ಪುಟ:Duurada Nakshhatra.pdf/೧೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಸಿದ ಭಾವಚಿತ್ರಗಳಿದುವು, ತಿರುಪತಿ ವೆಂಕಟರಮಣನಿದ್ದ, ಮೇಕಪ್ ಸುಂದರಿ ಚಲಚ್ಚಿತ್ರ ತಾರೆಯ ದೊಡ್ಡ ಚಿತ್ರವಿದ್ದ ಕ್ಯಾಲೆಂಡರಿತ್ತು. ಮನೆಯವರು ಅದೊಂದನ್ನೂ ತೆಗೆಯಲಿಲ್ಲ, ಗೋಡೆ ಶುಭ್ರವಾಗಿ ಖಾಲಿಯಾಗಿಯೇ ಇರಬೇಕೆಂಬ ಆಸೆ ಜಯದೇವನಿಗೆ ಇತ್ತಾದರೂ ಹಾಗೆ ಸಲಹೆ ಮಾಡಲು ಆತ ಸಮರ್ಥನಾಗಲಿಲ್ಲ - -

ನಾಗರಾಜಶೆಟ್ಟರು ಜಯದೇವನಿಗೆ ಕೊಠಡಿ ಕೊಟ್ಟುದನ್ನು ಕೇಳಿ ನಂಜುಂಡಯ್ಯನೆಂದರು :

“ನಮ್ಮ ಊರಲ್ಲಿ ಒಳ್ಳೆಯ ಜನರಿಗೇನೂ ಕಡಮೆ ಇಲ್ಲ!”

ತಿಂಗಳು ದಾಟಿದರೂ ವೆಂಕಟರಾಯರು ಮನೆ ಮಾಡುವ ಲಕ್ಷಣ ಕಾಣಿಸಲಿಲ್ಲ ರಂಗರಾಯರಿದ್ದ ಮನೆಗೆ ಬೇರೆ ಯಾರೋ ಒಕ್ಕಲು ಬಂದರು.

“ಮಳೆಗಾಲ ಕಳೆದು ಹೋಗ್ಗಿಂತ ಸುಮ್ಮಗಿದೀನಿ” ಎಂದು ಅವರು ವಿವರಣೆಯನ್ನೇನೋ ಕೊಟ್ಟರು.

ಆದರೆ ನಿಜವಾದ ಕಾರಣವನ್ನು ಜಯದೇವ ಊಹಿಸಿದ್ದ, ಆದಷ್ಟು ದಿನ ಹೆಚ್ಚು ವೆಚ್ಚವಿಲ್ಲದೆಯೇ ಕಳೆಅಯಲೆಂಬುದು ವೆಂಕಟರಾಯರ ಹಂಚಿಕೆಯಾಗಿತ್ತು.

ಅವರ ವಿಷಯವಾಗಿ ಗೌರವ ತಳೆಯುವುದು ಜಯದೇವನಿಂದಾಗಲಿಲ್ಲ. 'ಆ ಮನುಷ್ಯನಲ್ಲಿ ವಿದ್ವತ್ತೇನೋ ಇತ್ತು, ಆದರೆ ವಿನಯವೇನೂ ಇರಲಿಲ್ಲ. ತನ್ನ ಹೊರತು ಉಳಿದವರನ್ನೆಲ್ಲ ತುಚ್ಛವಾಗಿ ಕಾಣುವ ಅವರ ಮನೋವೃತ್ತಿಯಿಂದ ವಾಕರಿಕೆ ಬಂದ ಹಾಗಾಗುತಿತ್ತು ಜಯದೇವನಿಗೆ. ವೆಂಕಟರಾಯರಲ್ಲಿ ಇನ್ನೊಂದು ದುರ್ಗುಣವಿತ್ತು, ಅದು ವಕ್ರ ವಾಚಾಳಿತನ, ಒಬ್ಬರ ವಿರುದ್ಧ ಇನ್ನೊಬ್ಬರನ್ನು ಎತ್ತಿಕಟ್ಟುವುದರಲ್ಲಿ ಅವರು ಬಲು ನಿಪುಣರಾಗಿದ್ದರು.

“ನಂಜುಂಡಯ್ಯನಿಗೇನಪ್ಪ–ಊರಿನವರು. ಆದರೆ ಎಲ್ಲಿಂದಲೋ ಬಂದಿರೋರು, ಹೊರಹೊರಗಿನೋರು, ನಾವು ತಾನೆ?"

ಅಥವಾ, ಅದಕ್ಕಿಂತಲೂ ಒರಟಾಗಿ:

“ನಮ್ಮವರೂಂತ ಅಂದುಕೊಳ್ಳೋಕೆ ನೀವು ಒಬ್ಬರಾದರೂ ಇದೀರಲ್ಲ ఇల్లి...."