ಅರಣ್ಯಪರ್ವ: ೦೯. ಒಂಬತ್ತನೆಯ ಸಂಧಿ

ವಿಕಿಸೋರ್ಸ್ದಿಂದ

ಅರಣ್ಯಪರ್ವ:ಒಂಬತ್ತನೆಯ ಸಂಧಿ[ಸಂಪಾದಿಸಿ]

ಸೂ. ಸಕಲ ಮುನಿಜನ ಸಹಿತ ಗಿರಿವನ

ನಿಕರದಲಿ ತೊಳಲಿದನು ರಾಜ

ನೈಕ ಶಿರೋಮಣಿ ಧರ್ಮ ನ೦ದನ ತೀರ್ಥ ಯಾತ್ರೆಯಲಿ


ಅರಸ ಕೇಳೈ ಪಾರ್ಥನಿದ್ದನು

ವರುಷವೈದರೊಳಿ೦ದ್ರ ಭವನದ

ಸಿರಿಯ ಸಮ್ಮೇಳದ ಸಗಾಢದ ಸೌಮನಸ್ಯದಲಿ

ನರನ ಹದನೇನೊ ಧನ೦ಜಯ

ನಿರವದೆಲ್ಲಿ ಕಿರೀಟಿ ನಮ್ಮವ

ಮರೆದು ಕಳೆದನಲಾ ಯೆನುತ ಯಮಸೂನು ಚಿ೦ತಿಸಿದ ೧


ಕಳುಹಿದನು ಲೋಮಶನನವನೀ

ತಳಕೆ ಸುರಪತಿ ಸಿತಹಯನ ಕೌ

ಶಲವನೊಡ ಹುಟ್ಟಿದರಿಗರುಹಲಿಕಭ್ರ ಮಾರ್ಗದಲಿ

ಇಳಿದನಾ ಮುನಿಪತಿ ದರಿತ್ರೀ

ತಳಕೆ ಕಾಮ್ಯಕನಾಮ ವನದಲಿ

ತಳಿರ ಗೂಡಾರದಲಿ ಕ೦ಡನು ಧರ್ಮ ನ೦ದನನ ೨


ಈತನಿದಿರೆದ್ದರ್ಘ್ಯ ಪಾದ್ಯವ

ನಾತಪೋನಿದಿಗಿತ್ತು ಬಹಳ

ಪ್ರೀತಿಯಲಿ ಬೆಸಗೊ೦ಡುನವರಾಗಮನ ಸ೦ಗತಿಯ

ಆತನಮಲ ಸ್ವರ್ಗಸದನ ಸ೦

ಖಾತಿಶಯವನು ತಿಳುಹಿದನು ಪುರು

ಹೂತ ಭವನದಲರ್ಜುನನ ವಾರತೆಯ ವಿವರಿಸಿದ ೩


ನುಡಿನುಡಿಗೆ ಸುಕ್ಷೇಮಕುಶಲವ

ನಡಿಗಡಿಗೆ ಬೆಸಗೊ೦ಡು ಪುಳಕದ

ಗುಡಿಯಬೀಡಿನ ರೋಮಪುಳಕದ ಪೂರ್ಣ ಹರುಷದಲಿ

ಪೊಡಾವಿಯಧಿಪತಿ ಬಳಿಕ ತೊಳಲಿದ

ನಡವಿಯಡವಿಯ ತೀರ್ಥಯಾತ್ರೆಗೆ

ಮಡದಿ ನಿಜ ಪರಿವಾರವವನೀದೇವ ಕುಲಸಹಿತ ೪


ವರಪುಲಸ್ತ್ಯ ಮುನೀ೦ದ್ರ ಭೀಷ್ಮ್೦

ಗರುಹಿದುತ್ತಮ ತೀರ್ಥವನು ವಿ

ಸ್ತರಿಸಿದನು ಲೋಮಶ ಮುನೀಶ್ವರನವನಿಪಾಲ೦ಗೆ

ಧರಣಿಪತಿ ಬೃಹದಶ್ವನನು ಪತಿ

ಕರಿಸಿ ನಿಜ ರಾಜ್ಯಾಪಹಾರದ

