ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕರಸ್ಥಲ ನಾಗಿದೇವ

ವಿಕಿಸೋರ್ಸ್ದಿಂದ

ಕರಸ್ಥಲ ನಾಗಿದೇವ : ಪ್ರೌಢದೇವರಾಯನ ಕಾಲದಲ್ಲಿದ್ದ ನೂರೊಂದು ವಿರಕ್ತರೆನಿಸಿದ ವೀರಶೈವ ಶರಣರಲ್ಲಿ ಪ್ರಸಿದ್ಧನಾದ ಪ್ರಥಮ ವಿರಕ್ತ. ಕಾಲ ಸು. 1430. ನಾಗಲಿಂಗನೆಂದೂ ಹೆಸರಿದೆ. ಕಲ್ಲುಮಠದ ಪ್ರಭುದೇವ, ಕುಮಾರ ಬಂಕನಾಥ, ಮೊಗ್ಗೆಯ ಮಾಯಿದೇವ ಜಕ್ಕಣಾರ್ಯ, ಶಂಕರದೇವ, ಬತ್ತಲೇಶ್ವರ ಮೊದಲಾದವರ ಸಮಕಾಲೀನನಾಗಿದ್ದ ವೀರಣ್ಣೊಡೆಯರ ಪ್ರೀತಿಯ ಶಿಷ್ಯನಾಗಿದ್ದ. ಪ್ರಥಮವಾಗಿ ಈ ವಿರಕ್ತನ ಪ್ರಸ್ತಾಪ ಚಿಕ್ಕವೀರ ಜಂಗಮದೇವನ (ಸು. 1500) ಪಟ್ಸ್ಥಲವಲ್ಲಭವೆಂಬ ಗ್ರಂಥದಲ್ಲಿ ಕರಸ್ಥಲ ನಾಗಿದೇವನೇರಿದ ಮೋಹಿನಿಗಜಮಂ ಎಂಬಲ್ಲಿ ಕಂಡುಬಂದು, ಅನಂತರದ ಚೆನ್ನಬಸವಾಂಕನ ಮಹಾದೇವಿಯಕ್ಕನ ಪುರಾಣ (1550), ಅದೃಶ್ಯಕವಿಯ ಪ್ರೌಢದೇವರಾಯನ ಕಾವ್ಯ (1850), ವಿರೂಪಾಕ್ಷ ಪಂಡಿತನ ಚೆನ್ನಬಸವರಾಯನ ಕಾವ್ಯ (1584), ಕಂಬಾಳ ಶಾಂತಮಲ್ಲೇಶನ ಗುಣವಚನ ರತ್ನಾವಳಿ (1600), ಸಿದ್ಧನಂಜೇಶನ ಗುರುರಾಜ ಚರಿತ್ರೆ, ರುದ್ರಕವಿಯ ಕರಸ್ಥಲ ನಾಗಲಿಂಗ ಚರಿತ್ರೆ (1650), ಸಂಪಾದನೆಯ ಪರ್ವತೇಶ್ವರ ಚತುರಾಚಾರ್ಯ ಪುರಾಣ (1698). ಮೋದಿಯ ರುದ್ರನ ನೂರೊಂದು ವಿರಕ್ತರ ಕಾವ್ಯ (1737) ಮುಂತಾದ ಕಾವ್ಯಗಳಲ್ಲಿ ಬರುತ್ತದೆ. ದೊರಕಿರುವ ಇವನ ಕೃತಿಗಳಲ್ಲಿ ಸ್ವವಿಷಯವನ್ನು ಹೇಳಿಕೊಂಡಿಲ್ಲ. ವಿರೂಪಾಕ್ಷ ಪಂಡಿತನಿಂದ ರಚಿತವಾದ ಚನ್ನಬಸವಪುರಾಣದಲ್ಲಿ ಇವನ ಕಥೆ ಸಂಕ್ಷಿಪ್ತವಾಗಿ ಹೀಗೆ ದೊರೆಯುತ್ತದೆ: ನೂರೊಂದು ವಿರಕ್ತದಲ್ಲಿ ಪ್ರಸಿದ್ಧ ವಿರಕ್ತನೆನಿಸಿದ ನಾಗಯ್ಯ ತನ್ನ ಬಾಲ್ಯಾವಸ್ಥೆಯಲ್ಲಿ, ಹಾದರ ಮಾಡಲು ಒಂದು ಮನೆಯನ್ನು ಪ್ರವೇಶಿಸಿದುದನ್ನು ಇತರರು ಕಂಡಾಗ, ಆ ಕ್ಷಣವೇ ಸಂಸಾರದಿಂದ ವಿರಕ್ತನಾಗಿ ಲಿಂಗವನ್ನು ಧರಿಸಿ, ಅದರ ಪೀಠವನ್ನೆಸೆದು, ತಲೆಗೆಲ್ಲ ಭಸಿತವನ್ನು