ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಬಂಗಾಲಕೊಲ್ಲಿ

ವಿಕಿಸೋರ್ಸ್ದಿಂದ

ಬಂಗಾಲಕೊಲ್ಲಿ - ಹಿಂದೂ ಸಾಗರದ ಈಶಾನ್ಯ ಭಾಗದಲ್ಲಿರುವ ಕೊಲ್ಲಿ. ಸ್ಥೂಲವಾಗಿ ಉ.ಅ. 5o-22o ಮತ್ತು ಪೂ.ರೇ 80o-95o ನಡುವೆ ವ್ಯಾಪಿಸಿದೆ. ಇದರ ಪಶ್ಚಿಮಕ್ಕೆ ಭಾರತ ಮತ್ತು ಶ್ರೀಲಂಕಾ ದೇಶಗಳು ಉತ್ತರಕ್ಕೆ ಬಾಂಗ್ಲಾದೇಶ ಮತ್ತು ಪೂರ್ವಕ್ಕೆ ಬರ್ಮ ಮತ್ತು ಮಲಯ ಪರ್ಯಾಯದ್ವೀಪದ ಉತ್ತರಭಾಗ ಇವೆ. ಶ್ರೀಲಂಕಾದ ದಕ್ಷಿಣ ತುದಿಯಿಂದ ಸುಮಾತ್ರ ದ್ವೀಪದ ಉತ್ತರ ತುದಿಯವರೆಗೆ ಇದರ ದಕ್ಷಿಣ ಮೇರೆ ಹಬ್ಬಿದೆ. ವಿಸ್ತೀರ್ಣ 21,72,000 ಚ.ಕಿಮೀ. ಅಗಲ ಸುಮಾರು 1600 ಕಿಮೀ ಸರಾಸರಿ ಆಳ 790 ಮೀ ಗಳಿಗಿಂತ ಹೆಚ್ಚು. ಗರಿಷ್ಠ ಆಳ 4,500 ಮೀ.

ಬಂಗಾಲಕೊಲ್ಲಿಯನ್ನು ಸೇರುವ ನದಿಗಳು ಹಲವು, ಉತ್ತರದಲ್ಲಿ ಗಂಗಾ ಮತ್ತು ಬ್ರಹ್ಮಪುತ್ರಾ, ಪೂರ್ವದಲ್ಲಿ ಇರವಾಡಿ, ಪಶ್ಚಿಮದಲ್ಲಿ ಗೋದಾವರಿ, ಮಹಾನದಿ, ಕೃಷ್ಣಾ ಮತ್ತು ಕಾವೇರಿ, ಈ ಕೊಲ್ಲಿಯನ್ನು ಸೇರುವುವು. ಕೊಲ್ಲಿಯಲ್ಲಿ ಇರುವ ದ್ವೀಪಸ್ತೋಮಗಳು ಅಂಡಮಾನ್ ಮತ್ತು ನಿಕೋಬಾರ್. ಪ್ರಮುಖ ಭಾರತೀಯ ಬಂದರುಗಳು ಕಲ್ಕತ್ತ, ಕಾಕಿನಾಡ, ಮಚಲಿಪಟ್ಟಣ, ವಿಶಾಖಪಟ್ಟಣ, ಕಡಲೂರು, ಮದರಾಸು, ಮತ್ತು ಪಾರದೀಪ್.

ಭೌತ ಲಕ್ಷಣ: ಉತ್ತರ ಭಾಗದಲ್ಲಿ ಸುಮಾರು 160 ಕಿಮೀ ಅಗಲದ ಖಂಡೀಯ ಮರಳು ದಿಬ್ಬವಿದೆ. ದಕ್ಷಿಣಕ್ಕೆ ಸಾಗಿದಂತೆ ಇದು ಕಿರಿದಾಗುತ್ತದೆ. ತಳ ಸಾಮಾನ್ಯವಾಗಿ ದಕ್ಷಿಣಕ್ಕೆ ಇಳಜಾರಾಗಿದ್ದು ಮಟ್ಟಸವಾಗಿದೆಯೆಂದು ಈಚಿನವರೆಗೂ ನಂಬಲಾಗಿತ್ತು. ಹಿಂದೂ ಸಾಗರದ ಅಂತರರಾಷ್ಟ್ರೀಯ ಅನ್ವೇಷಣೆಯಿಂದ ಹೆಚ್ಚಿನ ವಾಸ್ತವ ಸಂಗತಿಗಳು ಹೊರಬಿದ್ದಿವೆ. ನೀರಿನ ಅಡಿಯಲ್ಲಿ ಅನೇಕ ಪರ್ವತ ಶ್ರೇಣಿ, ಅಳ ಕಮರಿ ಮತ್ತು ನಾಲೆ ಇರುವುದು ಗೊತ್ತಾಗಿದೆ. ನಿಕೋಬಾರ್-ಸುಮಾತ್ರ ಭಾಗದಲ್ಲಿ ಗರಿಷ್ಠ 4500 ಮೀ ಆಳದ ಒಂದು ಕೊಳ್ಳವಿದೆ. ಕೊಲ್ಲಿಯ ತಲೆಯ ಬಳಿ ಆರಂಭವಾಗುವ ಕಮರಿ ಖಂಡೀಯ ಮರಳು ದಿಬ್ಬಕ್ಕೆ ಅಡ್ಡವಾಗಿ ಅದನ್ನು ಕತ್ತರಿಸಿದಂತೆ 160 ಕಿಮೀ ದೂರ ಸಾಗುತ್ತದೆ. ಇದರ ಅಗಲ ಸುಮಾರು 13 ಕಿಮೀ, ಭಾರತ ತೀರದಿಂದಾಚೆಗೆ ಕಂಡುಬಂದಿರುವ ಕಮರಿಗಳ ಪೈಕಿ ಮಹಾನದಿ, ಕೃಷ್ಣಾ, ಸ್ವರ್ಣಮುಖಿ, ಪೆನ್ನಾರ್ ಮದ್ರಾಸ್, ನಾಗಾರ್ಜುನ, ಗೋದಾವರಿ ಮತ್ತು ಗೌತಮಿ ಕಮರಿಗಳು ಮುಖ್ಯವಾದವು. ಇವುಗಳ ಪೈಕಿ ಕೆಲವು ಪ್ಲೀಸ್ಟೊಸಿನ್ ಯುಗದಲ್ಲಿ (ಸುಮಾರು 10,000-25,00,000 ವರ್ಷಗಳ ಹಿಂದೆ) ರೂಪುತಳೆದವು.