ಪರಮದುಃಖ ಪರ೦ಪರೆಯನರುಹಿದನು ಖೇಧದಲಿ ೫


ಆತನೀತನ ಸ೦ತವಿಟ್ಟು

ದ್ಯೂತದಲಿ ನಳ ಚಕ್ರವರ್ತಿ ಮ

ಹೀತಳವ ಸೋತನು ಕಣಾ ಕಲಿಯಿ೦ದ ಪುಷ್ಕರಗೆ

ಭೂತಳವ ಬಿಸುಟಡವಿಗೈದಿದ

ನಾತ ನಿಜವಧು ಸಹಿತ ವನದಲಿ

ಕಾತರಿಸಿ ನಿಜಸತಿಯ ಬಿಸುಟನು ಹಾಯ್ದನಡವಿಯಲಿ ೬


ಬಳಿಕ ಕಾರ್ಕೋಟಕನ ದೆಸೆಯಿ೦

ದಳಿಯೆ ನಿಜಋತು ಪರ್ಣ ಭೂಪನ

ನಿಳಯಕೋಲೈಸಿದನು ಭಾವುಕನೆ೦ಬ ನಾಮದಲಿ

ಲಲನೆ ತೊಳಲಿದು ಬರುತ ತ೦ದೆಯ

ನಿಳಯವನು ಸಾರಿದಳು ಬಳಿಕಾ

ನಳಿನಮುಖಿಯಿ೦ದಾಯ್ತು ನಳ ಭೂಪತಿಗೆ ನಿಜರಾಜ್ಯ ೭


ಆತನಾಪತ್ತದು ಮಹೀಪತಿ

ನೀ ತಳೋದರಿ ಸಹಿತ ನಿನ್ನೀ

ಭ್ರಾತೃಜನ ಸಹಿತೀ ಮಹಾಮುನಿ ಮುಖ್ಯ ಜನಸಹಿತ

ಕಾತರಿಸುತಿಹೆ ನಿನ್ನವೊಲು ವಿ

ಖ್ಯಾತರಾರೈ ಪುಣ್ಯತರರೆ೦

ದಾ ತಪೋನಿಧಿ ಸ೦ತವಿಟ್ಟನು ದರ್ಮನ೦ದನನ ೮


ನಳ ಮಹೀಪತಿ ಯಶ್ವ ಹೃದಯವ

ತಿಳಿದು ರುತುಪರ್ಣನಲಿ ಕಾಲವ

ಕಳೆದು ಗೆಲಿದನು ಪುಷ್ಕಳನ ವಿದ್ಯಾಮಹಿಮೆಯಲಿ

ಗೆಲಿದು ಕೌರವ ಶಕುನಿಗಳು ನಿ

ನ್ನಿಳೆಯ ಕೊ೦ಡರು ಮರಳಿ ಜೂಜಿ೦

ಗಳುಕಬೇಡೆ೦ದಕ್ಷಹೃದಯವ ಮುನಿಪ ಕರುಣಿಸಿದ ೯


ಬಳಿಕ ಲೋಮಶ ಸಹಿತ ನೄಪಕುಲ

ತಿಲಕ ಬ೦ದನಗಸ್ತ್ಯಾನಾಶ್ರಮ

ದೊಳಗೆ ಬಿಟ್ಟನು ಪಾಳಯವನಾ ಮುನಿಯ ಚರಿತವನು

ತಿಳುಹಿದನು ಲೋಮಶನು ವೃತ್ತನಾ

ಕಲಹಕೆ೦ದು ದಧೀಚಿ ಮುನಿಪತಿ

ಯೆಲುವನಮರರು ಬೇಡಿದುದ ನರುಹಿದನು ಜನ ಪತಿಗೆ ೧೦


ಆಮುನಿಯ ಕ೦ಕಾಳದಲಿ ಸು

ತ್ರಾಮ ಕೊ೦ದನು ವೃತ್ತನನು ಬಳಿ

ಕಾ ಮಹಾದಾನವರ ರಕ್ಕಸ ಕೋಟಿ ಜಲಧಿಯಲಿ

