ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಜಕಾರ್ತ

ವಿಕಿಸೋರ್ಸ್ದಿಂದ

ಜಕಾರ್ತ ಇಂಡೋನೇಷ್ಯ ಗಣರಾಜ್ಯದ ರಾಜಧಾನಿ. ಇಂಡೋನೇಷ್ಯದ ಅತ್ಯಂತ ದೊಡ್ಡ ನಗರ, ಪ್ರಮುಖ ಬಂದರು. ಜಾವದ ವಾಯುವ್ಯ ಕರಾವಳಿಯಲ್ಲಿ ಚಿಲೀವಾಂಗ್ ನದೀಮುಖದ ಮೇಲಿದೆ. ನಗರ ಜಿಲ್ಲೆಯ ವಿಸ್ತಿÃರ್ಣ ೨೨೮ ಚ. ಮೈ. ಜನಸಂಖ್ಯೆ ೪೫,೪೨,೧೪೬ (೧೯೭೧ ಸು.) ೧೭ನೆಯ ಶತಮಾನದಿಂದ ೧೯೪೫ರವರೆಗೆ ಬಹುತೇಕ ಡಚ್ಚರ ಒಡೆತನದಲ್ಲಿದ್ದ ಈ ನಗರದಲ್ಲಿ ಅವರ ಆಳ್ವಿಕೆಯ ಕಾಲದಲ್ಲಿ ನಿರ್ಮಾಣವಾದ ಅನೇಕ ಸುಂದರ ಕಟ್ಟಡಗಳು ಉಳಿದುಕೊಂಡು ಬಂದಿವೆ. ಗವರ್ನರ್-ಜನರಲ್ ರಿಬೇಕನ ಹಳೆಯ ನಿವಾಸವೂ (೧೭೦೮) ೧೬೯೫ರಲ್ಲಿ ನಿರ್ಮಿತವಾದ ಪೋರ್ಚುಗೀಸ್ ಚರ್ಚೂ ಮುಖ್ಯವಾದುವು. ಪಾಶ್ಚಾತ್ಯ ಮತ್ತು ಪೌರಸ್ತö್ಯ ಶೈಲಿಗಳ ಮಿಶ್ರಣವನ್ನು ಎಲ್ಲೆಲ್ಲೂ ಕಾಣಬಹುದು. ನಗರದ ಬೀದಿಗಳಲ್ಲಿ ಮೋಟಾರುವಾಹನಗಳ ಜೊತೆಗೆ ಕುದುರೆ ಬಂಡಿಗಳೂ ತಳ್ಳುಗಾಡಿಗಳೂ ಸಂಚರಿಸುತ್ತವೆ. ಆಧುನಿಕವಾದ ಬೃಹತ್ ಮಳಿಗೆಗಳ ಮಗ್ಗುಲಲ್ಲಿ ಹಳೆಯ ಕಾಲದ ವರ್ಣರಂಜಿತ ಪೇಟೆಗಳಿವೆ. ಕಾಲುದಾರಿಗಳ ಉದ್ದಕ್ಕೂ ನೆಲದ ಮೇಲೆ ಹರಡಿದ ಅಂಗಡಿಗಳಿವೆ. ೧೭ನೆಯ ಶತಮಾನದ ಮನೆಗಳ ನಡುವೆ ಚಿಲೀವಾಂಗ್ ನದೀ ನಾಲೆಗಳು ಪ್ರಶಾಂತವಾಗಿ ಪ್ರವಹಿಸುತ್ತವೆ. ಎಲ್ಲೆಲ್ಲೂ ಉದ್ಯಾನಗಳು, ಬೀದಿಗಳ ಎರಡೂ ಬದಿಗಳಲ್ಲಿ ಮರಗಳು. ನದಿಯ ಮುಖ್ಯ ನಾಲೆಯ ಮೇಲೆ ಗಂಭೀರವಾಗಿ ಚಲಿಸುವ ದೋಣಿಗಳು. ಇವು ನಗರದ ವೈಶಿಷ್ಟö್ಯಗಳು. ಶೀಘ್ರವಾಗಿ ಬೆಳೆಯುತ್ತಿರುವ ಜಕಾರ್ತ ನಗರದ ಸುತ್ತ ಅನೇಕ ಉಪನಗರಗಳುಂಟು. ಹಳೆಯ ನಗರ ಭಾಗದಲ್ಲಿ ರೋಮನ್ ಕ್ಯಾಥೊಲಿಕ್ ಮತ್ತು ಪ್ರಾಟೆಸ್ಟಂಟ್ ಚರ್ಚ್ಗಳೂ ಮಸೀದಿಗಳೂ ಎರಚಾಡಿವೆ. ೧೯೫೦ರಲ್ಲಿ ಸ್ಥಾಪಿತವಾದ ಇಂಡೋನೇಷ್ಯ ವಿಶ್ವವಿದ್ಯಾಲಯದ ಮುಖ್ಯ ಭಾಗ ಇರುವುದು ಜಕಾರ್ತದಲ್ಲಿ. ವಸ್ತುಸಂಗ್ರಹಾಲಯ, ಗ್ರಂಥಾಲಯ, ಪವನಶಾಸ್ತçಮಂದಿರ, ಇಂಡೋನೇಷ್ಯ ಗಣರಾಜ್ಯ ರೇಡಿಯೋ ಮುಖ್ಯ ನಿಲಯ-ಇವು ಕೆಲವು ಮುಖ್ಯ ಸಂಸ್ಥೆಗಳು. ಕಬ್ಬಿಣ ಎರಕದ ಕಾರ್ಖಾನೆಗಳು, ಮಾರ್ಜರಿನ್ ಮತ್ತು ಸಾಬೂನು ತಯಾರಿಕೆ, ಸಾರಾತಿ ತಯಾರಿಕೆ, ಮುದ್ರಣ, ಚರ್ಮದ ಹದಗಾರಿಕೆ, ಮರಕೊಯ್ತ, ಜವಳಿ-ಇವು ಇಲ್ಲಿಯ ಕೆಲವು ಕೈಗಾರಿಕೆಗಳು.

ಆಧುನಿಕ ಜಕಾರ್ತ ನಗರವಿರುವುದು ಹಳೆಯ ನಗರದ ದಕ್ಷಿಣದಲ್ಲಿ, ಸ್ವಲ್ಪ ಎತ್ತರ ಪ್ರದೇಶದಲ್ಲಿ. ನಗರದ ಕೇಂದ್ರದಲ್ಲಿರುವ ಸ್ವಾತಂತ್ರö್ಯ ಚೌಕ ಸು. ೪ ಚ. ಮೈ. ವಿಸ್ತಾರವಾಗಿದೆ. ರೈಲ್ವೆ ನಿಲ್ದಾಣ, ಟೆಲಿಫೋನ್ ಕಚೇರಿ, ಸರ್ಕಾರಿ ಹೋಟೆಲು ಮತ್ತು ಪ್ರಮುಖ ಸರ್ಕಾರಿ ಕಟ್ಟಡಗಳು ಇಲ್ಲಿವೆ.

