ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಐ

ವಿಕಿಸೋರ್ಸ್ದಿಂದ

ಕನ್ನಡ ವರ್ಣಮಾಲೆಯ ಹನ್ನೊಂದನೆಯ ಅಕ್ಷರ. ದೀರ್ಘ ಸ್ವರ. ಸಾಮಾನ್ಯವಾಗಿ ಸ್ವತಂತ್ರವಾಗಿ ದೊರಕುವುದು ಕಷ್ಟ. ವ್ಯಂಜನಗಳ ಜೊತೆಯಲ್ಲಿ ಮಾತ್ರ ದೊರೆಯುತ್ತದೆ. ಅಶೋಕನ ಕಾಲದ ಬ್ರಾಹ್ಮೀ ಲಿಪಿಯಲ್ಲಿ ವ್ಯಂಜನದ ಬಲಗಡೆ ಎರಡು ಸಣ್ಣ ಗೆರೆಗಳ ಮೂಲಕ ಬರೆಯುತ್ತಿದ್ದುದು ಕಾಣಬರುತ್ತದೆ. ಕಾಲಕ್ರಮೇಣ ಈ ಎರಡೂ ರೇಖೆಗಳು ಕೊಂಡಿಯ ರೂಪವನ್ನು ತಾಳಿ, ಅಕ್ಷರದ ಕೆಳಭಾಗದಲ್ಲಿ ಬರೆಯುವ ಕ್ರಮ ರೂಢಿಗೆ ಬಂತು. ಶಾಸನಗಳಲ್ಲಿ ಐದು ಎಂಬುದನ್ನು ಅಯಿದು ಎಂದೂ ಐವತ್ತು ಎಂಬುದನ್ನು ಅಯವತ್ತು ಎಂದೂ ಬರೆದಿರುವುದನ್ನು ಗಮನಿಸಿದಲ್ಲಿ ಈ ಅಕ್ಷರದ ಉಚ್ಚಾರಣಾ ವೈವಿಧ್ಯ ಗೊತ್ತಾಗುತ್ತದೆ. ಇದು ಸಂಯುಕ್ತ ಸ್ವರ. (ಎ.ವಿ.ಎನ್.)