ಬಳಿದುಕೊಂಡು ದಿಗಂಬರನಾಗಿ ಆ ಗೃಹದಿಂದ ನಿಷ್ಕ್ರಮಿಸಿ ತನ್ನ ಗುರು ವೀರಣ್ಣೊಡೆಯನಿಗೆ ನಡೆದ ವೃತ್ತಾಂತವನ್ನು ವಿವರಿಸಲು, ಗುರು ಪೀಠರಹಿತವಾಗಿದ್ದ ಲಿಂಗಕ್ಕೆ ಬೇರೊಂದು ಪೀಠವನ್ನು ಅನುಗೊಳಿಸಿ ಕ್ರಿಯೆಯಳಿವ ಪರಿಯಂತರ ತೊಲಗಲೀಯದಿದು-ಎಂದು ಉಪದೇಶಿಸಿ, ದೇಶಪರ್ಯಟನಕ್ಕೆ ಶಿಷ್ಯನನ್ನು ಬೀಳ್ಕೊಟ್ಟ. ಕೆಲವು ಕಾಲದ ಅನಂತರ ಹಿಂತಿರುಗಿ ಬಂದ ನಾಗಯ್ಯ ತನ್ನನ್ನು ಹಿಂಬಾಲಿಸುವಂತೆ ಗುರುವಿಗೆ ಹೇಳಿ ಹೊರಟ. ಹಾದಿಯಲ್ಲಿ ನಾಗನ ತಲೆಗೂದಲು ಮೆಳೆಯಲ್ಲಿ ಸಿಕ್ಕಿಕೊಂಡಿದ್ದುದನ್ನು ನೋಡಿದ ಗುರು ಬಿಡಿಸಿದ. ಇಬ್ಬರೂ ವಿದ್ಯಾನಗರಿಯತ್ತ ಪ್ರಯಾಣ ಬೆಳೆಸಿದರು. ಗುರು ಬಸವೇಶನಿಗೆ ಐಕ್ಯಪದಸ್ವಾನುಭವಮಾರ್ಗವನ್ನೂ ಪಟ್ಸ್ಥಲಮಾರ್ಗವನ್ನೂ ತಿಳಿಸಿಕೊಟ್ಟು ನಿರವಯವನಾಲಿಚ್ಛಿಸಿದ. ನಾಗಿದೇವ ಮೋಹಿನಿ ಗಜದ ಬಳಿಗೆ ಹೋಗಿ ಗಜವನ್ನೇರಲು ಹಗ್ಗಗಳೆಲ್ಲ ಬಂಗಾರವಾದವು. ಹೀಗೆ ಅನೇಕ ಪವಾಡಗಳನ್ನು ಮೆರೆಸಿ ಗುರುವಿನ ಮೇಲೆ ಕರುಣೆದೋರುವಾಗ ಈ ಪವಾಡ ನಡೆಯಿತು: ನಾಗಯ್ಯನೇ ಬಾಲಲಿಂಗಣ್ಣನೆಂಬುವನ ರೂಪದಲ್ಲಿ ಪ್ರೀತಿಯಿಂದ ವೀರಣ್ಣೊಡೆಯನ ಮನೆಗೆ ಬಂದು ಭಿಕ್ಷವನ್ನು ಬೇಡಲಾಗಿ, ಗುರು ಆ ಬಾಲಯೋಗಿಯನ್ನು ಒಳಗೆ ಬರಮಾಡಿ ಮಂಚದ ಮೇಲೆ ಕುಳ್ಳಿರಿಸಿದ. ಬಾಲ ಲಿಂಗಣ್ಣ ಪವಡಿಸಿರುವ ಸಮಯದಲ್ಲಿ ಗುರು ಅವನ ಕರಸ್ಥಲದಲ್ಲಿದ್ದ ಲಿಂಗವನ್ನು ತೆಗೆದುಕೊಂಡ. ಇತರರೊಡನೆ ಭೋಜನವನ್ನು ಮುಗಿಸಿ, ಅನಂತರ ಗುರು ಬಾಲ ಲಿಂಗಣ್ಣನನ್ನು ಕರೆಯಲಾಗಿ ಹರಣವನ್ನುಳಿದು ಡಿಂಬಮಿರಲು ತನ್ನಲ್ಲಿದ್ದ ಲಿಂಗವನ್ನು ಆತನ ಕರೆದೊಳಗೆ ಪುನಃ ಇರಿಸಿದ. ಆಗ ಜೀವ ಮರುಕಳಿಸಿತ್ತು. ಲಿಂಗಣ್ಣ ತನಗೆ ಊಟವಾಗಿದೆಯೆಂದು ಹೇಳಿ ಊಟದ ಕುರುಹುಗಳನ್ನು ತೋರಿದ. ಲಿಂಗಣ್ಣ ನಿಜವಾಗಿ ತನ್ನ ಶಿಷ್ಯನೇ ಎಂದರಿತ ಗುರು ಪ್ರಾಣಲಿಂಗ ಸಂಧಾನಿ ನೀನಹುದು ಎಂದು ಕೊಂಡಾಡಲು ನಾಗಲಿಂಗ ಅವನನ್ನೂ ನಿರವಯವಗೊಳಿಸಿದ.