ಜಕಾರ್ತದ ಆಧುನಿಕ ಬಂದರು ಇರುವುದು ನಗರದ ಪೂರ್ವ ಕರಾವಳಿಯಲ್ಲಿ. ಇದು ೧೮೭೭-೮೩ರಲ್ಲಿ ನಿರ್ಮಾಣವಾಯಿತು. ಇದರ ಹೊರಬಂದರು. ಪ್ರವೇಶ ದ್ವಾರದ ಬಳಿ ೫೨೫' ಅಗಲವಾಗಿದೆ. ಇದಲ್ಲದೆ ಮೂರು ಒಳಬಂದರುಗಳಿವೆ. ಬಂದರಿಗೆ ನಗರದಿಂದ ರಸ್ತೆ, ರೈಲು ಹಾಗೂ ಕಾಲುವೆ ಮಾರ್ಗಗಳುಂಟು. ಇಂಡೋನೇಷ್ಯದ ವಾಣಿಜ್ಯದಲ್ಲಿ ಮಹತ್ತ÷್ವದ ಪಾತ್ರ ವಹಿಸಿರುವ ಈ ಬಂದರಿನಿಂದ ರಫ್ತಾಗುವ ಸರಕುಗಳು ಚಹ, ರಬ್ಬರ್, ಕ್ವಿನೈನ್, ಉಪ್ಪು, ಎಣ್ಣೆ, ಸಕ್ಕರೆ, ಮೆಣಸು, ತಂಬಾಕು, ಚಿನ್ನ, ವಜ್ರ ಮತ್ತು ಕಲ್ಲಿದ್ದಲು. ಆಮದಾಗುವ ಮುಖ್ಯ ಸರಕುಗಳು ಕಾಗದ, ಸಿಮೆಂಟು, ವಾಹನೋಪಕರಣಗಳು ಹಾಗೂ ಸಿದ್ಧ ಸರಕುಗಳು. ಜಕಾರ್ತದ ಸಂಚಾರ ವ್ಯವಸ್ಥೆ ಉತ್ತಮವಾದ್ದು. ಜಾವದ ಪ್ರತಿಯೊಂದು ಮುಖ್ಯ ನಗರಕ್ಕೂ ರೈಲ್ವೆ ಮತ್ತು ರಸ್ತೆ ಸಂಪರ್ಕವಿದೆ. ಬಂದರಿಗೂ ನಗರಕ್ಕೂ ನಡುವೆ ಇರುವ ಕೆಮಜೊರಾನ್ ವಿಮಾನ ನಿಲ್ದಾಣ ಯೂರೋಪ್ ಮತ್ತು ಪ್ರಾಚ್ಯರಾಷ್ಟçಗಳ ನಡುವಣ ಪ್ರಮುಖ ಕೊಂಡಿ. ಇಂಗ್ಲೆಂಡ್-ಆಸ್ಟೆçÃಲಿಯಗಳ ನಡುವೆ ಹಾರುವ ವಿಮಾನಗಳಿಗೆ ಇದು ತಂಗುದಾಣ. ಆಗ್ನೆÃಯ ಏಷ್ಯದ ಎಲ್ಲ ಪ್ರಮುಖ ರಾಷ್ಟçಗಳಿಗೆ ಜಕಾರ್ತದೊಂದಿಗೆ ವಿಮಾನ ಸಂಪರ್ಕವುಂಟು. ಚಿಲೀವಾಂಗ್ ಒಂದು ಮುಖ್ಯ ಜಲಮಾರ್ಗ. ಇಂಡೋನೇಷ್ಯದ ಅಂಚೆ ತಂತಿ ಟೆಲಿಫೋನ್ ವ್ಯವಸ್ಥೆಗೆ ಜಕಾರ್ತ ಮುಖ್ಯ ಕೇಂದ್ರ.

