ಪುಟ:Mysore-University-Encyclopaedia-Vol-1-Part-1.pdf/೧೫೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವಿಧವಾದ ಸ್ಪರ್ಧೆಗಳು ಹಾಗೂ ವಿನೋದ ಕ್ರೀಡೆಗಳು ಜಾರಿಗೆ ಬಂದುವು. ಪ್ರಾಚೀನ ದೇವಾಲಯಗಳು ಜೀರ್ಣೋದ್ಧಾರಗೊಂಡುವು. ರೋಮನ್ ಸಾಮ್ರಾಜ್ಯ ಹೆಚ್ಚಾಗಿ ವ್ಯಾಪಿಸಿ ದಂತೆ ಅನೇಕ ಮತಗಳು ರೋಮ್‍ನಲ್ಲಿ ಆಶ್ರಯಪಡೆದುವು. ರೋಮನ್ನರು ಗ್ರೀಕ್, ಈಜಿಪ್ಟ್ ಮತ್ತು ಯಹೂದಿ ಮುಂತಾದ ದೇವತೆಗಳನ್ನು ಆರಾಧಿಸತೊಡಗಿದರು. ಈ ಕಾಲದಲ್ಲಿ ಜನರಲ್ಲಿ ನೈತಿಕಜಾಗೃತಿ ಮೂಡಿತ್ತು; ರೋಮ್ ನಗರ ಸುಂದರವಾದ ರಸ್ತೆಗಳಿಂದಲೂ ಉದ್ಯಾನಗಳಿಂದಲೂ ಮನೋಹರವಾದ ದೇವಾಲಯಗಳಿಂದಲೂ ಭವ್ಯ ಸಾರ್ವಜನಿಕ ಭವನಗಳಿಂದಲೂ ಕಂಗೊಳಿಸಿ ಸರ್ವತೋಮುಖವಾಗಿ ಬೆಳೆಯಿತು. ರೋಮನ್ ಸಾಮ್ರಾಜ್ಯದ ಕ್ಷೇಮ ಹಾಗೂ ಒಳಿತೇ ಆಕ್ಟೇವಿಯಸ್ಸನ ಗುರಿ. ಎಲ್ಲ ವರ್ಗಗಳ ಪ್ರೀತಿ ವಿಶ್ವಾಸವನ್ನು ಆತ ಗಳಿಸಿದ್ದ. ಅವನನ್ನು ರೋಮ್ ಸಾಮ್ರಾಜ್ಯದ ರಕ್ಷಕನೆಂದೂ ಪ್ರತ್ಯಕ್ಷ ದೇವತೆಯೆಂದೂ ಪ್ರಜೆಗಳು ಪೂಜಿಸಲಾರಂಭಿಸಿದರು. ವಿಶಾಲಸಾಮ್ರಾಜ್ಯದಲ್ಲಿದ್ದ ಭಿನ್ನ ಭಿನ್ನ ಪಂಗಡ ಮತ್ತು ಮತೀಯರಿಗೆ ಸಮಾನತೆಯ ಆಧಾರದ ಮೇಲೆ ನ್ಯಾಯ ಮತ್ತು ರಕ್ಷಣೆ ದೊರೆಯುವಂತಾಯಿತು. ರೋಮನ್ ಸಾಮ್ರಾಜ್ಯದಲ್ಲೆಲ್ಲಾ ಶಾಂತಿ ನೆಲೆಸಿತು. ಈತನ ಆಳ್ವಿಕೆಯನ್ನು ಅಗಸ್ಟಸ್‍ಯುಗವೆಂದೂ ರೋಮ್‍ಸಾಮ್ರಾಜ್ಯದ ಸುವರ್ಣಯುಗವೆಂದೂ ಕರೆದಿದ್ದಾರೆ. ಅಗಸ್ಟಸ್ ಚಕ್ರವರ್ತಿ ಸುಪ್ರಸಿದ್ಧ ರಾಜಕೀಯ ನಿಪುಣನೂ ಸುಧಾರಕನೂ ಆಗಿದ್ದುದಲ್ಲದೆ ಕಲೆಯನ್ನೂ ಸಾಹಿತ್ಯವನ್ನೂ ವಿಶೇಷವಾಗಿ ಪ್ರೋತ್ಸಾಹಿಸುವವನೂ ಆಗಿದ್ದ. ಈತನ ಕಾಲದಲ್ಲಿ ಲ್ಯಾಟಿನ್ ಭಾಷೆ ಅತ್ಯಂತ ಉಚ್ಛ್ರಾಯಸ್ಥಿತಿಯನ್ನು ಮುಟ್ಟಿತು. ಆ ಕಾಲದ ಮುಖ್ಯ ಕವಿಗಳಲ್ಲಿ ಈನಿಯಡ್ ಮಹಾಕಾವ್ಯವನ್ನು ರಚಿಸಿದ ವರ್ಜಿಲ್ ಅತ್ಯಂತ ಪ್ರಸಿದ್ಧ. ಓವಿಡ್, ಹೊರೇಸ್ ಮೊದಲಾದವರೂ ಆ ಕಾಲದವರೇ. ಅದೇ ಕಾಲದಲ್ಲಿ ಅನೇಕ ವಿದ್ವಾಂಸರು ವ್ಯಾಕರಣ, ವೈದ್ಯ, ವ್ಯವಸಾಯ, ಚರಿತ್ರೆ ಇತ್ಯಾದಿ ಗ್ರಂಥಗಳನ್ನು ರಚಿಸಿದರು. 44 ವರ್ಷಗಳ ಕಾಲ ಸಾಮ್ರಾಜ್ಯದ ಹಿತಚಿಂತನೆಗಾಗಿ ದುಡಿದು, ಚಕ್ರಾಧಿಪತ್ಯವನ್ನು ವಿಸ್ತರಿಸಿ, ಸುಭದ್ರವಾದ ಆಡಳಿತವನ್ನೂ ಶಾಂತಿಯನ್ನೂ ಸ್ಥಾಪಿಸಿ ಕಲೆಯನ್ನು ವಿಶೇಷವಾಗಿ ಪ್ರೋತ್ಸಾಹಿಸಿ ಅಗಸ್ಟಸ್ ಪ್ರಜೆಗಳಿಂದ ಪ್ರತ್ಯಕ್ಷದೇವನೆಂಬ ಹೆಸರನ್ನು ಪಡೆದ. (ಜಿ.ಆರ್.ಆರ್.) ಅಗಸ್ತ್ಯ : ವೇದೋಕ್ತನಾದ ಈ ಬ್ರಹ್ಮರ್ಷಿಗೆ ಕುಂಭಸಂಭವ, ಕಳಶಯೋನಿಜ ಎಂಬ ಹೆಸರುಗಳೂ ಉಂಟು. ತಂದೆ ಪುಲಸ್ತ್ಯ. ತಾಯಿ ಕರ್ದಮಬ್ರಹ್ಮನ ಮಗಳಾದ ಹವಿರ್ಭುಕ್. ಪಿತೃಗಳ ಕೋರಿಕೆಯ ಮೇಲೆ ಸಂತಾನಪ್ರಾಪ್ತಿಗಾಗಿ ಲೋಪಾಮುದ್ರೆ ಎಂಬ ಕನ್ನಿಕೆಯನ್ನು ಸೃಜಿಸಿ ಮದುವೆಯಾದ. ಇವನ ಮಗ ದೃಢಸ್ಯು ಅಥವಾ ಇಧ್ಮವಾಹ. ಇಲ್ವಲ ವಾತಾಪಿ ಎಂಬ ದೈತ್ಯರನ್ನು ಕೊಂದದ್ದು, ಇಂದ್ರಪದವಿ ದೊರಕಿತೆಂಬ ಕಾರಣದಿಂದ ಮತಾಂಧನಾಗಿ ಋಷಿಗಳಿಂದ ತನ್ನ ರಥವನ್ನೆಳೆಸಿದ ನಹುಷನ ಪದಚ್ಯುತಿ, ವಿಂಧ್ಯಪರ್ವತ ಮೇರುವಿನಷ್ಟಾಗಬೇಕೆಂಬ ಉದ್ದೇಶದಿಂದ ಬೆಳೆಯುತ್ತಿದ್ದುದನ್ನು ತಡೆಗಟ್ಟಿದ್ದು, ಸಮುದ್ರಗರ್ಭ ದಲ್ಲಿ ಅಡಗಿಕೊಂಡಿದ್ದ ಕಾಲೇಯರೆಂಬ ರಾಕ್ಷಸರನ್ನು ಹೊರಗೆಡಹುವುದಕ್ಕಾಗಿ ಸಮುದ್ರವನ್ನೇ ಆಪೋಶನ ಮಾಡಿದ್ದು-ಇವೆಲ್ಲ ಅಗಸ್ತ್ಯನಿಂದಾದ ಲೋಕರಕ್ಷಣಾಕಾರ್ಯಗಳು, ತಮಿಳು ನಾಡಿನ ಪೊದಿಯಲ್ ಬೆಟ್ಟದಲ್ಲಿ ನೆಲೆಸಿ ತಮಿಳುಭಾಷೆಗೆ ಜನ್ಮವಿತ್ತನೆಂದೂ ಅಗತ್ತಿಯಂ ಎಂಬ ಪ್ರಥಮ ತಮಿಳುವ್ಯಾಕರಣವನ್ನು ಬರೆದನೆಂದೂ ತಮಿಳು ಪ್ರಥಮ ಸಾಹಿತ್ಯ ಸಂಘದ ಅಧ್ಯಕ್ಷನಾಗಿದ್ದನೆಂದೂ ತಮಿಳು ಸಾಹಿತ್ಯದಲ್ಲಿ ವರ್ಣಿತವಾಗಿದೆ. ಮರಣಾನಂತರ ನಕ್ಷತ್ರಪದವಿ ಇವನಿಗೆ ದೊರಕಿತು. ಮಹಾವ್ಯಾಧ (ಒರೈಯನ್) ನಕ್ಷತ್ರಪುಂಜದ ಪೂರ್ವ-ದಕ್ಷಿಣಕ್ಕೆ ಇರುವ ಲುಬ್ಧಕದ (ಸಿರಿಯಸ್) ದಕ್ಷಿಣದಲ್ಲಿರುವ ಸಮಾನಪ್ರಕಾಶದ ನಕ್ಷತ್ರವೇ ಅಗಸ್ತ್ಯ (ಕ್ಯಾನೊಪಸ್). ಇದು ಕರಿನಾ ಪುಂಜದ ಪ್ರಥಮ ನಕ್ಷತ್ರ. ಭೂಮಿಯಿಂದ ಇದರ ದೂರ 650 ಜ್ಯೋತಿರ್ವರ್ಷಗಳು. ಇದರ ಪ್ರಕಾಶ ಸೂರ್ಯಪ್ರಕಾಶದ ಸುಮಾರು 1,00,000ದಷ್ಟು. ಕಾಣುವ ಅತಿ ಪ್ರಕಾಶಮಾನ ನಕ್ಷತ್ರಗಳಲ್ಲಿ ಇದು ಎರಡನೆಯದು. (*) ಅಗಾಥಿಸ್ : ಕೋನಿಫರೀ ಗುಂಪಿನ ಪೈನೇಸೀ ಕುಟುಂಬಕ್ಕೆ ಸೇರಿದ ನಿತ್ಯ ಹರಿದ್ವರ್ಣದ ವೃಕ್ಷ. ಡಾಮರ್‍ಪೈನ್ ಇದರ ಸಾಮಾನ್ಯ ಹೆಸರು. ಪ್ರಪಂಚದ ಶೀತಹವೆಯುಳ್ಳ ಪ್ರದೇಶಗಳಲ್ಲೆಲ್ಲ ಚೆನ್ನಾಗಿ ಬೆಳೆಯುತ್ತದೆ. ಎತ್ತರ 30-60ಮೀ. ಹುಲುಸಾಗಿ ಬೆಳೆದ ಮರದ ಬುಡ ಅಗಾಧವಾಗಿ ಹಿಗ್ಗಿ 6ಮೀ.