಯ. ಜಪಾನು, ಚೀನ, ಫಿಲಿಪೈನ್ಸ್, ಆಫ್ರಿಕ, ಡಚ್, ಗಯಾನ, ವೆಸ್ಟ್‍ಇಂಡೀಸಿóನ ಹಲವಾರು ದ್ವೀಪಗಳಲ್ಲಿ ಎಲ್ಲೆಲ್ಲೂ ರಕ್ತದಲ್ಲಿನ ಎಳೆಹುಳುಗಳ (ಬ್ಲಡ್ ಫ್ಲೂಕ್ಸ್) ಸೋಂಕುಗಳಾಗುತ್ತಿವೆ. ಸೋಂಕು ಹೊತ್ತಿರುವ ಬಸವನಹುಳುಗಳಿರುವ ಕೊಳ, ಕೆರೆ, ಹೊಳೆಗಳಲ್ಲಿ ಮಜ್ಜನ, ಒಳಗಿಳಿದು ನಿಂತು ಬಟ್ಟೆ ಒಗೆತಗಳಿಂದ ಸೋಂಕಿಗೆ ಈಡಾಗುವರು.

ಚಲಕಣಬೇನೆ (ಅಮೀಬಿಯಾಸಿಸ್) ಪ್ರಪಂಚದಲ್ಲಿ ಎಲ್ಲೆಲ್ಲೂ ಇದ್ದರೂ ಉಷ್ಣವಲಯದಲ್ಲಿ ಅದರಲ್ಲೂ ಕೊಳಕು ಹೆಚ್ಚಿರುವೆಡೆ ಇದು ವಿಪರೀತ. ಕೊಳಕಾಗಿ ಸೋಂಕುಹತ್ತಿರುವ ನೀರು, ಅಂಥ ನೀರಲ್ಲಿ ಅದ್ದಿದ, ತೊಳೆದ ಕಚ್ಚಾ ಆಹಾರ ತಿಂಡಿಗಳನ್ನು ಬಿಟ್ಟುಬಿಡುವುದೇ ನಿರೋಧಕ ಉಪಾಯ. ಈಲಿಯಲ್ಲಿ ಎದ್ದ ಚಲಕಣದ ಕುರು ಬಲ ಪುಪ್ಪುಸಕ್ಕೂ ಹರಡಿಕೊಳ್ಳಬಹುದು. (ನೋಡಿ- ಆಮಶಂಕೆ)

ಒಗ್ಗದಿಕೆಯ ರೋಗಗಳು : ರಕ್ತನಾಳ ಚಾಲಕ ಮೂಗುರಿತ (ವೇಸೊಮೋಟಾರ್‍ರೈನೈಟಿಸ್). ಅಂದರೆ ನೆಗಡಿ, ಕರಡ ಜ್ವರ (ಹೆ ಫೀವರ್), ಕೆಲವೇಳೆ ಗೂರಲು ಇವು ಮೂರು ಉಸಿರಾಟ ಮಂಡಲದ ಸಾಮಾನ್ಯ ಒಗ್ಗದಿಕೆಯ (ಆಲರ್ಜಿಕ್) ರೋಗಗಳು.