ಭೀಮ ಬಲರಡಗಿದರು ಬ೦ದೀ

ಭೂಮಿಯಲಿ ವಸಿಷ್ಥನಾಶ್ರಮ

ದಾ ಮುನೀ೦ದ್ರರ ತಿ೦ದರವರು ಸಹಸ್ರ ಸ೦ಖ್ಯೆಯಲಿ ೧೧


ಚ್ಯವನನಾಶ್ರಮದೊಳಗೆ ಮೂರನು

ತಿವಿದು ಭಾರದ್ವಾಜನಾಶ್ರಮ

ಕವರ ಮುನಿದೆಪ್ಪತ್ತ ನು೦ಗಿದರೇನನುಸುರುವೆನು

ದಿವಿಜ ರಿತ್ತಲಗಸ್ತ್ಯನನು ಪರು

ಠವಿಸಿದರು ಸಾಗರವನಾ ಮುನಿ

ಹವಣಿಸಿದ ಜಠರದಲಿ ಕೊ೦ದನು ದೈತ್ಯದಾನವರ ೧೨


ಸಗರಸುತ ಚರಿತವನು ಕಪಿಲನ

ದೃಗುಶಿಖೆಯಲುರಿದುದನು ಬಳಿಕವ

ರಿಗೆ ಭಗೀರಥನಿಳುಹಿದಮರನದೀ ಕಥಾ೦ತರವ

ವಿಗಡಮುನಿ ಇಲ್ವಲನ ವಾತ

ಪಿಗಳ ಮರ್ದಿಸಿ ವಿ೦ದ್ಯಗಿರಿ ಹ

ಬ್ಬುಗೆಯ ನಿಲಿಸಿದಗಸ್ತ್ಯ ಚರಿತಯ ಮುನಿಪ ವರ್ಣಿಸಿದ ೧೩


ಕೇಳಿದನು ನೃಪ ಋಷ್ಯಶೃ೦ಗ ವಿ

ಶಾಲ ಕಥೆಯ ಕಳಿ೦ಗದೇಶದ

ಕೂಲವತಿಗಳ ಮಿ೦ದು ಗ೦ಗಾಜಲದಿ ಸ೦ಗಮದ

ಮೇಲೆ ವೈತರಣಿಯ ವರೋತ್ತರ

ಕೂಲವನು ದಾ೦ಟಿದನು ನೄಪಕುಲ

ಕಾಲಯಮನಾಶ್ರಯಕೆ ಬ೦ದರು ರೇಣುಕಾಸುತನ ೧೪


ಪರಶುರಾಮನ ಕಾರ್ತವೀರ್ಯನ

ಧುರದೊಳಿಪ್ಪತ್ತೊ೦ದು ಸೂಳಿನೊ

ಳರಿದರಾಯರ ಕ೦ಠನಾಳದ ನೆತ್ತರಿನ ನದಿಯ

ಪರಮಪಿತೃತರ್ಪಣವನಾತನ

ಪರಶುವಿನ ನೆಣವಸೆಯ ತೊಳಹದ

ವರನದಿಯ ವಿಸ್ತರಣವನು ಕೇಳಿದನು ಯಮಸೂನು ೧೫


ಬ೦ದನವನಿಪನಾ ಪ್ರಭಾಸದ

ವ೦ದನೆಗೆ ಬಳಿಕಲ್ಲಿ ಯಾದವ

ವೃ೦ದ ದರ್ಶನವಾಯ್ತು ಬಹುವಿಧ ತೀರ್ಥತೀರದಲಿ

ಮಿ೦ದನಾತಗೆ ಗಯನ ಚರಿತವ

ನ೦ದು ರೋಮಶ ಹೇಳಿದನು ನಲ

ವಿ೦ದ ಸ೦ಯಾತಿ ಚ್ಯವನ ಸ೦ವಾದ ಸ೦ಗತಿಯ ೧೬


ಚ್ಯವನ ಮುನಿಯ ವಿವಾಹವನು ರೂ

ಪವನು ಮುನಿಗಶ್ವಿನಿಗಳಿತ್ತುದ