ಗೂ ಹೆಚ್ಚು ಸುತ್ತಳತೆಯನ್ನು ಪಡೆದಿರುವ ನಿದರ್ಶನಗಳಿವೆ. ಅದರ ಎಲೆಗಳು ಸೂಜಿಯಾಕಾರದಲ್ಲಿ ಇರುವುದಿಲ್ಲ. ಇದೇ ಈ ಗಿಡಕ್ಕೂ ಇತರ ಶಂಕುವೃಕ್ಷಗಳಿಗೂ ಇರುವ ವ್ಯತ್ಯಾಸ. ಅಭಿಮುಖ ಇಲ್ಲವೆ ಪರ್ಯಾಯ ಜೋಡಣೆ ಹೊಂದಿರುವ ಇದರ ಎಲೆಗಳು ಚಪ್ಪಟೆಯಾಗಿ, ಅಗಲವಾಗಿ ಒರಟಾಗಿರುತ್ತದೆ. ಎಲೆಗಳಿಗೆ ಸಮಾನಾಂತರ ನಾಳಗಳಿರುತ್ತವೆ. ಇರುವ 20 ಪ್ರಭೇದಗಳಲ್ಲಿ ಅಗಾಥಿಸ್ ಆಸ್ಟ್ರಾಲಿಸ್, ಅಗಾಥಿಸ್ ಬ್ರೌನಿಯೈ ಮತ್ತು ಅಗಾಥಿಸ್ ಅಲ್ಬ ಎಂಬ ಮೂರು ಮುಖ್ಯವಾದುವು. ಅಗಾಥಿಸ್ ಏಕಲಿಂಗ ಇಲ್ಲವೇ ದ್ವಿಲಿಂಗಸಸ್ಯ: ಅಂತೆಯೇ ಗಂಡು ಮತ್ತು ಹೆಣ್ಣು ಶಂಕುಗಳು (ಕೋನ್ಸ್) ಬೇರೆ ಬೇರೆ ಇಲ್ಲವೇ ಒಂದೇ ವೃಕ್ಷದಲ್ಲಿ ಬಿಡಬಹುದು. ಶಂಕುಗಳು ಸಾಮಾನ್ಯ ವಾಗಿ ಪಕ್ಕದ ಸಣ್ಣ ಟೊಂಗೆಗಳಲ್ಲಿ ಮಾತ್ರ ಬಿಡುತ್ತವೆ. ಗಂಡು ಶಂಕುಗಳು ದುಂಡಗೆ 5-8ಸೆಂ.ಮೀ ಉದ್ದ ವಾಗಿರುತ್ತವೆ. ಹೆಣ್ಣು ಶಂಕುಗಳು ದುಂಡಗೆ ದಪ್ಪವಾಗಿರುತ್ತವೆ. ಮೆರುಗೆಣ್ಣೆಗಳ ತಯಾರಿಕೆಯಲ್ಲಿ ಉಪಯೋಗಿಸುವ ಕೌರಿ ಅಂಟು ಅಗಾಥಿಸ್ ಆಸ್ಟ್ರಾಲಿಸ್ ಪ್ರಭೇದದ ಪಳೆಯುಳಿಕೆಗಳಿಂದ ದೊರೆಯುವ ಪದಾರ್ಥ. ಪ್ರಾಚೀನಕಾಲದಲ್ಲಿ ಈ ಮರಗಳ ಒಂದು ದೊಡ್ಡ ಅರಣ್ಯವೇ ನ್ಯೂಜ಼ಿಲೆಂಡಿನಲ್ಲಿತ್ತು. ಆದ್ದರಿಂದಲೇ ಇಂದೂ ಅಲ್ಲಿ ಕೇವಲ 2ಮೀ ಗಳಷ್ಟು ಭೂಮಿಯನ್ನು ಅಗೆದರೆ ಸಾಕು, ಹೇರಳವಾಗಿ ಈ ಕೌರಿ ಅಂಟು ಸಿಕ್ಕುತ್ತದೆ. ತಂಪು ಹವೆಯುಳ್ಳ ಪ್ರದೇಶಗಳ ತೋಟಗಳಲ್ಲಿ ಒಂದು ವಿಶೇಷ ಆಕರ್ಷಣೆಯಾಗಿ ಈ ಮರವನ್ನು ಬೆಳೆಸುವರು. (ಎಸ್.