ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕಸ್ತೂರಿ 2

ವಿಕಿಸೋರ್ಸ್ದಿಂದ

ಕಸ್ತೂರಿ 2

 ಗಂಡು ಕಸ್ತೂರಿಮೃಗದ ಹೊಟ್ಟೆಯ ಚರ್ಮದೊಳಗಿರುವ ಗ್ರಂಥಿಯೊಂದರಿಂದ ಒಸರುವ ಸುಗಂಧ ವಸ್ತು (ಮಸ್ಕ್). ಅಂಗಡಿಯಲ್ಲಿ ಮಾರುವ ಕಸ್ತೂರಿ ಎಂಬ ವಸ್ತು ಈ ಪ್ರಾಣಿಯಿಂದಲೇ ಬಂದುದು.  ಆದರೆ ಇತರ ಕೆಲವು ಬಗೆಯ ಪ್ರಾಣಿಗಳೂ ಇದೇ ವಾಸನೆಯನ್ನು ಹೊರಸೂಸುತ್ತವೆ.  ಉದಾಹರಣೆಗೆ ಕಸ್ತೂರಿ ದನ, ಕಸ್ತೂರಿ ಇಲಿ, ಕಸ್ತೂರಿ ಬಾತು, ಕಸ್ತೂರಿ ಮೂಗಿಲಿ ಇತ್ಯಾದಿ. ಅಲ್ಲದೆ ಕೆಲವು ಸಸ್ಯಗಳಲ್ಲೂ ಈ ಬಗೆಯ ವಾಸನೆ ಸೂಸುವ ಗ್ರಂಥಿಗಳಿವೆ. ಆ ಸಸ್ಯಗಳನ್ನು ಕಸ್ತೂರಿ ಗಿಡಗಳೆಂದು ಕರೆಯಲಾಗುತ್ತದೆ.

 ಕಸ್ತೂರಿ ಮೃಗವನ್ನು ಕೊಂದು ಅದರ ಹೊಟ್ಟೆಯಲ್ಲಿನ ಕಸ್ತೂರಿ ಗ್ರಂಥಿಯನ್ನು ಹೊರತೆಗೆದು ಬಿಸಿಲಿನಲ್ಲೋ, ಬಿಸಿ ಎಣ್ಣೆಯಲ್ಲಿ ಅದ್ದಿಯೋ, ಒಣಗಿಸುತ್ತಾರೆ. ಕೆಲವು ಸಾರಿ ಕಸ್ತೂರಿ ಗ್ರಂಥಿಯಿಂದ ಕಸ್ತೂರಿಯನ್ನು ಹೊರತೆಗೆದು ಶುದ್ಧೀಕರಿಸಿ ಮಾರುವುದೂ ಉಂಟು.  ಕಸ್ತೂರಿಯಲ್ಲಿ ಮೂರು ಬಗೆಗಳುಂಟು : 1 ಟಾಂಕಿಂಗ್ ಅಥವಾ ಚೀನೀ ಕಸ್ತೂರಿ, 2 ಅಸ್ಸಾಮ್ ಅಥವಾ ನೇಪಾಳದ ಕಸ್ತೂರಿ, (3) ಕಬಾರ್ಡಿನ್ ಅಥವಾ ರಷ್ಯದ ಕಸ್ತೂರಿ. ಟಾಂಕಿಂಗ್ ಕಸ್ತೂರಿಯೇ ಇವುಗಳಲ್ಲೆಲ್ಲ ಶ್ರೇಷ್ಟವಾದುದು, ಹಾಗೂ ಹೆಚ್ಚಿನ ಬೆಲೆಯದು.