ಮೂಗಿನಿಂದ ಅಪಾರ ನೀರು ಸುರಿಸುವ ರಕ್ತನಾಳ ಚಾಲಕ ಮೂಗುರಿತ ಯಾವಾಗಲಾದರೂ ಕಾಣಬಹುದು. ಪರಾಗಗಳು ಒಣಗಿ ದೂಳಿನಲ್ಲಿ ಹರಡುವ ಕಾಲದಲ್ಲಿ ಮಾತ್ರ ಕರಡ ಜ್ವರ ಕಾಣಿಸಿಕೊಳ್ಳುತ್ತದೆ. ಇದ್ದಕ್ಕಿದ್ದ ಹಾಗೆ ಸೀನು, ಕಣ್ಣು ಮೂಗಿನ ಉರಿತ, ಕಣ್ಣು ಮೂಗುಗಳಿಂದ ನೀರು ಸುರಿವುದು. ಇದರಿಂದ ಅಪಾಯವಿಲ್ಲವಾದರೂ ಸುಮ್ಮನೆ ಸತಾಯಿಸುತ್ತದೆ. ನಿದ್ರೆ ಹಸಿವುಗಳನ್ನು ಕೆಡಿಸುವುದು. ಅಲ್ಲದೆ ಮೂಗಿನ ನಿಜಗೆಲಸಕ್ಕೆ ಅಡ್ಡಿಯಾಗಿ ಸೋಂಕು ಅಂಟಲು ನೆರವಾಗುತ್ತದೆ.

ಉಸಿರಾಟದ ರೋಗಗಳಲ್ಲಿ ಬಲು ಕಟ್ಟುನಿಟ್ಟಿನ ರೋಗವಾದ ಗೂರಲಿನಲ್ಲಿ ಪಂಗುಸಿರ್ನಾಳದ ಗೋಡೆಗಳಲ್ಲಿನ ನಯ ಸ್ನಾಯುಗಳ ಸೆಡೆತದಿಂದಾಗಿ ಮೇಲಿಂದ ಮೇಲೆ ಉಬ್ಬಸ ಎಳೆಯುತ್ತಿರುವುದು. ಪಂಗುಸಿರ್ನಾಳ ಕಲೆಗಟ್ಟಿದ್ದರೆ (ಸ್ಕಾರಿಂಗ್), ಗಂತಿ (ಟ್ಯೂಮರ್) ಎದ್ದಿದ್ದರೆ, ಹುಣ್ಣಾಗಿದ್ದರೆ, ಉಬ್ಬಸದ ಸೇದು ಎದೆಯ ಒಂದು ಪಕ್ಕದಲ್ಲಿ ಮಾತ್ರ ತೋರಿದರೆ ಗೂರಲಿನಲ್ಲಿ ಇಬ್ಬದಿಗಳಲ್ಲೂ ಬಿಟ್ಟು ಬಿಟ್ಟು ಬದಲಾಯಿಸುತ್ತಿರುವುದು ವಿಶೇಷ. ಗಟ್ಟಿಯಾಗಿ ಅಂಟುವ ಲೋಳೆ ಸುರಿಕೆಗಳನ್ನು ಕೆಮ್ಮಿ ಹೊರಡಿಸುವುದು ಕಷ್ಟ. ಒಗ್ಗದಿಕೆಗೆ ಧೂಳು, ಪುಕ್ಕ, ಗರಿಗಳಂಥ ಗಾಳಿಯಲ್ಲಿನ ತರತರದ ವಸ್ತುಗಳು ಬಲುಮಟ್ಟಿಗೆ ಕಾರಣ. ಅದರಲ್ಲೂ ನಡುವಯಸ್ಸಲ್ಲಿ ಗೂರಲು ಕಾಣಿಸಿಕೊಂಡರೆ ಒಳಗೇ ಸೇರಿರುವ ಏಕಾಣುಜೀವಿಗಳೇ ಕಾರಕಗಳು. ಸಾಮಾನ್ಯ ಕಾರಣಗಳು ಹಲವಾರಿವೆ. ಗೂರಲಿನ ಉಬ್ಬಸ ಕೆರಳಲು ಮನಸ್ಸು ಕೆಡುವುದು, ಬೆಳಗೋ ಸಂಜೆಯೋ ಹವೆಯ ಕಾವು ಇದ್ದಕ್ಕಿದ್ದ ಹಾಗೆ ಬದಲಾಯಿಸಿಕೆ ಇಲ್ಲವೆ ಉಸಿರಾಟದ ಸೋಂಕು ಕಾರಣಗಳು. ಉಬ್ಬಸದಲ್ಲಿ ಗಾಳಿಸಂಕಟ ಜೋರು, ಉಸಿರು ಬಿಟ್ಟಾಗ, ಸೆಡೆತದ ಸೇದಿಕೆ ಪಂಗುಸಿರ್ನಾಳಗಳು ಕಿರಿದಾಗುವುದನ್ನೂ ಮೋಟಾಗುವುದನ್ನೂ ಎಂದಿಗಿಂತಲೂ ಹೆಚ್ಚಿಸುವುದಲ್ಲದೆ, ಕಿರಿಯ ಪಂಗುಸಿರ್ನಾಳಗಳ ಸೆಡೆತದಿಂದ, ಚೆಂಡು ಕವಾಟದಿಂದ ಮುಚ್ಚಿದಂತಾಗಿ, ಉಸಿರು ಒಳಹೋಗುವುದಾದರೂ ಹೊರಬರಲು ಬಲು ಕಷ್ಟವಾಗುತ್ತದೆ. ಲೋಳೆತರನ ಸುರಿಕೆಗಳು ನಿಜವಾಗಿಯೂ ಕೆಲವು ಪಂಗುಸಿರ್ನಾಳಗಳನ್ನು ಮುಚ್ಚಿಹಾಕಬಹುದು. ರೋಗ ಒಂದೊಂದು ವೇಳೆ ಜೀವಕ್ಕೇ ಕುತ್ತಾಗುವ, ಗೂರಲಿನ ನೆಲೆಯೂರಿಕೆಗೆ (ಸ್ಟೇಟಸ್ ಅಸ್ತ್ಮಾಟಿಕಸ್) ಬಲಿಯಾಗಬಹುದು. ಕಾರ್ಟಿಕೊಸ್ಟಿರಾಯ್ಡ್ ಮದ್ದುಗಳಿಂದ ಈ ರೋಗಿಗಳು ಬದುಕುತ್ತಿದ್ದಾರೆ. ಇದರಲ್ಲಿ ಗೂರಲಿನ ಉಬ್ಬಸ ತುಸುಕಾಲವೂ ಬಿಡುವಿಲ್ಲದೆ ಸೇದುತ್ತಿರುವುದು. ಬಲುಮಟ್ಟಿಗೆ ಗೂರಲುಬ್ಬಸವನ್ನು ಬೀಟಾ ಆಡ್ರಿನರ್ಜಿಕ್ ಗ್ರಾಹಕಗಳನ್ನು ಪುರಸ್ಕರಿಸುವ ಔಷಧಿಗಳು ಅದೇ ತೆರನ ಇತರ ಮದ್ದುಗಳಿಂದಲೂ ಚೆನ್ನಾಗಿ ಅಣಗಿಸಬಹುದು. ಅಲ್ಲದೆ ಒಗ್ಗದಿಕೆ ಜನಕಗಳ (ಅಲರ್ಜೆನ್ಸ್) ಸೋಂಕುಗಳು ಹವೆಯ ಕಾವಿನ ಏರಿಳಿತಗಳಿಂದ ದೂರವಿದ್ದು ಮನಸ್ಸನ್ನು ನಿರಾಳವಾಗಿ ನೆಮ್ಮದಿಯಲ್ಲಿ ಇಟ್ಟುಕೊಳ್ಳುವುದರಿಂದ ಉಬ್ಬಸ ಬಾರದಂತೆ ತಡೆಯಬಹುದು. ಗೂರಲು ಸಂಪೂರ್ಣವಾಗಿ ವಾಸಿಯಾಗದ ಕಾಯಿಲೆ. ಆದರೆ ಸಾಕಷ್ಟು ಎಚ್ಚರದಿಂದ ಅದು ಹೊರದೋರದಂತೆ ಅಣಗಿಸಿಡಬಹುದು. ಮೇಲಿಂದ ಮೇಲೆ ಗೂರಲುಬ್ಬಸ ಕಾಡುತ್ತಿದ್ದರೆ ಸಾಮಾನ್ಯವಾಗಿ ಅಪಾಯಕರವಲ್ಲವಾದರೂ ಕೆಲವರಲ್ಲಿ ವರ್ಷಾನುಗಟ್ಟಳೆ ನರಳಿಸುತ್ತಿದ್ದರೆ ಪುಪ್ಪುಸ ಗಾಳಿಬುಡ್ಡೆಗಳು ಭಗ್ನಗೊಂಡು ಮಿತಿಮೀರಿ ಹಿಗ್ಗಿದಂತಾಗಿ ಗಾಳಿಯುಬ್ಬಟೆ (ಎಂಫಿಸೀಮ) ರೋಗ ತೋರುವುದು.