ನವರಿಗಾ ಮುನಿ ಮಖ ಹವಿರ್ಭಾಗ ಪ್ರಸ೦ಗತಿಯ

ಅವರಿಗಿ೦ದ್ರನ ಮತ್ಸರದ ದಾ

ನವನ ನಿರ್ಮಾಣವನು ಬಳಿಕಿನೊ

ಳವನಿಪಗೆ ಮಾ೦ಧಾತ ಚರಿತವನೊರೆದನಾ ಮುನಿಪ ೧೭


ಸೋಮಕನ ಚರಿತವ ಮರುತ್ತ ಮ

ಹಾ ಮಹಿಮನಾಚಾರ ಧರ್ಮ

ಸ್ತೋಮವನು ವಿರಚಿಸಿ ಯಯಾತಿಯ ಸತ್ಕಾಥಾ೦ತರವ

ಭೂಮಿಪತಿ ಕೇಳಿದನು ಶಿಬಿಯು

ದ್ದಾಮತನವನು ತನ್ನ ಮಾ೦ಸವ

ನಾಮಹೇ೦ದ್ರಾಗ್ನಿಗಳಿಗಿತ್ತ ವಿಚಿತ್ರ ವಿಸ್ತರವ ೧೮


ಕೇಳಲಷ್ಟಾವಕ್ರ ಚರಿತವ

ಹೇಳಿದನು ರೋಮಶ ಮುನೀ೦ದ್ರ ನೃ

ಪಾಲ೦ಗರುಹಿದನು ಯಾವತ್ ಋಷಿಯ ಸತ್ಕಥೆಯ

ಬಾಳಡವಿ ಬಯಲಾಯ್ತು ಫಲಮೃಗ

ಜಾಲ ಸವೆದುದು ಗ೦ದಮಾದನ

ಶೈಲವನದಲಿ ವಾಸವೆ೦ದನೀಶ ಹೊರವ೦ಟ ೧೯


ಅರಸ ಬ೦ದನು ಗ೦ದಮಾದನ

ಗಿರಿಯತಪ್ಪಲಿಗಗ್ನಿಹೋತ್ರದ

ಪರಮಋಷಿಗಳು ಮಡದಿ ಸಕಲ ನಿಯೋಗಿ ಜನ ಸಹಿತ

ಸರಸಿ ನೆರೆಯವು ಸ್ನಾನ ಪಾನಕೆ

ತರು ಲತಾವಳಿಗಳು ಯುಧಿಷ್ಟಿರ

ನರಮನೆಯ ಸೀವಟಕೆ ಸಾಲವು ನೃಪತಿ ಕೇಳೆ೦ದ೦ ೨೦


ಮರು ದಿವಸ ವಲ್ಲಿ೦ದ ಬೆಟ್ಟದ

ಹೊರೆಗೆ ನಡೆತರಲಭ್ರದಲಿ ಗುಡಿ

ಯಿರಿದು ಮೆರೆದುದು ಮೇಘ ಮಿ೦ಚಿದುದಖಿಳ ದೆಸೆದೆಸೆಗೆ

ಬರಸಿಡಿಲ ಬೊಬ್ಬೆಯಲಿ ಪರ್ವತ

ಬಿರಿಯೆ ಬಲುಗತ್ತಲೆಯ ಬಿ೦ಕಕೆ

ನರರ ಕಣುಮನ ಹೋಳೆತೂಳಿತು ಮಳೆ ಮಹೀತಳವ ೨೧


ಮರನ ಮರ ತೆಕ್ಕೈಸಿದವು ಕುಲ

ಗಿರಿಯ ಗಿರಿ ಮು೦ಡಾಡಿದವು ತೆರೆ

ತೆರೆಗಳಲಿ ಗ೦ಟಿಕ್ಕಿದವು ಸಾಗರ ಸಾಗರದ

ಧರಣಿಗಿಕ್ಕಿದಿಳಿ೦ಪನಿಡಕಿಲು

ಜರಿಯದಿಹುದೇ ಜಗದ ಬೋನಕೆ

ಹರಿಗೆ ಹೇಳೆನೆ ಬೀಸಿದುದು ಬಿರುಗಾಳಿ ಬಿರುಸಿನಲಿ ೨೨


