ಪುಟ:ಯಶೋಧರ ಚರಿತೆ.pdf/೧೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ


ಟಿಪ್ಪಣಿಗಳು

೧. ಮಹಾಕವಿಗಳ ಮಾತಿನ ಸುಂದರರೀತಿಗೆ ಇದೊಂದು ಉದಾಹರಣೆ.
ಆದಿ ತೀರ್ಥಂಕರನಿಂದ ತೊಡಗಿ ಮಲ್ಲತೀರ್ಥಂಕರನವರೆಗಿನ ಹತ್ತೊಂಬತ್ತು
ಮಂದಿಯೂ ಒಲಿಸಿಕೊಂಡುದು ಒಬ್ಬಳನ್ನೇ-ಮುಕ್ತಿ ಎಂಬ ವಧುವನ್ನೇ. ಒಬ್ಬರಾದ
ಮೇಲೆ ಒಬ್ಬರಂತೆ ಅವಳನ್ನು ಒಲಿಸಿದವರು ಬೇರೆಬೇರೆಯಾಗಿದ್ದು ಅವಳು
ಯಾವಾಗಲೂ ಇತರರಿಗೆ ಪರವನಿತೆಯೆನಿಸಿಕೊಂಡೇ ಇದ್ದಳು. ಆಗಿದ್ದರೂ
ಸುವ್ರತನೆಂಬ ಇಪ್ಪತ್ತನೆಯ ತೀರ್ಥಂಕರನೂ ಅವಳನ್ನೇ ಒಲಿಸಿಕೊಂಡನು. ಅವನಿಗೆ
ಇದರಿಂದ ಕೆಟ್ಟ ಹೆಸರು ಬಾರದೆ ಪರವನಿತೆಯಲ್ಲಿ ಒಂದಿಷ್ಟೂ
ಅಪೇಕ್ಷೆಯಿರಿಸಿಕೊಳ್ಳದವನು ಎಂಬ ಪ್ರಶಂಸೆಯೆ ದೊರೆಯಿತಂತೆ! ಅವನು ದೇವರ
ದೇವನು ಆಗಿದ್ದನಂತೆ. ಆ ರೀತಿ ಮಹಿಮಾವಂತನಾದ, ಸಾರ್ಥಕನಾಮನಾದ
ಸುವ್ರತನನ್ನು, ಒಳ್ಳೆಯ ವ್ರತವನ್ನೇ ನಮಗೆ ದಯಪಾಲಿಸಲಿ ಎಂದು ಕವಿ
ಚಮತ್ಕಾರವಾಗಿ ಪ್ರಾರ್ಥಿಸುತ್ತಾನೆ.
ಹಲವರೊಲಿಸಿದ ಹೆಣ್ಣನ್ನು ಸುವ್ರತನೂ ಒಲಿಸಿಕೊಂಡರೂ ಪರರ ಹೆಣ್ಣನ್ನು
ಬಯಸದವನೆಂಬ ಪ್ರಸಿದ್ದಿಗೆ ಪಾತ್ರನಾದನೆಂದು ಹೇಳುವಲ್ಲಿ ವಿರೋಧವು
ತೋರಿಬರುತ್ತದೆ. ಆದರೆ ಆ ಹೆಣ್ಣು ಮತ್ತರೂ ಅಲ್ಲ. ಮುಕ್ತಿ ಎನ್ನುವಾಗ ಈ
ವಿರೋಧವು ಪರಿಹಾರಗೊಳ್ಳುತ್ತದೆ. ಆ ಉಕ್ತಿ ಚಮತ್ಕಾರದಲ್ಲಿ, ಎಲ್ಲ
ತೀರ್ಥಂಕರರೂ ಮೋಕ್ಷವನ್ನು ಪಡೆದವರೆಂದೂ, ಅವರು ದೇವತೆಗಳಿಗೆಲ್ಲ
ದೇವರಾಗಿದ್ದರೆಂದೂ, ಇದಕ್ಕೆಲ್ಲ ಅವರ ಪರವನಿತಾನಿರಪೇಕ್ಷಗುಣವೇ ಕಾರಣವೆಂದು
ಸೂಚಿತವಾಗಿದೆ. ಪರಸ್ತ್ರೀಕಾಮುಕತೆಯನ್ನು ಪರಿಹರಿಸಿಕೊಂಡವರು
ಪರಮಪದವನ್ನು ಪಡೆಯಬಹುದೆಂದು ಇದರಿಂದ ಧ್ವನಿತವಾಗುತ್ತದೆ.
ಈ ಕತೆಯಲ್ಲಿ ಒಲ್ಮೆಯ ವಿಷಯವಿರುವುದರಿಂದ ಕವಿ 'ಒಲಿಸು' ಎಂಬ
ಶಬ್ದವನ್ನು ಆರಂಭದಲ್ಲಿಯೇ ಪ್ರಯೋಗಿಸಿದ್ದಾನೆನ್ನಬಹುದು.

'ಯಶೋಧರ ಚರಿತೆ' ಎಂಬುದು 'ಜೀವದಯಾಷ್ಟಮಿ' ಎಂಬ ವ್ರತದ
ಸಂದರ್ಭಕ್ಕೊಪ್ಪುವ ಕತೆಯಾದುದರಿಂದ ಜನ್ನಕವಿ ಆರಂಭದಲ್ಲಿ ಸುವ್ರತಜಿನನನ್ನ
ಪ್ರಾರ್ಥಿಸಿ, ಅವನು ಎಲ್ಲರಿಗೆ ಆ ವ್ರತವನ್ನು ಅನುಗ್ರಹಿಸುವಂತೆ ಕೇಳಿಕೊಳ್ಳುತ್ತಾನೆ.