ಪುಟ:Mysore-University-Encyclopaedia-Vol-1-Part-1.pdf/೨೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆಂತರಿಕ ಒತ್ತಡ ಏರ್ಪಡುತ್ತದೆ. ಇದನ್ನು ಅಂತಸ್ಥ ಒತ್ತಡ (ಇಂಟ್ರಿನ್ಸಿಕ್ ಪ್ರೆಷರ್) ಎಂದು ಕರೆದಿದ್ದಾರೆ. ಇದರ ದೆಸೆಯಿಂದ ಬೇರೆ ಬೇರೆ ಅಣುಗಳು ಒಂದನ್ನೊಂದು ಬಲವಾಗಿ ಕಚ್ಚಿಕೊಂಡು ಇರುವುದು ಮಾತ್ರವೇ ಅಲ್ಲದೆ ಪದಾರ್ಥದ ಗಾತ್ರವನ್ನು ಕುಗ್ಗಿಸಲು ನಾವು ಮಾಡುವ ಎಲ್ಲ ಪ್ರಯತ್ನಗಳನ್ನೂ ತೀವ್ರವಾಗಿ ವಿರೋಧಿಸುತ್ತವೆ. ಈ ವಿಚಾರ ನಮ್ಮ ಅನುದಿನದ ಅನುಭವದಲ್ಲಿದೆ. ಘನ ಪದಾರ್ಥಗಳಿಗೆ ನಿರ್ದಿಷ್ಟವಾದ ರೂಪ ಅಥವಾ ಆಕಾರ ಮತ್ತು ಗಾತ್ರಗಳಿವೆ. ಅವುಗಳ ಮೇಲೆ ಹೊರಗಿನಿಂದ ಯಾವ ಬಗೆಯ ಬಲವನ್ನೂ ಪ್ರಯೋಗಿಸದಿರುವವರೆಗೆ ಆ ಘನಪದಾರ್ಥಗಳ ರೂಪ ಮತ್ತು ಗಾತ್ರ ತಮ್ಮ ನಿರ್ದಿಷ್ಟವಾದ ಸ್ಥಿತಿಯಲ್ಲಿರುತ್ತವೆ. ಘನ ಪದಾರ್ಥದಲ್ಲಿನ ಅಣುಗಳು ಸ್ವಸ್ಥಾನದಿಂದ ದೂರಕ್ಕೆ ಹೋಗದೆ, ಅಲ್ಲಲ್ಲಿ ಹತ್ತಿರದ ಸ್ವಸ್ಥಾನದಲ್ಲಿ, ಹಿಂದಕ್ಕೂ ಮುಂದಕ್ಕೂ ಗಡಿಯಾರದ ಲೋಲಕದಂತೆ ಸ್ಪಂದಿಸುತ್ತಿರುತ್ತವೆ. ಈ ಸ್ಪಂದನ ಬಹಳ ರಭಸದಿಂದ ನಡೆಯುತ್ತಿರುತ್ತದೆ. ಅಣು ಸ್ವಸ್ಥಾನದಿಂದ ಹೆಚ್ಚು ದೂರ ಯಾವ ದಿಕ್ಕಿಗೂ ಕದಲುವುದಿಲ್ಲ. ಘನ ವಸ್ತುವಿನಲ್ಲಿನ ಅಣುಗಳ ರಚನೆಯಲ್ಲಿ ಸೇರಿರುವ ಪರಮಾಣಗಳು ಸ್ಪೇಸ್ ಲ್ಯಾಟಿಸ್ ಎಂಬ ಕ್ರಮಬದ್ಧ ಆವರ್ತನೀಯ ಜಾಲಕ ವ್ಯವಸ್ಥೆಯಲ್ಲಿರುತ್ತವೆ ಎಂದು ಡಬ್ಲ್ಯೂ. ಎಚ್. ಬ್ರ್ಯಾಗ್ ಮತ್ತು ಡಬ್ಲ್ಯೂ. ಎಲ್. ಬ್ರ್ಯಾಗ್ ತಮ್ಮ ಶೋಧನೆಗಳಿಂದ ಕಂಡುಕೊಂಡು ತಿಳಿಸಿದ್ದಾರೆ. ಪದಾರ್ಥದ ಉಷ್ಣತೆಯನ್ನು ಹೆಚ್ಚಿಸಿದರೆ ಪರಮಾಣುಗಳು ಈ ಜಾಲರಿಯಲ್ಲಿ ಸ್ಪಂದಿಸುವುದು ಹೆಚ್ಚು ಪರಿಣಾಮಕಾರಿಯಾಗಿಯೂ ಶಕ್ತಿಯೂತವೂ ಆಗಿರುತ್ತದೆ ಎಂದೂ ತಿಳಿಸಿದ್ದಾರೆ. (ಪಿ.ಎಸ್.) ಅಣುಬಟ್ಟಿ ಇಳಿಸುವ ವಿಧಾನ (ಅಣುಬಟ್ಟೀಕರಣ) : ಸಂಯುಕ್ತವಸ್ತುಗಳನ್ನು ಅಧಿಕ ಶೂನ್ಯತೆ ಮತ್ತು ಕಡಿಮೆ ಉಷ್ಣತೆಯ ಮಟ್ಟದಲ್ಲಿ ಭಟ್ಟಿ ಇಳಿಸುವ ಕ್ರಮವಿದು (ಮಾಲಿಕ್ಯುಲರ್ ಡಿಸ್ಟಿಲೇಷನ್). ಹೀಗೆ ಮಾಡುವಾಗ ವಸ್ತುವಿನ ರಚನೆ ಮತ್ತು ಸ್ವರೂಪಕ್ಕೆ ಅಪಾಯ ಸಂಭವಿಸದಂತೆ ಎಚ್ಚರವಹಿಸಲಾಗುವುದು. ಈ ಪದ್ಧತಿಯಲ್ಲಿ ದ್ರವೀಕರಿಸುವ ಮೇಲ್ಮೈ ಬಟ್ಟಿ ಇಳಿಸಲಾಗುವ ದ್ರವಕ್ಕೆ (ಡಿಸ್ಟಿಲೆಂಡ್) ಸಾಧ್ಯವಾದ ಮಟ್ಟಿಗೆ ಸಮೀಪದಲ್ಲಿರುವಂತೆ ಮಾಡಲಾಗುವುದು. ಇದರಿಂದಾಗಿ ನಿರ್ಗಮಿಸುವ ಅಣಗಳು ಒಂದಕ್ಕೊಂದು ಡಿಕ್ಕಿ ಹೊಡಿದು ಮತ್ತೆ ದ್ರವ ರೂಪಕ್ಕೆ ಹಿಂದಿರುಗುವುದಕ್ಕೆ ಬದಲಾಗಿ ಸಾಂದ್ರಕ (ಕಂಡೆನ್ಸರ್) ಮುಖಾಂತರ ಜಾಡಿಯನ್ನು ಪ್ರವೇಶಿಸುತ್ತವೆ. ಅಣುಬಟ್ಟಿ ಇಳಿಸುವುದಕ್ಕೆ ಉಪಯೋಗಿಸುವ ಸಲಕರಣೆಗೆ ಮಾಲಿಕ್ಯೂಲರ್ ಸ್ಟಿಲ್ ಎಂದು ಹೆಸರು. ಇವುಗಳಲ್ಲಿ ಎರಡು ಬಗೆಗಳಿವೆ-ಒಂದು ತೆರೆದ ಮಾರ್ಗದ ಬಟ್ಟಿಯಂತ್ರ (ಓಪನ್ ಪಾತ್ ಸ್ಟಿಲ್) ಮತ್ತೊಂದು ಹ್ರಸ್ವ ಮಾರ್ಗದ ಬಟ್ಟಿಯಂತ್ರ (ಷಾರ್ಟ್ ಪಾತ್ ಸ್ಟಿಲ್). ಸಾಮಾನ್ಯವಾಗಿ ತೆರೆದ ಮಾರ್ಗದ ಸಲಕರಣೆ ದೀರ್ಘಮಾರ್ಗದ್ದಾಗಿದ್ದು ಹ್ರಸ್ವಮಾರ್ಗದ್ದನ್ನೂ ಒಳಗೊಂಡಿರುತ್ತದೆ. ಇವುಗಳಲ್ಲಿ ಹೆಚ್ಚಾಗಿ ಬಳಕೆಯಲ್ಲಿರುವ ಒಂದು ಸಲಕರಣೆಯನ್ನು ಚಿತ್ರದಲ್ಲಿ ತೋರಿಸಲಾಗಿದೆ. ಬಹಳ ಉಪಯುಕ್ತವಾದ ಈ ಯಂತ್ರ ಪ್ರಯೋಗಶಾಲೆಯಲ್ಲಿ ನಿತ್ಯಬಳಕೆಯಲ್ಲಿದೆ. ಈ ಸಲಕರಣೆಯಲ್ಲಿ ಸಾಂದ್ರಕವನ್ನು ಬಟ್ಟಿಇಳಿಸಬೇಕಾದ ದ್ರವದ ಸಮೀಪದಲ್ಲಿ ಇಡಲಾಗುತ್ತದೆ. ದ್ರವೀಕರಿಸುವ ಮೇಲ್ಮೈಗೂ ಬಟ್ಟಿಇಳಿಸಬೇಕಾದ ದ್ರವಕ್ಕೂ ನಡುವಣ ಅಂತರ ಕಡಿಮೆಯಾ ದಂತೆ ಬಟ್ಟಿಯಂತ್ರದ ದಕ್ಷತೆ ಹೆಚ್ಚುತ್ತದೆ. ಈ ರೀತಿ ಮಾಡುವುದರಿಂದ ಅಣಬಟ್ಟಿ ಇಳಿಸುವ ವೇಗ ಹೆಚ್ಚಾಗಿ ಕನಿಷ್ಠಪಕ್ಷ ಶೇ. 90ರಷ್ಟು ಅಣುಗಳನ್ನು ಅವು ನಿರ್ಗಮಿಸುವ ಮೊದಲೇ ದ್ರವೀಕರಿಸಬಹುದು. ಸ್ಥಿರವಲ್ಲದ ಅನೇಕ ಸಂಯುಕ್ತವಸ್ತುಗಳನ್ನು ಅವುಗಳ ರಚನೆಗೆ ಸ್ವಲ್ಪವೂ ಧಕ್ಕೆ ಬಾರದಂತೆ ಈ ಬಟ್ಟಿಯಂತ್ರದಲ್ಲಿ ಕಾಯಿಸಬಹುದು. ಆದರೆ, ಇತರ ಅಣಬಟ್ಟಿ ಯಂತ್ರಗಳಲ್ಲಿ ಅವು ತಮ್ಮ ಸ್ವರೂಪವನ್ನು ಕಳೆದುಕೊಳ್ಳಬಹುದು ಇಲ್ಲವೇ ಆಸ್ಫೋಟನೆ ಹೊಂದಬಹುದು. ಅಣಬಟ್ಟಿ ಇಳಿಸುವ ಈ ವಿಧಾನವನ್ನು ಕಡಿಮೆ ಬಾಷ್ಪಶೀಲ (ಲೋ ವಾಲಟೈಲ್) ಸಂಯುಕ್ತವಸ್ತುಗಳನ್ನು ಶುದ್ಧೀಕರಿಸಲು ಇಲ್ಲವೇ ಪೂರ್ವಭಾವಿಯಾಗಿ ಬೇರ್ಪಡಿಸಲು ಬಳಸಿಕೊಳ್ಳಬಹುದು. ಕಡಿಮೆ ಬಾಷ್ಪಶೀಲ ಅಂದರೆ ಪದಾರ್ಥವೊಂದು ಸಾಧಾರಣ ಉಷ್ಣತೆಗಳಲ್ಲಿಯೇ ಬೇಗ ಆವಿಯಾಗುವ ಗುಣ. ಉದಾಹರಣೆಗಾಗಿ, ಎ ಅನ್ನಾಂಗ ಮತ್ತು ಬಿ ಅನ್ನಾಂಗಗಳೆಂಬ ಸೂಕ್ಷ್ಮ ಸಂಯುಕ್ತವಸ್ತುಗಳನ್ನು ಮೀನೆಣ್ಣೆ ಮತ್ತು ಸಸ್ಯಸಂಬಂಧ ವಾದ ಎಣ್ಣೆಗಳಿಂದ ಅನುಕ್ರಮವಾಗಿ ಬೇರ್ಪಡಿಸಲು ಈ ವಿಧಾನವನ್ನು ಹೆಚ್ಚಾಗಿ ಬಳಸಲಾಗುತ್ತಿದೆ. (ಎಂ.ಪಿ.ವಿ.) ಅಣುರಚನಾಸ್ವರೂಪ, ರಾಸಾಯನಿಕ : ರಾಸಾಯನಿಕ ಪದಾರ್ಥಗಳ ಅತ್ಯಂತ ಸಣ್ಣ ಕಣಗಳಾಗಿರುವ ಅಣುಗಳು ಒಂದೇ ಜಾತಿಯ ಅಥವಾ ಹಲವಾರು ಜಾತಿಯ ಹಲವು ಪರಮಾಣುಗಳಿಂದ ರಚಿತವಾಗಿವೆ. ಈ ಪರಮಾಣುಗಳು ರಾಸಾಯನಿಕ ಬಂಧಗಳಿಂದ (ಬಾಂಡ್ಸ್) ಒಂದಕ್ಕೊಂದು ಹಿಡಿಯಲ್ಪಟ್ಟಿವೆ. ಈ ಬಂಧಗಳಲ್ಲಿ ನಡುವೆ ಒಂದು ನಿರ್ದಿಷ್ಟ ಅಂತರವಿರುತ್ತದೆ. ಇದನ್ನು ಕ್ರಮವಾಗಿ ಬಂಧನ ಕೋನ (ಬಾಂಡ್ ಆ್ಯಂಗಲ್) ಮತ್ತು ಬಂಧನ ಅಂತರ (ಬಾಂಡ್ ಡಿಸ್ಟೆನ್ಸ್) ಎಂದು ಕರೆಯಬಹುದು. ಇವುಗಳನ್ನೇ ಅಣುವಿನ ಪ್ರಸಕ್ತ ನಿಯತಾಂಕಗಳು (ಮಾಲೆಕ್ಯುಲರ್ ಪಾರಾಮೀಟರ್ಸ್) ಎಂದು ಕರೆಯಲಾಗುತ್ತದೆ. ಸಾಧಾರಣವಾಗಿ, ಅಣು ರಚನಾಸ್ವರೂಪವನ್ನು ತಿಳಿಯಬೇಕಾದರೆ, ಅದರಲ್ಲಿಯೂ ಪರಮಾಣುಗಳು ಒಂದಕ್ಕೊಂದು ವಹಿಸಿಕೊಂಡಿರುವ ನಿರ್ದಿಷ್ಟಸ್ಥಾನಗಳನ್ನೂ ಅವುಗಳ ಮಧ್ಯೆ ಇರುವ ಬಂಧನಾಂತರಗಳನ್ನೂ ಬಂಧನಗಳ ಮಧ್ಯೆ ಅಡಕವಾದ ಬಂಧನ ಕೋನಗಳನ್ನೂ ಅರಿತುಕೊಳ್ಳಬೇಕು. ಅಣುರಚನಾಸ್ವರೂಪವನ್ನು ಸಂಶೋಧಿಸುವವರು ಇದರ ಜೊತೆಗೆ ಪರಮಾಣುಗಳ ಸನಿಹದ ವಿದ್ಯುದಂಶಸಾಂದ್ರತೆ ಮತ್ತು ಸನ್ನಿವೇಶಗಳು, ಬಂಧನಗಳನ್ನು ಮುರಿಯಲು ಬೇಕಾಗುವ ಶಕ್ತಿ (ಬಂಧನಶಕ್ತಿ-ಬಾಂಡ್ ಎನರ್ಜಿ) ಮುಂತಾದುವುಗಳನ್ನು ತಿಳಿಯಬೇಕಾಗುತ್ತದೆ. ಅಣುರಚನಾಸ್ವರೂಪದ ತಿಳಿವು ಬಹು ವಿಧಗಳಲ್ಲಿ ಪ್ರಯೋಜನಕಾರಿಯಾಗುತ್ತದೆ. ಎಷ್ಟೋ ರಾಸಾಯನಿಕ ಪದಾರ್ಥಗಳ ಜೀವ ವೈಜ್ಞಾನಿಕ ಕ್ರಿಯಾಶಕ್ತಿಗಳು ಅಣುರಚನಾ ಸ್ವರೂಪವನ್ನು ಅವಲಂಬಿಸಿವೆ. ಪ್ರಸಿದ್ಧ ವಿಜ್ಞಾನಿಗಳಾದ ಪಾಲಿಂಗ್ ಮತ್ತಿತರು, ಮಾನವ ದೇಹದಲ್ಲಿನ ರಾಸಾಯನಿಕ ಪದಾರ್ಥಗಳಲ್ಲಿ ಕೆಲವು ಅಸಾಮಾನ್ಯ ಸ್ವರೂಪ ಹೊಂದಿರುವುದರ ಪರಿಣಾಮವೇ ಅವನ ಮಾನಸಿಕ ವಿಕಾರಗಳಿಗೆ ಕಾರಣವಿರಬಹುದೆಂದು ಅಭಿಪ್ರಾಯಪಟ್ಟಿದ್ದಾರೆ. 