ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಛ

ವಿಕಿಸೋರ್ಸ್ದಿಂದ

ಛ - ಇದು ಚ ವರ್ಗದ ಎರಡನೆಯ ಅಕ್ಷರ. ಅಘೋಷ ತಾಲವ್ಯ ಸ್ಪರ್ಶ ಮಹಾಪ್ರಾಣ ಧ್ವನಿಯನ್ನುಳ್ಳುದ್ದು. ಒಂದು ವೃತ್ತವನ್ನು ಒಂದು ಲಂಬರೇಖೆಯಿಂದ ಅರ್ಧ ಮಾಡಿದಂತೆ ಕಾಣುವ ರೂಪವೇ ಅಶೋಕನ ಬ್ರಾಹ್ಮೀ ಲಿಪಿಯ ಶಾಸನಗಳಲ್ಲಿ ಕಾಣಸಿಗುತ್ತದೆ. ಶಾತವಾಹನರ ಕಾಲದಲ್ಲಿ ಈ ಎರಡು ಅರ್ಧವೃತ್ತಗಳು ಸಣ್ಣ ಎರಡು ವೃತ್ತಗಳಾಗಿ ಪರಿವರ್ತನೆ ಹೊಂದುತ್ತವೆ. ವಿಶೇಷ ಬದಲಾವಣೆಗಳಿಲ್ಲದೆ ಇದೇ ರೂಪವೇ ಸುಮಾರು ಕ್ರಿ.ಶ. ಎಂಟನೆಯ ಶತಮಾನದವರೆಗೆ ಮುಂದುವರಿಯುತ್ತದೆ. ಆದರೆ ಒಂಬತ್ತನೆಯ ಶತಮಾನದ ಸಮಯಕ್ಕೆ ಅಕ್ಷರದ ಉದ್ದ ಕಡಿಮೆಯಾಗಿ, ಅಗಲ ಹೆಚ್ಚಾಗುತ್ತದೆ. ಹನ್ನೊಂದನೆಯ ಶತಮಾನದ ಕಲ್ಯಾಣದ ಚಾಳುಕ್ಯರ ಶಾಸನಗಳಲ್ಲಿ ವಿಶೇಷ ಬದಲಾವಣೆಗಳನ್ನು ಕಾಣಬಹುದು. ವೃತ್ತಗಳು ಮಾಯವಾಗಿ ಅಕ್ಷರ ಸ್ಫುಟಗೊಂಡು ಈಗಿರುವ ರೂಪಕ್ಕೆ ಅತಿ ಸಮೀಪವಾಗಿ ತೋರುತ್ತದೆ. ಇದೇ ರೂಪವೇ ಹದಿನೆಂಟನೆಯ ಶತಮಾನದವರೆಗೆ ಮುಂದುವರಿಯುತ್ತದೆ. ವಕಾರಕ್ಕೂ ಈ ಅಕ್ಷರಕ್ಕೂ ವ್ಯತ್ಯಾಸ ಕಾಣಿಸಲು ಇದರ ಹೊಕ್ಕಳು ಸೀಳಿರಬೇಕು. ಅಂತೂ ಇದು ಇತ್ತೀಚಿನ ಬದಲಾವಣೆ. (ಎ.ವಿ.ಎನ್.)