ಪುಟ:Mysore-University-Encyclopaedia-Vol-1-Part-1.pdf/೨೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಣಿಗೆ : ಕಲಸಿದ ಕಾಂಕ್ರೀಟನ್ನು ಕಟ್ಟಡದ ನಾನಾ ಭಾಗಗಳಿಗೆ ಉಪಯೋಗಿಸುವಾಗ ಅದು ಪ್ರಥಮ ಸ್ಥಿರತೆಯನ್ನು ಪಡೆಯುವವರೆಗೂ ಕಾಂಕ್ರೀಟ್‍ನ ತಳಕ್ಕೆ ಮತ್ತು ಸುತ್ತಲೂ ಕೊಡುವ ಆಧಾರಕ್ಕೆ ಈ ಹೆಸರಿದೆ. ಸಾಮಾನ್ಯವಾಗಿ ಅಣಿಗೆಗಳನ್ನು (ಫಾರಂ ವರ್ಕ್) ಸುಲಭ ಬೆಲೆಯ ಮರದ ಹಲಗೆಗಳಿಂದ ತಯಾರಿಸುತ್ತಾರೆ. ಮರದ ಹಲಗೆಗಳು ಪೂರ್ತಾ ಹಸಿಯಾಗಿರಬಾರದು ಅಥವಾ ಒಣಗಿರಬಾರದು. ಇಂಥ ಹಲಗೆಗಳನ್ನು ತೆಗೆದುಕೊಂಡು ಕಟ್ಟುವ ಕಟ್ಟಡದ ರೂಪವನ್ನು ಅನುಸರಿಸಿ ಅಣಿಗೆಗಳನ್ನು ತಯಾರಿಸುತ್ತಾರೆ. ಹಲಗೆಯ ದಪ್ಪ ಹಸಿ ಕಾಂಕ್ರೀಟ್‍ನ ಒತ್ತಡವನ್ನು ತಡೆಯುವಂತಿರಬೇಕು. ಸಾಮಾನ್ಯವಾಗಿ ಇದರ ದಪ್ಪ 1"-11/2" ವರೆಗೂ ಇರುತ್ತದೆ. ಅಣಿಗೆಯ ಒಳಭಾಗವನ್ನು ನುಣುಪಾಗಿಸಲು, ಒಳಗಡೆ ಸುತ್ತಲೂ ತಗಡಿನ ಪಟ್ಟಿಯನ್ನು ಹೊಡೆದಿರುತ್ತಾರೆ. ಮರದ ಅಣಿಗೆಗಳು ನಾಲ್ಕು ಸಾರಿ ಉಪಯೋಗಕ್ಕೆ ಬರುತ್ತವೆ. ಈಚೆಗೆ ಅಣಿಗೆಗಳನ್ನು ಕಬ್ಬಿಣದ ತಗಡಿನಿಂದ ತಯಾರಿಸುತ್ತಾರೆ. ಇಂಥ ಅಣಿಗೆಗಳಿಂದ ಕರಾರುವಾಕ್ಕಾದ ತೂಕ, ಗಾತ್ರದ ಕಾಂಕ್ರೀಟ್ ಭಾಗಗಳನ್ನು ಪಡೆಯಬಹುದು. ಅದೂ ಅಲ್ಲದೆ ಇವುಗಳನ್ನು ಬಹಳ ಸಾರಿ ಉಪಯೋಗಿಸಬಹುದು. ಅಣಿಗೆಗಳನ್ನು ತಳಪಾಯ, ತೊಲೆ, ಗೋಡೆಗಳು, ಕಂಬಿಗಳು, ಮೇಲ್ಛಾವಣಿಗಳು ಮತ್ತು ಅಂತಸ್ತಿನ ಕಟ್ಟಡಗಳಲ್ಲಿ ಕಾಂಕ್ರೀಟನ್ನು ಹಾಕುವಾಗ ಉಪಯೋಗಿಸುತ್ತಾರೆ. ಕಾಂಕ್ರೀಟ್ ಪೂರ್ಣ ಸ್ಥಿರತೆಯನ್ನು 21 ದಿನಗಳ ಕಾಲಾವಧಿಯ ಅನಂತರ ಪಡೆದಾಗ ಅಣಿಗೆಗಳನ್ನು ತೆಗೆದು ಬೇರೆ ಕಡೆಗಳಲ್ಲಿ ಉಪಯೋಗಿಸುತ್ತಾರೆ. (ಜಿ.