ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಉಲ್ಲಾಳ

ವಿಕಿಸೋರ್ಸ್ದಿಂದ

ಉಲ್ಲಾಳ ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರು ತಾಲ್ಲೂಕಿನಲ್ಲಿ ಮಂಗಳೂರಿನಿಂದ 8ಕಿಮೀ ದೂರದಲ್ಲಿ ನೇತ್ರಾವತಿ ದಕ್ಷಿಣ ದಂಡೆಯ ಮೇಲಿರುವ ಊರು. ಇಂದು ಮಂಗಳೂರು ಪಟ್ಟಣದ ಸಮೂಹದಲ್ಲೇ ಸೇರಿಹೋಗಿದೆ.

ಪುತ್ತಿಗೆಯ ಚೌಟ ಅರಸುಮನೆತನದ ಒಂದು ಶಾಖೆಯ ರಾಜರು ಉಲ್ಲಾಳವನ್ನು ಆಳುತ್ತಿದ್ದರು. ಇಲ್ಲಿಯ ಸೋಮನಾಥ ಅವರ ಕುಲದೇವರು. 16ನೆಯ ಶತಮಾನದಲ್ಲಿ ರಾಜ್ಯಭಾರ ಮಾಡುತ್ತಿದ್ದ ಅಬ್ಬಕ್ಕ ಈ ಶಾಖೆಯಲ್ಲಿ ಪ್ರಸಿದ್ಧಳು. ವಿದೇಶಿಯರ ಬಲವನ್ನು ಮುರಿಯಲು ಸರ್ವಪ್ರಯತ್ನಮಾಡಿದ ಈ ವೀರರಾಣಿ ಪೋರ್ಚುಗೀಸರಿಗೆ ಸಿಂಹಸ್ವಪ್ನವಾಗಿದ್ದಳು. ಆಕೆಯ ತರುವಾಯ ಉಲ್ಲಾಳ ರಾಜ್ಯವನ್ನಾಳಿದ ಆಕೆಯ ಮಗಳು ಕಾರ್ಕಳದ ಅರಸರೊಡನೆ ಯುದ್ಧ ಮಾಡಿ ಸತ್ತಳು. ಆಕೆಯ ಮಗ ಚಿಕ್ಕರಾಯ (1606-28) ಬಿದನೂರು ವೆಂಕಟಪ್ಪನಾಯಕನ ನೆರವನ್ನು ಪಡೆದು ಕಾರ್ಕಳದ ಅರಸನನ್ನು ಸೋಲಿಸಿದ (1608). ಭೋಜರಾಜನ ಆಳ್ವಿಕೆಯಲ್ಲಿ (1630-44) ಉಲ್ಲಾಳ ಬಿದನೂರು ಸಂಸ್ಥಾನಕ್ಕೆ ಸೇರಿತು.

ಉಲ್ಲಾಳದಲ್ಲಿ ಕೋಟೆ ಮತ್ತು ಅರಮನೆಯ ಅವಶೇಷಗಳಿವೆ. ಸೋಮನಾಥ ದೇವಾಲಯದಲ್ಲಿ ಇಟಾಲಿಯನ್ ಶೈಲಿಯ ಹಲವು ಸುಂದರ ಶಿಲ್ಪಗಳಿವೆ. ಊರಿನಿಂದ ಸು.9ಕಿಮೀ ದೂರದಲ್ಲಿ ಉಲ್ಲಾಳ ಅರಸರ ಭದ್ರತಾಣವಾಗಿದ್ದ ಉಚ್ಚಿಲ ಕೋಟೆ ಮತ್ತು ಮಣೇಲ ಅರಮನೆ ಇವೆ. ಕಾರ್ಕಳದ ಭೈರರಸ ಒಡೆಯರೂ ಇಲ್ಲಿ ಅರಮನೆಗಳನ್ನು ಕಟ್ಟಿದ್ದರೆಂದು ಹೇಳಿಕೆ.

ಸೈಯದ್‍ಮಹಮ್ಮದ್ ಷರೀಫ ಮದನೀ ದರ್ಗಾ

ಉಲ್ಲಾಳದಲ್ಲಿರುವ ಸೈಯದ್ ಮಹಮ್ಮದ್ ಷರೀಫ ಮದನೀ ಅವರ ದರ್ಗಾ ಬಹು ಪ್ರಸಿದ್ಧ. ಈ ಸಂತರು ಸು.400 ವರ್ಷಗಳ ಹಿಂದೆ ಮದೀನಾದಿಂದ ಬಂದು ಇಲ್ಲಿನ ಮೇಲಂಗಡಿ ಮಸೀದಿಯಲ್ಲಿ ನೆಲಸಿ ಇಲ್ಲಿಯೇ ಮದುವೆಯಾಗಿ ಅನೇಕ ಪವಾಡಗಳನ್ನು ಮೆರೆಸಿ ಜನಮನ್ನಣೆ ಗಳಿಸಿದರೆಂದು ಪ್ರತೀತಿ. ಇವರ ಗೌರವಾರ್ಥ ಐದು ವರ್ಷಗಳಿಗೊಮ್ಮೆ ಉರುಸ್ ನಡೆಯುತ್ತದೆ. ಎಲ್ಲ ಜಾತಿಮತಗಳ ಜನ ಇಲ್ಲಿಗೆ ಬರುತ್ತಾರೆ. ಸಂತರ ಮರಣಾನಂತರ ಕಟ್ಟಿದ ದರ್ಗಾ ನಾಲ್ಕು ಬಾರಿ ಪುನರ್ನಿರ್ಮಾಣವಾಯಿತು. ಇಂದು ಇರುವ ಭವ್ಯ ಕಟ್ಟಡ 1970ರ ರಚನೆ. ಈ ದರ್ಗಾದ ಆಡಳಿತವರ್ಗ ಅರಬ್ಬೀ ಕಾಲೇಜು ಮತ್ತು ಪ್ರೌಢಶಾಲೆಯನ್ನು ನಡೆಸುತ್ತಿದೆ. 16ನೆಯ ಶತಮಾನದಲ್ಲಿ ಫ್ರಾನ್‍ಸಿಸ್ಕನ್ ಪಾದ್ರಿಗಳು ಕಟ್ಟಿಸಿದ ಚರ್ಚ್ ನಗರದಲ್ಲಿದೆ. ಕವಿ ಉಲ್ಲಾಳ ಮಂಗೇಶರಾಯರು ಈ ಊರಿನವರು. (ವಿ.ಜಿ.ಕೆ.)