ಪುಟ:Mysore-University-Encyclopaedia-Vol-1-Part-1.pdf/೧೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವರ್ಗವನ್ನು ಊರ್ಜಿತ ಗೊಳಿ ಸುತ್ತಾನೆ. ಲ್ಯೂಕರ್ಟ್ ರೇಡಿಯೇಟ ವಿಭಾಗವನ್ನು ಸೀಲೆಂಟರೇಟ ಮತ್ತು ಎಕೈನೊಡರ್ಮೆಟ ಎಂಬ ಎರಡು ಭಾಗಗಳಾಗಿ ವಿಭಾಗಿಸಿದ. ಮುಂದೆ ಬಂದ ವಿಜ್ಞಾನಿಗಳು ಬ್ರಾಕಿಯೊಪೋಡ, ಬ್ರಯೋಜೋ಼ವ ಹಾಗು ಟ್ಯೂನಿಕೇಟ್ ವರ್ಗಗಳನ್ನು ಮೃದ್ವಂಗಿಗಳ ಗುಂಪಿನಿಂದ ಬೇರ್ಪಡಿಸಿದರು. ಮಿಲ್‍ನೇ ಎಡ್ವರ್ಡ್ ಎಂಬವನು ಟ್ಯೂನಿಕೇಟ ಜೀವಿಗಳಿಗೆ ಟ್ಯೂನಿಕೇಟ್ ಎಂಬ ಪ್ರತ್ಯೇಕ ವಂಶದ ಅರ್ಹತೆಯನ್ನು ಕೊಟ್ಟ. ಕ್ಲಾಸ್ ಎಂಬ ಜರ್ಮನ್ ವಿಜ್ಞಾನಿ ಇಡೀ ಪ್ರಾಣಿ ಪ್ರಪಂಚವನ್ನು 1. ಪ್ರೋಟೋ ಜ಼ೋವ 2. ಸೀಲೆಂಟರೇಟ 3. ಎಕೈನೊಡರ್ಮೆಟಾ 4. ವರ್ಮಿಸ್ 5. ಆತ್ರ್ರಾಪೊಡ 6. ಮೃದ್ವಂಗಿಗಳು (ಮಾಲಸ್ಕ) 7. ಮೆಲಸ್ಕಾಯಿಡಿಯ 8. ಟ್ಯೂನಿಕೇಟ್ 9. ಕಶೇರುಕ ಎಂಬ ಒಂಬತ್ತು ವರ್ಗಗಳನ್ನಾಗಿ ವಿಂಗಡಿಸಿದನು. ಮುಂದೆ ಬಂದ ವಿಜ್ಞಾನಿಗಳು ಪೋರಿಪ಼ೆರ ಮತ್ತು ಹೆಮಿಕಾರ್‍ಡೇಟ ವಂಶಗಳನ್ನು ಕ್ಲಾಸ್‍ನ ವಿಭಜನೆಗೆ ಸೇರಿದರು. ಮುಂದೆ ವರ್ಮಿಸ್ ಗುಂಪನ್ನು, ಪ್ಲಾಟಿಹೆಲ್‍ಮೆನ್‍ಥೀಸ್, ನ್ಯಾಮರಟೈನ, ಆಸ್ಕಿಹೆಲ ಮೆನ್‍ಥೀಸ್ ಹಾಗೂ ಖಂಡಗಳುಳ್ಳ ಪ್ರಾಣಿಗಳಾದ ಆನೆಲಿಡ ಎಂಬ ವಂಶಗಳನ್ನು ಪ್ರತಿಪಾದಿಸುತ್ತಾರೆ. ಅತ್ಯಂತ ಆಧುನಿಕ ಅಭಿಪ್ರಾಯದಂತೆ ಇಂದು ಪ್ರಾಣಿ ಪ್ರಪಂಚದಲ್ಲಿ 20 ರಿಂದ 30 ವಂಶಗಳನ್ನು ಗುರುತಿಸಬಹುದು. ಆದುದರಿಂದ ಈ ವರ್ಗೀಕರಣದಲ್ಲಿ ಎಲ್ಲದರಲ್ಲಿಯೂ ಒಂದೇ ರೀತಿಯ ಸಾಮ್ಯವನ್ನು ಹುಡುಕುವುದು ಕಷ್ಟ. ಇಂದು ಹೈಮನ್ ಎಂಬಾಕೆಯ ವರ್ಗೀಕರಣ ಪ್ರಚಲಿತವಾಗಿದೆ. 1. ಪ್ರೋಟೋಜೋ಼ವ 2. ಮೀಸೋಜೋ಼ವ 3. ಪೋರಿಫೆರ 4. ನೈಡೇರಿಯ 5. ಟಿನೊಫೊರ 6. ಪ್ಲಾಟಿಹೆಲ್‍ಮನ್‍ಥಿಸ್ 7. ರಿಂಕೊಸೀಲ್ 8. ಎಂಟೊಪ್ರಾಕ್ಟ 9. ಆಕ್ಯಾಂತೊ ಕಿಫಾಲಾ 10. ಆಸ್ಕಿಹೆಲ್‍ಮೆನ್‍ಥೀಸ್ 11. ಮೃದ್ವಂಗಿಗಳು (ಮಾಲಸ್ಕ) 12. ಸೈಫನ್‍ಕುಲಿಡ 13. ಎಕಿಯುರಾಯ್ಡಿಯ 14. ಆನೆಲಿಡ 15. ಆಥ್ರ್ರೊಪೋಡ 16. ಎಕ್ಟೊಪ್ರಾಕ್ಟ 17. ಪೋರೋನಿಡ 18. ಬ್ರಾಕಿಯೊಪೊಡ 19. ಎಕೈನೋಡರ್‍ಮ್ಯೇಟ 20. ಪೋಗೊನೊ ಫೋರ 21. ಕೀಟೋಗ್ನಾಥ ಎಂಬ 21 ವಂಶಗಳಾಗಿ ಆಕೆ ವರ್ಗೀಕರಿಸಿರುವಳು. ಅಕಶೇರುಕ ಪ್ರಾಣಿಗಳಿಗೆ ಸಂಬಂಧಿಸಿದ ಈ ವರ್ಗೀಕರಣವನ್ನು ಸಾಮಾನ್ಯವಾಗಿ ಇಂದು ಬಹಳಷ್ಟು ವಿಜ್ಞಾನಿಗಳು ಒಪ್ಪಿಕೊಳ್ಳುತ್ತಾರೆ. ಮೇಲ್ಕಂಡ ವರ್ಗೀಕರಣ ಅಸ್ತಿತ್ವಕ್ಕೆ ಬರುವುದಕ್ಕೆ ಮುಂಚೆ ಹೆಕೆಲ್ ಎಂಬವನು ಪ್ರಾಣಿಪ್ರಪಂಚವನ್ನು ಎರಡು ಭಾಗಗಳಾಗಿ ವಿಭಾಗಿಸಿದ್ದ. ಈತನ ಪ್ರಕಾರ ಏಕ ಕೋಶಜೀವಿಗಳೇ ಒಂದು ಪಂಗಡ. ಏಕಕೋಶ ಜೀವಿಗಳನ್ನು ಪ್ರೋಟೋಜ಼ೋವ ಎಂತಲೂ ಬಹುಕೋಶ ಜೀವಿಗಳನ್ನು ಮೆಟಜ಼ೋವ ಎಂತಲೂ ಆತ ಹೆಸರಿಸಿದ್ದ. ಮೆಟಜ಼ೋವ ಪಂಗಡವನ್ನು ಅವುಗಳ ಅಂತಸ್ತಿಗೆ ತಕ್ಕಂತೆ ಮೂರು ವಿಭಾಗಗಳಾಗಿ ವಿಂಗಡಿಸಿ ಪ್ರಥಮ ವಿಭಾಗವನ್ನು ಮಿಸೊಜ಼ೊವವೆಂದು ಕರೆಯಲಾಯಿತು. ಇದರಲ್ಲಿ 50 ಪ್ರಭೇದಗಳಿವೆ. ಇವು ಅತ್ಯಂತ ಸೂಕ್ಷ್ಮ ಜೀವಿಗಳಾಗಿದ್ದು ಇವುಗಳ ಶರೀರ ಜೀವಕೋಶಗಳ ಒಂದೇ ಪದರವನ್ನು ಹೊಂದಿದೆ. ಇವುಗಳ ಜೀವಕೋಶ ಏಕಕೋಶ ಜೀವಿಗಳಾದ ಪ್ರೋಟೋಜ಼ೋವಗಳಂತೆ ತಮ್ಮ ಕ್ರಿಯೆಗಳನ್ನು ನಡೆಸುತ್ತದೆ. ಎರಡನೆಯ ವಿಭಾಗ ಪ್ಯಾರಾಜ಼ೋವ. ಈ ವಿಭಾಗದಲ್ಲಿ 5,000 ಪ್ರಭೇದಗಳಿವೆ. ಇವುಗಳೇ ಸ್ಪಂಜು ಪ್ರಾಣಿಗಳು. ಇವನ್ನು ಪೊರಿಫೆರ ಎಂಬ ವಂಶಕ್ಕೆ ಸೇರಿಸಲಾಗಿದೆ. ಮೂಲಭೂತವಾಗಿ ಈ ಪ್ರಾಣಿಗಳು ಕೆಲವೇ ರೀತಿಯ ಜೀವಕೋಶಗಳನ್ನು ಹೊಂದಿವೆ. ಇವುಗಳಲ್ಲಿ ಅತಿ ಮುಖ್ಯವಾದುವೆಂದರೆ ಅಮಿಬಾಯಿಡ್ ಕೋಶಗಳು. ಕೊರಳುಪಟ್ಟಿ ಹಾಗೂ ಶಿಲಿಕೆಗಳುಳ್ಳ ಕೋಶಗಳು. ಅಮಿಬಾಯಿಡ್ ಕೋಶಗಳು ಮುಂದೆ ವಿಭೇದೀಕರಣ ಕ್ಕೊಳಗಾಗಿ ಪ್ರಬುದ್ಧ ಸ್ಪಂಜು ಪ್ರಾಣಿಯ ವಿವಿಧ ಕ್ರಿಯೆಗಳಲ್ಲಿ ಪಾಲ್ಗೊಳ್ಳುತ್ತವೆ. ಈ ಪ್ರಾಣಿಗಳಲ್ಲಿ ಜೀವಕೋಶಗಳು ಬಹಳ ಕನಿಷ್ಠಮಟ್ಟದಲ್ಲಿ ತಮ್ಮ ಹೊಂದಾಣಿಕೆಯನ್ನು ಪ್ರದರ್ಶಿಸುತ್ತವೆ. ಜೀವಕೋಶಗಳು ಪ್ರಾಣಿಯ ಶರೀರದಿಂದ ಅತಿ ಸುಲಭವಾಗಿ ಬೇರ್ಪಟ್ಟು ಶರೀರದ ಬೇರೆಕಡೆಗೆ ಕಾಣಬಹುದು. ಹೀಗಾಗಿ ಈ ಪ್ರಾಣಿಗಳಲ್ಲಿ ನಿಜವಾದ ಅಂಗಾಂಶಗಳನ್ನು ಬೇರ್ಪಡಿಸಲು