ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕೂಗರ್

ವಿಕಿಸೋರ್ಸ್ದಿಂದ

ಕೂಗರ್

ಅಮೆರಿಕ ಖಂಡಗಳಿಗೆ ಸೀಮಿತವಾಗಿರುವ ಒಂದು ಹಬ್ಬೆಕ್ಕು. ಕಾರ್ನಿವೋರ ಗಣದ ಫೆಲಿಡೀ ಕುಟುಂಬಕ್ಕೆ ಸೇರಿದೆ. ಇದಕ್ಕೆ ಪ್ಯೂಮ, ಮೌಂಟನ್ ಲಯನ್, ಪ್ಯಾಂಥರ್, ಕ್ಯಾಟಮೌಂಟ್, ಪಯಿಂಟರ್ (ಬಹುಶಃ ಪ್ಯಾಂಥರ್ ಎಂಬುದರ ಅಪಭ್ರಂಶ) ಎಂಬ ಹೆಸರುಗಳೂ ಇವೆ. ಫೆಲಿಸ್ ಕಾನ್‍ಕಲರ್ ಎಂಬ ವೈಜ್ಞಾನಿಕ 933-936 ಕೂಗುಸಿರು ಹೆಸರಿನ ಈ ಜಾತಿಯಲ್ಲಿ ಸುಮಾರು 15 ಉಪಪ್ರಭೇದಗಳನ್ನು ಗುರುತಿಸಲಾಗಿದೆ. 19ನೆಯ ಶತಮಾನದ ಕೊನೆಯವರೆಗೂ ಕೆನಡದ ಬ್ರಿಟಿಷ್ ಕೊಲಂಬಿಯದಿಂದ ಹಿಡಿದು ದಕ್ಷಿಣ ಅಮೆರಿಕದ ಅರ್ಜೆಂಟೀನ, ಪಟಗೋನಿಯಗಳವರೆಗೂ ಕೂಗರ್ ಹರಡಿತ್ತು. ಆದರೆ ಬೇಟೆಯಿಂದಾಗಿ ಇದರ ವ್ಯಾಪ್ತಿ ಕುಗ್ಗಿದೆ. ಈಗ ಕೆನಡದ ಪಶ್ಚಿಮ ಪರ್ವತ ಪ್ರದೇಶಗಳಲ್ಲಿ ರಾಕಿ ಪರ್ವತಗಳಲ್ಲಿ ಮತ್ತು ದಕ್ಷಿಣ ಅಮೆರಿಕದ ಕಾಡುಗಳಲ್ಲಿ ಮಾತ್ರ ಕಂಡುಬರುತ್ತದೆ. ವಿವಿಧ ಬಗೆಯ ವಾಯುಗುಣಗಳಲ್ಲಿ ಜೀವಿಸಬಲ್ಲ ಪರಿಹೊಂದಾಣಿಕೆಯ ಸಾಮಥ್ರ್ಯವನ್ನು ಪಡೆದಿದೆ. ಸಮುದ್ರಮಟ್ಟದಿಂದ ಹಿಡಿದು 14,000' ಎತ್ತರದ ಪರ್ವತ ಪ್ರದೇಶಗಳಲ್ಲೂ ಬದುಕಬಲ್ಲದು.

