ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕುಫು

ವಿಕಿಸೋರ್ಸ್ದಿಂದ

ಕುಫು

ಕ್ರಿ.ಪೂ.ಸು. 2590-2567, ಈಜಿಪ್ಟಿನ ಇತಿಹಾಸದ ಪ್ರಾರಂಭ ಕಾಲದಲ್ಲಿ ಆಳುತ್ತಿದ್ದ ನಾಲ್ಕನೆಯ ರಾಜವಂಶದ ಎರಡನೆಯ ದೊರೆ ಮತ್ತು ನೈಲ್ ನದೀದಡದಲ್ಲಿ ಬಿಜಾ ಎಂಬಲ್ಲಿರುವ ಜಗತ್ಪ್ರಸಿದ್ಧ ಬೃಹತ್ ಪಿರಮಿಡಿನ ನಿರ್ಮಾತೃ. ಆ ವಂಶದ ಮೂಲಪುರುಷ ಸ್ನೆಫೆರು ಮತ್ತು ರಾಣಿ ಹೆಟಿಫಿರಿಸ್-ಇವರ ಪುತ್ರ. ಪ್ರಾಚೀನರಾಜ್ಯದ ಕಾಲದಲ್ಲಿ ಆಳಿದ ಈಜಿಪ್ಪಿನ ದೊರೆಗಳಲ್ಲೆಲ್ಲ ಅತ್ಯಂತ ಬುದ್ಧಿಶಾಲಿ. ಸಾಹಸಿ ಮತ್ತು ದಕ್ಷನೆಂದು ಹೆಸರಾಗಿದ್ದಾನೆ. ಈತ ಬಹುಶಃ ನಾಲ್ಕು ಬಾರಿ ಮದುವೆಯಾಗಿದ್ದನೆಂದು ತಿಳಿದುಬರುತ್ತದೆ. ಇವರಲ್ಲಿ ಕಡೆಯವಳಾದ ನೆಪೆರ್ಟ್-ಕೌ ಇವನ ಹಿರಿಯ ಸೋದರಿ. ಈಜಿಪ್ಟಿನ ರಾಜಮನೆತನದಲ್ಲಿ ಉತ್ತರಾಧಿಕಾರ ಸ್ತ್ರೀಯರ ಮೂಲಕವಾಗಿದ್ದುದರಿಂದ ರಾಜಕುಮಾರರು ತಮ್ಮ ಸೋದರಿಯರನ್ನು ವಿವಾಹವಾಗುವ ಪದ್ಧತಿ ರೂಢಿಯಲ್ಲಿತ್ತು.

 ಕುಫು ಅನೇಕ ಮತೀಯ ಸುಧಾರಣೆಗಳನ್ನು ಮಾಡಿ ಯಜ್ಞಯಾಗಾದಿಗಳನ್ನು ನಿಲ್ಲಿಸಿದ್ದರಿಂದ ಈಜಿಪ್ಟಿನ ಮತೀಯ ಪಂಡಿತರ ದ್ವೇಷ ಕಟ್ಟಿಕೊಳ್ಳಬೇಕಾಯಿತು. ಕ್ರೂರಿ, ಪಾಷಂಡಿ ಎಂದೆಲ್ಲ ಅವರು ಕುಫುವನ್ನು ಹಿಯ್ಯಾಳಿಸಿದ್ದಾರೆ. ಇದು ಸತ್ಯ ದೂರವೂ ದ್ವೇಷಪೂರಿತವೂ ಅದುದ್ದೆಂದು ಇತಿಹಾಸದ ಪಿತನಾದ ಹಿರಾಡೊಟಸ್ (ಕ್ರಿ.ಪೂ.ಸು. 5ನೆಯ ಶತಮಾನ) ಹೇಳಿದ್ದಾನೆ.

 ಕುಫು ಕಟ್ಟಿಸಿದ ಪಿರಮಿಡ್ ವಿಶ್ವದ ಅತ್ಯಂತ ದೊಡ್ಡ ಕಟ್ಟಡ. 13 ಎಕರೆ ಭೂಮಿಯನ್ನು ಅವರಿಸಿಕೊಂಡಿರುವ ಈ ಕಟ್ಟಡಕ್ಕೆ 25,00,000 ಕಲ್ಲುಗಳನ್ನು ಬಳಸಲಾಗಿದೆ. ಇವುಗಳಲ್ಲಿ ಯಾವುದೂ 2ಳಿ ಟನ್‍ಗಳಿಗಿಂತ ಕಡಿಮೆ ತೂಕವಿಲ್ಲ. ಕೆಲವು 15 ಟನ್‍ಗಳಷ್ಟು ತೂಕವಾಗಿವೆ. ಅಡಿಪಾಯದ ಉದ್ದ 775', ಎತ್ತರ 450'. ಈ ಭಾರವಾದ ಕಲ್ಲುಗಳನು ದಿಮ್ಮಿಗಳ ಸಹಾಯದಿಂದ ಸಾಗಿಸಲಾಗುತ್ತಿತ್ತಂತೆ. ನೈಲ್ ನದಿಯ ಪ್ರವಾಹದ ಕಾಲದಲ್ಲಿ ಕೆಲಸವಿಲ್ಲದಿದ್ದ ಲಕ್ಷಾಂತರ ವ್ಯವಸಾಯಗಾರರನ್ನು ಉಪಯೋಗಿಸಿಕೊಂಡು 20 ವರ್ಷಗಳ ದೀರ್ಘ ಅವಧಿಯಲ್ಲಿ ಇದನ್ನು ಕಟ್ಟಿಸಿ ಮುಗಿಸಲಾಯಿತೆಂದು ಹೇಳಲಾಗಿದೆ. (ನೋಡಿ- ಪಿರಮಿಡ್ಡುಗಳು)            

(ಎಚ್.ಎಸ್.ಆರ್.ಎ.)