ಪುಟ:Mysore-University-Encyclopaedia-Vol-1-Part-1.pdf/೧೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನೀಡಿದರು. ಭ್ರೂಣದ ಬೆಳವಣಿಗೆಯ ಕಾಲದಲ್ಲಿ ಉದಯಿಸುವ ನಡುಮೂಲಪದರ, ದೇಹದೊಳಗಿನ ಅವಕಾಶವಾದ ಸೀಲೋಮ್ ಬಗ್ಗೆ ಇವರು ನಡೆಸಿದ ಸಂಶೋಧನೆಗಳು ಅತಿ ಮುಖ್ಯವಾದವು. ಅಲ್ಲದೆ ಇವರು ಕೃತಕ ಫಲವಂತಿಕೆಯ ಕ್ರಿಯೆಯನ್ನೂ ಜೀವಿಗಳಲ್ಲಿ ಪ್ರಾಯೋಗಿಕವಾಗಿ ಪ್ರಾರಂಭಿಸಿದರು.

ಭ್ರೂಣಶಾಸ್ತ್ರ ಸಂಶೋಧನೆಗಳಿಗೆ ಹೊಸ ರೂಪವನ್ನು ಕೊಟ್ಟ ಒಂದು ಹೊಸ ತತ್ವವೆಂದರೆ ಬೆಳವಣಿಗೆಯ ಯಾಂತ್ರಿಕ ನಿಯಮಬದ್ಧತೆಯ ತತ್ವ. ಇದರಂತೆ ಭ್ರೂಣದ ಬೆಳವಣಿಗೆಯನ್ನು ಪ್ರಯೋಗಕ್ಕೆ ಒಳಪಡಿಸಿ ಅದರ ಪ್ರತಿಯೊಂದು ಹಂತವನ್ನೂ ವೈಜ್ಞಾನಿಕ ಯಂತ್ರೋಪಕರಣಗಳ ಸಹಾಯದಿಂದ ವಿವರವಾಗಿ ಪರೀಕ್ಷಿಸಿ ನೋಡಬಹುದು. ಭ್ರೂಣದ ಬೆಳವಣಿಗೆ ಯಾಂತ್ರಿಕವಾಗಿ ನಿಯಮಬಧ್ಧವಾಗಿ ಸಾಗುವ ಕ್ರಿಯೆ. ಈ ಕ್ರಿಯೆಯನ್ನು ಯಾಂತ್ರಿಕ ತತ್ವಗಳ ಮೂಲಕ ವಿವರಿಸಬಹುದು. ಭ್ರೂಣದ ಬೆಳವಣಿಗೆಯ ಯಾವುದಾದರೊಂದು ಹಂತ ಮುಂದಿನ ಇನ್ನೊಂದು ಅನುಕ್ರಮ ಹಂತಕ್ಕೆ ನಾಂದಿ. ಆ ಇನ್ನೊಂದು ಹಂತ ಭ್ರೂಣದ ವಿಭೇಧೀಕರಣದ ಮತ್ತೊಂದು ಹಂತದ ಹಾದಿಯಾಗುತ್ತದೆ. ಈ ರೀತಿ ಭ್ರೂಣದ ಬೆಳವಣಿಗೆ ಯಾಂತ್ರಿಕವಾಗಿ ಒಂದು ಹಂತದಿಂದ ಮತ್ತೊಂದು ಹಂತಕ್ಕೆ ಸಾಗುತ್ತದೆ. ಇದನ್ನೇ ಬೆಳವಣಿಗೆಯ ಯಾಂತ್ರಿಕತೆಯೆನ್ನುವುದು. ಅಂಡಾಣು ವೀರ್ಯಾಣುವಿನೊಡನೆ ಮಿಲನವಾಗಿ ಯಾಂತ್ರಿಕವಾಗಿ ಬದಲಾಗುತ್ತಾ ಭ್ರೂಣವಾಗಿ ಬೆಳೆದು ಮುಂದೆ ಪ್ರಬುದ್ಧಜೀವಿಯಾಗಿ ವಿಕಸಿಸಿ ಮತ್ತೆ ತನ್ನ ಅಂಗಾಂಗಗಳಲ್ಲಿ ಲೈಂಗಿಕ ಕೋಶಗಳನ್ನು ಉತ್ಪತ್ತಿ ಮಾಡುತ್ತದೆ. ಈ ಲೈಂಗಿಕಕೋಶಗಳು ಮತ್ತೆ ಮಿಲನಗೊಂಡು ತಮ್ಮ ಪೀಳಿಗೆಯನ್ನು ಮುಂದುವರಿಸುತ್ತವೆ. ಇದು ನಿರಂತರ.

ಭ್ರೂಣಶಾಸ್ತ್ರದ ವಿಕಾಸಕ್ಕೆ ಆಗಸ್ಟ್ ವೀಸ್ ಮನ್ ನ ಕೊಡುಗೆಯೂ ಸಹಾಯ ಮಾಡಿದೆ. ಈತನು ಕೀಟಗಳ ಹಾಗೂ ಇತರ ಅಕಶೇರುಕಗಳ ಅಂಡಾಣುಗಳು ಬೆಳೆಯುವ ವಿಧಾನವನ್ನು ಅಭ್ಯಾಸ ಮಾಡಿದನು. ಈ ಜೀವಿಗಳ ಫಲಿತ ಅಂಡಾಣು ವಿಭಜನೆ ಹೊಂದುತ್ತಾ ಹೋಗುವುದನ್ನು ಪರಿಶೀಲಿಸಿದನು. ಆ ವಿಭಜನೆಯಿಂದಾಗಿ ಜೀವಕೋಶಗಳ ಸಂತತಿಯಲ್ಲಿ ಕೆಲವೇ ಜೀವಕೋಶಗಳು ಪ್ರಬುದ್ಧಜೀವಿಯ ಅಂಡಾಣು ಜನಾಂಗಗಳನ್ನು ಕೊಡುತ್ತವೆಯೆಂಬುದನ್ನು ಕಂಡುಕೊಂಡನು. ಉದಾಹರಣೆಗೆ ಜಂತುಹುಳುಗಳಲ್ಲಿ(ಆಸ್ಕಾರಿಸ್) ಎರಡನೇ ಕ್ಲೀವೇಜ್ ಕ್ರಿಯೆಯಿಂದ ಉತ್ಪತ್ತಿಯಾದ ಒಂದು ಕೋಶ ಮತ್ತೆಲ್ಲ ಕೋಶಗಳಿಂದ ಸ್ವಲ್ಪ ಸರಿದು ಮುಂದೆ ಆ ಜೀವಿಯ ಜನನಾಂಗವಾಗುವುದನ್ನು ವಿವರಿಸಿದನು. ಈ ಜನನಾಂಗ ವೃಷಣವಾಗಬಹುದು ಅಥವಾ ಅಂಡಾಶಯವಾಗಬಹುದು. ಇನ್ನುಳಿದ ಜೀವಕೋಶಗಳು ಪ್ರಾಣಿಯ ಶರೀರರಚನೆಗೆ ಸಹಾಯಮಾಡುತ್ತವೆಯೇ ವಿನಾ ಸಂತಾನೋತ್ಪತ್ತಿ ಕ್ರಿಯೆ ಅವುಗಳಿಂದ ಸಾಧ್ಯವಿಲ್ಲ. ಆದುದರಿಂದ ಈತ ಜೀವಿಯ ಶರೀರದಲ್ಲಿ ಎರಡು ಅಂಗಗಳನ್ನು ಗುರುತಿಸಿದನು. ಮೊದಲನೆಯದು ಸಂತಾನೋತ್ಪತ್ತಿಯಲ್ಲಿ ಭಾಗವಹಿಸುವ ಭಾಗ; ಎರಡನೆಯದು, ಈ ಸಂತಾನೋತ್ಪತ್ತಿ ವಿಭಾಗಕ್ಕೆ ಸಹಾಯ ಮಾಡುವ ಮಿಕ್ಕ ಶರೀರಭಾಗ. ಅವನು, ಸಂತಾನೋತ್ಪತ್ತಿ ಮಾಡುವ ಭಾಗ ಶರೀರದ ಇತರ ಭಾಗದ ಉಪಜೀವಿ ಇದ್ದಂತೆ ಎಂದು ಪ್ರತಿಪಾದಿಸಿದನು. ಆದ್ದರಿಂದ ವೀಸ್ ಮನ್, ಜೀವಿಗಳು ಅಮರವಲ್ಲದಿದ್ದರೂ ಆ ಸಂತಾನೋತ್ಪತ್ತಿಯ ಭಾಗ ಅಮರವಾದದ್ದೆಂದು ಸಾರಿದ.

ಅಕಶೇರುಕ ಭ್ರೂಣಶಾಸ್ತ್ರದ ಮುನ್ನಡೆಗೆ ಮೊಸಾಯಿಕ್ ತತ್ವವೂ ಸಹಾಯಮಾಡಿದೆ. ಹಿಸ್ ಪ್ರತಿಪಾದಿಸಿದ ಈ ತತ್ವವನ್ನು ವಿಲ್ ಹೆಲ್ಮ್ ರೂಕ್ಸ್ ಎತ್ತಿ ಹಿಡಿದ. ಬೆಳವಣಿಗೆಯ ಪೂರ್ವಾವಸ್ಥೆಯಲ್ಲಿರುವ ಅಂಡಾಣುವಿನೊಳಗಿರುವ ಕೋಶರಸದಲ್ಲಿ ವಿವಿಧ ಭಾಗಗಳು ಪದರಗಳಂತಿದ್ದು ಮುಂದೆ ಆಯಾ ಅಂಗಗಳನ್ನು ಕೊಡುತ್ತವೆ ಎಂಬುದು ಈ ಮೊಸಾಯಿಕ್ ತತ್ವದ ತಿರುಳು. ಅಂಡಾಣು ಇನ್ನೂ ಅಂಡಾಶಯದೊಳಗಿರುವಾಗಲೇ ಅದರಲ್ಲಿ ಕೆಲವು ವಿಶಿಷ್ಟ ಭಾಗಗಳು ಉದಯವಾಗುತ್ತವೆಯೆಂದು ರೂಕ್ಸ್ ತಿಳಿಸಿದ. ಈ ತತ್ವವನ್ನು ಊರ್ಜಿತಗೊಳಿಸುವುದಕ್ಕಾಗಿ ಕಶೇರುಕ ಹಾಗೂ ಅಕಶೇರುಕ ಅಂಡಾಣುಗಳನ್ನು ಅನೇಕ ವಿಧವಾದ ಪ್ರಯೋಗಗಳಿಗೆ ಒಳಪಡಿಸಿ ಅದರ ಬೆಳವಣಿಗೆಯನ್ನು ಪ್ರತಿಹಂತದಲ್ಲಿಯೂ ಪರಿಶೀಲಿಸಿದ. ರೂಕ್ಸ್ ಮುಖ್ಯವಾಗಿ ಕಪ್ಪೆಗಳ ಮೊಟ್ಟೆಗಳ ಮೇಲೆ ಪ್ರಯೋಗಗಳನ್ನು ನಡೆಸಿದ. ನಿಶೇಚಿತ ಅಂಡಾಣುವಿನ ಪ್ರತಿ ಭಾಗವನ್ನೂ ಭೌತಿಕವಾಗಿ ಹಾಗೂ ರಾಸಾಯನಿಕವಾಗಿ ವಿಶ್ಲೇಶಿಸಿ ಅದರಲ್ಲಿ ಪ್ರಾಣಿವಲಯ ಹಾಗೂ ಆಹಾರ ವಲಯವನ್ನು ಗುರುತಿಸಿದ. ನಿಶೇಚಿತ ಅಂಡಾಣುವಿನಿಂದ ಉತ್ಪತ್ತಿಯಾದ ಜೀವಕೋಶಗಳ ಜೀವರಸವನ್ನೂ, ಜೀವಕೋಶಗಳ ಭಾಗಗಳನ್ನೂ ಸೂಕ್ಷ್ಮವಾಗಿ ಪರಿಶೀಲಿಸಿ ಕೋಶ ವಿಭಜನೆಯ ಕ್ರಿಯೆ ಮುಂದುವರಿದಂತೆ ಹಿಂದಿದ್ದ ಕೋಶಗಳಿಂದ ಉದಯವಾದ ಹೊಸ ಕೋಶಗಳು ಚಿಕ್ಕದಾಗಿರುವುದನ್ನು ಹಾಗೂ ಅವುಗಳಲ್ಲಿ ಕೆಲವು ನರಮಂಡಲ ಕೆಲವು