ಈ ಕೊಲ್ಲಿಯ ಭೌತಗುಣಗಳು ವ್ಯತ್ಯಾಸಗೊಳ್ಳುತ್ತಿರುವುದು ಇದರ ಒಂದು ವೈಶಿಷ್ಟ್ಯ. ತೀರದಾಚೆಯ ಪ್ರದೇಶಗಳಲ್ಲಿ ಉಷ್ಣತೆ ಸಾಮಾನ್ಯವಾಗಿ ಎಲ್ಲ ಋತುಗಳಲ್ಲೂ ಏಕರೀತಿಯದಾಗಿರುತ್ತದೆ, ಉತ್ತರಕ್ಕೆ ಹೋದಂತೆ ಉಷ್ಣತೆ ಕಡಿಮೆಯಾಗುತ್ತದೆ. ಮೇಲ್ಭಾಗದ ಸಾಂದ್ರತೆ ವಸಂತ ಋತುವಿನಲ್ಲಿ ಅಧಿಕ, ಮೇಲಣ ನೀರಿನ ಚಲನೆಯ ದಿಕ್ಕು ಋತುವಿಗೆ ಅನುಗುಣವಾಗಿ ವ್ಯತ್ಯಾಸವಾಗುತ್ತದೆ. ಈಶಾನ್ಯ ಮಾನ್ಸೂನ್ ಕಾಲದಲ್ಲಿ ಇದು ಪ್ರದಕ್ಷಿಣವಾಗಿಯೂ ನೈಋತ್ಯ ಮಾನ್ಸೂನ್ ಕಾಲದಲ್ಲಿ ಅಪ್ರದಕ್ಷಿಣವಾಗಿಯೂ ಚಲಿಸುತ್ತದೆ. ಮಾನ್ಸೂನಿನ ಬದಲಾವಣೆಯ ಕಾಲದಲ್ಲಿ, ಮುಖ್ಯವಾಗಿ ಅಕ್ಟೋಬರಿನ್ನಲ್ಲಿ ತೀವ್ರ ಚಂಡಮಾರುತಗಳು ಸಂಭವಿಸುತ್ತದೆ. ಅಲೆ ಹಾಗೂ ಭರತದ ಪರಿಣಾಮವಾಗಿ ನೀರಿನ ಮಟ್ಟದಲ್ಲಾಗುವ ಬದಲಾವಣೆಗಳ ಜೊತೆಗೆ ವರ್ಷ ಪೂರ ಸಮುದ್ರದ ಮಟ್ಟ ವ್ಯತ್ಯಾಸವಾಗುತ್ತಲೇ ಇರುತ್ತದೆ. ವಂಶಧಾರಾ, ನಾಗಾವಳಿ, ವಶಿಷ್ಠ, ಗೋದಾವರಿ ನದೀ ಮುಖಗಳ ಬಳಿಯಲ್ಲಿ ಮ್ಯಾಂಗನೀಸ್‍ಯುಕ್ತ ಖನಿಜಕಣಗಳು ವಿಶೇಷವಾಗಿ ನಿಕ್ಷೇಪಗೊಂಡಿವೆ, ಕಾವೇರಿ, ಗೋದಾವರಿ ಮುಖಜ ಭೂಮಿಗಳ ಪ್ರದೇಶದಲ್ಲಿ ತೈಲ ನಿಕ್ಷೇಪಗಳ ಅನ್ವೇಷಣೆಯಾಗುತ್ತಿದೆ. (ಎಚ್.ಎಸ್.ಕೆ.)