ಎನ್.ಆರ್.) ಅಗಾರ್ (ಅಗಾರ್-ಅಗಾರ್) : ಲೋಳೆಯಂತೆ ಜಿಗುಟಾದ ಜೆಲಟಿನ್ನಿನಂಥ ರಾಸಾಯನಿಕ ವಸ್ತು. ಆಲ್ಗೆ ಗುಂಪಿಗೆ ಸೇರಿದ ಜೆಲಿಡಿಯಂ ಮತ್ತು ಪ್ರಾಸಿಲೇರಿಯ, ಅನ್‍ಫೆಟಿಯ ಮತ್ತು ಟೆರೊಕ್ಲಾಡಿಯ ಎಂಬ ಕೆಂಪುಪಾಚಿ ಸಸ್ಯಗಳಿಂದ ತಯಾರಿಸುತ್ತಾರೆ. ವಾಡಿಕೆಯಲ್ಲಿ ಇದಕ್ಕೆ ಚೈನ ಗ್ರಾಸ್ ಎಂದು ಕರೆಯುತ್ತಾರೆ. ಸಮುದ್ರದ ಜೊಂಡುಗಳೆನಿಸುವ ಈ ಸಸ್ಯಗಳನ್ನು ಮೊದಲು ಚೆನ್ನಾಗಿ ಕುದಿಸಿ ಹೊರಬರುವ ಮೆತುಪಾಕದಂತಿರುವ ವಸ್ತುವನ್ನು ವಿಶೇಷ ರೀತಿಯಲ್ಲಿ ಒಣಗಿಸಿ ಕಡ್ಡಿಗಳ ಅಥವಾ ಸಣ್ಣ ಸಣ್ಣ ಇಟ್ಟಿಗೆಗಳ ರೂಪದಲ್ಲಿ ಡಬ್ಬಗಳಲ್ಲಿ ಶೇಖರಿಸುತ್ತಾರೆ. ಈ ವಸ್ತು ತಣ್ಣೀರಿನಲ್ಲಿ ಕರಗುವುದಿಲ್ಲ. ಆದರೆ ಬಿಸಿನೀರಿನಲ್ಲಿ ಕರಗಿ ಮತ್ತೆ ಆರಿದಾಗ ತನ್ನ ತೂಕದ 20ರಷ್ಟು ನೀರನ್ನು ಹೀರಿಕೊಂಡು ಘನೀಭೂತವಾಗಿ ಅಸ್ಫಟಿಕದ್ರಾವಣ ಅಥವಾ ಜೆಲ್ ಆಗುವ ಸಾಮಥ್ರ್ಯವನ್ನು ಹೊಂದಿದೆ. ಈ ಕಾರಣದಿಂದಾಗಿ ಇದಕ್ಕೆ ಅನೇಕ ಪೋಷಕ ಆಹಾರಪದಾರ್ಥಗಳನ್ನು ಸೇರಿಸಿ ಈ ವಸ್ತುವಿನಲ್ಲಿ ಬ್ಯಾಕ್ಟೀರಿಯಗಳ (ಏಕಾಣುಜೀವಿಗಳ) ತಳಿಯೆಬ್ಬಿಕೆಯ ಅಥವಾ ಜೀವಾಣುವರ್ಧನದ ಮಧ್ಯವರ್ತಿಯಾಗಿ ಇದನ್ನು ಬಳಸಲಾಗುತ್ತಿದೆ. ಶೇ.1ರ ಅಗಾರ್‍ದ್ರಾವಣ ಸು. 