ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಗಾರ್ಬೋ, ಗ್ರೀಟ

ವಿಕಿಸೋರ್ಸ್ದಿಂದ

ಗಾರ್ಬೋ, ಗ್ರೀಟ[ಸಂಪಾದಿಸಿ]

1905-90. ಖ್ಯಾತ ಚಲನಚಿತ್ರ ತಾರೆ. ಸ್ವೀಡನ್ನಿನವಳು. ಗ್ರೀಟ ಲೋವಿಸ ಗುಸ್ಟಾಫ್ಸ್ಸನ್ ಎಂದು ಈಕೆಯ ಚಿತ್ರರಂಗದ ಹೆಸರು. ಈಕೆ ಜನಿಸಿದ್ದು ಸ್ಟಾಕ್ ಹೋಂನಲ್ಲಿ. ತಂದೆತಾಯಿಗಳು ಕಡುಬಡವ ಕುಟುಂಬದವರು. ತನ್ನ 14ನೆಯ ವಯಸ್ಸಿನ ವೇಳೆಗೆ ಅಲ್ಲಿನ ಗ್ರ್ಯಾಮರ್ ಶಾಲೆಯ ವಿದ್ಯಾಭ್ಯಾಸ ಮುಗಿಸಿಕೊಂಡು, ತಂದೆ ತೀರಿಕೊಂಡ ಕಾರಣ ದಿನಬಳಕೆಯ ವಸ್ತುಗಳ ಅಂಗಡಿಯೊಂದರಲ್ಲಿ ಈಕೆ ಕೆಲಸ ಮಾಡಿದಳು. ಕ್ಷೌರದ ಅಂಗಡಿಯಲ್ಲೂ ಕೆಲಸ ಮಾಡಿದ್ದುಂಟು. ಕೆಲವಾರು ಜಾಹೀರಾತು ಚಲನಚಿತ್ರಗಳಲ್ಲಿ ಕಾಣಿಸಿಕೊಂಡಿದ್ದ ಈಕೆಗೆ 1921ರಲ್ಲಿ ಎರಿಕ್ ಪೆಟ್ಸಚಲ್ರ್ಸನ ಪೀಟರ್ ದಿ ಟ್ರ್ಯಾಂಪ್ ಎಂಬ ಹಾಸ್ಯಮಯ ಚಿತ್ರದಲ್ಲಿ ಒಂದು ಸಣ್ಣ ಪಾತ್ರ ಸಿಕ್ಕಿತು. ಅನಂತರ ಈಕೆ ಸ್ಟಾಕ್ಹೋಂನಲ್ಲಿ ರಾಯಲ್ ಅಕಾಡೆಮಿ ಆಫ್ ಡ್ರಮ್ಯಾಟಿಕ್ ಆರ್ಟ್ ಸಂಸ್ಥೆಯಲ್ಲಿ 1922 ರಿಂದ 1924 ರವರೆಗೆ ಅಭಿನಯ ಕಲೆಯ ಅಭ್ಯಾಸ ಮಾಡಿದಳು. ಮಾರೀಟ್ಜ ಸ್ಟಿಲ್ಲರ್ ಎಂಬ ಚಲನಚಿತ್ರ ನಿರ್ದೇಶಕ ತನ್ನ ದಿ ಸ್ಟೋರಿ ಆಫ್ ಗೋಷ್ಟಾ ಬರ್ಲಿಂಗ್ (1924) ಎಂಬ ಚಿತ್ರದಲ್ಲಿ ಕೌಂಟೆಸ್ ದ್ಹೋನಳ ಪಾತ್ರವಹಿಸಲು ಈಕೆಯನ್ನು ಆಯ್ಕೆ ಮಾಡಿದ. ಈತನೇ ಈಕೆಗೆ ಗ್ರೀಟ ಗಾರ್ಬೋ ಎಂಬ ಹೆಸರನ್ನಿತ್ತದ್ದು. ಸಿನಿಮಾ ರಂಗದ ನಟನೆಯ ಎಲ್ಲ ತಂತ್ರ ಗಳನ್ನೂ ಆತ ಈಕೆಗೆ ಹೇಳಿಕೊಟ್ಟ. ಸ್ಟಿಲ್ಲರನೊಡನೆ ಭೇಟಿಯಾದುದು ಗಾರ್ಬೋಳ ಜೀವನದಲ್ಲಿ ಒಂದು ಮಹತ್ತ್ವದ ಘಟನೆ. ಈಕೆ ಪಾತ್ರವಹಿಸಿದ ಮತ್ತಾವುದೇ ಚಿತ್ರವನ್ನು ಆತ ನಿರ್ದೇಶಿಸಲಿಲ್ಲವಾದರೂ ಸದಾಕಾಲವೂ ಈಕೆಯ ಬಳಿಯಲ್ಲೇ ಇರುತ್ತಿದ್ದ. ದಿ ಜಾಯ್ಲೆಸ್ ಸ್ಟ್ರೀಟ್ ಎಂಬ ಚಿತ್ರದಲ್ಲಿ ಪಾತ್ರವಹಿಸಿದ ಅನಂತರ ಗಾರ್ಬೋ ಸ್ಟಿಲ್ಲರನೊಡನೆ ಅಮೆರಿಕಕ್ಕೆ ಹೋದಳು (1925). ಖ್ಯಾತ ಚಿತ್ರನಿರ್ಮಾಣ ಸಂಸ್ಥೆಯಾದ ಎಂ.ಜಿ.ಎಂ. ನಲ್ಲಿ ಗಾರ್ಬೋಗೆ ಒಂದು ಅವಕಾಶ ಕಲ್ಪಿಸಲು ಸ್ಟಿಲ್ಲರ್ ಬಹಳ ಪ್ರಯತ್ನ ಮಾಡಿದ. ಸಿನಿಮಾ ಸಂಸ್ಥೆಯ ಪ್ರಚಾರ ಶಾಖೆಯ ತೀವ್ರ ಪ್ರಚಾರದಿಂದಾಗಿ ಕೆಲವೇ ದಿವಸಗಳಲ್ಲಿ ಗಾರ್ಬೋ ಹಾಲಿವುಡ್ಡಿನ ಪ್ರಮುಖ ತಾರೆಯಾಗಿ ಮೆರೆದಳು.

ಎಂ.ಜಿ.ಎಂ. ಸಂಸ್ಥೆಯಲ್ಲಿ ತಾನಿದ್ದ 16 ವರ್ಷಗಳ ಅವಧಿಯಲ್ಲಿ ಗಾರ್ಬೋ 24 ಚಲನಚಿತ್ರಗಳಲ್ಲಿ ಕಾಣಿಸಿಕೊಂಡಳು. ಅವಳಿಗೆ ಸಲ್ಲುತ್ತಿದ್ದ ಸಂಭಾವನೆ ಚಿತ್ರವೊಂದಕ್ಕೆ 400 ಡಾಲರುಗಳಿಂದ 3,00.000 ಡಾಲರುಗಳಿಗೇರಿತು. ದಿ ಟಾರೆಂಟ್ (1926), ಫ್ಲೆಷ್ ಅಂಡ್ ದಿ ಡೆವಿಲ್ (1927), ಲವ್ (1927), ವೈಲ್ಡ ಆರ್ಕಿಡ್ಸ (1929), ಅನ್ನಾ ಕ್ರಿಸ್ಟಿ (1930), ಮಾತಾ - ಹರಿ (1931), ಗ್ರ್ಯಾಂಡ್ ಹೋಟೆಲ್ (1932), ಗಂಭೀರ ಚಿತ್ರಗಳಾದ ಕ್ವೀನ್ ಕ್ರಿಶ್ಚಿನ (1933); ಅನ್ನಾ ಕರೇನಿನಾ (1935), ಮತ್ತು ಕ್ಯಾಮಿಲಿ (1936), ಮೇರಿ ವಾಲೆವ್ಸ್ಕ (1937), ನಿನೋಚ್ಕ (1939) - ಇವು ಈಕೆಯ ಕೆಲವು ಪ್ರಮುಖ ಚಲನಚಿತ್ರಗಳು. 1941ರಲ್ಲಿ ತನ್ನ 36ನೆಯ ವಯಸ್ಸಿನಲ್ಲಿ ಸಿನಿಮಾರಂಗದಿಂದ ಗಾರ್ಬೋ ಹೊರಬಂದಳು. 1950ರಲ್ಲಿ ಕೂಡಿದ ಸಿನಿಮಾತಜ್ಞರ ಒಂದು ಸಮಿತಿ ಈಕೆಯನ್ನು ಅತ್ಯುತ್ಕೃಷ್ಟ ತಾರೆಯೆಂದು ಸಾರಿತು. 1955ರಲ್ಲಿ ಗೌರವಾನ್ವಿತ ಅಕಾಡೆಮಿ (ಪ್ರಶಸ್ತಿ) ಪಡೆದುಕೊಂಡಳು. ಸಿನಿಮಾರಂಗದದಿಂದ ನಿವೃತ್ತಿ ಹೊಂದಿದ ಮೇಲೆ ನ್ಯೂಯಾರ್ಕಿನಲ್ಲೇ ಈಕೆ ನೆಲೆಸಿದಳು. 1951ರಲ್ಲಿ ಈಕೆಗೆ ಅಮೆರಿಕ ಸಂಯುಕ್ತ ಸಂಸ್ಥಾನದ ಪೌರತ್ತ್ವ ಲಭಿಸಿತು. ಈಕೆ 1990ರ ಏಪ್ರಿಲ್ 15ರಂದು ನ್ಯೂಯಾರ್ಕಿನಲ್ಲಿ ನಿಧನವಾದಳು.