ಪುಟ:Rangammana Vathara.pdf/೧೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ರಂಗಮ್ಮನ ವಠಾರ

101

ಹೊಸಬಳೆದುರು ಹಳಬಳಿಗೆ ಸೋಲಾಗಿತ್ತು. ಬೇರೆಯವರೇನೋ ಸುಮ್ಮನಿದ್ದರು.
ಆದರೆ, ತನ್ನ ಸ್ನೇಹಿತೆಯದೇ ಮೇಲಣ ಸ್ಥಾನವೆಂದು ಸ್ಪಷ್ಟವಾದ ಅಹಲ್ಯೆಗೆ ಮುಗುಳು
ನಗೆಯನ್ನು ಹತ್ತಿಕ್ಕುವುದು ಪ್ರಯಾಸವಾಯಿತು. ಆಕೆ ರಾಧೆಯ ತೊಡೆಯನ್ನು
ಮೆಲ್ಲನೆ ಚಿವುಟಿದಳು. ಅವರ ಕಣ್ಣುಗಳು ಪರಸ್ಪರ ಮಾತನಾಡಿಕೊಂಡುವು. ಚಂಪಾ
ವತಿಯ ಸೂಕ್ಷ್ಮ ದೃಷ್ಟಿಗೆ ಇದೆಲ್ಲ ಬೀಳದೆ ಇರಲಿಲ್ಲ. ಆಕೆ ಮಾತ್ರ ಗಂಭೀರವಾಗಿಯೇ
ಇದ್ದಳು.
ಕಮಲಮ್ಮ ಹಾಡು ಮುಗಿಸಿದೊಡನೆ ಆಕೆಯೆಂದಳು:
"ಚೆನ್ನಾಗಿ ಹಾಡಿದ್ರಿ ಕಣ್ರೀ..."
"ಅಯ್ಯೋ ನಮ್ಮದೆಲ್ಲ ಏನಮ್ಮಾ..."
ಇನ್ನೂ ಒಬ್ಬಿಬ್ಬರು ಗಂಡಸರು ವಠಾರಕ್ಕೆ ಹಿಂದಿರುಗಿದ ಹಾಗಾಯಿತು.ಆದರೆ
ಹೆಂಗಸರು ಮಿಸುಕಲಿಲ್ಲ.
"ನೀನು ಹಾಡಮ್ಮ ಅಹಲ್ಯಾ",ಎಂದಳು ಚಂಪಾವತಿ.
"ಅಣ್ಣ ಬಂದ," ಎನ್ನುತ್ತ ಉಪಾಧ್ಯಾಯರ ತಂಗಿ ಸುಮಂಗಳಾ ಎದ್ದು
ಹೋದಳು. ಉಪಾಧ್ಯಾಯರ ಹೆಂಡತಿ ಮಾತ್ರ ಕದಲಲಿಲ್ಲ.
ಹಾಡಲು ಸಿದ್ಧಳಾದ ಅಹಲ್ಯಾ, ರಾಧೆಯನ್ನು ನೋಡಿ ನಕ್ಕಳು.
ಅಷ್ಟರಲ್ಲಿ ಪೋಲೀಸನ ಮಗ ಬಂದು ಹೇಳಿದ:
"ಅಮ್ಮಾ, ಅಪ್ಪ ಬಂದ."
ಆದರೆ ಪೊಲೀಸನ ಹೆಂಡತಿ ಏಳಲಿಲ್ಲ.

ಅಹಲ್ಯಾ ಆರಂಭಿಸಿದಳು:
"ಹುಣ್ಣಿಮೆ ಚಂದಿರ ಬಂದಿಹನೆಂದು__"
ಮೊದಲ ಸಾಲು ಕೇಳುತ್ತಲೆ ರಾಧೆಯ ಮುಖ ಕೆಂಪೇರಿತು. ಅಹಲಾ
ಮುಗುಳುನಕ್ಕು ಮುಂದುವರಿಸಿದಳು:
"ತಿಂಗಳ ಪೂಜೆಯ ಸಲ್ಲಿಸಲೆಂದು
ಬಂದಳು ರಾಧೆ ಯಮುನೆಯ ತಡಿಗೆ....."
ತನ್ನ ಹೆಸರು ಬಂದೊಡನೆ ರಾಧಾ ಕೊರಳು ಕೊಂಕಿಸಿದಳು. ಹೆಂಗಸರೆಲ್ಲ
ಗೊಳ್ಳನೆ ನಕ್ಕರು. ನಗೆಯ ತೆರೆಗಳು ಏರಿ ಬರುತ್ತಿದ್ದಂತೆಯೇ ಅಹಲ್ಯಾ ಹಾಡಿದಳು:
"...ತೋರಿತು ಹೊಸ ಶೃಂಗಾರದ ನಡಿಗೆ
ಹುಣ್ಣಿಮೆ ಚಂದಿರ ಬಂದಿಹನೆಂದು..."
ಕಂಠದ ಮಾಧುರ್ಯಕ್ಕೆ ಕೌಮಾರ್ಯದ ಮೋಹಕ ಮುಗ್ಧತೆಯೂ ಸೇರಿ ಆ ಹಾಡು
ಅಲ್ಲಿದ್ದವರನ್ನು ಮರುಳುಗೊಳಿಸಿತು.
ನಿಂತಲ್ಲಿಂದಲೆ ವಠಾರದ ಹೆಬ್ಬಾಗಿಲತ್ತ ನೋಡಿದ ಮೀನಾಕ್ಷಮ್ಮ ಹೇಳಿದಳು:
"ಚಂಪಾವತೀ, ನಿಮ್ಮ ಯಜಮಾನ್ರು ಬಂದ್ರು ಕಣ್ರೀ."