ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಅಬಿಸೀನಿಯ

ವಿಕಿಸೋರ್ಸ್ದಿಂದ

ಅಬಿಸೀನಿಯ

3 1/20 ಮತ್ತು 180 ಉತ್ತರ ಅಕ್ಷಾಂಶಗಳ ಮತ್ತು 330 ಮತ್ತು 480 ಪೂರ್ವ ರೇಖಾಂಶಗಳ ನಡುವಿನ ಆಫ್ರಿಕದಲ್ಲಿ ಸ್ವತಂತ್ರ ಸಾಮ್ರಾಜ್ಯ. ಸಹಜ ಕೋಟೆಯಂತಿದ್ದು ದಕ್ಷಿಣದಲ್ಲಿ ಪ್ರವೇಶಾನುಕೂಲವಿದೆ. ಇಥಿಯೋಪಿಯ ಎಂಬ ಹೆಸರೂ ಉಂಟು. ವಿಸ್ತೀರ್ಣ 3,95,800 ಚ.ಮೈ. ಜನಸಂಖ್ಯೆ 1,60,00,000 (1954). 1952ರವರೆಗೂ ಅದೊಂದು ಒಳನಾಡು ರಾಜ್ಯವಾಗಿತ್ತು. ಆ ವರ್ಷ ಸಮುದ್ರತೀರವನ್ನು ಹೊಂದಿರುವ ಎರಿಟ್ರಿಯದೊಡನೆ ಸಂಯುಕ್ತ ರಾಜ್ಯವ್ಯವಸ್ಥೆಯಾದ ಮೇಲೆ, 600 ಮೈಲಿ ಉದ್ದದ ಕೆಂಪುಸಮುದ್ರತೀರ ಅದಕ್ಕೆ ದೊರಕಿದೆ.

ಆಫ್ರಿಕದ ಮಧ್ಯಪೂರ್ವ ಭಾಗದಲ್ಲಿ ಆಫ್ರಿಕದ ಕೋಡು (ಹಾರ್ನ್ ಆಫ್ ಆಫ್ರಿಕ) ಎಂದು ಕರೆಯಲ್ಪಡುತ್ತಿರುವ ಪ್ರದೇಶದ ಒಂದು ಭಾಗ. ಇದು ಪ್ರಾಚೀನಜೀವಿಯುಗದ ಕಾಲದಿಂದಲೂ ನಾನಾರೀತಿಯಲ್ಲಿ ಬದಲಾವಣೆ ಹೊಂದುತ್ತ ಒಂದು, ಜ್ವಾಲಾಮುಖಿಗಳಿಂದ ಹೊರಚಿಮ್ಮಿದ ಶಿಲೆಗಳೊಡನೆ ಬೆರೆತು ಪದರಪದರವಾಗಿರುವ ಶಿಲೆಗಳನ್ನು ಹೊಂದಿರುವ ಪ್ರಸ್ಥಭೂಮಿಯ ಪ್ರದೇಶವೆ ಅಬಿಸೀನಿಯದ ಬಹುಭಾಗ. ಅಲ್ಲೂ 12,000`-15,000` ಎತ್ತರವಾಗಿರುವ ಪರ್ವತ ಶ್ರೇಣಿಗಳಿವೆ. ಇಳಿಜಾರು ಪಶ್ಚಿಮದ ಕಡೆಗೆ. ಇಲ್ಲಿ ಹರಿಯುವ ನದಿಗಳೆಲ್ಲ ಪರ್ವತಪ್ರಾಂತದಲ್ಲಿರುವುದರಿಂದ ಜಲಪಾತಗಳು ಹೆಚ್ಚು. ಅವು ವಿದ್ಯುಚ್ಛಕ್ತಿ ಉತ್ಪಾದನೆಗೆ ಮಾತ್ರ ಯೋಗ್ಯವಾಗಿವೆ. ಅತ್ಯಂತ ಮುಖ್ಯವಾದ ನದಿ ತಾಣ ಸರೋವರದಿಂದ ಹರಿದುಬರುವ ನೀಲಿ ನೈಲ್ ಎರಿಟ್ರಿಯದ ಬಹುಭಾಗ ಪ್ರಸ್ಥಭೂಮಿ ಪ್ರದೇಶ. ಅಬಿಸೀನಿಯದ ವಾಯುಗುಣ ಮೇಲಿನ ಎತ್ತರಕ್ಕೆ ಅನುಸಾರವಾಗಿದೆ. ಪ್ರಸ್ಥಭೂಮಿ ಪ್ರದೇಶವೆಲ್ಲ ಒಟ್ಟಿನಲ್ಲಿ ಸಮಶೀತೋಷ್ಣ ವಾಯುಗುಣವನ್ನು ಹೊಂದಿದೆಯೆನ್ನಬಹುದು. ಪರ್ವತಪ್ರದೇಶವಾದ್ದರಿಂದ ಮಳೆ ಅಧಿಕ; ಜುಲೈ, ಆಗಸ್ಟ್, ಸೆಪ್ಟಂಬರುಗಳಲ್ಲಿ ಮಳೆ ಹೆಚ್ಚು. ಎತ್ತರದಲ್ಲಿ 1600` ಕಡಿಮೆ ಇರುವ ಪ್ರಾಂತ್ಯಗಳು ಬಂಜರುಭೂಮಿ; ಡನಕಿಲ್ ಪ್ರಾಂತ್ಯ ಹೆಚ್ಚಾಗಿ ಮರುಭೂಮಿ. ಸ್ವಾಭಾವಿಕ ಸಸ್ಯವರ್ಗವನ್ನೂ ವಾಯುಗುಣ ಮಳೆಗಳಿಗೆ ಅನುಸಾರವಾಗಿ ಎರಡು ಭಾಗಗಳಾಗಿ ವಿಂಗಡಿಸಬಹುದು. ಮೊದಲನೆಯದು, ಹವೆ ತಂಪಾಗಿದ್ದು ಹೆಚ್ಚು ಮಳೆ ಬೀಳುವ ಪರ್ವತ ಮತ್ತು ಪ್ರಸ್ಥಭೂಮಿ ಪ್ರದೇಶ; ಇಲ್ಲಿ ಎತ್ತರ ಮತ್ತು ಮಳೆಯ ಪ್ರಮಾಣಕ್ಕನುಸಾರವಾಗಿ ಕಾಡುಗಳಿವೆ. ಕಾಫಾಪ್ರಾಂತ್ಯ ಕಾಫಿಗಿಡದ ಜನ್ಮಸ್ಥಳ; ಆದ್ದರಿಂದಲೇ ಕಾಫಿ ಎಂಬ ಹೆಸರು ಬಂದಿರುವುದು. ಎರಡನೆಯದಾಗಿ ನಿಶ್ಚಿತವಾದ ಮಳೆಯಿಲ್ಲದೆ ಉಷ್ಣತೆ ಹೆಚ್ಚಿರುವ ತಗ್ಗುಭೂಮಿ ಪ್ರದೇಶ; ಇಲ್ಲಿ ಅಕೇಷಿಯ ಎಂಬ ಜಾಲಿಜಾತಿಯ ಮರಹೆಚ್ಚು. ಕೆಲವು ಕಡೆ ಹುಲ್ಲುಗಾವಲುಗಳಿವೆ. ಉತ್ಕøಷ್ಟ ದಿಮ್ಮಿಗಳನ್ನು ಕೊಡುವ ಮರಗಳಲ್ಲದೆ ಇತರ ಅನೇಕ ಉಪಯುಕ್ತ ಮರಗಳೂ ಇವೆ. ತಾಳೆ, ಸೈಕಮೋರ್ ಎಂಬ ಅಂಜೂರದ ಮರ, ಗೋಂದು ಕೊಡುವ ಮರ, ಕಿತ್ತಲೆ, ನಿಂಬೆ, ದಾಳಿಂಬೆ, ಪೀಚ್, ಬಾಳೆ, ದ್ರಾಕ್ಷಿ, ಹತ್ತಿ, ನೀಲಿ, ಕಬ್ಬು ಇವು ಇತರ ಮುಖ್ಯ ಬೆಳೆಗಳು. ಯೂಕಲಿಪ್ಟಸ್ ಮರಗಳನ್ನು ಇತ್ತೀಚೆಗೆ ಹೆಚ್ಚಾಗಿ ಬೆಳೆಸುತ್ತಿದ್ದಾರೆ.

ರಾಜಧಾನಿ ಆಡಿಸ್ ಅಬಾಬ. ಮಸಾವ ಮತ್ತು ಅಸಾಬುಗಳು ಮುಖ್ಯ ಬಂದರುಗಳು. ಖನಿಜೋತ್ಪನ್ನಗಳಾದ ಬಂಗಾರ, ಕಬ್ಬಿಣ, ಪ್ಲಾಟಿನಂ ಮುಂತಾದವು ಈ ಬಂದರುಗಳಿಂದ ರಫ್ತಾಗುತ್ತವೆ. ಪರ್ವತ ಪ್ರದೇಶವಾದ್ದರಿಂದ ಸಂಚಾರ ಸೌಲಭ್ಯ ಕಡಿಮೆ, ಒಂದೇ ಒಂದು ಪ್ರಮುಖ ರೈಲುಮಾರ್ಗವಿದೆ.