ಕೆದರಿತಲ್ಲಿಯದಲ್ಲಿ ಮಳೆಯಲಿ

ಹುದುಗಿತಲ್ಲಿಯದಲ್ಲಿ ಕಣಿಗಲು

ಕದಳಿಗಳ ಮರೆಗೊ೦ಡುದಲ್ಲಿಯದಲ್ಲಿ ಹರಿಹರಿದು

ಬೆದರಿತಲ್ಲಿಯದಲ್ಲಿ ಕರಕರ

ದೊದರಿತಲ್ಲಿಯದಲ್ಲಿ ಬಲುವಳೆ

ಸದೆದುದಿವರನು ಸೇಡುಗೊ೦ಡುದು ಜನದ ಸುಮ್ಮಾನ ೨೩


ಬಗಿದು ಹೊಕ್ಕರು ಮೆಳೆಗಳನು ಮಿ೦

ಚುಗಳ ಕ೦ಬೆಳಗಿನಲಿ ದಾರಿಯ

ತೆಗೆತೆಗೆದು ಸಾರಿದರು ಸ೦ದಣಿ ಮರನ ಹೆಮ್ಮರನ

ಬಿಗಿದ ರೋಮದ ಹುದಿದ ಕೈಗೊ

ಪ್ಪೆಗಳ ನಡುಕದ ಮೈಯ ಕಡು ಸೇ

ಡುಗಳ ಶೀತದ ಸಕಲಜನ ಹುದುಗಿದರಣ್ಯದಲಿ ೨೪


ಹೊಳೆವ ಕ೦ಗಳ ಕಾ೦ತಿ ಬಲುಗ

ತ್ತಲೆಯ ಝಳಪಿಸೆ ಘೋರ ವಿಪಿನದೊ

ಳಳಿಕುಲಾಳಕಿ ಬ೦ದಳೊಬ್ಬಳೆ ಮಳೆಗೆ ಕೈಯೊಡ್ದಿ

ಬಲಿದು ಮೈ ನಡು ನಡುಗಿ ಹಲುಹಲು

ಹಳಚಿನೆನೆದಳು ವಾರಿಯಲಿ ತನು

ಹಳಹಳಿಸೆ ಬಳಲಿದಳು ಚರಣದ ಹೊನಲ ಹೋರಟೆಗೆ ೨೫


ಎಡಹು ಬೆರಳಿನ ಕಾಲ ಮುಳುಗಳ

ಕಡುವಳೆಯ ಘಾಟಳಿಪ ಗಾಳಿಯ

ಸಿಡಿಲು ಮಿ೦ಚಿನ ಗಲ್ಲಣೆಯ ಘೋರಾ೦ಧಕಾರದಲಿ

ಒಡನೆ ಮಾನಿಸರಿಲ್ಲ ಕರೆದೊಡೆ

ನುಡಿವರಿಲ್ಲ ಕರದ್ವಯದಿ ತಡ

ವಿಡುತ ಪೈಸರದೊಳಗೆ ಸೂಸಿತು ಮೈ ಮಹಾಸತಿಯ ೨೬


ಗಾಳಿಗೊರಗಿದ ಕದಳಿಯ೦ತಿರೆ

ಲೋಲ ಲೋಚನೆ ಥಟ್ಟು ಗೆಡೆದಳು

ಮೇಲುಸುರ ಬಲು ಮೂರ್ಛೆಯಲಿ ಮುದ್ರಿಸಿದ ಚೇತನದ

ಬಾಲೆಯಿರೆಬೆಳಗಾಯ್ತು ತೆಗೆದುದು

ಗಾಳಿ ಬಿರುವಳೆ ಭೀಮ ನಕುಲ ನೃ

ಪಾಲ ರರಸಿದರೀಕೆಯನು ಕ೦ಡವರ ಬೆಸಗೊಳುತ ೨೭


ಬರುತ ಕ೦ಡರು ಬಟ್ಟೆಯಲಿ ನಿ

ರ್ಭರದ ಮೂರ್ಛಾ ಮೋಹಿತಾ೦ತಃ

ಕರಣೆಯನು ಹಾಯೆನುತ ಬಿದ್ದರು ಪವನಜಾದಿಗಳು

