ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಇಂಚ್ಬಾಲ್ಡ್‌, ಎಲಿಜ಼ಬೆತ್

ವಿಕಿಸೋರ್ಸ್ದಿಂದ

ಇಂಚ್‍ಬಾಲ್ಡ್, ಎಲಿಜಬೆತ್ 1753-1821. ಇಂಗ್ಲಿಷ್ ಕಾದಂಬರಿಕಾರ್ತಿ. ಜಾನ್ ಸಿಂಪ್ಸನ್ ಎಂಬ ರೈತನ ಮಗಳು. ಜನನ ಸನ್ನಿಂಗ್‍ಫೀಲ್ಡ್‍ನಲ್ಲಿ. 18ನೆಯ ವಯಸ್ಸಿನಲ್ಲಿ ಮನೆ ತೊರೆದು ಲಂಡನ್ನಿಗೆ ಹೋಗಿ ಇಂಚ್‍ಬಾಲ್ಡನ ಸಹ ನಟಿಯಾಗಿ ಕೆಲಸ ಮಾಡತೊಡಗಿದಳು. ಅನಂತರ ಅವನನ್ನೇ ವರಿಸಿದಳು (1772). ಗಂಡ ತೀರಿಕೊಂಡ ಮೇಲೆ ಹತ್ತು ವರ್ಷಗಳವರೆಗೂ ಪ್ರಮುಖವಾಗಿ ಸ್ಕಾಟ್ಲೆಂಡ್ ಮತ್ತು ಐರ್ಲೆಂಡ್‍ಗಳಲ್ಲಿ ನಟಿಯಾಗಿ ಕೆಲಸ ಮಾಡಿದಳು. ಅನಂತರ ಅನೇಕ ನಾಟಕಗಳನ್ನು ರಚಿಸಿದಳು. ಹತ್ತು ಸಂಪುಟಗಳ ದಿ ಮಾಡರ್ನ್ ಥಿಯೇಟರ್ ಎಂಬ ಗ್ರಂಥಶ್ರೇಣಿಯಲ್ಲಿ ಅಂದಿನ ಅನೇಕ ನಾಟಕಗಳನ್ನು ಸಂಗ್ರಹಿಸಿದಳು. ಎ ಸಿಂಪಲ್ ಸ್ಟೋರಿ (1791), ನೇಚರ್ ಅಂಡ್ ಆರ್ಟ್ (1796) ಇವು ಈಕೆಯ ಕಾದಂಬರಿಗಳು. ಮೊದಲನೆಯದು ರಾಗೋದ್ರೇಕಗಳನ್ನುಕ್ಕಿಸುವ ಕಾದಂಬರಿಗಳಲ್ಲಿ ಮೊದಲನೆಯದೆಂದು ಇಂಗ್ಲಿಷ್ ಸಾಹಿತ್ಯದಲ್ಲೇ ಹೆಸರುವಾಸಿಯಾಗಿದೆ. (ಎಚ್.ವಿ.ಎಸ್.)