ಪುಟ:Duurada Nakshhatra.pdf/೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಮೊದಲ ಮಾತು

'ದೂರದ ನಕ್ಷತ್ರ'ದ ಮೊದಲ ಮುದ್ರಣದ ಮುನ್ನುಡಿಯ ಕೆಲ ಅಂಶಗಳು ಹೀಗಿವೆ:

xxx

ಉಪಾಧ್ಯಾಯರ [ಶಾಲಾ ಶಿಕ್ಷಕರು, ಅಧ್ಯಾಪಕರು, ಮಾಸ್ತರರು] ಜೀವನವನ್ನು ಚಿತ್ರಿಸುವ ಸಣ್ಣ ಕತೆ, ಕಾದಂಬರಿ, ಏಕಾಂಕ ನಾಟಕಗಳು ಕನ್ನಡದಲ್ಲಿ ಈಗಾಗಲೇ ಪ್ರಕಟವಾಗಿವೆ....

...ಇಷ್ಟಿದ್ದರೂ ವಿದ್ಯಾಕ್ಷೇತ್ರದಿಂದಲೇ ಈ ಕಾದಂಬರಿಗೆ ವಸ್ತುವನ್ನು ಆಯ್ದುಕೊಂಡಿದ್ದೇನೆ. ಇದಕ್ಕೆ ಕಾರಣ, ಆ ಕ್ಷೇತ್ರದ ವೈಶಾಲ್ಯ. ಈ ಕಾದಂಬರಿಯೊಂದಕ್ಕೇ ಅಲ್ಲ, ಇನ್ನಷ್ಟು ಕೃತಿಗಳಿಗೂ ಆ ಕ್ಷೇತ್ರ ವಸ್ತುಮಯವಾಗಿರುವುದರಲ್ಲಿ ಸಂದೇಹವಿಲ್ಲ.

ಪ್ರತಿ, ಹಲವು ಉಪಾಧ್ಯಾಯರೊಡನೆ ನನ್ನ ಒಡನಾಟದ ಹಾಗೂ ಗೆಲುವಿನ ಸೂಕ್ಷ್ಮ ನಿರೀಕ್ಷಣೆಯ ಫಲ. ನನ್ನ ಪಾತ್ರಗಳು ಜೀವಂತ ವ್ಯಂಗ್ಯ ಚಿತ್ರಗಳಲ್ಲ, ಅಥವಾ ಪ್ರತಿರೂಪಗಳೂ ಅಲ್ಲ. ವಾಸ್ತವಿಕ ಕವಚದಿಂದ ಈ ಕಾಲ್ಪನಿಕ ಚಿತ್ರಗಳನ್ನು ಬರೆದಿದ್ದೇನೆ. ವಿದ್ಯಾ ಸಮಸ್ಯೆಯ ಹಿನ್ನೆಲೆಯಲ್ಲಿ ಮಾನವೀಯವಾದ ಕಥೆಯನ್ನು ಬರೆಯಲು ಯತ್ನಿಸಿದ್ದೇನೆ.

ಇತ್ತೀಚೆಗೆ, 'ದೂರದ ನಕ್ಷತ್ರ'ವನ್ನು ನಾನು ಬರೆಯುತ್ತಿದಾಗಲೆ, ಬೆಂಗಳೂರಲ್ಲಿ ಮೈಸೂರು ಸಂಸ್ಥಾನದ ಪ್ರಾಥಮಿಕ, ಮಾಧ್ಯಮಿಕ, ಹೈಸ್ಕೂಲು ಉಪಾಧ್ಯಾಯರೆಲ್ಲರ ಸಮ್ಮೇಳನ ಜರುಗಿತು. ಹಿರಿಯ ವಿದ್ಯಾತಜ್ಞರೊಬ್ಬರ ಆಹ್ವಾನದ ಮೇರೆಗೆ, ಸಂದರ್ಶಕನಾಗಿ ಹೋಗಿ ಉಪಾಧ್ಯಾಯರ ಜತೆಯಲ್ಲಿ ಕುಳಿತು, ವಿಧವಿಧದ ಭಾಷಣಗಳಿಗೆ ನಾನು ಕಿವಿಕೊಟ್ಟೆ.