ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಉತ್ಥಾನ ದ್ವಾದಶೀ

ವಿಕಿಸೋರ್ಸ್ದಿಂದ

ಉತ್ಥಾನ ದ್ವಾದಶೀ: ಕಾರ್ತಿಕಮಾಸದ ಶುಕ್ಲಪಕ್ಷದಲ್ಲಿ ಬರುವಂಥದು. ಆಷಾಢಮಾಸ ಶುಕ್ಲ ಪಕ್ಷದ ಏಕಾದಶಿಯಲ್ಲಿ ಕ್ಷೀರಸಾಗರದಲ್ಲಿ ಶೇಷಶಾಯಿಯಾದ ಭಗವಂತನನ್ನು ಈ ದಿನ ರಾತ್ರಿಯಲ್ಲಿ ಏಳಿಸುವುದರಿಂದ ಈ ದ್ವಾದಶಿಗೆ ಭಗವಂತೋತ್ಥಾನ ರೂಪವಾದ ಉತ್ಥಾನದ್ವಾದಶೀ ಎಂದು ಹೆಸರು ಬಂದಿದೆ. ಆಷಾಢ ಶುಕ್ಲಪಕ್ಷದಲ್ಲಿ ಪ್ರಾರಂಭಿಸಿದ ಚಾತುರ್ಮಾಸ್ಯ ವ್ರತವನ್ನು ಈ ದಿವಸ ಮುಕ್ತಾಯಗೊಳಿಸಬೇಕು. ಈ ದ್ವಾದಶಿಯಲ್ಲಿ ಕ್ಷೀರಾಬ್ಧಿಶಯನ ವ್ರತವನ್ನು ಆಚರಿಸುತ್ತಾರೆ. ತುಲಸೀ ಸಹಿತ ಧಾತ್ರೀ ಲಕ್ಷ್ಮೀನಾರಾಯಣ ಪ್ರೀತ್ಯರ್ಥವಾಗಿ ಈ ವ್ರತವನ್ನು ಮಾಡುವುದು ಇಂದಿಗೂ ರೂಢಿಯಲ್ಲಿದೆ. ಇದರ ದ್ಯೋತಕವಾಗಿ ಉತ್ಥಾನ ದ್ವಾದಶೀ ದಿವಸ ಬೆಳಗ್ಗೆ ಬೃಂದಾವನದಲ್ಲಿ ಧಾತ್ರಿಯನ್ನು (ಕಾಯಿಸಹಿತವಾದ ನೆಲ್ಲಿಗಿಡವನ್ನು) ನೆಟ್ಟು ಅಲ್ಲಿ ಭಗವಂತನನ್ನು ಕೂರಿಸಿ ನೀರಾಜನಾದಿಗಳಿಂದ ಪುಜಿಸುತ್ತಾರೆ. ರಾತ್ರಿಯಲ್ಲಿ ಬೃಂದಾವನವನ್ನು ಪುಷ್ಪಾದಿಗಳಿಂದಲಂಕರಿಸಿ ಭಗವಂತನನ್ನು ಆ ಬೃಂದಾವನ ದಲ್ಲಿಟ್ಟು ಉತ್ಸವಮಾಡುತ್ತಾರೆ. ಮನೆಗಳಲ್ಲಿ ಬೃಂದಾವನವನ್ನು ಪುಜಿಸಿ ದೀಪಗಳಿಂದ ಅಲಂಕರಿಸಿ ಪುಜಿಸುತ್ತಾರೆ. ರಾತ್ರಿ ಭಗವಂತನಿಗೆ ಕ್ಷೀರಾನ್ನನಿವೇದನ ಒಂದು ವಿಶೇಷ. ಹೊಸ ನೆಲ್ಲಿಕಾಯನ್ನು ಈ ದ್ವಾದಶಿಯಿಂದ ಉಪಯೋಗಿಸಲು ಪ್ರಾರಂಭಿಸುತ್ತಾರೆ. ಕ್ಷೀರಾಬ್ಧಿ ಯಲ್ಲಿ ಶಯನಿಸಿದ ಭಗವಂತ ಈ ದ್ವಾದಶಿಯಲ್ಲಿ ತುಲಸೀ ಆವಾಸವಾದ ಬೃಂದಾವನದಲ್ಲಿ ತುಲಸೀ ಲಕ್ಷ್ಮಿಯರೊಡನೆ ಏಳುವುದರ ಸಂಕೇತವಾಗಿ ಈ ಪೂಜೆ ಇಂದಿಗೂ ನಡೆಯುವ ರೂಢಿಯಿದೆ. ಈ ದಿವಸದಲ್ಲಿ ದೀಪೋತ್ಸವ ವಿಶೇಷ ಪುಣ್ಯಪ್ರದ. ಈ ದ್ವಾದಶಿಯಲ್ಲಿ ಧಾತ್ರೀ ತುಲಸೀ ಸಹಿತ ಲಕ್ಷ್ಮೀನಾರಾಯಣನನ್ನು ಪುಜಿಸುವುದರಿಂದ ಸರ್ವವಿಧವಾದ ಪಾತಕಗಳೂ ನಶಿಸುತ್ತವೆ-ಎಂದು ವ್ರತಮಹಾತ್ಮ್ಯೆ ತಿಳಿಸುತ್ತದೆ. (ಎಸ್.ಎನ್.ಕೆ.)