ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಅರ್ಧನಾರೀಶ್ವರ

ವಿಕಿಸೋರ್ಸ್ದಿಂದ

ಅರ್ಧಭಾಗ ಪಾರ್ವತಿಯೂ ಅರ್ಧಭಾಗ ಈಶ್ವರನೂ ಇರುವ ಮೂರ್ತಿ. ಶಿವನೂ ಶಕ್ತಿಯೂ ಅವಿನಾಭಾವದಿಂದ ಒಂದೇ ದೇಹದಲ್ಲಿರುತ್ತಾರೆಂದೂ ಶಿವನ ವಾಮಾರ್ಧವೇ ಪಾರ್ವತಿಯೆಂದೂ ಕಲ್ಪನೆಯಿದೆ. ಪಾರ್ವತಿ ಶಿವನ ಅರ್ಧಭಾಗವನ್ನು ಆಕ್ರಮಿಸಿದ ಕಥೆ ಶಿವಪುರಾಣದಲ್ಲಿ ಬರುತ್ತದೆ. ಶಿವನ ಗಣಾಧಿಪತಿಯಾದ ಭೃಂಗಿ ಮೋಕ್ಷಾರ್ಥಿಯಾಗಿ ತಪಸ್ಸು ಮಾಡುವಾಗ, ಕೇವಲ ಶಿವರೂಪವನ್ನೇ ಅವಲಂಬಿಸಿ, ಪಾರ್ವತಿಯನ್ನು ಕಡೆಗಾಣಿಸಿದನೆಂದು ಪಾರ್ವತಿ ಕೋಪಗೊಂಡು ಭೃಂಗಿಯ ತೇಜಸ್ಸನ್ನು ಕುಗ್ಗಿಸಿದಳು. ಶಿವಭಕ್ತನ ಮೇಲಣ ಅಭಿಮಾನದಿಂದ ಭೃಂಗಿಗೆ ತನ್ನ ದಂಡಾಯುಧ ಕೊಡಲು ಪಾರ್ವತಿ ಇನ್ನಷ್ಟು ಕ್ರುದ್ಧಳಾಗಿ ಕೇದಾರದಲ್ಲಿ ತಪಸ್ಸು ಮಾಡಿ ಶಿವನ ಅರ್ಧಾಂಗ ಆಕ್ರಮಿಸಿಕೊಂಡಳು.