ಪಶ್ಚಿಮ ನೈಲ್ ಪ್ರದೇಶ ಪ್ರಾಚೀನ ಸಂಸ್ಕøತಿಗಳ ಸಂಪರ್ಕವನ್ನು ಹೊಂದಿದೆ. ಪೂರ್ವಭಾಗದ ಸಮುದ್ರತೀರಗಳು ವ್ಯಾಪಾರಕ್ಕೆ ಬಹಳ ಅನುಕೂಲವಾಗಿದ್ದು ದೇಶದ ಅಭ್ಯುದಯಕ್ಕೆ ಕಾರಣವಾಗಿವೆ. ಅದರಲ್ಲೂ ಸೂಯೆeóï ಕಾಲುವೆಯನ್ನು ಕಟ್ಟಿದ ಮೇಲೆ ವ್ಯಾಪಾರ ಬಹುಮಟ್ಟಿಗೆ ಹೆಚ್ಚಿದೆ. ಈ ದೇಶದ ಜನರು ನ್ಯೂಬಿಯನ್ನರು ಮತ್ತು ಈಜಿಪ್ಟ್‍ನವರಂತೆ ಹೆಮಿಟಿಕ್ ಕುಲಕ್ಕೆ ಸೇರಿದವರು. ಸಾಂಬ್ರಾಣಿಯ ಮೂಲ ಪ್ರದೇಶವಾದ ಪಂತ್‍ನ ಜನರೂ ಈ ಕುಲದವರೇ. ಇವರು ಏಡನ್ ಕೊಲ್ಲಿಯ ತೀರದಲ್ಲಿ ನೆಲಸಿ ಮುಂದೆ ಫಿನೀಷಿಯನ್ನರ ಸಂಪರ್ಕ ಪಡೆದರು. ಅರೆಬಿಯದಿಂದ ಸಿಮಿಟಿಕ್ ಕುಲದವರೂ ಬಂದು ನೆಲಸಿರಬಹುದು. ನೀಗ್ರೋಗಳಿಗೆ ಈ ದೇಶದ ಹವಾಮಾನಗಳು ಒಗ್ಗದೆ ನೈಲ್‍ನದಿಯ ಮಧ್ಯಭಾಗದ ಪ್ರದೇಶಗಳಲ್ಲಿ ಮಾತ್ರ ನೆಲೆಸಿದರು. ಇಲ್ಲಿನ ಜನ ಗ್ರೀಜ್ ಎಂಬ ಸಿಮಿಟಿಕ್ ಭಾಷೆಯನ್ನು ಆಡುತ್ತಿದ್ದರು. ಈಗ ಇದು ಬಳಕೆ ತಪ್ಪಿ ಕೇವಲ ಕ್ರೈಸ್ತ ದೇವಾಲಯದ ಪೂಜೋಪಚಾರಗಳಲ್ಲಿ ಮಾತ್ರ ಉಪಯೋಗದಲ್ಲಿದೆ. ಇದರಿಂದ ಹುಟ್ಟಿದ ಅಂಹರಿಷ್ ಮತ್ತು ಟೈಗ್ರಿಷ್ ಎಂಬ ಭಾಷೆಗಳು ಈಗ ಬಳಕೆಯಲ್ಲಿವೆ.

ಈಜಿಪ್ಟ್ ನಾಗರಿಕತೆ ನಪತ ರಾಜ್ಯದ ಮೂಲಕ ಇಲ್ಲಿಗೆ ವಿಸ್ತರಿಸಿ ಅರಬ್ಬೀ ಮತ್ತು ಇತರ ನಾವಿಕರ ಪ್ರಭಾವದಿಂದ ಮತ್ತಷ್ಟು ಪ್ರಬಲವಾಯಿತು. ಈ ದೇಶದ ಇತಿಹಾಸ ಪುರಾತನವಾದುದು. ಆಧುನಿಕ ಟಿಗ್ರಾಪ್ರದೇಶ ಅಂದರೆ ಸಮುದ್ರಕ್ಕೆ ಹತ್ತಿರವಿರುವ ಉತ್ತರ ಪ್ರಾಂತ್ಯಗಳು ಅಬಿಸೀನಿಯ ನಾಗರಿಕತೆಯ ತಾಯ್ನೆಲ. ಅದಕ್ಕೆ ನೈಋತ್ಯ ದಿಕ್ಕಿನಲ್ಲಿ ಇಥಿಯೋಪಿಯದ ಹಿಂದಿನ ರಾಜಧಾನಿಯಾಗಿದ್ದ ಆಕ್ಸಂ ನಗರದ ಅವಶೇಷಗಳನ್ನು ಕಾಣಬಹುದು. ಇವು ಈಜಿಪ್ಟ್ ನಾಗರಿಕತೆಯನ್ನು ಹೋಲುತ್ತವೆ. ಆಕ್ಸಂ ರಾಜ್ಯ ಯಾವಾಗ ಸ್ವತಂತ್ರವಾಯಿತೆಂಬುದು ಗೊತ್ತಿಲ್ಲ. ಒಂದನೆಯ ಶತಮಾನದಲ್ಲಿ ಅರಬ್ಬೀರಾಜ್ಯದ ತೀರದಲ್ಲಿನ ಹಬಷತ್ ರಾಜ್ಯದ ಉಪಶಾಖೆಯಾಗಿ ಉದ್ಭವಿಸಿತೆಂದು ಮಾತ್ರ ಹೇಳಬಹುದು. ಅಬಿಸೀನಿಯದ ದಂತಕಥೆಗಳಿಂದ ದೇಶದ ಹಿಂದಿನ ಚರಿತ್ರೆಯನ್ನು ಊಹಿಸಬಹುದಾಗಿದೆ. ಮಹಾಪ್ರಳಯಾನಂತರ ಹ್ಯಾಮ್‍ನ ಮಗನಾದ ಕುಷ್ ಎಂಬುವನು ಆಕ್ಸಂ ನಗರದ ಸ್ಥಾಪಕನೆಂದೂ ಕುಷ್‍ನ ಮಗನಾದ ಇಥಿಯೋಪ್ಸ್ ಎಂಬುವನಿಂದ ಇಥಿಯೋಪಿಯ ಎಂಬ ಹೆಸರು ಬಂದಿತೆಂದೂ ಐತಿಹ್ಯವಿದೆ. ಈ ಮಾತಿಗೆ ಗ್ರೀಕಿನಲ್ಲಿ ಸುಟ್ಟು ಕಪ್ಪಾದ ಮುಖಗಳು ಎಂಬ ಅರ್ಥವಿದೆ. ಬೈಬಲ್ಲಿನ ಇನ್ನೊಂದು ದಂತಕಥೆ ಈ ರೀತಿ ಇದೆ. ಕ್ರಿ.ಪೂ.11ನೆಯ ಶತಮಾನದಲ್ಲಿ ಆಕ್ಸಂ ರಾಜ್ಯದಲ್ಲಿ ಆಳುತ್ತಿದ್ದ ಶೀಬದ ರಾಣಿಯಾದ ಮಕೆಟ ಎಂಬುವಳು ಸಾಲಮನ್ ರಾಜನನ್ನು ಭೇಟಿ ಮಾಡಿದಳೆಂದೂ ಅವರ ಮಗನಾದ ಮೆನಿಲೆಕ್ ಇಬ್ನ್ ಹಕಿಂ ಎಂಬುವನು ಮೊದಲನೆಯ ಡೇವಿಡ್ ಎಂಬ ಹೆಸರಿನಿಂದ ಇಥಿಯೋಪಿಯ ರಾಜಮನೆತನವನ್ನು ಸ್ಥಾಪಿಸಿದನೆಂದೂ ತಿಳಿದುಬಂದಿದೆ. ಇಥಿಯೋಪಿಯ ರಾಜರು ತಾವು ಅವನ ಸಂತತಿಯವರೆಂದು ಈಗಲೂ ಹೇಳುತ್ತಾರೆ. ವಾಸ್ತವವಾಗಿ ಪ್ರಾಚೀನಪ್ರಪಂಚದಲ್ಲಿ ಗ್ರೀಕರು ತಮ್ಮ ಪ್ರಭಾವವನ್ನು ಹರಡುವವರೆಗೂ ಆಕ್ಸಂ ರಾಜ್ಯದಲ್ಲಿ ನಾಗರಿಕತೆ ಬೆಳೆಯಲು ಸಾಧ್ಯವಾಗಲಿಲ್ಲ. ಈಜಿಪ್ಟಿನಲ್ಲಿ ಟಾಲೆಮಿಗಳು ಆಳುತ್ತಿದ್ದಾಗ ದಂತವ್ಯಾಪಾರಿಗಳು ಮತ್ತು ಇತರರು ಆಗಾಗ್ಗೆ ಕೆಂಪು ಸಮುದ್ರದ ತೀರಕ್ಕೆ ಭೇಟಿಕೊಡುತ್ತಿದ್ದರು. ಈಗಿನ ಮಸ್ಸೋವ ನಗರದ ಹತ್ತಿರ ಅದುಲೆಸ್ ಎಂಬ ವ್ಯಾಪಾರಠಾಣ್ಯವನ್ನು ಸ್ಥಾಪಿಸಿ, ದೇಶದ ಒಳಭಾಗಕ್ಕೆ ಸೈನ್ಯಪಡೆಗಳನ್ನು ಕಳುಹಿಸುತ್ತಿದ್ದರು. ಗ್ರೀಕ್ ಭಾಷೆ ಕ್ರಮೇಣ ಆಡಳಿತ ಭಾಷೆಯಾಯಿತು. ಗ್ರೀಕರ ಪುರಾಣಕಥೆಗಳು ದೇಶೀಯದಂತಕಥೆಗಳಲ್ಲಿ ಲೀನವಾದುವು. ಶ್ರೀಮಂತರು ಗ್ರೀಕ್ ಕಲೆ ಮತ್ತು ಸಂಸ್ಕøತಿಗೆ ಪ್ರೋತ್ಸಾಹ ಕೊಟ್ಟರು. ಕ್ರೈಸ್ತಮತ ಬಹುಕಾಲದ ಮೇಲೆ ತನ್ನ ಪ್ರಭಾವ ಬೀರಿತು. ಕ್ರಿ.ಶ.333ರಲ್ಲಿ ಉಯಿಜನಸ್ ಎಂಬ ರಾಜ ಉತ್ತರ ಅಬಿಸೀನಿಯ ಮತ್ತು ದಕ್ಷಿಣ ಅರೇಬಿಯಗಳಿಗೆ ಒಡೆಯನಾಗಿದ್ದನೆಂದೂ ಕ್ರೈಸ್ತ ಪ್ರವರ್ತಕನಾದ ಪ್ರೂಮೆಂಟಿಯಸ್‍ನಿಂದ ಕ್ರೈಸ್ತಮತಕ್ಕೆ ಸೇರಿದನೆಂದೂ ಅವನ ಶಾಸನದಿಂದ ತಿಳಿದುಬಂದಿದೆ. ರಾಜಕೀಯದಲ್ಲಿ ಎಷ್ಟೇ ಅಲ್ಲೋಲ ಕಲ್ಲೋಲಗಳಾದರೂ ಕ್ರೈಸ್ತಮತ ಅಬಿಸೀನಿಯದಲ್ಲಿ ಶಾಶ್ವತವಾಗಿ ನೆಲಸಿ ಇಂದಿಗೂ ಅಲ್ಲಿನ ಜನರ ಆಧ್ಯಾತ್ಮಿಕ ಜೀವನವನ್ನು ರೂಪಿಸುತ್ತಿದೆ.

ಇದಾದಮೇಲೆ ಅನೇಕ ಶತಮಾನಗಳ ಕಾಲ ಈ ದೇಶದ ಚರಿತ್ರೆ ಕತ್ತಲೆಯಿಂದ ಕೂಡಿತ್ತು. ಆ ಕಾಲದ ರಾಜರ ಹೆಸರುಗಳ ವಿನಾ ಇನ್ನೇನೂ ತಿಳಿದುಬಂದಿಲ್ಲ. ಅನಂತರ ಅಬಿಸೀನಿಯ ಸಿಮಿಟಿಕ್ ನಾಗರಿಕತೆಯಲ್ಲಿ ಲೀನವಾಗಿ ದಕ್ಷಿಣ ಅರೇಬಿಯದಲ್ಲಿ ತನ್ನ ಪ್ರಭಾವವನ್ನು ಬೀರಿತು. ಗ್ರೀಕ್ ದೇಶಗಳೊಡನೆ ಸಂಚಾರಸಂಪರ್ಕವನ್ನು ಬೆಳೆಸಿತು. ದಕ್ಷಿಣ ಅರೇಬಿಯದಲ್ಲಿ ಯೆಹೂದ್ಯರು ಕ್ರಿಶ್ಚಿಯನ್ನರಿಗೆ ಕೊಡುತ್ತಿದ್ದ ಹಿಂಸಾತ್ಮಕ ಕಿರುಕುಳಗಳನ್ನು ತಡೆಗಟ್ಟಲು ಕ್ರಿ.