ಪುಟ:Duurada Nakshhatra.pdf/೧೦೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ತಮಗೆ ಬೇಕಾದವರಾಗಿ ಮಾಡುವುದು ಅಗತ್ಯವಾಗಿಯೂ ಇತ್ತು, ಅದನ್ನು ಸಾಧಿಸಲೆಂದು ನಂಜುಂಡಯ್ಯ ಹೂಬಾಣವನ್ನು ತಮ್ಮ ಹೆದೆಗೇರಿಸಿದರು.

“ನಿಮಗಂತೂ ಈ ರಾಜಕೀಯ ವಿಷಯದಲ್ಲೆಲ್ಲಾ ತುಂಬಾ ಪರಿಶ್ರಮ ಅಂತ ತೋರುತ್ತೆ.”

“ಒಂದು ರೀತೀಲಿ ಹಾಗನ್ಬೌದು ನಂಜುಂಡಯ್ಯ, ಮಲೆನಾಡ್ನಲ್ಲೊಂದು ಗಾದೆ ಇದೆ–ಕಾಲ ಬಂದ ಹಾಗೆ ಕೋಲ ಅಂತ. ಹಾಗೆ ನಾನು. ಮೊದಲಿಂದ್ಲೂ ಅಷ್ಟೆ, ದಿವಾನರ ಕಾಲ್ದಲ್ಲಿ ನಿಷ್ಠಾವಂತನಾದ ರಾಜಭಕ್ತ, ಅದಾಲ್ಮೇಲೆ ರಾಷ್ಟ್ರೀಯವಾದಿ. ಹ್ಯಾಟೆ ನನಗೆ ಮೆಚ್ಚುಗೆ ಆದ್ರೂ ಒಂದೊಂದ್ಸಲ ಬಿಳೀಟೋಪಿನೂ ಹಾಕ್ಕೊಂಡಿದ್ದೀನಿ. ಕಾಲದ್ಜತೇಲಿ ನಾವೂ ಉರುಳ್ಬೇಕು!"

ಇದು ಸಂದರ್ಭಸಾಧನೆ–ಎಂದಿತು ಜಯದೇವನ ಮನಸ್ಸು, ಆದರೆ ವೆಂಕಟರಾಯರ ದೃಷ್ಟಿಯಲ್ಲಿ ಅದು ಆಧುನಿಕ ನವನಾಗರಿಕ ಲಕ್ಷಣ,– ಲೋಕಜ್ಞಾನ.

ತಮಗೆ ತಿಳಿಯದೆಯೇ ಹಾಸ್ಯಾಸ್ಪದವಾಗುವಂತಹ ರೀತಿಯಲ್ಲಿ ವೆಂಕಟರಾಯರು ಆಡಿದ ಮಾತುಗಳನ್ನ ನಂಜುಂಡಯ್ಯ ಅಲ್ಲಗಳೆಯಲಿಲ್ಲವಾದರೂ ತಮ್ಮ ಅಮೂಲ್ಯ ಅಭಿಪ್ರಾಯವನ್ನು ಅವರು ಬೇರೆ ರೀತಿಯಲ್ಲಿ ಮಂಡಿಸಿದರು:

“ಯಾರು ರಾಜ್ಯ ಆಳಿದರೇನು? ನಾವು ವಿದ್ಯಾದಾನ ಮಾಡುತ್ಲೇ ಇರ್ಬೇಕು.”

“ಸರಿಯಾಗಿ ಹೇಳಿದಿರಿ !” ಎಂದರು ವೆಂಕಟರಾಯರು.

ತಮ್ಮ ಮಾತು ಜಯದೇವನ ಮೇಲೇನು ಪರಿಣಾಮ ಮಾಡಿತೆಂದು ನೋಡಲು ನಂಜುಂಡಯ್ಯ ಅವನತ್ತ ತಿರುಗಿದರು. ಆದರೆ ಆ ಮುಖದ ಮೇಲಿದ್ದ ಭಾವನೆ ದೊಡ್ಡ ಶೂನ್ಯವಾಗಿತ್ತು. -

ಕಾಫಿಗೆಂದು, ವಾಯುವಿಹಾರಕ್ಕೆಂದು, ಅವರಿಬ್ಬರೆದ್ದರು. ಮನಸ್ಸಿಲ್ಲದೆ ಹೋದರೂ ಜಯದೇವನೂ ಏಳಬೇಕಾಯಿತು.. ಶಾಲೆಯ ಬಾಗಿಲುಗಳಿಗೆ ಆತ ಬೀಗ ತಗುಲಿಸಿದ.

“ಇದೇನು ಬೀಗದ ಕೈ ನಿಮ್ಮಲ್ಲಿದೆಯಲ್ಲಾ ಮಿ.ಜಯದೇವ್?”

ಆತ ಮಲಗುವುದೇ ಅಲ್ಲೆಂದು ನಂಜುಂಡಯ್ಯ ವೆಂಕಟರಾಯರಿಗೆ ವಿವರಣೆ ಇತ್ತರು. ಆದರೆ ಆ ವಿಷಯ ತಿಳಿದು ಹೊಸ ಮುಖ್ಯೋಪಾಧ್ಯಾ