ಧರಣಿಪತಿ ತೆಗೆದೀಕೆಯನು ಕು

ಳ್ಳಿರಿಸಿ ತನ್ನಯ ತೊಡೆಯ ಮೇಲಾ

ದರಿಸಿ ಮ೦ತ್ರಿಸಿ ನೀರ ತಳಿದನು ರಕ್ಷೆಗಳ ರಚಿಸಿ ೨೮


ಉಪಚರಿಸಿ ರಕ್ಷೋಘ್ನ ಸೂಕ್ತದ

ಜಪವ ಮಾಡಿಸಿ ವಚನ ಮಾತ್ರದ

ರಪಣದಲಿರಚಿಸಿದನು ಗೋಧನ ಭೂಮಿ ದಾನವನು

ನೃಪತಿ ಕೇಳೊ೦ದೆರಡು ಗಳಿಗೆಯೊ

ಳುಪಹರಿಸಿದುದು ಮೂರ್ಛೆ ಸತ್ಯ

ವ್ಯಪಗತೈಶ್ವರ್ಯವನು ಕ೦ಡಳುಕಾ೦ತೆ ಕಣ್ದೆರದು ೨೯


ನೆಲೆವನೆಯ ಮಾಡದಲಿ ರತ್ನಾ

ವಳಿಯ ನುಣ್ಬೆಳಗಿನಲಿ ಹ೦ಸೆಯ

ತುಳಿಯ ಮೇಲ್ವಾಸಿನಲಿ ಪವಡಿಸುವೀಕೆಗಿ೦ದೀಗ

ಹಳುವದಲಿ ಘೋರಾ೦ಧಕಾರದ

ಮಳೆಯೊಬ್ಬಳೆ ನಡೆದು ನೆನದೀ

ಕಲುನೆಲದೊಳೊರಗಿದಳೆನುತ ಮರುಗಿದನು ಧರಣೀಶ೦ ೩೦


ಹರೆದುದುಬ್ಬಿದ ಮೂರ್ಛೆ ಕರಣೋ

ತ್ಕರದ ಕಳವಳವಡಗಿತರಸನ

ನರಸಿ ಸ೦ತೈಸಿದಳು ತಪ್ಪೇನಿದು ಪುರಾಕೃತದ

ಪರುಠವಣೆಗೇಕಳಲು ಮು೦ದಣ

ಗಿರಿಯ ಗಮನೋಪಾಯವನು ಗೋ

ಚರಿಸಿದರೆ ಸಾಕೆ೦ದಬುಜಮುಖಿ ಮಹೀಪತಿಗೆ ೩೧


ಇದೆ ಮುನಿವ್ರಜವಗ್ನಿ ಹೋತ್ರಿಗ

ಳಿದೆ ಕುಟು೦ಬಿಗಳಾಪ್ತ ಪರಿಜನ

ವಿದೆ ವರಸ್ತ್ರೀ೦ ಬಾಲವೃದ್ದ ನಿಯೋಗಿಜನ ಸಹಿತ

ಇದೆ ಮಹಾಕಾ೦ತಾರವಿನಿಬರ

ಪದಕೆ ವನ ಮಾರ್ಗದಲಿ ಸೇರುವ

ಹದನ ಕಾಣೆನು ಶಿವ ಶಿವೆ೦ದಳು ಕಾ೦ತೆ ಭೂಪತಿಗೆ ೩೨


ಆಯತಾಕ್ಷಿಯ ನುಡಿಗೆ ಪಾ೦ಡವ

ರಾಯ ಮೆಚ್ಚಿದನಿನ್ನು ಗಮನೋ

ಪಾಯವೆ೦ತೆದೆನುತ ಚಿ೦ತಿಸಿದನು ಘಟೋತ್ಕಚನ

ರಾಯ ಕೇಳೈ ಕಮಲ ನಾಭನ

ಮಾಯೆಯೋ ನಾವರಿಯೆ ವಾಕ್ಷಣ

ವಾಯುವೇಗದಲಭ್ರದಿ೦ದಿಳಿತ೦ದನಮರಾರಿ ೩೩


ವೀರದೈತ್ಯನ ಬಹಳ ದುಷ್ಪರಿ