ಬೇರೂರಿದ ಪಂಗುಸಿರ್ನಾಳುರಿತ, ಗಾಳಿಯುಬ್ಬಟೆ : ಕೂರಾದ ಪಂಗುಸಿರ್ನಾಳುರಿತ (ಅಕ್ಯೂಟ್ ಬ್ರಾಂಕೈಟಿಸ್) ಮೇಲಿಂದ ಮೇಲೆ ಆಗುತ್ತಿದ್ದರೆ, ಕಫ ಬೀಳುವ, ಕೆಮ್ಮುಗೂಡಿದ ಬೇರೂರಿದ (ಕ್ರಾನಿಕ್) ಪಂಗುಸಿರ್ನಾಳುರಿತಕ್ಕೆ ದಾರಿಯಾಗುವುದು. ಹೀಗೆ ಕಫ ಬಿದ್ದು, ಒಂದೇ ಸಮನೆ ಕೆಮ್ಮುತ್ತಿದ್ದರೆ ಉಸಿರಾಟದ ಬೇನೆ ಆಗಾಗ್ಗೆ ಕೆರಳಿ, ಕೆಲವೇಳೆ ಜ್ವರ ಕಫ ಕಳೆತವೂ ಇರುತ್ತವೆ. ಕೊನೆಗೆ ಸೇದುವ ಗೊರಗುಡಿಕೆ ಕೇಳುವುದು. ಬಹು ಮಂದಿಯಲ್ಲಿ ಗಾಳಿಗೂಡುಗಳ ಗೋಡೆಗಳು ತೆಳುವಾಗಿ ಪುಪ್ಪುಸಗಳು ಮಿತಿಮೀರಿ ಉಬ್ಬಿಕೊಂಡು ಗಾಳಿಯುಬ್ಬಟೆ ಆಗುವುದು. ಬರುಬರುತ್ತ ಏರುಸಿರು ಹೆಚ್ಚಿಕೊಂಡು ಆಮೇಲೆ ತುಸು ದುಡಿದರೂ ಏರುಸಿರುಬಿಡುವಂತಾಗುತ್ತದೆ. ಪುಪ್ಪುಸಗಳನ್ನು ಬಲು ಊನಯಿಸುವ ಈ ಮಹಾ ರೋಗ ಬಹಳವಾಗಿಬಿಟ್ಟು ರೋಗಿ ಪೂರ್ತಿಯಾಗಿ ಕೈಲಾಗದವನಾಗುತ್ತಾನೆ. ಕೊನೆಗೆ ಗುಂಡಿಗೆಯ ಸೋಲುವೆಯಿಂದಲೋ (ಹಾರ್ಟ್‍ಫೈಲ್ಯೂರ್) ಇದ್ದಕ್ಕಿದ್ದ ಹಾಗೆ ಸೋಂಕು ಹತ್ತಿಯೋ ಸಾಯುವನು. ಪಂಗುಸಿರ್ನಾಳದ ಸೆಡೆತವನ್ನು ಮದ್ದುಗಳು ಶಮನಗೊಳಿಸುತ್ತವೆ. ಗಾಳಿಯುಬ್ಬಟೆ ರೋಗಿಗಳು ಆಗಾಗ್ಗೆ ಅನುಭವಿಸುವ ಪುಪ್ಪುಸುರಿತಕ್ಕೆ ಬಲು ಒಳ್ಳೆ ಮದ್ದುಗಳಿದ್ದರೂ ಅವು ಪೂರ್ತಿ ಗುಣಕಾರಿಗಳಲ್ಲ. ಎಳೆಯವರಲ್ಲಿ ಈ ರೋಗವನ್ನು ಕಂಡುಕೊಳ್ಳುವುದು