104º ಫ್ಯಾ. ಶಾಖದಲ್ಲಿ ಗಟ್ಟಿಯಾಗುವುದಾದರೂ ಮೊದಲೇ ಗಟ್ಟಿಯಾಗುವ ಅದರ ಜೆಲ್ ರೂಪ ಮಾತ್ರ 203º ಫ್ಯಾ. ಶಾಖವನ್ನು ಮುಟ್ಟುವ ತನಕ ಕರಗುವುದಿಲ್ಲ. ಜಡತ್ವಗುಣಕ್ಕೆ (ಹಿಸ್ಟೆರಿಸಿಸ್) ಇದು ಒಳ್ಳೆಯ ಉದಾಹರಣೆ. ಹಲ್ವ ಮುಂತಾದ ಖಾದ್ಯ ಪದಾರ್ಥಗಳನ್ನು ತಯಾರಿಸುವಾಗ ಇದನ್ನು ಉಪಯೋಗಿಸುತ್ತಾರಾದರೂ ಸ್ವತಃ ಇದರಲ್ಲಿ ಯಾವ ಆಹಾರದ ಗುಣವೂ ಇಲ್ಲ. ಔಷಧ ಮತ್ತು ಅಂಗರಾಗ ವಸ್ತುಗಳ ತಯಾರಿಕೆಯಲ್ಲೂ ಇದನ್ನು ಉಪಯೋಗಿಸುತ್ತಾರೆ. ಇವಲ್ಲದೆ ಮಾಂಸವನ್ನು ಡಬ್ಬಿಯಲ್ಲಿ ತುಂಬಲೂ ಮೃದುವಿರೇಚಕದ ತಯಾರಿಕೆಗಳಲ್ಲೂ ಹಲ್ಲಿನ ಅಚ್ಚು ತೆಗೆಯುವ ಮೂಲವಸ್ತುವಾಗಿಯೂ ತಂತಿಯನ್ನು ಎಳೆಯುವ ಕಾರ್ಯದಲ್ಲಿ ಮೃದುಚಾಲನಸಹಾಯಕ ವಸ್ತುವಾಗಿಯೂ ಇದನ್ನು ಬಳಸಲಾಗುತ್ತದೆ. ರಾಸಾಯನಿಕವಾಗಿ ಇದು ಕಾರ್ಬೊಹೈಡ್ರೇಟ್‍ನಲ್ಲಿನ ಪಾಲಿಸ್ಯಾಕರೈಡ್ ಗುಂಪಿಗೆ ಸೇರಿದ ವಸ್ತು. ಗ್ಯಾಲಾಕ್ಟೋಸ್ ಎಂಬ ಸಕ್ಕರೆಯ ಅಣುಗಳು ಮತ್ತು ಅಲ್ಲಲ್ಲೇ ಚದುರಿದ ಸಲ್ಫ್ಯೂರಿಕ್ ಆಮ್ಲದ ಅಣುಗಳು (53 ಗ್ಯಾಲಾಕ್ಟೋಸ್‍ಗೆ ಒಂದು ಸಲ್ಫ್ಯೂರಿಕ್ ಆಮ್ಲದ ಅಣು-ಈ ಅನುಪಾತದಲ್ಲಿದೆ ಒಂದಕ್ಕೊಂದು ಸೇರಿ ಇದರ ಅಣುವಿನ ರಚನೆಯಾಗಿದೆ. ಇದರ ಜೆಲ್ ರೂಪದಲ್ಲಿ ಋಣವಿದ್ಯುದಂಶವನ್ನು ಹೊತ್ತಿರುವ ಸಣ್ಣ ಸಣ್ಣ ಕಣಗಳಿರುತ್ತವೆ. ಜೆಲ್ ರೂಪದಲ್ಲಿರುವ ಇತರ ವಸ್ತುಗಳಂತೆ ಇದೂ ಸಹ ಕಣವನ್ನು ಒಗ್ಗೂಡಿಸುವ (ಸೈನೆರಿಸೆಸ್) ಗುಣವನ್ನು ಪ್ರದರ್ಶಿಸುತ್ತದೆ. ರಾಸಾಯನಿಕವಾಗಿ ಹೇಳುವುದಾದರೆ ಇದು ಗ್ಯಾಲಾಕ್ಟಾನಿನ ಸಲ್ಫ್ಯೂರಿಕ್ ಎಸ್ಟರ್. ಸ್ವಾಭಾವಿಕವಾಗಿ, ಅಗಾರ್ ಜೀವಿ ಸಸಿಗಳ ಜೀವಕಣದ