ಪುಟ:Abhaya.pdf/೯೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೯೦

ಅಭಯ

"ಕೂತ್ಕೋ ಅಂತ ಹೇಳ್ಬಾರ್ದಾಗಿತ್ತೇನೆ?"

"ಹೇಳ್ದೆ. ಆದ್ರೂ ಬರ್ಲೇ ಇಲ್ಲ."

"ಒಳ್ಳೇ ಸಂಕೋಚ ಇದು."

ನಾರಾಯಣ ಮೂರ್ತಿ ಮತ್ತು ಸಂಕೋಚಪ್ರವೃತ್ತಿ! ತುಂಗಮ್ಮನಿಗೆ ನಗು ಬಂತು. ಪ್ರಯಾಸಪಟ್ಟು ಅದನ್ನು ತಡೆದಳಾಕೆ. 'ವಾವ!ಅಣ್ಣಂಗೆ ಏನೂ ತಿಳೀದು'ಎಂದುಕೊಂಡಳು.

ಮರುದಿನವೇನೂ ಆತ ಬರಲಿಲ್ಲ. ಮೇಲಿನ ಭಾನುವಾರ-ಎಂದಿದ್ದನಲ್ಲವೆ? ತಾವಾಗಿಯೇ ಹೋಗಿ ಕರೆದುಕೊಂಡುಬರಬೇಕು, ಎಂದು ತಂದೆ ಯೋಚಿಸಿದರು ಆ ಯೋಚನೆಯಲ್ಲೆ ಎರಡುದಿನ ಕಳೆದುವು.

ಇನ್ನೇನು ಹೊರಡಲೇ ಬೇಕು ಎನ್ನುತಿದ್ದಾಗಲೆ, ಭಾನುವಾರಕ್ಕೆ ಮುಂಚೆಯೆ, ಒಂದು ಸಂಜೆ ನಾರಾಯಣಮೂರ್ತಿ ಬಂದ.

ಆತ ಮನೆಗೆ ಬರಲು ಆರಂಭಿಸಿದ್ದು ಹಾಗೆ.

ಮಗಳಿಗೆ ವರ ಹುಡುಕಿ ನಿರಾಶರಾಗಿದ್ದ ತಂದೆ ಈ ಬೇಟಿಯನ್ನು ಬಿಡಬಾರದೆಂದು ಸರ್ವಪ್ರಯತ್ನ ಮಾಡಿದರು.

"ಹೋಟಿಲಲ್ಲಿ ಯಾಕೆ ಊಟ ಮಾಡ್ತೀಯಾ? ನಮ್ಮನೇಲೆ ಇದ್ಬಿಡು," ಎಂದರು.

ನಾರಾಯಣಮೂರ್ತಿ ಒಪ್ಪಲಿಲ್ಲ. ವಾರಕ್ಕೊಮ್ಮೆ ಕಾಫಿಗೆ, ಎಂದಾದಮತ್ತೊಮ್ಮೆ ಊಟಕ್ಕೆ, ಬಂದು ಹೋಗುತಿದ್ದ ಅಷ್ಟೆ.

ಮತ್ತೊಮ್ಮೆ ನಾರಾಯಣಮೂರ್ತಿಯ ಮನೆಯವರಿಗ ಬರೆದು ಕೇಳೋಣವೆನ್ನಿಸಿತು ತುಂಗಮ್ಮನ ತಂದೆಗೆ. ಆದರೆ ಮರುಕ್ಷಣವೆ ವಿವೇಕ ಬುದ್ಧಿ ಹೇಳಿತು:

"ಹುಚ್ಚಪ್ಪ! ಸುಮ್ನಿರು. ಎಲ್ಲವೂ ಸರಿಹೋಗುತ್ತೆ...."

ಆಗೊಮ್ಮೆ ಈಗೊಮ್ಮೆ, ಮನೆಯಲ್ಲಿ ತುಂಗಮ್ಮನೊಬ್ಬಳೇ ಇದ್ದಹೊತ್ತಿನಲ್ಲೂ,ನಾರಾಯಣಮೂರ್ತಿ ಬಂದುಹೋದ. ಹಲ್ಲು ಮುರಿದು ಕೈಗೆ ಕೊಡಲಿಲ್ಲ ತುಂಗಮ್ಮ. ಬದಲು, ತಾನೇ ಹಲ್ಲು ಕಿಸಿದು ನಕ್ಕು, ಮುದ್ದಾದ ತನ್ನ ಹಲ್ಲುಗಳನ್ನು ಆತನಿಗೆ ತೋರಿಸಿ, ಆಕೆ ಸ್ವಾಗತ ಬಯಸಿದಳು.