ಪುಟ:ಕರ್ನಾಟಕ ಗತವೈಭವ.djvu/೮೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೮ನೆಯ ಪ್ರಕರಣ – ರಾಷ್ಟ್ರಕೂಟರು

೫೭


ರಾಷ್ಟ್ರಕೂಟರು*
(೭೫೭.೯೭೩)

ಕಂ- ಶ್ರೀತಳ್ತುರದೊಳ್ಕೌಸ್ತುಭ | ಜಾತದ್ಯುತಿ ಬಳಸಿ ಕಾಂಡಪಟದಂತಿರೆ ಸಂ||
ಪ್ರೀತಿಯಿನಾವನನಗಲ | ಳ್ನೀತಿ ನಿರಂತರನುದಾರನಾ ನೃಪತುಂಗ |

-ಕವಿರಾಜ ಮಾರ್ಗ.

ವಾ

ಚಕರೇ, ಬಾದಾಮಿಯ ಚಾಲುಕ್ಯರು ಇಡೀ ಕರ್ನಾಟಕವನ್ನೇ ತಮ್ಮ ಅಂಕಿತವಾಗಿ ಮಾಡಿಕೊಂಡು, ಕರ್ನಾಟಕ ಸಾಮ್ರಾಜ್ಯವನ್ನು ಕರ್ನಾಟಕದ ಹೊರಗೂ ಬಹಳ ದೂರದವರೆಗೆ ಹಬ್ಬಿಸಿದ ಸಂಗತಿಯನ್ನು ಹೋದ ಪ್ರಕರಣದಲ್ಲಿ ಹೇಳಿರುವೆವಷ್ಟೆ. ಈ ಬಗೆಯಾಗಿ ಚಾಲುಕ್ಯರು ಬಿತ್ತಿದ ಕರ್ನಾಟಕ ಸಾರ್ವಭೌಮತ್ವದ ಬೀಜವನ್ನು ರಾಷ್ಟ್ರಕೂಟರು ವೃಕ್ಷವಾಗಿ ಬೆಳಿಸಿದರು. ಚಾಲುಕ್ಯರು ಹೋಗಿ ರಾಷ್ಟ್ರಕೂಟರು ಬಂದರೂ ಕರ್ನಾಟಕ ವೈಭವವು ಕನ್ನಡಿಗರ ಕೈಬಿಟ್ಟು ಹೋಗ ಲಿಲ್ಲ. ಯಾಕಂದರೆ, ರಾಷ್ಟ್ರಕೂಟರೂ ಕನ್ನಡಿಗರೇ, ಅವರೂ ತಮ್ಮ ರಾಜಧಾನಿಯನ್ನು ಕರ್ನಾಟಕದಲ್ಲಿಯೇ ಸ್ಥಾಪಿಸಿದರು. ಅವರೂ ಕನ್ನಡ ಭಾಷೆಯನ್ನೇ ಬೆಳಿಸಿದರು. ಆದುದರಿಂದ, ಚಾಲುಕ್ಯರ ಕಾಲದಲ್ಲಿ ಮೇಲ್ಮೆಗೆ ಬಂದ ಕರ್ನಾಟಕ ಸಾರ್ವಭೌಮತ್ವವು ರಾಷ್ಟ್ರಕೂಟರ ಕಾಲದಲ್ಲಿಯೂ ಅವ್ಯಾಹತವಾಗಿ ಮುಂದಕ್ಕೆ ಸಾಗಿತು.

ರಾಷ್ಟ್ರಕೂಟವಂಶದ ಮೊದಲನೆಯ ಅರಸನೂ ಚಾಲುಕ್ಯರಂತೆ ಮೊದ ಲಿಗೆ ಉತ್ತರದಿಂದ ಬಂದವನು. ದಂತಿದುರ್ಗನೆಂಬವನು ಉತ್ತರದಿಂದ ಬಂದು ಬಾದಾಮಿಯ ಚಾಲುಕ್ಯರ ಕೊನೆಯ ಅರಸನಾದ ಕೀರ್ತಿವರ್ಮನೆಂಬವನನ್ನು ಸೋಲಿಸಿ, ಅವನ ರಾಜ್ಯವನ್ನು ಕಸುಕೊಂಡನು. ಅವನು ಕಂಚಿ, ಕಲಿಂಗ, ಕೋಸಲ, ಶ್ರೀಶೈಲ, ಮಾಳವ, ಲಾಟ, ಟಂಕ ಮುಂತಾದ ರಾಜ್ಯಗಳನ್ನು ಗೆದ್ದನೆಂತಲೂ, ಉಜ್ಜಯಿನಿಯಲ್ಲಿ ಸುವರ್ಣ-ರತ್ನ ಮುಂತಾದುವುಗಳನ್ನು ವಿಪುಲವಾಗಿ ದಾನಮಾಡಿದನಂತಲೂ ಉಲ್ಲೇಖವಿದೆ.


*ಈ ವಂಶದ ಲೇಖಗಳು ಸುಮಾರು ೬೦-೭೦ ಮಾತ್ರವೇ ಪ್ರಸಿದ್ಧ ವಾಗಿವೆ. ಅವು ಸಾಮನಗಡ, ವಾಣಿ, ಕಾವಿ, ಕಾನ್ಹೇರಿ, ಸಾಂಗಲಿ, ಕರ್ಹಾಡ, ಹತ್ತಿಮತ್ತೂರ, ಪಟ್ಟದಕಲ್ಲು, ಲಕ್ಷೇಶ್ವರ, ಪೇರೂಳ, ಸವದತ್ತಿ, ಮು೦ತಾದ ಸ್ಥಳಗಳಲ್ಲಿ ದೊರೆತಿರುತ್ತವೆ.