ಸುಲಭವಲ್ಲ. ಇದರ ಕಾರಣ ಖಚಿತವಿಲ್ಲದ್ದರಿಂದ ಉಸಿರ್ನಾಳಗಳನ್ನು ಕೆರಳಿಸದಂತೆ, ಕೆಮ್ಮು ಬರಿಸದಂತೆ ಕೈಗೊಳ್ಳುವ ಶಮನ ಚಿಕಿತ್ಸೆಗಳು ರೋಗತಡೆಗೆ ನೆರವಾಗುತ್ತವೆ. ಮುಖ್ಯವಾಗಿ ಬೇರೂರಿದ ಪಂಗುಸಿರ್ನಾಳುರಿತ ಚಳಿದೇಶಗಳ ಬೇನೆಯಾದರೂ ಉಷ್ಣದೇಶಗಳಲ್ಲಿ ಗೋಚರಿಸುತ್ತದೆ.

ಪುಪ್ಪುಸಗಳಲ್ಲಿ ಕಸದಿಂದ ಏಳುವ ರೋಗಗಳು: ಕೈಗಾರಿಕೆಯ ಕಸಬುಗಳಲ್ಲಿ ಮತ್ತು ಗಣಿಗಾರಿಕೆಯಲ್ಲಿ ಎದ್ದ ದೂಳು ಉಸಿರ ಮೂಲಕ ಒಳಹೊಕ್ಕು ಪುಪ್ಪುಸಗಳಲ್ಲಿ ಕೂಡಿಕೊಳ್ಳುವುದರಿಂದ ತಂತುಗೂಡಿಸಿ ನಾರಿನಂತೆ ಆಗಿಸುವುದೇ ಪುಪ್ಪುಸದೂಳು ಬೇನೆಗಳು (ನ್ಯೂಮೊಕೋನಿಯೋಸಸ್). ಬೆಣಚುಕಲ್ಲಿನ ಸುಣ್ಣನೆಯ ಪುಡಿದೂಳು ಉಸಿರಲ್ಲಿ ಒಳಹೋಗುವುದರಿಂದ ಏಳುವ ಸಿಲಿಕಬೇನೆಯೇ (ಸಿಲಿಕೋಸಿಸ್) ಬಲುಮುಖ್ಯ ಪುಪ್ಪುಸದೂಳುಬೇನೆ. ಕಲ್ಲು ಗಣಿಗಳ ಕೆಲಸಗಾರರಲ್ಲಿ ಇದು ಕಾಣುವುದು ಸಾಮಾನ್ಯ. ಬರಬರುತ್ತ ಪುಪ್ಪುಸುವೆಲ್ಲ ತಂತುಗೂಡುವುದರೊಂದಿಗೆ (ಫೈಬ್ರೋಸಿಸ್) ಗಾಳಿಯುಬ್ಬಟೆ ಆಗುವುದೇ ದುರ್ಬಲತೆಗೆ ಕಾರಣ. ಸಿಲಿಕಬೇನೆಯವರು ಕ್ಷಯರೋಗಕ್ಕೆ ಸುಲಭವಾಗಿ ಈಡಾಗುವರು. ಹತ್ತಿ ಎಕ್ಕುವ, ಹತ್ತಿದಾರ ಬಳಸುವ ಗಿರಣಿಗಳ ಕೆಲಸಗಾರರಲ್ಲಿ ಪುಪ್ಪುಸುಗಳಲ್ಲಿ ಅರಳೆ ದೂಳು ಕಣಗಳು ಕೂಡುವುದರಿಂದ ಅರಳೆ ಬೇನೆ (ಬಿಸಿನೋಸಿಸ್) ಏಳಬಹುದು. ಕಲ್ನಾರಿನ ಎಳೆಗಳ ದೂಳಿನಲ್ಲಿ ಕೆಲಸ ಮಾಡುವವರಲ್ಲಿ ಕಲ್ನಾರುಬೇನೆ (ಆಸ್ಬೆಸ್ಟೋಸಿಸ್) ತೋರಬಹುದು. ವರ್ಷಗಟ್ಟಳೆ ಹೀಗೆ ಆಗುತ್ತಿದ್ದಲ್ಲಿ ಪುಪ್ಪುಸಗಳ ತೆಳುಕವಚವಾದ ಅಳ್ಳೆಪೊರೆ (ಪ್ಲೂರ) ಗುಂಡಿಗೆ ಸುತ್ಪೊರೆಗೂ (ಪೆರಿಕಾರ್ಡಿಯಂ) ಹರಡಿಕೊಂಡು ಗುಂಡಿಗೆ ಸೋಲಬಹುದು.

ಪುಪ್ಪುಸಗಳಲ್ಲಿ ಒಂದು ಬಾರಿ ತಂತುಗೂಡಿಬಿಟ್ಟರೆ ಸರಿಯಾದ ಚಿಕಿತ್ಸೆಯೇ ಇಲ್ಲದ್ದರಿಂದ ಆ ತೆರನ ದೂಳುಗಳು ಉಸಿರಲ್ಲಿ ಒಳಹೋಗದಂತೆ ತಕ್ಕ ಮುಸುಕು ಗಾಳಿಯಾಟಗಳನ್ನು ಏರ್ಪಡಿಸುವುದು ಮುಖ್ಯ. ಪ್ರತಿದೀಪ್ತಶೀಲ (ಫ್ಲೂರಸೆಂಟ್) ದೀಪಗಳ ತಯಾರಿಕೆಯಲ್ಲಿ ಬಹುವಾಗಿ ಬೆರಿಲಿಯಮ್ಮಿನ ಮಿನುರಂಜಿಗಳು (ಫಾಸ್ಫಾರ್ಸ್) ಉಸಿರಲ್ಲಿ ಸೇದಿಕೊಳ್ಳುವುದರಿಂದ ಆಗುವ ಬೆರಿಲಿಯಂ ಬೇನೆಯಲ್ಲಿ ಉಸಿರು ಕಟ್ಟಿದಂತಾಗುತ್ತದೆ. ಬೆರಿಲಿಯಂ ಬಳಸುವ ಕಾರ್ಖಾನೆ ಸುತ್ತಮುತ್ತ ಮನೆಗಳಲ್ಲಿ ಇರುವವರಲ್ಲೂ ಈ ಬೇನೆ ಕಂಡಿದೆ. ಕೈಗಾರಿಕೆಯ ವಿಧಾನಗಳನ್ನು ಈಚೆಗೆ ಬದಲಾಯಿಸಿದ್ದರಿಂದ ಈ ಬೇನೆ ಅಷ್ಟಾಗಿಲ್ಲ. ಸ್ಟಿರಾಯ್ಡ್ ಚೋದನಿಕಗಳ (ಹಾರ್ಮೋನ್ಸ್) ಚಿಕಿತ್ಸೆಯಿಂದ ಅಣಗಿಸಬಹುದು. ಹೀಗೆ ಈರಾಣುವಿನ (ಡೈಯಟೊಮೇಸಿಯಸ್) ಮಣ್ಣುಗಳು, ನುಣ್ಣನೆಯ ತವರದ ಪುಡಿ ಮುಂತಾದವಕ್ಕೆ ಒಡ್ಡುವುದರಿಂದಲೂ ಕೆಲವೇಳೆ ಪುಪ್ಪುಸದೂಳು ಬೇನೆಗಳು ಏಳುತ್ತವೆ.