ಶ. 532ರಲ್ಲಿ ಜಸ್ಟಿನಿಯನ್ ಚಕ್ರವರ್ತಿ ಆಕ್ಸಂ ರಾಜನಾದ ಕ್ಯಾಲೆಬ್ ಎಂಬುವನಿಗೆ ಮನವಿ ಮಾಡಿಕೊಂಡ. ಕ್ಯಾಲೆಬ್ ಹಾಗೆ ಮಾಡಿ ಮತ್ತೊಮ್ಮೆ ದಕ್ಷಣ ಅರೇಬಿಯದಲ್ಲಿ ತನ್ನು ಅಧಿಕಾರವನ್ನು ವಿಸ್ತರಿಸಿದ. ಕ್ರಿ.ಶ. 571ರಲ್ಲಿ ಪೈಗಂಬರ್ ಮಹಮ್ಮದನ್ನು ಹುಟ್ಟಿದ ವರ್ಷದಂದು ಒಬ್ಬ ಅಬಿಸೀನಿಯ ಸೈನ್ಯಾಧಿಕಾರಿ ಮೆಕ್ಕದ ಮೇಲೆ ದಂಡಯಾತ್ರೆ ಮಾಡಿದ. ಆದರೆ ಅದು ಫಲಿಸಲಿಲ್ಲ. ಇಥಿಯೋಪಿಯ ಸೈನ್ಯಭಾಗದಲ್ಲಿ ಸಿಡುಬು ರೋಗ ತಲೆದೋರಿದ್ದರಿಂದ ದಕ್ಷಿಣ ಸೈನ್ಯ ಅರೇಬಿಯವನ್ನು ತ್ಯಜಿಸಬೇಕಾಯಿತು. ಇಸ್ಲಾಂ ಮತ ಇದೇ ಸಂದರ್ಭದಲ್ಲಿ ಆಫ್ರಿಕದ ಎಲ್ಲೆಡೆ ಹರಡಿದ್ದರೂ ನ್ಯೂಬಿಯ ಮತ್ತು ಅಬಿಸೀನಿಯ ದೇಶಗಳ ಮೇಲೆ ಯುದ್ಧ ಮಾಡಲೇಬೇಕಾಯಿತು. ಅಬಿಸೀನಿಯ ದೇಶದ ರಾಜರು ಪೋರ್ಚುಗಲ್ ಮತ್ತು ಇತರ ಪಾಶ್ಚಾತ್ಯ ದೇಶಗಳ ಸಹಾಯವನ್ನು ಪಡೆಯಬೇಕಾಯಿತು. ಆದರೆ ಅಬಿಸೀನಿಯನ್ನರು ಜೆಸೂಟರ ಪ್ರಭಾವಕ್ಕೆ ಒಳಗಾಗದೆ ಕೆಥೊಲಿಕ್ ಪಂಥವನ್ನು ನಿರಾಕರಿಸಿ, ಪೌರಸ್ತ್ಯ ಪಂಥದ ಅನುಯಾಯಿಗಳಾದರು.

18 ಮತ್ತು 19ನೆಯ ಶತಮಾನದಲ್ಲೆ ದೇಶದಲ್ಲಿ ವಿಚ್ಛೇದಕಶಕ್ತಿಗಳು ಪ್ರಬಲವಾಗಿ ಅಂತರ್ಯುದ್ಧಗಳಿಂದ ಐಕ್ಯತೆಗೆ ಭಂಗವುಂಟಾಯಿತು. ಅನೇಕ ಪ್ರಾಂತ್ಯಗಳು ಸ್ವತಂತ್ರವಾದುವು. ಗಲ್ಲ ಎಂಬುವರು ಹಣದಾಸೆಯಿಂದ ಶ್ರೀಮಂತರ ಕೈಗೊಂಬೆಗಳಾಗಿ ಪ್ರಾಬಲ್ಯಕ್ಕೆ ಬಂದರು. ಉತ್ತರ ಮತ್ತು ದಕ್ಷಿಣ ಅಬಿಸೀನಿಯ ಬೇರೆಯಾದುವು. ಎಲ್ಲೆಲ್ಲೂ ಅವ್ಯವಸ್ಥೆ ಹಬ್ಬಿತು. ರಾಸ್ ಮೈಕೆಲ್ ಎಂಬ ಸಾಮಂತ ಯಾದುವು. ಎಲ್ಲೆಲ್ಲೂ ಅವ್ಯವಸ್ಥೆ ಹಬ್ಬಿತು. ರಾಸ್ ಮೈಕೆಲ್ ಎಂಬ ಸಾಮಂತ ತನ್ನ ದೌರ್ಜನ್ಯದೃತ್ಯಗಳಿಂದ ಅಪಕೀರ್ತಿ ಪಡೆದ. ಟಿಗ್ರಾದ ರಾಜರು ಪ್ರಾಬಲ್ಯಕ್ಕೆ ಬರಲು ಪ್ರಯತ್ನಿಸಿದರು. ಕೊನೆಗೆ ಅಮ್ಹರದಲ್ಲಿ ಆಳುತ್ತಿದ್ದ ರಾಸ್ ಅಲಿ ದೇಶದಲ್ಲಿ ಐಕ್ಯ ಮತ್ತು ಶಾಂತಿಯನ್ನು ಸ್ಥಾಪಿಸಲು ಪ್ರಯತ್ನಪಟ್ಟ. ಇವನ ಅಳಿಯನಾದ ಕಸೈ ಎಂಬುವನು ಥಿಯೋಡರ್ ಎಂಬ ಹೆಸರಿನಿಂದ 1855ರಲ್ಲಿ ಸಿಂಹಾಸನಕ್ಕೆ ಬಂದ. ಸಮರ್ಥನಾದ ಈತ ದಕ್ಷಿಣಪ್ರಾಂತ್ಯಗಳನ್ನು ಜಯಿಸಿ, ಗಲ್ಲರನ್ನು ಅಡಗಿಸಿ ಸ್ಥಿರವಾದ ಆಡಳಿತವನ್ನು ಸ್ಥಾಪಿಸಲು ಪ್ರಯತ್ನಪಟ್ಟ. ಆದರೂ ದೇಶದಲ್ಲಿ ಎಲ್ಲೆಲ್ಲೂ ದಂಗೆಗಳಾದುವು. ಸೈನಿಕರ ಹಾವಳಿ ಹೆಚ್ಚಾಯಿತು. 1864ರಲ್ಲಿ ಥಿಯೋಡರ್ ಕ್ರೈಸ್ತ ಪಾದ್ರಿಗಳನ್ನೂ ಫ್ರೆಂಚ್ ಮತ್ತು ಇಂಗ್ಲಿಷ್ ರಾಜನಿಯೋಗಿಗಳನ್ನೂ (ಕಾನ್ಸ್‍ಲ್ಸ್) ಸೆರೆಯಲ್ಲಿಟ್ಟ. ಕೊನೆಗೆ 1868ರಲ್ಲಿ ರಾಬರ್ಟ್ ನೇಪಿಯರ್ ಎಂಬ ಬ್ರಿಟಿಷ್ ಸೈನ್ಯಾಧಿಕಾರಿ ಮಸ್ಸೋವಕ್ಕೆ ದಕ್ಷಿಣದಲ್ಲಿ ಸೂಲ ಎಂಬಲ್ಲಿ ನೆಲೆಸಿದ. ಬ್ರಿಟಿಷರ ಸೈನ್ಯ ಸುಲಭವಾಗಿ ದೇಶದೊಳಕ್ಕೆ ನುಗ್ಗಿ ಆಕ್ರಮಣಮಾಡಿತು. ಥಿಯೋಡರ್ ಆತ್ಮಹತ್ಯೆ ಮಾಡಿಕೊಂಡ. ಅವನ ಮಗ ಇಂಗ್ಲೆಂಡಿಗೆ ಓಡಿ ಹೋಗಿ ಅಲ್ಲಿಯೇ ಸತ್ತುಹೋದ. ಅಬಿಸೀನಿಯದಲ್ಲಿ ಪಾಳೆಯಗಾರರ ಪ್ರಭಾವದಿಂದ ನಿರಂಕುಶಪ್ರಭುತ್ವ ಏರ್ಪಟ್ಟಿತು. ಥಿಯೋಡರ್ ತಾತ್ಕಾಲಿಕವಾಗಿ ಐಕ್ಯತೆಯನ್ನು ಸ್ಥಾಪಿಸಿ ತನ್ನ ರಾಜಾಧಿಕಾರದ ಕೀರ್ತಿಯನ್ನು ಹೆಚ್ಚಿಸಿದ. ಕೊನೆಗೆ 1871ರಲ್ಲಿ ಬ್ರಿಟಿಷರ ಸಹಾಯದಿಂದ ಟಿಗ್ರಾರ ರಾಜಕುಮಾರ ಕಸೇ ಎಂಬುವನು ಜಾನ್ ಎಂಬ ಹೆಸರಿನಿಂದ ಸಿಂಹಾಸನಕ್ಕೆ ಬಂದ. ಈಜಿಪ್ಟಿನ ಸೈನ್ಯಗಳು ಅಬಿಸೀನಿಯದ ಮೇಲೆ ಆಕ್ರಮಣ ಮಾಡಿ ವಿಫಲವಾದುವು.