೧೬ನೆಯ ಶತಮಾನದ ಆದಿಯಲ್ಲಿ ಜಕಾರ್ತಕ್ಕೆ ಸುಂದ ಕೆಲಪ ಎಂಬ ಹೆಸರಿತ್ತು. ಆಗ ಅದು ಪದ್ಜದ್ಜರನನ ಸುಂದ ರಾಜ್ಯದ ಮುಖ್ಯ ರೇವುಪಟ್ಟಣವಾಗಿತ್ತು. ೧೫೨೭ರಲ್ಲಿ ಬಂಟಂ ಸುಲ್ತಾನ ಇದಕ್ಕೆ ಜಜಕರ್ತ ಎಂದು ನಾಮಕರಣ ಮಾಡಿದ. ಆ ಶತಮಾನದ ಅಂತ್ಯದ ವೇಳೆಗೆ ಡಚ್ಚರು ಅಲ್ಲಿಗೆ ಬಂದರು. ಸುಲ್ತಾನನೊಂದಿಗೆ ನಡೆಸಿದ ಕದನದಲ್ಲಿ ಜಕಾರ್ತವನ್ನು ನೆಲಸಮ ಆಡಿದರು. ಅಲ್ಲೊಂದು ವ್ಯಾಪಾರ ನೆಲೆ ಏರ್ಪಟ್ಟಿತು. ೧೬೧೪ರಲ್ಲಿ ಡಚ್ ಈಸ್ಟ್ ಇಂಡಿಯ ಕಂಪನಿಯವರು ಚಿಲೀವಾಂಗ್ ನದಿಯ ಪೂರ್ವದಂಡೆಯ ಮೇಲೆ ಕಟ್ಟಡಗಳನ್ನು ಕಟ್ಟಿದರು. ಡಚ್ ಈಸ್ಟ್ ಇಂಡೀಸಿನ ಗವರ್ನರ್ ಜನರಲ್ ಆಗಿದ್ದ ಜಾನ್ ಪೀಟರ್‌ಜೂನ್ ಕೂನ್ ಅಲ್ಲಿ ಕೋಟೆಯೊಂದನ್ನು ನಿರ್ಮಿಸಿ ಅದರ ನಡುವೆ ಆಧುನಿಕ ನಗರವನ್ನು ಬೆಳೆಸಿದ. ನಗರಕ್ಕೆ ಬಟೇವಿಯ ಎಂದು ನಾಮಕರಣವಾಯಿತು. ಡಚ್ಚರು ನಿರ್ಮಿಸಿದ ನಗರ ಭಾಗ ಇಂದು ಜಕಾರ್ತ ಕೋಟೆ ಎನಿಸಿಕೊಂಡಿದೆ. ಚೀನೀಯರು ೧೭೪೦ರ ವರೆಗೂ ನಗರದ ಕೋಟೆಯ ಭಾಗದಲ್ಲಿ ವಾಸಿಸುತ್ತಿದ್ದರು. ಆಗ ಅವರನ್ನು ಪ್ರತ್ಯೆÃಕಿಸಲಾಯಿತು. ೧೮ನೆಯ ಶತಮಾನದಲ್ಲಿ ಮಲೇರಿಯ ವ್ಯಾಧಿಯಿಂದಲು ಡಚ್ಚರ ದುರಾಡಳಿತದಿಂದಲೂ ನಗರ ಕ್ಷಿÃಣಿಸಿತು. ನೆಪೋಲಿಯನ್ ಯುದ್ಧಗಳ ಸಮಯದಲ್ಲಿ ಸ್ವಲ್ಪ ಕಾಲ ಬ್ರಿಟಿಷರ ವಶದಲ್ಲಿತ್ತು. ೧೮೧೪ರಲ್ಲಿ ಡಚ್ಚರಿಗೆ ವಾಪಸು ಬಂತು. ೧೯ನೆಯ ಶತಮಾನದಲ್ಲಿ ತೋಟಗಾರಿಕೆ ಉದ್ಯಮದಿಂದಾಗಿ ಅದರ ಪ್ರಾಮುಖ್ಯ ಹೆಚ್ಚಿ. ನಗರ ಶೀಘ್ರವಾಗಿ ಬೆಳೆಯತೊಡಗಿತು. ಇಂಡೋನೇಷ್ಯ ಗಣರಾಜ್ಯ ಸ್ಥಾಪನೆಯಾದ ಮೇಲೆ ಅದು ಮತ್ತೆ ಜಕಾರ್ತ ಎಂಬ ಹೆಸರು ತಳೆದು ಹೊಸರಾಜ್ಯದ ರಾಜಧಾನಿಯಾಯಿತು. (ಎಚ್.ಜಿ.ಎ.)