ಪುಟ:Duurada Nakshhatra.pdf/೧೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೨

ವೆಂಕಟರಾಯರು ಮನೆ ಮಾಡಿದರು ಕೊನೆಗೊಮ್ಮೆ .. ದೊಡ್ಡ ಸಂಸಾರ. ಹಿರಿಯ ಮಗನಿಗೆ ಕೆಲಸ ದೊರೆತಿತ್ತು. ಅನಂತರದ ಮಗಳು ಗಂಡನ ಮನೆಗೆ ಹೋಗಿದ್ದಳು. ಉಳಿದವರಿಬ್ಬರು ಮೈಸೂರಿನ ಕಾಲೇಜಿನಲ್ಲಿ ಓದುತಿದ್ದರು. ಅವರಾದ ಮೇಲೆ ನಡುವೆ ಅಂತರವಿದ್ದ ಹಾಗೆ ತೋರಿತು-ಸಾವಿನ ಸರ್ಪ ಫೂತ್ಕರಿಸಿ ನಿರ್ಮಿಸಿದ್ದ ಅಂತರ. ಅದರ ಬಳಿಕ, ನಾಲ್ವರು ಮಕ್ಕಳಿದ್ದರು-ಅವರಲ್ಲಿ ಮೂವರು ಹುಡುಗಿಯರು. ಕೊನೆಯದಿನ್ನೂ ಅಂಬೆಗಾಲಿಡುತಿದ್ದ ಹಸುಳೆ, ಇಷ್ಟು ಸಾಲದೆಂದು ವೆಂಕಟರಾಯರ ಕೈ ಹಿಡಿದ ಆ ಮಹಾತಾಯಿ ಮತ್ತೆ ಗರ್ಭಿಣಿಯಾಗಿದ್ದಳು. ಗಂಡನ ಮನೆಗೆ ಹೋದ ಮಗಳಿಗೂ ಈ ತಾಯಿಗೂ ಏಕಕಾಲದಲ್ಲೇ ಪ್ರಸವವಾಗುವ ಸನ್ನಿವೇಶ.

ಸಾಮಾನ್ಯವಾಗಿ ಇಷ್ಟೊಂದು ಸಂಸಾರ ಭಾರದ ನೊಗ, ಎಂತಹ ಹೋರಿಯನ್ನಾದರೂ ಬಡಕಲು ಗೊಳಿಸಲೇಬೇಕು. ಆದರೆ ವೆಂಕಟರಾಯರು ಅದಕ್ಕೆ ಅಪವಾದವಾಗಿದ್ದರು.

ಅವರೇನೂ ಆಸ್ತಿವಂತರಾಗಿರಲಿಲ್ಲ, ಬರುತ್ತಿದ್ದುದಂತೂ 'ಹೊಟ್ಟೆಗಿದ್ದರೆ ಬಟ್ಟೆಗಿಲ್ಲ, ಬಟ್ಟೆಗಿದ್ದರೆ ಹೊಟ್ಟೆಗಿಲ್ಲ.' ಎನ್ನುವಂತಹ ಅಲ್ಪ ಸಂಬಳ. ಆದರೂ ಈ ಸಂಸಾರ ರಥ ಸಾಗಿದ್ದ ರೀತಿ ಸೋಜಿಗದ ವಿಷಯವೇ ಆಗಿತ್ತು.

ಆದರೆ ದಿನ ಕಳೆದಂತೆ ಜಯದೇವನಿಗೆ ಹೊಸ ಮುಖ್ಯೋಪಾಧ್ಯಾಯರ ಜೀವನ ಕ್ರಮದ ನಿಜ ಪರಿಚಯವಾಗತೊಡಗಿತು.

ಊರಲ್ಲಿ ಶ್ರೀಮಂತರು ಯಾರಾದರೂ ಕಾಹಿಲೆ ಬಿದ್ದರೆ ವೆಂಕಟರಾಯರು, ಆ ರೋಗವನ್ನು ಗುಣಪಡಿಸಬಲ್ಲ ಮೈಸೂರಿನ ಒಬ್ಬರೇ ಒಬ್ಬರಾದ ನಿಷ್ಣಾತ ಡಾಕ್ಟರರ ಹೆಸರು ಹೇಳುತಿದ್ದರು. ಪರಿಚಯದ ಕಾಗದ ದೊಡನೆ ಕಳುಹಿಸಿ ಕೊಡುತಿದ್ದರು.

ಊರಲ್ಲಿ ಯಾವುದಾದರೂ ಲೇವಾದೇವಿ-ವ್ಯವಹಾರ ನಡೆದು ರಂಪವಾದರೆ, ಹೆಚ್ಚು ಹಣವಂತರಾದವರನ್ನು ಕರೆದು, ಬೆಂಗಳೂರಿನ ಪ್ರಮುಖ ಲಾಯರೊಬ್ಬರನ್ನು ಕಂಡು ಬರುವಂತೆ ಸಲಹೆ ಮಾಡುತಿದ್ದರು.