ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಘ

ವಿಕಿಸೋರ್ಸ್ದಿಂದ

ಘ- ಕನ್ನಡ ವರ್ಣಮಾಲೆಯಲ್ಲಿನ ಕ ವರ್ಗದಲ್ಲಿ ನಾಲ್ಕನೆಯದು. ಮಹಾಪ್ರಾಣಾಕ್ಷರ. ಇದು ಕಂಠ್ಯ ಘೋಷಸ್ಪರ್ಶ. ಅಶೋಕನ ಕಾಲದಿಂದ ಮೈಸೂರು ಅರಸರ ಕಾಲದವರೆಗಿನ ಬರೆಹಗಳನ್ನು ಪರಿಶೀಲಿಸಿದರೆ ಈ ಅಕ್ಷರದ ರೂಪ ಅದೆಷ್ಟು ಬದಲಾಗಿದೆಯೆಂಬುದು ಸ್ಪಷ್ಟವಾಗುತ್ತದೆ. ರಾಷ್ಟ್ರಕೂಟರ ಕಾಲಕ್ಕೆ ಈ ಅಕ್ಷರದ ಮುಖ್ಯ ಭಾಗವಾದ ಕೊಂಡಿಯೊಂದು ಬಲಭಾಗದಲ್ಲಿ ಮೂಡಿರುವುದನ್ನು ಕಾಣಬಹುದು. ಇದೇ ರೂಪ ನಾಲ್ಕು ಶತಮಾನಗಳ ಕಾಲ ನಡೆದುಬಂತು. ಆನಂತರ, ಇದೇ ರೂಪದ ಷ ಮತ್ತು ಹ ಕಾರಗಳಿಂದ ಇದನ್ನು ಪ್ರತ್ಯೇಕಿಸಲು ಇದರ ಹೊಕ್ಕಳನ್ನು ಸೀಳಿದಂತೆ ತೋರುತ್ತದೆ. ಹದಿನೆಂಟನೆಯ ಶತಮಾನದ ಹೊತ್ತಿಗೆ ಖಚಿತಗೊಂಡ ಈ ರೂಪವೇ ಇಂದಿಗೂ ಬಳಕೆಯಲ್ಲಿದೆ. (ಎ.ವಿ.ಎನ್.)