19ನೆಯ ಶತಮಾನದಲ್ಲಿ, ಕೆಲವು ಇಂಗಾಲದ ಸಂಯುಕ್ತಪದಾರ್ಥಗಳ ಸ್ವರೂಪ ಸಿದ್ಧಾಂತಗಳು (ಆರ್‍ಗ್ಯಾನಿಕ್ ಸ್ಟ್ರಕ್ಚುರಲ್ ಥಿಯರಿ) ಇದ್ದುವು. ಆದರೆ ಅವೆಲ್ಲವೂ ಬಹಳ ಪರೋಕ್ಷ ಸಾಕ್ಷಿಗಳನ್ನವಲಂಬಿಸಿದ್ದುವಲ್ಲದೆ, ಕೇವಲ ಕೆಲವೇ ಸರಳ ರಾಸಾಯನಿಕ ಕ್ರಿಯೆಗಳನ್ನು ಮಾತ್ರ ವಿಶದಪಡಿಸುತ್ತಿದ್ದುವು. 1895ರ ಈಚೆಗೆ, ವಿಕಿರಣಶಕ್ತಿ (ರೇಡಿಯೋ ಆ್ಯಕ್ಟಿವಿಟಿ), ಪರಮಾಣು ಮತ್ತು ಅಣುಗಳಲ್ಲಿಯ ವಿದ್ಯುದಂಶದ ತಿಳಿವು ಉಂಟಾದಮೇಲೆಯೇ ಒಂದೊಂದು ಪರಮಾಣುವಿನ ಗುಣವಿಶೇಷಗಳನ್ನೂ ವಿಶದಪಡಿಸಲು ಸಾಧ್ಯವಾಯಿತು. ಮಧ್ಯಸ್ಥ ಧನವಿದ್ಯುದಂಶದ ಸುತ್ತ ತಿರುಗುವ ಋಣವಿದ್ಯುದಂಶಗಳ ಮಾದರಿಯ ಪರಮಾಣುಗಳು ಮತ್ತು ಇಂಥ ಪರಮಾಣುಗಳಿಂದ ಕೂಡಿದ ಅಣುಗಳು ಕ್ವಾಂಟಂ ಸಿದ್ಧಾಂತದ ಆಧಾರದ ಮೇಲೆ ಬಳಕೆಗೆ ಬಂದುವು. ಕ್ವಾಂಟಂ ಸಿದ್ಧಾಂತದ ತತ್ತ್ವಗಳ ಬಳಕೆಯಿಂದ ರಾಸಾಯನಿಕ ಬಂಧನ ಮತ್ತು ಅಣುರಚನಾಸ್ವರೂಪದ ಮೂಲ ಅರಿವೂ ವ್ಯಾಪಕವಾಯಿತು. ಅಣುರಚನಾಸ್ವರೂಪವನ್ನು ಅರಿಯುವಲ್ಲಿ ಸಾಮಾನ್ಯವಾಗಿ ಅನುಸರಿಸುವ ಕೆಲವು ವಿಧಾನಗಳನ್ನು ಇಲ್ಲಿ ಕೊಡಲಾಗಿದೆ : I. ರೋಹಿತದರ್ಶಕ ವಿಧಾನಗಳು (ಸ್ಪೆಕ್ಟ್ರೋಸ್ಕೊಪಿಕ್ ಮೆಥಡ್ಸ್ ) : (i) ಅತಿರಕ್ತವರ್ಣರೋಹಿತ ವಿನ್ಯಾಸ ವಿಜ್ಞಾನ (ಇನ್‍ಫ್ರಾರೆಡ್‍ಸ್ಪೆಕ್ಟ್ರೋಸ್ಕೋಪಿ) (ii) ರಾಮನ್ ವರ್ಣರೋಹಿತ ವಿನ್ಯಾಸ ವಿಜ್ಞಾನ (iii) ನ್ಯೂಕ್ಲಿಯರ್ ಮ್ಯಾಗ್ನೆಟಿಕ್ ಅನುನಾದ (ರೆಸೊನೆಸ್ಸ್) II ನಮನ ವಿಧಾನಗಳು (ಡಿ¥಼್ರಾಕ್ಷನ್ ಮೆಥಡ್ಸ್) (i) ಕ್ಷ-ಕಿರಣಗಳ ನಮನ (ಎಕ್ಸ್‍ರೇ ಡಿ¥಼್ರಾಕ್ಷನ್) (ii) ಋಣವಿದ್ಯುದಂಶ ಕಿರಣಗಳ ನಮನ (ಎಲೆಕ್ಟ್ರಾನ್ ಡಿ¥಼್ರಾಕ್ಷನ್) III ಭೌತಗುಣಪ್ರಮಾಣಗಳನ್ನು ಆಧರಿಸಿದ ವಿಧಾನಗಳು : (i) ವಿದ್ಯುತ್ ಧ್ರುವಯುಗ್ಮ ಭ್ರಮಣಶಕ್ತಿ (ಎಲೆಕ್ಟ್ರಿಕ್ ಡೈಪೋಲ್ ಮೊಮೆಂಟ್) (ii) ಮೋಲಾರ್ ವಕ್ರೀಭವನ (ಮೋಲಾರ್ ರಿ¥಼್ರಾಕ್ಷನ್) (iii) ಕಾಂತತಾ ಭ್ರಮಣಶಕ್ತಿ (ಮಾಗ್ನೆಟಿಕ್ ಮೊಮೆಂಟ್ಸ್). ಈ ವಿಧಾನಗಳಿಗೆ ಮತ್ತು ಅಣುರಚನಾಸ್ವರೂಪಕ್ಕೆ ಸಂಬಂಧಿಸಿದ ಕೆಲವು ವಿವರಗಳನ್ನು ಇಲ್ಲಿ ಕೊಡಲಾಗಿದೆ. I ರೋಹಿತ ದರ್ಶಕ ವಿಧಾನಗಳು : i. ಅತಿರಕ್ತವರ್ಣರೋಹಿತ ವಿನ್ಯಾಸ ವಿಜ್ಞಾನ : ಪದಾರ್ಥಗಳ ಮತ್ತು ಈ ಅತಿರಕ್ತವರ್ಣ ಕಿರಣಗಳ ಪರಸ್ಪರ ಪ್ರತಿಕ್ರಿಯೆಯಿಂದ ಉಂಟಾಗುವ ಪರಿಣಾಮಗಳ ಪರಿಶೀಲನೆಯಿಂದ ಪದಾರ್ಥಗಳ ಗುಣವಿಶೇಷಗಳನ್ನು ಅರಿಯಲು ಭೌತವಿಜ್ಞಾನಿಗೆ ಸಾಧ್ಯವಾಗುತ್ತದೆ. ಈ ದೃಷ್ಟಿಯಿಂದ ತರಂಗಮಾನ 2.5-50 ಮೈಕ್ರಾನ್ (1 ಮೈಕ್ರಾನ್= 10-4 ಸೆಂಮೀ) ಇರುವ ವಿದ್ಯುತ್ಕಾಂತ ರಕ್ತ ತರಂಗಗಳ ಭಾಗವೇ ಈ ಅತಿರಕ್ತ ವರ್ಣಕಿರಣಗಳ ಬಹುಮುಖ್ಯ ಭಾಗವೆನ್ನಬಹುದು. ಅಣುಗಳಲ್ಲಿ ಮತ್ತು ರಾಸಾಯನಿಕ ಹರಳುಗಳಲ್ಲಿ (ಕ್ರಿಸ್ಟಲ್) ಇರುವ ಪರಮಾಣುಗಳ ಸಹಜಸ್ಪಂದನದ ಕಂಪನಾವರ್ತಗಳು (ನ್ಯಾಚುರಲ್ ವೈಬ್ರೇಷನ್ ಫ್ರೀಕ್ವೆನ್ಸಿ) ಈ ಭಾಗದಲ್ಲಿ ಅಡಕವಾಗಿರುತ್ತವೆ. ಕೆಲವು ಅನಿಲರೂಪದ ಪದಾರ್ಥಗಳಲ್ಲಿ ಅಣುಗಳ ಚಕ್ರಗತಿಗೆ ಸಂಬಂಧಿಸಿದ ಕಂಪನಾವರ್ತಗಳು (ರೊಟೇಷನಲ್ ಫ್ರೀಕ್ವೆನ್ಸೀಸ್). ಬಹು ದೂರದ ಅತಿರಕ್ತವರ್ಣದ (ತರಂಗಮಾನ 50 ಮೈಕ್ರಾನ್‍ಗಳ) ಆಚೆ ಇರುತ್ತವೆ. ಪದಾರ್ಥಗಳು ಈ ಕಿರಣಗಳನ್ನು ಹೀರುವುದರಿಂದ ಅತಿರಕ್ತವರ್ಣರೋಹಿತ ಉದ್ಭವಿಸುತ್ತದೆ. ವಿವಿಧ