ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಗಂಡಕಿ

ವಿಕಿಸೋರ್ಸ್ದಿಂದ

ಗಂಡಕಿ

ನೇಪಾಳದ ಭಾರತಗಳಲ್ಲಿ ಹರಿಯುವ ಒಂದು ನದಿ; ಗಂಗಾನದಿಯ ಉಪನದಿ. ನೇಪಾಳದ ಹಿಮಾಲಯ ಪರ್ವತಭಾಗದಲ್ಲಿ ಉ.ಅ 270 27' ಮತ್ತು ಪೂ. ರೇ. 830 56' ನಲ್ಲಿ ಹುಟ್ಟಿ ನೈಋತ್ಯ ದಿಕ್ಕಿಗೆ ಪ್ರವಹಿಸಿ ಭಾರತವನ್ನು ಪ್ರವೇಶಿಸುತ್ತದೆ. ಇದನ್ನು ನೇಪಾಳದಲ್ಲಿ ಶಾಲಿಗ್ರಾಮೀ ಎಂದೊ ಉತ್ತರ ಪ್ರದೇಶದಲ್ಲಿ ನಾರಾಯಣೀ ಮತ್ತು ಸಪ್ತಗಂಡಕೀ ಎಂದೂ ಕರೆಯುತ್ತಾರೆ. ಗಂಡಕ, ಮಹಾಗಂಡಕ ಎಂದು ಇದಕ್ಕೆ ಹೆಸರುಗಳುಂಟು. ಮಹಾಭಾರತzಲ್ಲಿ ಸದಾನೀರಾ ಎಂದು ಹೆಸರಿಸಲಾಗಿರುವ ನದಿ ಇದೇ ಎಂಬುದು ಲಾಸೆನ್‍ನ ಅಭಿಪ್ರಾಯ. ಮಳೆಗಾಲದಲ್ಲಿ ಮಳೆಯ ನೀರಿನಿಂದಲೂ, ಬೇಸಗೆಯಲ್ಲಿ ಹಿಮ ಕರಗಿದ ನೀರಿನಿಂದಲೂ ಒಟ್ಟಿನಲ್ಲಿ ಸದಾ ಕಾಲವೂ ತುಂಬಿ ಹರಿಯುವುದರಿಂದ ಇದಕ್ಕೆ ಈ ಹೆಸರು ಬಂದಿದೆ. ಗ್ರೀಸಿನ ಭೂಗೋಳಶಾಸ್ತ್ರಜ್ಞರು ಕೂಂಡೊಚೇಟ್ಸ್ ಎಂದು ಕರೆದಿರುವ ನದಿ ಇದೇ ಎಂದು ಹೇಳಲಾಗಿದೆ. ತ್ರಿಶೂಲ ಗಂಗಾ ಇದರ ಉಪನದಿ. ಬಿಹಾರದ ಚಂಪಾರಣ್, ಸಾರನ್ ಮತ್ತು ಮುಜಪ್ಭರ್‍ಪುರ ಜಿಲ್ಲೆಗಳ ಮೂಲಕ ಹರಿದು ಕೊನೆಗೆ ಪಾಟ್ನದ ಬಳಿ ಇದು ಗಂಗಾನದಿಯನ್ನು ಸೇರಿಕೊಳ್ಳುತ್ತದೆ. ಇದರ ಉದ್ದ ಸುಮಾರು 192 ಮೈ. ಉತ್ತರ ಪ್ರದೇಸ ಮತ್ತು ಬಿಹಾರ ರಾಜ್ಯಗಳಲ್ಲಿ ಇದು ಬಹುದೂರ ಹರಿಯುತ್ತದೆ. ವಾಸ್ತವವಾಗಿ ಈ ವಲಯದಲ್ಲಿ ಈ ಎರಡು ರಾಜ್ಯಗಳ ನಸುವಣ ಗಡಿ ನಿರ್ಧಾರಕ ನದಿಯಿದು.

ಮಳೆಗಾಲದಲ್ಲಿ ಇದರ ಪ್ರವಾಹ ಸುತ್ತಮುತ್ತಣ ಬಯಲು ಪ್ರದೇಶಗಳಿಗೆ ನುಗ್ಗಿ ಬಹಳ ಅನಾಹುತವನ್ನುಂಟು ಮಾಡುತ್ತದೆ. ಇದನ್ನು ತಪ್ಪಿಸಲು ಕೆಲವಡೆಗಳಲ್ಲಿ ನದಿಯ ದಡದಲ್ಲಿ ಅಡ್ಡಗಟ್ಟೆಗಳನ್ನು ನಿರ್ಮಿಸಲಾಗಿದೆ. ನದಿಯಲ್ಲಿ ವರ್ಷಾದ್ಯಂತವೂ ದೋಣಿ ಸಂಚಾರವುಂಟು. ನೇಪಾಳದ ಮತ್ತು ಗೋರಖ್‍ಪುರದ ಕಾಡುಗಳಿಂದ ಮರದ ದಿಮ್ಮಿಗಳನ್ನು ಸಾಗಿಸಲು ನದಿ ಉಪಯುಕ್ತವಾಗಿದೆ. ಜನವಸತಿಯ ಪ್ರದೇಶವನ್ನು ತಲುಪಿದ ಮೇಲಂತೂ ಕಟ್ಟಡ ಸಾಮಾಗ್ರಿ, ಧಾನ್ಯ, ಸಕ್ಕರೆ ಮೊದಲಾದ ಸರಕುಗಳು ಈ ಜಲಮಾರ್ಗದ ಮೂಲಕ ಸಾಗುತ್ತವೆ. ಈ ನದಿಯಿಂದ ಸಾರನ್ ಮತ್ತು ಚಂಪಾರಣ್ ಜಿಲ್ಲೆಗಳಲ್ಲಿ ನೀರಾವರಿ ಸೌಲಭ್ಯ ಏರ್ಪಟ್ಟಿದೆ. ಹಾಜಿಪುರ, ಶೋಣಪುರಗಳಿಗೂ ಈ ನದಿಯಿಂದ ತುಂಬ ಅನುಕೂಲವುಂಟು. (ಪಿ.ಜಿ.ಡಿ.)