ಬೇರೆ ಬೇರೆ ಬಗೆಗಳ ದೂಳಿನ, ಬೂಜಿನ ಜೀವಿಗಳ ಪದಾರ್ಥಗಳಲ್ಲಿ ಕೆಲಸ ಮಾಡುವುದರಿಂದ ಬರುವ ಕೂರಾದ ಪುಪ್ಪುಸುರಿತಕ್ಕೆ ರೈತನ ಪುಪ್ಪುಸ ಎನ್ನುವುದುಂಟು. ಮೇಲಿಂದ ಮೇಲೆ ಒಡ್ಡುತ್ತಿದ್ದರೆ ಬೇನೆ ಮರುಕಳಿಸುವುದು. ಒಳ್ಳೆಯ ಬೇಸಾಯಗಾರರಲ್ಲಿ ಏಳುವ ಮತ್ತೊಂದು ಅಸಾಧಾರಣ ಕಾಯಿಲೆ ಹಗೇವು ತುಂಬುಗರ ರೋಗ (ಸೈಲೊ ಫಿಲ್ಲರ್ಸ್ ಡಿಸೀಸ್). ನೈಟ್ರೊಜನ್ನಿನ ಕೆಲವು ಆಕ್ಸೈಡುಗಳನ್ನು ಉಸಿರಲ್ಲಿ ತೆಗೆದುಕೊಳ್ಳುವುದೇ ಕಾರಣ. ಕಬ್ಬಿನ ಸಿಪ್ಪೆಯ ಒಣಗಿದ ದೂಳಿಂದ ಹೀಗೇ ಕಬ್ಬಿಪ್ಪೆಬೇನೆ (ಬಗಸ್ಸೋಸಿಸ್) ಏಳುತ್ತದೆ. (ನೋಡಿ- ಅಪಾಯಕರ-ವೃತ್ತಿಗಳು)

ಕಸುಬಿನವಲ್ಲದವು : ಉಸಿರಾಟದ ರೋಗಲಕ್ಷಣಗಳು ಇಲ್ಲದ, ಇಲ್ಲವೇ ತುಸು ಮಾತ್ರವಿದ್ದು ಅನೇಕವೇಳೆ ಎದೆಗೂಡಿನ ಎಕ್ಸ್-ಕಿರಣಚಿತ್ರದಲ್ಲಿ ಇಕ್ಕೆಡೆಗಳಲ್ಲೂ ಸೋಜಿಗಕಾರಕವಾಗಿ ಅಸಹಜತೆಗಳು ಕಾಣುವ ಪುಪ್ಪುಸಗಳ ರೋಗ ಮಾಂಸದ ಬೇನೆ (ಸಾರ್ಕಾಯ್ಡೋಸಿಸ್) ಕಾರಣಕಾರಕ ತಿಳಿದಿಲ್ಲ. ಅಮೆರಿಕದಲ್ಲಿ ಪೀತದಾರು ಕಾಡುಗಳಲ್ಲಿನ ಹೂದೂಳಿಗೂ ಈ ರೋಗಕ್ಕೂ ಜಂಟಿಹಾಕುತ್ತಿರುವರು. ಇತ್ತೀಚೆಗೆ ಇಡುಗಂಟುಬೇನೆ (ತಿಸಾರೋಸಿಸ್) ಆಗಿರುವ ವರದಿಗಳಿವೆ. ಕೂದಲನ್ನು ಅಂಟಿಕೂಡುವಂತೆ ಬೃಹದಣುಗಳಿರುವ (ಮ್ಯಾಕ್ರೊಮಾಲಿಕ್ಯೂಲ್ಸ್) ರಾಳಗಳ ಸಿಂಪಡಿಕದ (ಸ್ಪ್ರೇ) ಬಳಕೆಯಿಂದ ಅದನ್ನು ಸಿಂಪಡಿಸುವವನಲ್ಲಿ ರಾಳದ ಈ ಬೃಹದಣುಗಳು ಪುಪ್ಪುಸುಗಳಲ್ಲಿ ಸೇರಿಕೊಳ್ಳುವುದರಿಂದ ಏಳುವ ಬೇನೆಯಿದು.