ಸಾಧ್ಯವಿಲ್ಲ. ಆದ್ದುದರಿಂದ ಇವುಗಳ ಶರೀರವನ್ನು ಜೀವಕೋಶಗಳ ಸಮುದಾಯ ಮಾತ್ರವೆಂದು ಹೇಳಬಹುದು. ಮೂರನೆಯ ವಿಭಾಗವೇ ಯೂಮೆಟಜ಼ೋವ. ಇದರಲ್ಲಿ ಜೀವ ಪ್ರಭೇದದ ಎಲ್ಲ ವಂಶಗಳೂ ಸೇರುತ್ತವೆ. ಈ ಎಲ್ಲ ವಂಶಗಳಲ್ಲಿಯೂ ಜೀವಕೋಶಗಳು ವಿಭೇದೀಕರಣ ಕ್ಕೊಳಪಟ್ಟು ಅತ್ಯಂತ ಉನ್ನತ ಹಾಗು ಕ್ಲಿಷ್ಟ ಅವಸ್ಥೆಗಳನ್ನು ತಲುಪಿರವುದು ಕಂಡುಬರುತ್ತದೆ. ಉದಾಹರಣೆಗೆ, ನರಮಂಡಲದ ಕೋಶಗಳು, ಮಾಂಸಖಂಡದ ಕೋಶಗಳು-ಇತ್ಯಾದಿ. ಈ ಜೀವಕೋಶಗಳು ನಿರ್ದಿಷ್ಟವಾದ ಅಂಗಕಟ್ಟು ಹಾಗೂ ಅಂಗಗಳಾಗಿರುವುದನ್ನು ಕಾಣಬಹುದು. ಯೂಮೆಟಜ಼ೊವ ಪಂಗಡದ ಅತ್ಯಂತ ಕೆಳ ದರ್ಜೆಯ ವಂಶವೆಂದರೆ ರೇಡಿಯಲ್ ಸಿಮೆಟ್ರಿಯನ್ನು ಹೊಂದಿರುವ ಸೀಲೆಂಟರೇಟ ವಂಶ. ಈ ಎಲ್ಲ ವಂಶಗಳ ಉಗಮ ಇಂದಿಗೂ ಸರಿಯಾಗಿ ತಿಳಿದುಬಂದಿಲ್ಲ. ಏಕೆಂದರೆ ಈ ಜೀವಿಗಳ ಪ್ರಾಚೀನ ಅವಶೇಷಗಳು ಸಾಕಷ್ಟು ಮಟ್ಟಿಗೆ ದೊರೆತಿಲ್ಲ. ಮೃದುದೇಹ ಹೊಂದಿದ್ದ ಈ ಜೀವಿಗಳ ಅವಶೇಷಗಳು ಭೂಮಿಯಲ್ಲಿ ಉಳಿಯಲಾರದೆ ಕರಗಿಹೋಗಿವೆ. ಜೀವಪ್ರಭೇದದ ಕೆಲವು ಮುಖ್ಯ ವಂಶದ ಜೀವಿಗಳ ಅವಶೇಷಗಳು ಕೇಂಬ್ರಿಯನ್ ಕಾಲದಿಂದ ಸಿಕ್ಕಿವೆ. ಹೀಗೆ ಸಿಕ್ಕಿರುವ ಪಳೆಯುಳಿಕೆಗಳ ಆಧಾರದಿಂದ ನಾವು ಒಂದು ವಂಶದ ಜೀವಿಗಳಿಗೂ ಮತ್ತೊಂದು ವಂಶದ ಜೀವಿಗಳಿಗೂ ಇರುವ ಸಾಮ್ಯ ಹಾಗು ವ್ಯತ್ಯಾಸಗಳನ್ನು ತಿಳಿದು ಅವುಗಳಿಗಿರುವ ಸಂಬಂಧವನ್ನು ಕಂಡುಕೊಳ್ಳಬೇಕಾಗಿದೆ. ಹ್ಯಾಟಚೆಕ್ (1888) ಈ ಜೀವಿಗಳ ವಂಶಾವಳಿಯನ್ನು ಎರಡು ದಾರಿಗಳಲ್ಲಿ ಗುರುತಿಸುತ್ತಾನೆ. ಈ ಎರಡು ದಾರಿಗಳನ್ನು ಮುಖ್ಯವಾಗಿ ಆ ಜೀವಿಗಳ ಕೇಂದ್ರ ನರಮಂಡಲದ ಬೆಳೆವಣಿಗೆಯ ಸಹಾಯದಿಂದ ಕಂಡುಕೊಳ್ಳಲಾಗಿದೆ. ದ್ವಿಪಾಶ್ರ್ವಸಮಾಂಗತೆಯನ್ನು ಹೊಂದಿರುವ ಮೆಟಜ಼ೋವ ಜೀವಿಗಳಲ್ಲಿ ನರಮಂಡಲ ಎರಡು ರೀತಿಯದಾಗಿದೆ. ಒಂದನೆಯ ರೀತಿಯ ನರಮಂಡಲ ಜೀವಿಯ ಅಧೋಭಾಗದಲ್ಲಿದ್ದರೆ, ಎರಡನೆಯ ರೀತಿಯದು ಜೀವಿಯ ಊಧ್ರ್ವಭಾಗದಲ್ಲಿದೆ. ಈ ರೀತಿಯ ಇಬ್ಬಗೆಯ ಬೆಳೆವಣಿಗೆಯನ್ನು ಭ್ರೂಣದ ಬೆಳೆವಣಿಗೆಯ ಪ್ರಥಮ ಹಂತಗಳಲ್ಲಿ ಕಾಣಬಹುದು. ಈ ವ್ಯತ್ಯಾಸಕ್ಕೆ ಬ್ಲಾಸ್ಟೊಪೋರ್ ಎಂಬ ರಂಧ್ರ ಮುಚ್ಚಿಕೊಳ್ಳುವುದೇ ಕಾರಣ. ಈ ರಂಧ್ರ ಯಾವಾಗಲೂ ಭ್ರೂಣದ ಒಂದು ಕೊನೆಯಿಂದ ಮುಚ್ಚಿಕೊಳ್ಳಲಾರಂಭಿಸುತ್ತದೆ. ಆನೆಲಿಡ ವಂಶದ ಪ್ರಾಣಿಗಳಲ್ಲಿ ಈ ರಂಧ್ರ ಉದ್ದವಾದ ತೆರೆಯಂತಾಗಿ ಭ್ರೂಣದ ಅಧೋಭಾಗದಲ್ಲಿ ಒಂದು ಗೆರೆ ಇದ್ದಂತೆ ಕಂಡುಬರುತ್ತದೆ. ಇದು ಹಿಂದಿನ ತುದಿಯ ಭಾಗದಿಂದ ಮುಚ್ಚಿಕೊಳ್ಳಲಾರಂಭಿಸಿ ಮುಂದುವರಿಯುತ್ತ ಬಂದು ಕೊನೆಗೆ ಮುಂಭಾಗದಲ್ಲಿ ಉಳಿದುಕೊಂಡು ಮುಂದೆ ಜೀವಿಯ ಬಾಯಿಯಾಗುತ್ತದೆ. ಈ ರೀತಿಯ ಭ್ರೂಣ ಬೆಳೆವಣಿಗೆಯನ್ನು ಹೊಂದಿರುವ ಎಲ್ಲ ಜೀವಿಗಳನ್ನೂ ಪ್ರೋಟೊಸ್ಟೋಮಿಯ ಎಂಬ ಗುಂಪಿಗೆ ಸೇರಿಸಲಾಗಿದೆ. ಇಲ್ಲಿ ಬ್ಲಾಸ್ಟೊಪೋರ್ ಪ್ರಬುದ್ಧ ಜೀವಿಯ ಬಾಯಾಗುತ್ತದೆ.