ಮಾಂಸಖಂಡ, ಇತ್ಯಾದಿ ಭಾಗಗಳಾಗಿ ಬೆಳೆಯುವುದನ್ನು ಕಂಡುಕೊಂಡ. ಈ ರೀತಿಯ ಸಮಗ್ರ ಪರಿಶೀಲನೆಯನ್ನು ಹಿಮ್ಮುಖವಾಗಿ ಕೊಂಡೊಯ್ದು ಅಂಡಾಣುವಿನೊಳಗಿನ ಕೋಶರಸದ ವಿವಿಧ ಭಾಗಗಳಿಗೆ ಸಂಬಂಧ ಕಲ್ಪಿಸಿದ.

ಮೊಸಾಯಿಕ್ ತತ್ವವನ್ನು ಪರಿಶೀಲಿಸಲು ವಿವಿಧ ಪ್ರಭೇಧಗಳ ಜೀವಿಗಳ ಅಂಡಾಣುಗಳನ್ನು ಪ್ರಯೋಗಕ್ಕೊಳಪಡಿಸಲಾಯಿತು. ಕೆಲವು ಜೀವಿಗಳ ಅಂಡಾಣು ಮೊಸಾಯಿಕ್ ತತ್ವವನ್ನು ಪರಿಪಾಲಿಸಿದರೆ ಮತ್ತೆ ಕೆಲವು ಜೀವಿಗಳ ಅಂಡಾಣುಗಳು ಈ ತತ್ವಕ್ಕೆ ಹೊರತಾಗಿದ್ದವು. ಆದುದರಿಂದ ಮೊಸಾಯಿಕ್ ತತ್ವವನ್ನು ಸಂಪೂರ್ಣವಾಗಿ ಎಲ್ಲಾ ಜೀವಿಗಳಿಗೂ ಅನ್ವಯಿಸುವುದು ಕಷ್ಟ. ಬಹುತೇಕ ಅಕಶೇರುಕ ಜೀವಿಗಳು ಮೊಸಾಯಿಕ್ ಅಂಡಾಣುವನ್ನು ಹೊಂದಿವೆ. ಮತ್ತೆ ಕೆಲವೇ ಅಕಶೇರುಕಗಳು ಇದಕ್ಕೆ ವಿರುದ್ಧವಾದ ರೀತಿಯ ಅಂಡಾಣುಗಳನ್ನು ಹೊಂದಿವೆ. ಈ ರೀತಿಯ ಮೊಟ್ಟೆಗಳನ್ನು ವಿಧಿಬದ್ಧ ಅಂಡಾಣುಗಳು ಎಂದು ಹೇಳುತ್ತಾರೆ. ವಿಧಿಬದ್ಧ ಅಂಡಾಣುಗಳ ಕೋಶರಸ ಮೊಸಾಯಿಕ್ ಅಂಡಾಣುಗಳ ಕೋಶರಸದಂತೆ ನಾನಾ ವಲಯಗಳನ್ನು ಹೊಂದಿಲ್ಲ. ಇಲ್ಲಿ ವಿಭಜನೆಯಾದ ನಿಶೇಚಿತ ಅಂಡಾಣುವಿನ ಕೋಶಗಳನ್ನು ಬೇರ್ಪಡಿಸಿ ಬೆಳೆಸಿದರೆ ಅವು ಎರಡು ಲಾರ್ವಾಗಳಾಗಿ ಬೆಳೆಯುವುದು ಕಂಡುಬಂತು. ಇನ್ನೂ ಮುಂದುವರೆದ ಪ್ರಯೋಗಗಳು ಜೈಗೋಟ್ ವಿಭಜನೆಯಿಂದ ೪ ಜೀವಕೋಶಗಳು ಹುಟ್ಟಿಬಂದ ಅವಸ್ಥೆಯಲ್ಲಿ ಅವುಗಳನ್ನು ಬೇರ್ಪಡಿಸಿ ೪ ಲಾರ್ವಾಗಳನ್ನು ಬೆಳೆಸಿರುವುದೂ ಉಂಟು. ಅಂದಮೇಲೆ ಈ ನಿಶೇಚಿತ ಅಂಡಾಣುಗಳ ಕೋಶರಸದಲ್ಲಿ ಜೈಗೋಟ್ ವಿಭಜನೆಯ ಪ್ರಥಮ ಹಂತದ ಪ್ರತಿಯೊಂದು ಕೋಶಗಳಲ್ಲಿಯೂ ಸಂಪೂರ್ಣ ಜೀವಿಯಾಗಲು ಬೇಕಾದ ಪರಿಕರಗಳೆಲ್ಲವೂ ಕಂಡುಬರುತ್ತವೆ. ಆದರೆ ಮೊಸಾಯಿಕ್ ಅಂಡಾಣುಗಳಲ್ಲಿ ಈ ರೀತಿ ಇಲ್ಲ. ಮೃದ್ವಂಗಿಗಳ ಹಾಗೂ ವಲಯವಂತಗಳ ಅಂಡಾಣುಗಳು ಮೊಸಾಯಿಕ್ ಅಂಡಾಣುಗಳಿಗೆ ಉತ್ತಮ ಉದಾಹರಣೆ. ಕಠಿಣಚರ್ಮಿಗಳಾದ ನಕ್ಷತ್ರಮೀನುಗಳು, ಕಡಲ ಕುಡಿಕೆಗಳು ವಿಧಿಬದ್ಧ ಮೊಟ್ಟೆಗಳನ್ನು ಹೊಂದಿವೆ. ಕಾನ್ ಕ್ಲಿನ್ ಈ ಅಂಡಾಣುಗಳ ಜೈಗೋಟ್ ಅವಸ್ಥೆಯಲ್ಲಿ ನಡೆಯುವ ವಿಭಜನೆಯನ್ನು ನಿರ್ದಿಷ್ಟ ಹಾಗೂ ಅನಿರ್ದಿಷ್ಟ ಎಂದು ಎರಡು ರೀತಿಯಾಗಿ ವಿಂಗಡಿಸಿದ್ದಾನೆ.

ಇಷ್ಟೆಲ್ಲಾ ಪ್ರಯೋಗಗಳು ನಡೆದಿದ್ದರೂ ರೂಕ್ಸ್ ಪ್ರತಿಪಾದಿಸಿದ ಮೊಸಾಯಿಕ್ ತತ್ವ ಇನ್ನೂ ಜೀವಂತವಾಗಿ ಉಳಿದಿದೆ. ಈ ತತ್ವಕ್ಕೆ ಪ್ರಯೋಗಗಳ ಸಾಕ್ಷ್ಯಾಧಾರ ಹೆಚ್ಚಾಗಿ ಅಕಶೇರುಕ ಜೀವಿಗಳ ಮೊಟ್ಟೆಗಳಲ್ಲಿ ಕಂಡುಬಂದಿದೆ. ಮೃದ್ವಂಗಿಗಳ ಮತ್ತು ವಲಯವಂತಗಳ ಮೊಟ್ಟೆ ಬೆಳೆಯುವಾಗ ಕಂಡುಬರುವ ವೈಶಿಷ್ಟ್ಯಗಳನ್ನು, ಗರ್ಭಕಟ್ಟಿದ ಮೊಟ್ಟೆಯಿಂದ ಉದಯವಾದ ಪ್ರತಿ ಜೀವಕೋಶಗಳ ಬೆಳವಣಿಗೆಯನ್ನು, ಅವು ಮುಂದೆ ಕೊಡುವ ಅಂಗಗಳನ್ನು ನಿರ್ದಿಷ್ಟವಾಗಿ ಗುರುತಿಸಲಾಗಿದೆ. ಇದಕ್ಕೆ ಕೋಶವಂಶಾವಳಿ ಎನ್ನುವರು. ಈ ಬೆಳವಣಿಗೆಯ ಹಂತಗಳ ಅಧ್ಯಯನದಿಂದ ಅಕಶೇರುಕ ಭ್ರೂಣಶಾಸ್ತ್ರ ಬಹುವಾಗಿ ಪುಷ್ಟಿಗೊಂಡಿತು.