 ಕಸ್ತೂರಿ ಹೊಚ್ಚ ಹೊಸದಾಗಿರುವಾಗ ಮೃದುವಾಗಿಯೂ ಜಿಡ್ಡುಜಿಡ್ಡಾಗಿಯೂ ಇರುತ್ತದೆ. ಅದರ ಬಣ್ಣ ಕೆನ್ನೀಲಿ. ವಾಸನೆ ಸಹಿಸಲಾಗದಷ್ಟು ಕಟು, ರುಚಿ ಕಹಿ. ಕುದಿಯುವ ನೀರಿನಲ್ಲಿ ಸ್ವಲ್ಪ ಕರಗುತ್ತದೆ. ಇದು ಸುಗಂಧ ದ್ರವ್ಯಗಳನ್ನು ತಯಾರಿಸಲು ಉಪಯೋಗಿಸುವ ಶ್ರೇಷ್ಟತಮ ಮೂಲದ್ರವ್ಯವೆಂದು ಹೆಸರಾಗಿದೆ.  ಕಸ್ತೂರಿಗೆ ಔಷಧೀಯ ಗುಣಗಳೂ ಉಂಟು. ಇದನ್ನು ಉತ್ತೇಜಕ, ಕಾಮೋದ್ದೀಪಕ, ಕಫಹಾರಕ, ಸ್ವೇದಕಾರಿಯಾಗಿ ಉಪಯೋಗಿಸುತ್ತಾರೆ.

 ಕಸ್ತೂರಿಯ ವೈಶಿಷ್ಟ್ಯಪೂರ್ಣ ಸುಗಂಧಕ್ಕೆ ಕಾರಣ ಅದರಲ್ಲಿನ ಮಸ್ಕೋನ್‍ಎಂಬ ವಸ್ತು. ವಾಲ್ಬಾಮ್ ಎಂಬಾತ 1906ರಲ್ಲಿ ಮೊದಲ ಬಾರಿಗೆ ಇದನ್ನು ಕಸ್ತೂರಿಯಿಂದ ಬೇರ್ಪಡಿಸಿ ಶುದ್ಧೀಕರಿಸಿದ. ರಾಸಾಯನಿಕವಾಗಿ ಇದು 3-ಮೀಥೈಲ್-ಸೈಕ್ಲೊಪೆಂಟ ಡಿಕಾನೋನ್ ಎಂದು ತಿಳಿದುಬಂದಿದೆ.

 ಸ್ವಾಭಾವಿಕ ಕಸ್ತೂರಿಯಂಥ ವಾಸನೆಯಿರುವ ಹಲವಾರು ಬಗೆಯ ಸಂಯುಕ್ತಗಳನ್ನು ಕೃತಕವಾಗಿ ಸಂಶ್ಲೇಷಿಸಬಹುದಾಗಿದೆ. (1888) ರಲ್ಲಿ ಬಾರ್ ಎಂಬಾತ ಅಲ್ಯೂಮಿನಿಯಮ್ ಕ್ಲೋರೈಡಿನೊಡನೆ ಟಾಲೀನ್ ಮತ್ತು ಐಸೊಬ್ಯೂಟೈಲ್ ಬ್ರೋಮೈಡುಗಳನ್ನು ಸಂಘನನ (ಕಂಡೆನ್ಸೇಷನ್) ಕ್ರಿಯೆಗೊಳಪಡಿಸಿ ಅದರಿಂದ ಬಂದ ವಸ್ತುವನ್ನು ನೈಟ್ರೀಕರಣ ಮಾಡಿ ಕೃತಕ ಕಸ್ತೂರಿಯನ್ನು ತಯಾರಿಸಿದ. ಇದಕ್ಕೆ ಬಾರ್‍ಮಸ್ಕ್ ಎಂದು ಹೆಸರು. ಇದಲ್ಲದೆ ಕಸ್ತೂರಿಯನ್ನು ಹೋಲುವ eóÉೈಲೀನ್ ಮಸ್ಕ್, ಮಸ್ಕ್‍ಕೀಟೋನ್, ಮಾಸ್ಕೀನ್, ಫ್ಯಾಂಟೋಲಿಡ್ ಎಂಬ ಸಂಯುಕ್ತಗಳನ್ನು ಕೃತಕವಾಗಿ ತಯಾರಿಸಬಹುದಾಗಿದೆ. ಇವೆಲ್ಲವನ್ನು ಸಾಬೂನು ಇತ್ಯಾದಿ ವಸ್ತುಗಳಿಗೆ ಸುವಾಸನೆ ಕೊಡಲು ಬಳಸುತ್ತಾರೆ.  

 

(ಎ.)