ಪುಟ:Duurada Nakshhatra.pdf/೧೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಇವರಿನ್ನೂ ಎಳೇ ಹುಡುಗ್ರು, ಕೂಲಿಕೆಲಸ ಮಾಡಿಸಿದ್ರೆ ಊರವರು ನಮ್ಮನ್ನ ಸುಮ್ಮೆ ಬಿಟ್ಟಾರೇನ್ರಿ? ಏನು ಮಿ.. ನಂಜುಂಡಯ್ಯ, ನೀವಾದರೂ ಹೇಳಿ ಇವರಿಗೆ.”

ನಂಜುಂಡಯ್ಯ ಮುಗುಳ್ನಕ್ಕರು ಮಾತ್ರ.

ಸಂಜೆಯಾಯಿತು. ಜಯದೇವ ಮುಖ ಬಾಡಿಸಿ, ತಲೆಬಾಗಿಸಿ, ಹೊರಬಿದ್ದ, ಬೆಂಗಳೂರಿಗೆ ಅಭಿಮುಖವಾಗಿದ್ದೊಂದು ರಸ್ತೆಯಲ್ಲಿ ಕತ್ತಲಾಗುವವರೆಗೂ ಒಬ್ಬನೇ ನಡೆದು ಹೋದ. ಒಂದೆರಡು ನಿಮಿಷ ಅಳಬೇಕೆನಿಸಿತು. ಜತೆಯಲ್ಲೆ, 'ಥೂ ! ಧೂ ! ನಾನೇನು ಎಳೇ ಮಗು ಕೆಟ್ಟ ಹೋದೆನೆ? ಎಂದು ತನಗೆ ತಾನೇ ಭೀಮಾರಿ ಹಾಕಿಕೊಂಡ, ರಂಗರಾಯರು ಇದ್ದಿದ್ದರೆ ಹೀಗಾಗುತ್ತಿರಲಿಲ್ಲ, ಅಥವಾ ನಂಜುಂಡಯ್ಯನೇ ಮುಖ್ಯೋಪಾಧಾಯರಾಗಿದ್ದರೂ ಪರಿಸ್ಮಿತಿ ಇಷ್ಟು ಪ್ರತಿಕೂಲವಾಗುತ್ತಿರಲಿಲ್ಲ. ಅಂತೂ ಈ ವೆಂಕಟರಾಯರು-ಅಬ್ಬ!-ಎಂತಹ ಮನುಷ್ಯ!

ಕಾಲು ಸೋತಿತೆಂದು, ಕತ್ತಲಾಯಿತೆಂದು, ಜಯದೇವ ಹಿಂತಿರುಗಿದ. ಕೈಕಾಲು ತೊಳೆದುಕೊಂಡು ಕೊಠಡಿ ಸೇರಿ ಆತ ಜಯರಾಮಶೆಟ್ಟರು ಕೊಟ್ಟಿದ್ದ ದೊಡ್ಡ ಕಂದೀಲು ಹಚ್ಚುತಿದ್ದಂತೆ ನಾಗರಾಜ ಮೇಲಕ್ಕೆ ಓಡಿ ಬಂದ

“ಎಲ್ಲಿಗೆ ಹೋಗಿದ್ರಿ ಸಾರ್ ನೀವು ಇಷ್ಟೊತ್ತು?”

“ವಾಕಿಂಗ್ ಹೋಗಿದ್ನೆಪಾ..”

“ಇವತು ನಮ್ಮ ಅಕ್ಕ ಬಂದ್ರು ಸಾರ್.”

“ಯಾವ ಅಕ್ಕ ನಾಗರಾಜ ?”

“ಆವತ್ತು ಹೇಳಿರ್ಲಿಲ್ವೆ ಸಾರ್-ಹಾಸನಕ್ಕೆ ಕೊಟ್ಟಿದೇಂತ. ಅವಳೇನೆ. ... ಅಮ್ಮ ಯಾರಿಗೂ ಹೇಳ್ಕೂಡದು ಅಂದಿದ್ದಾರೆ-ಅಕ್ಕ ಅಲ್ಲಿ ಜಗಳ ಮಾಡ್ಕೊಡು ಬಂದಿದಾಳಂತೆ. ”

“ಮತ್ತೆ ನಂಗ್ಯಾಕೆ ಹೇಳ್ದೆ?”

ಜಯದೇವನಿಗೆ ತಮಾಷೆಯಾಗಿ ತೋರಿತು ಇದೆಲ್ಲ.

“ನಿಮಗೆ ಹೇಳ್ಳೆ ಏನ್ಸಾರ್–ನೀವು ಮೇಷ್ಟ್ರು!”