ನಿಶೇಚಿತ ಅಂಡಾಣುವಿನ ವಿಭಜನೆಯಿಂದ ಹುಟ್ಟಿಬರುವ ಬ್ಲಾಸ್ಟುಲ ಅವಸ್ಥೆಯಲ್ಲಿ ಬರುವ ಜೀವಕೋಶಗಳ ವಿವಿಧ ಭಾಗಗಳು ಮುಂದೆ ಬೆಳೆಯುವ ಭ್ರೂಣ ಇಂಥ ಅಂಗವನ್ನೇ ಕೊಡುತ್ತದೆ ಎಂಬುದನ್ನು ಪತ್ತೆಹಚ್ಚುವುದು ಈಗ ಸಾಧ್ಯವಾಗಿದೆ. ಜೈಗೋಟ್ ವಿಭಜನೆಯಿಂದ ಉತ್ಪತ್ತಿಯಾಗುವ ಜೀವಕೋಶಗಳ ಪ್ರಾಥಮಿಕ ವಿಭಜನಾಹಂತವನ್ನು ಗುರುತಿಸಿ ಹಾಗೂ ಪ್ರಾಥಮಿಕ ಹಂತದಲ್ಲಿದ್ದ ಜೀವಕೋಶಗಳನ್ನು ಗುರುತಿಟ್ಟುಕೊಂಡು ಅವುಗಳ ಬೆಳವಣಿಗೆಯನ್ನು ನೇರವಾಗಿ ಜೀವಿ ರೂಪುಗೊಳ್ಳುವವರೆಗೂ ಪರಿಶೀಲಿಸಿ ಅದು ಕೊನೆಯ ಘಟ್ಟದಲ್ಲಿ ಏನಾಗುತ್ತದೆಂಬುದನ್ನು ಅರಿಯುವುದೇ ಕೋಶವಂಶಾವಳಿಯ ಅಭ್ಯಾಸ. ಇದು ಭ್ರೂಣಶಾಸ್ತ್ರಕ್ಕೆ ಮಾತ್ರ ಸೀಮಿತವಲ್ಲ. ಜೀವಕೋಶಶಾಸ್ತ್ರಕ್ಕೂ ಸೇರಿದೆ. ಈ ಅಭ್ಯಾಸದಿಂದಾಗಿ ರೂಕ್ಸ್ ನ ಮೊಸಾಯಿಕ್ ತತ್ವಕ್ಕೆ ಹೆಚ್ಚಿನ ವೈಜ್ಞಾನಿಕ ಬೆಲೆ ದೊರಕಿತು. ಪ್ರಾಯೋಗಿಕ ಬೆಳವಣಿಗೆಯ ಹಂತದಲ್ಲಿ ಈ ಕೋಶವಂಶಾವಳಿಯನ್ನು ಗುರುತಿಸಲಾಯಿತು. ಅಮೇರಿಕದ ಜೀವಕೋಶಶಾಸ್ತ್ರಜ್ಞರಾದ ಕಾಕ್ಲಿನ್, ಹ್ಯಾರಿಸನ್, ರೋಯೆಬ್ ಬ್ರಾಷೆ, ಹೆರ್ಟ್ ವಿಗ್, ವೀಸ್ ಮನ್ ಮುಂತಾದವರು ರೂಕ್ಸ್ ತತ್ವವನ್ನು ಒಪ್ಪಿಕೊಂಡರು. ಇವರು ಸಾಮಾನ್ಯವಾಗಿ ಅಕಶೇರುಕ ಗುಂಪಿನ ಎಲ್ಲಾ ವಂಶದ ಪ್ರಭೇಧಗಳ ಬೆಳವಣಿಗೆಯಲ್ಲೂ ಕೋಶವಂಶಾವಳಿಯನ್ನು ಗುರುತಿಸಬಹುದು ಎಂಬ ತೀರ್ಮಾನಕ್ಕೆ ಬಂದರು. ಕೆಲವು ಕಶೇರುಕಗಳೂ ಕೋಶವಂಶಾವಳಿಯನ್ನು ಹೊಂದಿವೆ ಎಂಬುದಾಗಿಯೂ ತಿಳಿಸಿದರು.