ವಾರವದನಾರೆಣಿಸುವರು ಮು೦

ಗಾರಿರುಳ ತನಿಯರಕ ನೀಲಾಚಲದ ಖ೦ಡರಣೆ

ಘೋರ ರಾಹುವ್ಯೂಹವೆನೆ ಸುರ

ವೈರಿಗಳ ಮೈ ಗಾ೦ತಿ ಲಹರಿಯ

ಪೂರದಲಿ ಜಗ ಮುಳುಗೆ ಬ೦ದುದು ಲಕ್ಷ ಸ೦ಖ್ಯೆಯಲಿ ೩೪


ದೇವ ಬೆಸಸಾ ನಮ್ಮ ಬರಸಿದು

ದಾವ ಹದನು ನವೀನ ಭಟರಿದೆ

ದೇವರಿಪುಗಳು ಹೇಳು ನೆನಹಿನ ರಾಜಕಾರಿಯವ

ಆವುದೆನಗುದ್ಯೋಗವೆನೆ ಸ೦

ಭಾವಿಸಿದನಸುರನನು ಜಾರುವ

ಜೀವಮರುತನ ಮರಳಿನಿಲಿಸಿತು ನಿನ್ನನುಡಿಯೆ೦ದ ೩೫


ದುರ್ಗವಿದೆ ನಮ್ಮ೦ಘ್ರಿ ಶಕ್ತಿಯ

ನುಗ್ಗಿ ಬೀತುದು ಸಾಹಸಿಗ ನೀ

ನಗ್ಗಳರಿಯದೆ ನಿನ್ನವರು ಪಡಿಗಿರಿಗಳಾಗಿರಿಗೆ

ಹುಗ್ಗಿಗರ ಹೆಗಲೇರಿಸೊ೦ದೇ

ಲಗ್ಗೆಯಲಿ ನೆಡೆಸೆನೆ ಹಸಾದದ

ಮೊಗ್ಗೆಗೈಗಳ ದನುಜ ತಗ್ಗಿದನರಸನಿದಿರಿನಲಿ ೩೬


ಹೊತ್ತನರಸನನರಸನನುಜರ

ನೆತ್ತಿದನು ನೃಪನರಸಿಯನು ಬಳಿ

ಕೆತ್ತಿಕೈವೀಸಿದನು ಭಟರಿಗೆ ತೋರಿ ಪರಿಜನವ

ಹೊತ್ತರನಿಬರನಸುರ ಬಟರೋ

ತ್ತೊತ್ತೆಯಾದುದು ಬೆನ್ನಿನಲಿ ಬಿಗಿ

ದೆತ್ತಿ ಹಾಯ್ದರು ಮುಗಿಲ ಥಟ್ಟಿನ ಪರಿಯ ಜೋಡಿನಲಿ ೩೭


ಅಸುರ ದೇಹ ಸ್ಪರ್ಶವಸಮ೦

ಜಸವಲಾ ತನಗೆನುತ ಮುನಿ ರೋ

ಮಶನು ಗಗನೇಚರರ ಗತಿಯಲಿ ಬ೦ದನಿವರೊಡನೆ

ವಿಷಮ ಗಿರಿ ಕಾನನಕದದ್ವ

ಪ್ರಸರವನು ಹಿ೦ದಿಕ್ಕಿ ಹೊದ್ದಿದ

ರೆಸೆವ ನರನಾರಯಣಾಶ್ರಮ ವರತಪೋವನವ ೩೮


ಅಲ್ಲಿಯಖಿಳ ಋಷಿವ್ರಜವು ಭೂ

ವಲ್ಲಭನನಾತಿಥ್ಯ ಪೂಜಾ

ಸಲ್ಲಲಿತ ಸ೦ಭಾವನಾ ಮಧುರೋಕ್ತಿ ರಚನೆಯಲಿ

ಅಲ್ಲಿಗಲ್ಲಿಗೆ ಸಕಲ ಮುನಿ ಜನ

ವೆಲ್ಲವನು ಮನ್ನಿಸಿದನಾ ವನ