ಅಮೆರಿಕದಲ್ಲಿ ಕಾಣಬರುವ ಬೆಕ್ಕಿನ ಜಾತಿಯ ಪ್ರಾಣಿಗಳಲ್ಲಿ ಗಾತ್ರದ ದೃಷ್ಟಿಯಿಂದ ಇದಕ್ಕೆ ಎರಡನೆಯ ಸ್ಥಾನ. ಬೆಳೆವಣಿಗೆಯ ಪೂರ್ಣಾವಸ್ಥೆಯನ್ನು ತಲುಪಿದ ಗಂಡು ಕೂಗರ್ 190-270 ಸೆಂಮೀ. ಉದ್ದವೂ (ಬಾಲವೂ ಸೇರಿ) 60-75 ಸೆಂಮೀ. ಎತ್ತರವೂ ಇರುತ್ತದೆ. 36-45ಕೆಜಿ. ತೂಗುತ್ತದೆ. ಕೆಲವು ಗಂಡುಗಳು 90 ಕೆಜಿ. ತೂಗಿರುವ ದಾಖಲೆಯೂ ಉಂಟು. ಹೆಣ್ಣು ಗಂಡಿಗಿಂತ ಚಿಕ್ಕದು. ಕೂಗರಿನ ಮೈಬಣ್ಣ ಕೆಂಪುಮಿಶ್ರಿತ ಕಂದು. ಕಾಲು, ಹೊಟ್ಟೆ, ಕತ್ತಿನ ತಳಬಾಗ ಮತ್ತು ಮೇಲ್ದುಟಿ ಮಾಸಲು ಬಿಳುಪು. ಕೂಗರ್ ಕೊಂಚಮಟ್ಟಿಗೆ ಸಿಂಹವನ್ನು ಹೋಲುವುದಾದರೂ ಸಿಂಹಕ್ಕಿರುವಂತೆ ಕೇಸರ ಇದರಲ್ಲಿಲ್ಲ. ಕಿವಿಗಳು ಅಗಲವಾಗಿ ದುಂಡು ಆಕಾರದವಾಗಿವೆ. ಬಾಲ ದಪ್ಪ ಹಾಗೂ ಉರುಳೆಯಂತಿದೆ. ಬಾಲದ ಮತ್ತು ಕಿವಿಯ ತುದಿಗಳು ಸ್ವಲ್ಪ ಕಪ್ಪುಬಣ್ಣದವು. ಬಾಲದ ತುದಿಯಲ್ಲಿ ಕೂದಲಿನ ಸಣ್ಣ ಗೊಂಡೆಯಿದೆ. ಕೂಗರ್ ಹಗಲಿನಲ್ಲಿ ಸಾಮಾನ್ಯವಾಗಿ ಬೆಟ್ಟಗಳ ಗುಹೆಗಳಲ್ಲಿ ನಿದ್ದೆ ಮಾಡುತ್ತಲೋ ಇಲ್ಲವೆ ಎತ್ತರವಾದ ಬಂಡೆಗಳ ಮೇಲೆ ಬಿಸಿಲಿಗೆ ಮೈಯೊಡ್ಡಿ ವಿಶ್ರಾಂತಿ ಪಡೆಯುತ್ತಲೋ ಕಾಲ ಕಳೆಯುತ್ತದೆ. ಸಂಜೆಯಾದ ಮೇಲೆ ಆಹಾರಾನ್ವೇಷಣೆಗೆ ಹೊರಡುತ್ತದೆ. ಜಿಂಕೆ, ಮೊಲ, ಕಾಡುಕುರಿ, ಗಿನಿಹಂದಿ ವಿವಿಧ ಬಗೆಯ ಹಕ್ಕಿಗಳು ಇದರ ಆಹಾರ, ದನ, ಕುರಿ, ಮುಂತಾದ ಸಾಕುಪ್ರಾಣಿಗಳನ್ನು ಬೇಟೆಯಾಡುವುದೂ ಉಂಟು. ಆಹಾರಕ್ಕಾಗಿ ತನ್ನ ವಾಸಸ್ಥಳದಿಂದ ಬಲುದೂರ ಸಂಚಾರ ಹೊರಡುವ ಇದು ಅಗಲವಾದ ನದಿಗಳನ್ನು ಸರಾಗವಾಗಿ ಈಜಿಕೊಂಡು ಸಾಗುತ್ತದೆ. ಹುಲಿ, ಸಿಂಹಗಳಂತೆಯೇ ಬೇಟೆಯಲ್ಲಿ ಬಹಳ ಕುಶಲಿ. ಎರೆ ಕಣ್ಣಿಗೆ ಬಿದ್ದರೆ ಅದಕ್ಕೆ ತನ್ನ ಸುಳಿವು ಸಿಕ್ಕದಂತೆ ನಿಶ್ಯಬ್ಧವಾಗಿ ಅದರ ಹತ್ತಿರ ಬರುತ್ತದೆ. ಸಾಕಷ್ಟು ಹತ್ತಿರ ಬಂದ ಮೇಲೆ ಎರೆಯ ಮೇಲೆ ಚಂಗನೆ ನೆಗೆದು ಅದರ ಎದೆ ಅಥವಾ ಕುತ್ತಿಗೆಗೆ ಬಾಯಿಹಾಕಿ ಹಿಡಿದು ನೆಲಕ್ಕುರುಳಿಸುತ್ತದೆ. ಸುಮಾರು 20' ದೂರಕ್ಕೆ ನೆಗೆಯಬಲ್ಲುದೆಂದು ಹೇಳಿಕೆಯಿದೆ. ತುಂಬ ಬಲಶಾಲಿಯಾದ ಇದು ತನಗಿಂತ ಐದುಪಟ್ಟು ಭಾರವಾದ ಎರೆಯನ್ನು 90-100ಮೀ. ದೂರದ ವರೆಗೂ ಎಳೆದೊಯ್ಯಬಲ್ಲುದು. ಸಂತೃಪ್ತಿಯಾಗಿ ತಿಂದ ಮೇಲೆ ಉಳಿಯುವ ಮಾಂಸವನ್ನು ಪೊದೆಯಲ್ಲಿ ಮುಚ್ಚಿಟ್ಟು ಮತ್ತೆ ಮಾರನೆಯ ದಿನ ಬಂದು ತಿನ್ನುವುದುಂಟು. ಮನುಷ್ಯನಿಗೆ ಉಪದ್ರವ ಕೊಡುವುದು ಬಲುವಿರಳ. ಅವನನ್ನು ಕಂಡರೆ ಹೆದರುತ್ತದೆ. ಆದರೂ ಕೆಲವೊಮ್ಮೆ ಮನುಷ್ಯನನ್ನು ಕೊಲ್ಲುವುದುಂಟು. ಬಹುಶಃ ರೇಗಿಸಿದರೆ ಘಾಸಿ ಮಾಡಿದರೆ ಮಾತ್ರ ದಾಳಿಮಾಡುತ್ತದೆ. ಕೂಗರ್‍ಗೆ ನಿರ್ದಿಷ್ಟವಾದ ಸಂತಾನೋತ್ಪತ್ತಿಯ ಕಾಲ ಇಲ್ಲ. ವರ್ಷದ ಯಾವ ತಿಂಗಳಿನಲ್ಲಾದರೂ ಮರಿ ಹಾಕಬಲ್ಲುದು. 2-3 ವರ್ಷಗಳಿಗೊಮ್ಮೆ ಮರಿ ಹಾಕುತ್ತದೆ. ಮರಿಗಳ ಸಂಖ್ಯೆ ಸೂಲಿಗೆ 1-6. ಗರ್ಭಧಾರಣೆಯ ಕಾಲ 90-96 ದಿವಸಗಳು. ಆಗತಾನೆ ಹುಟ್ಟಿದ ಮರಿ ಸುಮಾರು 30 ಸೆಂಮೀ ಉದ್ದವಿದ್ದು 500 ಗ್ರಾಂ. ತೂಗುತ್ತದೆ. ಮರಿ ಕಣ್ಣು ತೆರೆದಿರುವುದಿಲ್ಲ. ಇದರ ಮೈಬಣ್ಣ ಹಳದಿ. ಅದರ ಮೇಲೆಲ್ಲ ಚಿಕ್ಕ ಕಪ್ಪು ಮಚ್ಚೆಗಳಿರುತ್ತವೆ. ಆರು ತಿಂಗಳ ಅನಂತರ ಮಚ್ಚೆಗಳು ಮಾಯವಾಗುತ್ತವೆ. ಮರಿಗಳು 1-2 ವರ್ಷ ವಯಸ್ಸಿನ ವರೆಗೂ ತಾಯಿಯೊಂದಿಗೇ ಇದ್ದು ಅನಂತರ ಸ್ವತಂತ್ರ ಜೀವನ ಆರಂಭಿಸುತ್ತವೆ. ಕೂಗರ್‍ನ ಆಯಸ್ಸು ಸುಮಾರು 20 ವರ್ಷಗಳು. (ಬಿ.ಎನ್.ಬಿ.)