ಕೋಶವಂಶಾವಳಿಯನ್ನು ಸಂಪೂರ್ಣವಾಗಿ ಅರಿಯಬೇಕಾದರೆ ಮೊಟ್ಟೆಯೊಳಗೆ ಇರುವ ವಿವಿಧ ವಲಯಗಳನ್ನು ಗುರುತಿಸಿಕೊಳ್ಳಬೇಕು. ವಿವಿಧ ವಲಯಗಳಲ್ಲಿರುವ ರಾಸಾಯನಿಕ ವಸ್ತುಗಳನ್ನು ಅರ್ಥಮಾಡಿಕೊಳ್ಳಬೇಕು. ಯುಗ್ಮಜದ ವಿಭಜನೆಯಿಂದಾಗಿ ಹುಟ್ಟಿಬರುವ ಬ್ಲಾಸ್ಟುಲ ಹಾಗೂ ಗ್ಲಾಸ್ಟುಲ ಅವಸ್ಥೆಗಳಲ್ಲಿ ಮೊಟ್ಟೆಯ ವಿವಿಧವಲಯಗಳಿಂದ ಉಂಟಾಗುವ ಕೋಶಗಳ ಭಾಗಗಳನ್ನು ಗುರುತಿಸಿಕೊಳ್ಳಬೇಕು. ಈ ರೀತಿಯ ನಿರ್ದಿಷ್ಟ ಭಾಗಗಳ ಗುರುತಿನಿಂದಾಗಿ ಈ ಭಾಗಗಳಲ್ಲಿರುವ ಜೀವಕೋಶಗಳು ಮುಂದೆ ಯಾವ ಅಂಗಕಟ್ಟನ್ನು ಅಥವಾ ಅಂಗವನ್ನು ಕೊಡುತ್ತವೆ ಎಂಬುದನ್ನು ಪ್ರಯೋಗಗಳ ಮೂಲಕ ಅರಿಯುತ್ತ ಆ ಕೋಶಸಂತತಿಯ ಗತಿಯನ್ನೇ ಅನುಕ್ರಮವಾಗಿ ಪತ್ತೆ ಹಚ್ಚಿದಲ್ಲಿ ಕೊನೆಯ ಹಂತದಲ್ಲಿ ಅದು ಯಾವ ಅಂಗವನ್ನು ಕೊಡುತ್ತದೆಂದು ಗುರುತಿಸಬಹುದು. ಪ್ರಾಯೋಗಿಕ ಭ್ರೂಣಶಾಸ್ತ್ರದಲ್ಲಿ ಇಂತಹ ಅಧ್ಯಯನಗಳು ಹೊಸಬೆಳಕನ್ನು ಚೆಲ್ಲಿವೆ. ಇಂದು ಯಾವುದೇ ಅಕಶೇರುಕದ ಕೋಶವಂಶಾವಳಿಯನ್ನಾದರೂ ಅರ್ಥಮಾಡಿಕೊಳ್ಳಬಹುದು. ಪಾಲಿಗಾರ್ಡಿಯಸ್, ಪಟೆಲ್ಲಾ ಮುಂತಾದ ಪ್ರಭೇಧಗಳಲ್ಲಿ ಇದನ್ನು ಪೂರ್ಣವಾಗಿ ಅಧ್ಯಯನಮಾಡಲಾಗಿದೆ.