ಈ ಸಂದರ್ಭದಲ್ಲಿ ಇಟಲಿ ಅಬಿಸೀನಿಯದ ಮೇಲೆ ತನ್ನ ವಕ್ರದೃಷ್ಟಿಯನ್ನು ಬೀರಿ ಆಫ್ರಿಕದ ವಿಭಜನೆಯಿಂದ ತನ್ನ ಸಾಮ್ರಾಜ್ಯಷಾಹಿಯನ್ನು ವಿಸ್ತರಿಸಲು ಸಂಕಲ್ಪಿಸಿತು. ಅಬಿಸೀನಿಯದ ಭೌಗೋಳಿಕಸ್ಥಿತಿ ಮತ್ತು ಹವ ಇಟಲಿಯವರಿಗೆ ಅನುಕೂಲವಾಗಿದ್ದುವು. ಬ್ರಿಟಿಷರು ಈಜಿಪ್ಟ್‍ನಲ್ಲಿ ಆಕ್ರಮಣ ನಡೆಸಿದ್ದರಿಂದ ಅಬಿಸೀನಿಯದಲ್ಲಿ ಇಟಲಿಯವರ ಆಕ್ರಮಣಕ್ಕೆ ಯಾವ ವಿರೋಧವನ್ನೂ ವ್ಯಕ್ತಪಡಿಸಲಿಲ್ಲ. 1885ರಲ್ಲಿ ಇಟಲಿ ಮಸ್ಸೋವ ಎಂಬ ಸಮುದ್ರತೀರವನ್ನು ಆಕ್ರಮಿಸಿ ತನ್ನ ರಕ್ಷಣಾಠಾಣ್ಯವನ್ನು ಸ್ಥಾಪಿಸಿತು. ಸಮುದ್ರ ತೀರದ 600 ಚ.ಮೈ. ಇಟಲಿಯ ರಕ್ಷಣೆಗೆ ಒಳಗಾಯಿತು. ಈ ಸಂದರ್ಭದಲ್ಲಿ ಅಬಿಸೀನಿಯ ಸೈನ್ಯ ಪ್ರಬಲವಾಗಿ ಶಿಸ್ತಿನಿಂದ ಕಾಪಾಡಲು ಸಿದ್ಧವಾಯಿತು. ರಷ್ಯ ಮತ್ತು ಫ್ರಾನ್ಸ್ ದೇಶಗಳು ಇಟಲಿಗೆ ವಿರೋಧವಾಗಿ ಅಬಿಸೀನಿಯಕ್ಕೆ ಸಹಾಯ ಮಾಡಿದುವು. ಕೊನೆಗೆ 1896ರಲ್ಲಿ ಅಡೋವ ಕದನದಲ್ಲಿ ಇಟಲಿ ಸೋತು ಅಬಿಸೀನಿಯ ಸ್ವತಂತ್ರವಾಯಿತು.

ಆದರೆ 1935ರಲ್ಲಿ ಇಟಲಿ ಮತ್ತೊಮ್ಮೆ ಆಕ್ರಮಣ ನಡೆಸಿತು. ಇಟಲಿಯ ನಿರಂಕುಶಾಧಿಕಾರಿ ಮುಸೋಲಿನಿ ಆಫ್ರಿಕದಲ್ಲಿ ಮತ್ತೆ ಇಟಲಿಯ ಸಾಮ್ರಾಜ್ಯವನ್ನು ಸ್ಥಾಪಿಸಲು ಸಂಕಲ್ಪಿಸಿದ. ಇಂಗ್ಲೆಂಡ್ ಮತ್ತು ಫ್ರಾನ್ಸ್ ದೇಶಗಳು ಸಂಧಾನದಿಂದ ಸಮಸ್ಯೆಯನ್ನು ತೀರ್ಮಾನಿಸಲು ಪ್ರಯತ್ನಮಾಡಿದ್ದು ವಿಫಲವಾಯಿತು. 1936ರಲ್ಲಿ ಅಬಿಸೀನಿಯ ಇಟಲಿಗೆ ಆಹುತಿಯಾಯಿತು. ಚಕ್ರವರ್ತಿ ಹೈಲಿ ಸೆಲಾಸಿ ಇಂಗ್ಲೆಂಡಿನಲ್ಲಿ ಆಶ್ರಯ ಪಡೆದು ಅಲ್ಲೇ ನೆಲೆಸಿದ. ಎರಡನೆಯ ಮಹಾಯುದ್ಧದಲ್ಲಿ 1941ರಲ್ಲಿ ಬ್ರಿಟಿಷರು ಇಥಿಯೋಪಿಯದ ರಾಜಧಾನಿಯಾದ ಆಡಿಸ್ ಅಬಾಬವನ್ನು ಹಿಡಿದು ಚಕ್ರವರ್ತಿ ಹೈಲಿ ಸೆಲಾಸಿಗೆ ಪುನಃ ರಾಜ್ಯಭಾರವನ್ನು ವಹಿಸಿದರು. ಅಬಿಸೀನಿಯ ಎಷ್ಟೇ ಕಷ್ಟಗನ್ನು ಅನುಭವಿಸಿದರೂ ಹೈಲಿ ಸೆಲಾಸಿಯ ಸಮರ್ಥ ನಾಯಕತ್ವದಲ್ಲಿ ಸ್ವತಂತ್ರ ರಾಷ್ಟ್ರವಾಗಿ ಆಧುನಿಕ ರೀತಿಯಲ್ಲಿ ಪ್ರಗತಿ ಹೊಂದಿದೆ. (ಬಿ.ಎಸ್.ಕೆ.)