ಮೂಲಕಥೆ ವಾಸ್ತವವಾಗಿ ಹೀಗೆಯೇ ಇದ್ದಿರಬೇಕು. ಅನಂತರ ಬಂದ ರುದ್ರ ಕವಿ ಸಾಂಗತ್ಯದಲ್ಲಿ ಈ ಶರಣನ ಮೇಲೆ ಉದ್ಗ್ರಂಥವನ್ನು ರಚಿಸಿ, ವ್ಯಭಿಚಾರಾದಿ ಅನೇಕ ಕಡೆಗಳಲ್ಲಿ ಕಥೆಯನ್ನು ಮಾರ್ಪಡಿಸಿದ.

ಕರಸ್ಥಲ ನಾಗಿಲಿಂಗ ಬರೆದ ಕೃತಿಗಳಲ್ಲಿ ದೊರಕಿರುವವು ಕೆಲವು ಮಾತ್ರ. ಮಡಿವಾಳ ಮಾಚಯ್ಯನ ತಾರಾವಳಿ, ಅಕ್ಷರಚೌಪದ (ಒಂಬತ್ತು ವಾರ್ಧಕ ಷಟ್ಪದಿ ಪದ್ಯಗಳು), ಮೂರೇಳು ದೀಕ್ಷೆಯ ಪದ, ತ್ರಿವಿಧಿ. ತ್ರಿವಿಧಿ 31 ಗೂಢಾರ್ಥ ಗ್ರಾಹ್ಯವಲ್ಲದ ಇದಕ್ಕೆ ಸು. 1650ರಲ್ಲಿದ್ದ

ಪರ್ವತೇಶ ಟೀಕೆ ಬರೆದಿದ್ದಾನೆ. ನಾಗಲಿಂಗನ ತ್ರಿ ವಿಧಿಗೆ ಒಂದು ಉದಾಹರಣೆ: ಸರ್ಪನಯಿದಿರೊಳಗಿರ್ಪ ಮಂಡುಕನೆದ್ದು ಸರ್ಪನ ಮದವ ನಡುಗಿಸಿ ನಡೆದೇನು ಕರ್ಪುರವನುಂಡ ಉರಿಯಂತೆ (ಕೆ.ಆರ್.ಎಸ್.ಜಿ.)