ಏಡಿಗಂತಿ : 1930ರ ಸುಮಾರಿನಿಂದ ಈಚೆಗೆ ಅಮೆರಿಕ, ಬ್ರಿಟನ್, ಆಸ್ಟ್ರೇಲಿಯ, ಕೆನಡ, ಡೆನ್ಮಾರ್ಕ್, ಜಪಾನು, ತುರ್ಕಿಗಳಲ್ಲಿ ಪುಪ್ಪುಸದ ಏಡಿಗಂತಿಗಳು (ಕ್ಯಾನ್ಸರ್ಸ್) ಹೆಚ್ಚಾಗಿದ್ದುವು. ಭಾರತದಲ್ಲಿ ಈ ರೋಗ ಈಚೆಗೆ ವಿಶೇಷವಾಗಿ ತೋರಿಬರುತ್ತದೆ. ಅದು ಗಂಡಸರಲ್ಲಿ ಹೆಚ್ಚಾಗಿದ್ದು, ಏಡಿಗಂತಿ ತೀರ ಸಾಮಾನ್ಯವಾಗಿತ್ತು. ಹೊಗೆಬತ್ತಿ ಸೇದಿಕೆಗೂ ಇದಕ್ಕೂ ಇರುವ ನಿಕಟ ಸಂಬಂಧವನ್ನು ಇಂಗ್ಲೆಂಡ್, ಅಮೆರಿಕಗಳಲ್ಲಿ ಎಷ್ಟೋ ಮಂದಿ ಶೋಧಕರು ತೋರಿದ್ದಾರೆ. ಹಳ್ಳಿಗಳಿಗಿಂತಲೂ ನಗರಗಳಲ್ಲಿ ಹೆಚ್ಚಾಗಿರುವುದರಿಂದ ಗಾಳಿಯ ಕೊಳಕನ್ನೂ ಪರಿಶೀಲಿಸಬೇಕು. ಪುಪ್ಪುಸದ ಏಡಿಗಂತಿ ಮೈಯಲ್ಲಿ ದೂರದ ಇತರ ಅಂಗಗಳಿಗೆ ಹರಡಿಕೊಳ್ಳುವ ಮೊದಲೇ ಶಸ್ತ್ರಕ್ರಿಯೆಯಿಂದ ಬುಡಮಟ್ಟ ತೆಗೆದುಹಾಕುವುದೇ ಮುಖ್ಯ ಚಿಕಿತ್ಸೆ. ಹೀಗೆ ಮಾಡಿದರೂ ಐದು ವರ್ಷಗಳು ಬದುಕುವವರು ನೂರಕ್ಕೆ ಹತ್ತು ಮಂದಿಯೂ ಇಲ್ಲ. ಒಂದು ಬಗೆಯ ತೀವ್ರತೆರ ಗಂತಿಗೆ ರಸಾಯನ ಚಿಕಿತ್ಸೆ ಇಲ್ಲವೇ ವಿಕಿರಣ ಚಿಕಿತ್ಸೆ ಹೆಚ್ಚು ಉಪಯುಕ್ತ.

 (ಡಿ.ಎಸ್.ಎಸ್.; ಕೆ.ಎಸ್.ಎಸ್.ಎಚ್.)