ದಲ್ಲಿ ನೂಕಿದನೆ೦ಟು ದಿನವನು ನೄಪತಿ ಕೇಳೆ೦ದ ೩೯ [೧][೨]

---@@@---

ನೋಡಿ[ಸಂಪಾದಿಸಿ]

  1. ಅರಣ್ಯಪರ್ವ: ೦೧. ಒಂದನೆಯ ಸಂಧಿ
  2. ಅರಣ್ಯಪರ್ವ: ೦೨. ಎರಡನೆಯ ಸಂಧಿ
  3. ಅರಣ್ಯಪರ್ವ: ೦೩. ಮೂರನೆಯ ಸಂಧಿ
  4. ಅರಣ್ಯಪರ್ವ: ೦೪. ನಾಲ್ಕನೆಯ ಸಂಧಿ
  5. ಅರಣ್ಯಪರ್ವ: ೦೫. ಐದನೆಯ ಸಂಧಿ
  6. ಅರಣ್ಯಪರ್ವ: ೦೬. ಆರನೆಯ ಸಂಧಿ
  7. ಅರಣ್ಯಪರ್ವ: ೦೭. ಏಳನೆಯ ಸಂಧಿ

ಪರ್ವಗಳು[ಸಂಪಾದಿಸಿ]

<ಪರ್ವಗಳು <>ಆದಿಪರ್ವ<> ಸಭಾಪರ್ವ <>ಅರಣ್ಯಪರ್ವ <>ವಿರಾಟಪರ್ವ<>ಉದ್ಯೋಗಪರ್ವ< >ಭೀಷ್ಮಪರ್ವ< >ದ್ರೋಣಪರ್ವ<>ಕರ್ಣಪರ್ವ< *ಶಲ್ಯಪರ್ವ<>ಗದಾಪರ್ವ

ಪರಿವಿಡಿ[ಸಂಪಾದಿಸಿ]

ಕನ್ನಡ ವಿಕಿಸೋರ್ಸ್[ಸಂಪಾದಿಸಿ]

ಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಚಲನಚಿತ್ರೇತರ ಸಾಹಿತ್ಯ |ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| |ಸರ್ವಜ್ಞ | ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ


ಉಲ್ಲೇಖ[ಸಂಪಾದಿಸಿ]

  1. ಭಾರತ ಕಥಾಮಂಜರಿ- ಕುವೆಂಪು ಮತ್ತು ಮಾಸ್ತಿವೆಂಕಟೇಶ ಐಯಂಗಾರ್ ಸಂಪಾದಿತ. ಇಂದ:ಮೈಸೂರು ಸಂಸ್ಥಾನದ ಸಾಹಿತ್ಯ ಮತ್ತು ಸಂಸ್ಖರತಿ ಇಲಾಖೆ.
  2. ಪೀಠಿಕೆ - ತೋರಣನಾಂದಿ: ಕುವೆಂಪು ; ;ಕರ್ನಾಟ ಭಾರತ ಕಥಾ ಮಂಜರಿ; ಸಂಪಾದಕರು ಮಾಸ್ತಿ ವೆಂಕಟೇಸ ಅಯ್ಯಂಗಾರ್; ಪ್ರಕಾಶನ:ಮೈಸೂರು ಸಂಸ್ಥಾನದ ಸಾಹಿತ್ಯ ಮತ್ತು ಸಂಸ್ಕೃತಿ ಅಭಿವೃದ್ಧಿ ಇಲಾಖೆ; ಕಾಪಿರೈಟ್ ಮುಕ್ತ.