ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಜೋಗುಳ

ವಿಕಿಸೋರ್ಸ್ದಿಂದ

ಜೋಗುಳ - ಜೋಗುಳದ ಹಾಡುಗಳು ಜನಪದ ಸಾಹಿತ್ಯದ ಬಹು ಮುಖ್ಯ ಭಾಗವಾಗಿದೆ. ತಾಯಿ ಮಗುವನ್ನು ತೊಟ್ಟಿಲಲ್ಲೊ ಜೋಳಿಗೆಯಲ್ಲೊ ಮಲಗಿಸಿ ತೂಗುವಾಗ ಹಾಡುವ ಹಾಡುಗಳಿವು. ಇವನ್ನು ಲಾಲಿ ಪದಗಳು ಎನ್ನುವುದೂ ಉಂಟು. ಇವುಗಳ ಛಂದಸ್ಸು ಸಾಮಾನ್ಯವಾಗಿ ತ್ರಿಪದಿ. ರಾಗ, ಹಳ್ಳಿಯ ಹೆಣ್ಣುಮಕ್ಕಳಿಗೇ ಮೀಸಲಾದ್ದು. ವಸ್ತು ಮಗುವಿನ ಅಂದಚಂದ, ಸಂಸಾರದ ಸುಖ, ಮಕ್ಕಳ ಪ್ರಾಮುಖ್ಯಗಳನ್ನು ಕುರಿತದ್ದು. ಸಂಸಾರದ ಅತಿ ಮಧುರವಾದ ಅನುಭವಗಳನ್ನಿಲ್ಲಿ ತಾಯಿಯಾದವಳು ನೆನೆದು ಸುಖಿಸುತ್ತಾಳೆ. ಮಗುವಾದರೋ ತಾಯಿಯ ಇಂಪಾದ ಕಂಠಕ್ಕೆ ಮಾರುಹೋಗಿ, ಅಳುವನ್ನು ನಿಲ್ಲಿಸಿ, ಹಾಲು ಕುಡಿಯುವುದನ್ನೂ ಮರೆತು ನಿದ್ರಿಸುತ್ತದೆ. ಕೆಲವು ಉದಾಹರಣೆಗಳನ್ನಿಲ್ಲಿ ಕೊಟ್ಟಿದೆ :

<poem>

ಜೋಗುಳ ಹಾಡಿದರೆ ಆಗಲೆ ಕೇಳ್ಯಾನು ಹಾಲ ಹಂಬಲವ ಮರೆತಾನು | ಕಂದಯ್ಯ ಜೋಗುಳದಾಗೆ ಅತಿಮುದ್ದು || ತೋಳುದ್ದ ತಲೆದಿಂಬು ಮಾರುದ್ದ ಹಾಸಿಗೆ ಮಾಣಿಕದಂಥ ಮಗ ಮುಂದೆ | ಮಲಗಿದರೆ ಮಾರಾಯ್ರ ಗೊಡವೆ ನನಗೇನ || ಲಾಲಿಯ ಹಾಡಿದರೆ ಲಾಲಿಸಿ ಕೇಳ್ಯಾನು ತಾಯ ಹಂಬಲವ ಮರೆತಾನು | ಕಂದಯ್ಯ ತೋಳ ಬೇಡ್ಯಾನ ತಲೆದಿಂಬ || ಜೋ ಜೋ ಮುದ್ದಿನ ಪುಟಾಣಿÂ ಕಂದ | ಜೋ ಜೋ ಲಲ್ಲೆಯ ಮಾತಿನ ಅಂದ | ಜೋ ಜೋ ಗೆಜ್ಜೆಯ ಝಣಝಣ ಚೆಂದ | ಜೋ ಜೋ ತಾರಾ ಕುವರಿ ಆನಂದಾ || ಜೋ ಜೋ ||

(ಡಿ.ಕೆ.ಆರ್.)

ತೆಲುಗಿನಲ್ಲಿ ಈ ಹಾಡುಗಳನ್ನು ಜೋಲಪಾಟಲು ಎನ್ನುತ್ತಾರೆ. ನೇದು ನೂರಿ ಗಂಗಾಧರಂ. ಬಿ. ರಾಮರಾಜು ಮುಂತಾದವರು ತೆಲುಗಿನ ಅನೇಕ ಜೋಲಗಳನ್ನು ಸಂಗ್ರಹಿಸಿದ್ದಾರೆ. ಟೀಕುಮಳ್ಳ ಕಾಮೇಶ್ವರರಾವು; ಅವರು 80 ಲಾಲಿ ಮತ್ತು ಜೋಲಗಳನ್ನು ಸಂಗ್ರಹ ಮಾಡಿ ಪಾತಪಾಟಲು ಎಂಬ ತಮ್ಮ ಪುಸ್ತಕದಲ್ಲಿ ಪ್ರಕಟಿಸಿದ್ದಾರೆ. ಎನ್. ಗಂಗಾಧರಂ ಅವರು ನೆಲಯೇದು ಎಂಬ ತಮ್ಮ ಸಂಗ್ರಹದಲ್ಲಿ 25 ಹಾಡುಗಳನ್ನು ಕೊಟ್ಟಿರುತ್ತಾರೆ.

ಜೋಗುಳದ ಹಾಡುಗಳು ಯಾವ ಒಂದು ಜನದ ವೈಶಿಷ್ಟ್ಯವೂ ಅಲ್ಲ. ಎಲ್ಲೆಲ್ಲೂ ಕಂಡುಬರುವ ಗೀತಪ್ರಕಾರವಿದು. ಇಂಗ್ಲಿಷಿನಲ್ಲಿ ಈ ಹಾಡುಗಳನ್ನು ಲಲಬೈ ಎನ್ನುತ್ತಾರೆ. (ನೋಡಿ- ಜನಪದ-ಸಾಹಿತ್ಯ) (ಆರ್.ವಿ.ಎಸ್.ಎಸ್.)