ಟಿ.ಜಿ.) ಅಣಿಮೀನು : ಕ್ಲಾರಿಯಿಡೆ ಕುಟುಂಬಕ್ಕೆ ಸೇರಿದ ಒಂದು ಜಾತಿಯ ಮೀನಿನ ಸಾಮಾನ್ಯ ಹೆಸರು. ಇದರ ವೈಜ್ಞಾನಿಕ ನಾಮ ಕ್ಲೇರಿಯಸ್ ಬ್ಯೂಟ್ರಾಕಸ್. ಮೀಸೆ ಮೀನುಗಳ ಸಂಬಂಧಿ. ಬೆನ್ನಿನ ಈಜು ರೆಕ್ಕೆ ಬಹಳ ಉದ್ದವಾಗಿದ್ದು 62 ರಿಂದ 76 ಕದಿರುಗಳಿವೆ. ತೋಳಿನ ಈಜುರೆಕ್ಕೆಯಲ್ಲಿ ಒಂದು ಬಲವಾದ ಮುಳ್ಳು ಮತ್ತು 8 ರಿಂದ 11 ಕದಿರುಗಳಿವೆ. ನಡುವಿನ ಈಜು ರೆಕ್ಕೆಯಲ್ಲಿ 6, ಗುದದ ಈಜು ರೆಕ್ಕೆಯಲ್ಲಿ 45 ರಿಂದ 58, ಬಾಲದ ಈಜುರೆಕ್ಕೆಯಲ್ಲಿ 15 ರಿಂದ 17 ಕದಿರುಗಳಿವೆ. 4 ಜೊತೆ ಮೀಸೆ (ಬಾರ್ಬಲ್ಸ್) ಗಳಿವೆ. ಇದರ ಬೆನ್ನಿನ ಈಜುರೆಕ್ಕೆ ಉದ್ದವಾಗಿದೆ. ದೇಹ ತಲೆಗಿಂತ 5 ರಿಂದ 6 ರಷ್ಟು ಉದ್ದವಾಗಿದೆ. ತಲೆ ಸ್ವಲ್ಪ ಮಟ್ಟಿಗೆ ಚಪ್ಪಟೆಯಾಗಿದೆ. ಇದರ ಬಣ್ಣ ಕೆಂಪು ಮಿಶ್ರಿತ ಕಂದು ಅಥವಾ ಊದಾಮಿಶ್ರಿತ ಕಪ್ಪು. ಸು. 45 ಸೆಂಮೀ ಉದ್ದ ಬೆಳೆಯುತ್ತದೆ. ಈ ಮೀನು ದೇಶದ ಎಲ್ಲ ಭಾಗಗಳಲ್ಲೂ ಸಿಗುತ್ತದಾದರೂ ಚೇಳುಮೀನಿನಂತೆ ವಿಶೇಷವಾಗಿ ಸಿಕ್ಕುವುದಿಲ್ಲ. ಇದು ಆಹಾರ ದೃಷ್ಟಿಯಿಂದ ಹೆಚ್ಚು ಪ್ರಸಿದ್ಧಿಯಾಗಿದ್ದು ಬಹು ಬೆಲೆಯುಳ್ಳದ್ದಾಗಿದೆ. ಸಣ್ಣ ಅಕಶೇರುಕಗಳು, ನೀರಿನ ಕೀಟ, ಪಾಚಿಯವಸ್ತು, ಇದು ಆಹಾರವಾಗಿ ಬಳಸುತ್ತದೆ. ವಂಶಾಭಿವೃದ್ಧಿ ಏಪ್ರಿಲ್-ಜೂನ್ ತಿಂಗಳುಗಳಲ್ಲಿ, ಮರಿಗಳನ್ನು ಕೆರೆಯ ಅಂಚಿನ ಪ್ರದೇಶದಲ್ಲಿ ಹುಲ್ಲು ಬೆಳೆದಿರುವ ಚೌಗುಗಳಲ್ಲಿ ಶೇಖರಿಸಬಹುದು. ಇತ್ತೀಚೆಗೆ ಈ ಮೀನಿನ ಜೀವನಚರಿತ್ರೆಯ ಬಗ್ಗೆ ಸಾಕಷ್ಟು ಅಧ್ಯಯನ ಮಾಡಲಾಗುತ್ತಿದ್ದು ಇದರ ಕೃತಕ ಸಂತಾನೋತ್ಪತ್ತಿ ಮಾಡಿಸಿ ಮರಿಗಳನ್ನು ಉತ್ಪಾದಿಸಲು ಪ್ರಯತ್ನಿಸಲಾಗುತ್ತಿದೆ. ಇದು ಸ್ವಲ್ಪ ನಿಧಾನವಾಗಿ ಬೆಳೆಯತ್ತದಾದರೂ, ಉತ್ತಮ ಬೆಲೆ ಇರುವುದರಿಮದ ಸಾಕಾಣಿಕೆ ಮಾಡಬಹುದಾಗಿದೆ. (ನೋಡಿ- ಮೀಸೆಮೀನು) (ಬಿ.ಎನ್.) ಅಣು1 : (ನೋಡಿ- ಅಣುಸಿದ್ಧಾಂತ). ಅಣು2 : ಜೈನ ಸಿದ್ಧಾಂತದ ಪ್ರಕಾರ ಉತ್ಪತ್ತಿ, ಸ್ಥಿತಿ, ವಿನಾಶ ಈ ಮೂರು ಸ್ವಭಾವಗ ಳಿಂದ ಕೂಡಿದ ಅಜೀವತತ್ತ್ವದ ಅತಿಸೂಕ್ಷ್ಮ ಭಾಗಗಳಾದ ಕೆಲವು ಪರಮಾಣುಗಳು ಸೇರಿ ಅಣುಗಳು ರೂಪುಗೊಂಡಿವೆ. ಇಂಥ ಹಲವು ಅಣುಗಳು ಸೇರಿದಾಗ ಪುದ್ಗಲ ಸ್ಕಂಧ ಸಿದ್ಧವಾಗುತ್ತದೆ. ಈ ಪುದ್ಗಲ ಪರಮಾಣುಗಳಲ್ಲಿ ಗಮನಾಗಮನ ಕ್ರಿಯೆ ಇದೆ. ಪುದ್ಗಲ ಪರಮಾಣುಗಳು ಒಂದಕ್ಕೊಂದು ಸೇರುವುದು ಸಂಘಾತ. ಪುದ್ಗಲ ಸ್ಕಂಧ ಒಡೆದು ಅಣುಗಳು ಚದರುವುದೇ ಭೇದ. ಈ ಸಂಘಾತಭೇದಗಳು ಪುದ್ಗಲ ಅಣುವಿನ ಸ್ನಿಗ್ಧಋಕ್ಷ ಸ್ವಭಾವದಿಂದ ಉಂಟಾಗುತ್ತದೆ. ಸ್ಕಂಧ ಒಡೆದು ಚದುರಿದ ಪುದ್ಗಲ ಪರಮಾಣುಗಳು ಅದೃಶ್ಯವಾಗಿರುತ್ತವೆ. ಆದ್ದರಿಂದಲೇ ಪುದ್ಗಲ ಅದೃಷ್ಟವೆಂದು ಜೈನಾಗಮಗಳಲ್ಲಿ ಹೇಳಿದೆ. ಇವುಗಳನ್ನು ಸೂಕ್ಷ್ಮದರ್ಶಕ ಯಂತ್ರದಿಂದಲೂ ಕಾಣಲಿಕ್ಕೆ ಸಾಧ್ಯವಿಲ್ಲ. ಈ ಪುದ್ಗಲಾಣುಗಳು ಜೀವಾಣುಗಳೊಡನೆ ಸೇರಿದಾಗ, ಭೌತವಸ್ತುಗಳು ಉತ್ಪನ್ನವಾಗುತ್ತವೆ. ಈ ಪ್ರತಿಯೊಂದು ಭೌತವಸ್ತುವೂ ಸಾಮಾನ್ಯವಾಗಿ ತನ್ನ ಲಕ್ಷಣವನ್ನು ಕಳೆದುಕೊಳ್ಳದೆ, ಬೇರೆ ಬೇರೆ ಪುದ್ಗಲ ಸ್ಕಂಧಗಳೊಡನೆ ಸಂಪರ್ಕ ಬೆಳೆಸಿ, ತನ್ನ ಶಕ್ತಿಯನ್ನೂ ಅಸ್ತಿತ್ವವನ್ನೂ ಪ್ರಕಟಿಸುತ್ತದೆ. ಇದರಿಂದ ವೈಚಿತ್ರ್ಯಪೂರ್ಣವಾದ ಈ ಸೃಷ್ಟಿ ರೂಪುಗೊಂಡಿದೆ. ಅಜೀವತತ್ತ್ವದಲ್ಲಿ ಪುದ್ಗಲ, ಧರ್ಮ, ಅಧರ್ಮ, ಆಕಾಶ ಮತ್ತು ಕಾಲ ಎಂದು ಐದು ವಿಧಗಳು. ಪುದ್ಗಲಾಣುವಿನಲ್ಲಿ ಮೂರ್ತಿತ್ವವಿದೆ. ರೂಪ, ರಸ, ಗಂಧ ಹಾಗೂ ಸ್ಪರ್ಶದಿಂದ ನಮಗೆ ಇದರ ಅರಿವು ಆಗುತ್ತದೆ. ಪುದ್ಗಲಾಣು ಜೀವಾಣುವಿನೊಡನೆ ಸೇರಿದಾಗ ಆಗುವ ಕರ್ಮಾಣುವನ್ನು ಒಂದು ದ್ರವ್ಯವೆಂದು ಸ್ವೀಕರಿಸಿದ್ದು ಜೈನದರ್ಶನದ ವೈಶಿಷ್ಟ್ಯ. ಅಣುಸ್ಕಂಧ, ಅಣು, ಪರಮಾಣು ಇವು ಪುದ್ಗಲದ್ರವ್ಯದ ಸೂಕ್ಷ್ಮಾತಿಸೂಕ್ಷ್ಮತರ ಭಾಗಗಳು. (ಎಂ.ಎ.) ಅಣುಚಲನವಾದ, ವಸ್ತುವಿನ : ವಸ್ತು ಅಣುರೂಪದಲ್ಲಿದೆ ಮತ್ತು ಅಣುಗಳ ಯಾದೃಚ್ಛಿಕ ಚಲನೆಯ ರೂಪ ಉಷ್ಣ-ಎಂಬ ಎರಡು ಆಧಾರ ಕಲ್ಪನೆಗಳ ಸಹಾಯದಿಂದ ವಸ್ತುವಿನ ಸಮಗ್ರ ರಚನೆಯನ್ನು ವಿವರಿಸುವ ವಾದ (ಕೈನಟಿಕ್ ಥಿಯೊರಿ ಆಫ್ ಮ್ಯಾಟರ್). ಅನಿಲಗಳ ಅಣುಚಲನವಾದ, ದ್ರವಗಳ ಅಣುಚಲನವಾದ ಮತ್ತು ಘನಪದಾರ್ಥಗಳ ಅಣುಚಲನವಾದ ಎಂಬ ಮೂರು ಹಂತಗಳಲ್ಲಿ ಈ ವಿಷಯವನ್ನು ಚರ್ಚಿಸಲಾಗುತ್ತದೆ. ಅನಿಲಗಳ ಅಣುಚಲನವಾದ : ಒತ್ತಡ (ಪ್ರೆಷರ್) ಅತಿಯಾಗಿಲ್ಲದೆ ಇರುವಾಗ, ಅಂದರೆ ಸಾಂದ್ರತೆ (ಡೆನ್ಸಿಟಿ) ತಗ್ಗಿನಮಟ್ಟದಲ್ಲಿರುವಾಗ ಅನಿಲಗಳು ಪಾಲಿಸುವ ಕೆಲವು ನಿಯಮಗಳನ್ನು ಅನೇಕ ಪ್ರಯೋಗ ಮತ್ತು ಪರೀಕ್ಷೆಗಳ ಆಧಾರದಿಂದ ನಿರ್ಧರಿಸಲಾಗಿದೆ. ಅವು ಹೀಗಿವೆ. 1. ಬಾಯ್ಲ್ ನಿಯಮ : ದ್ರವ್ಯ ರಾಶಿಯ (ಮಾಸ್) ಅನಿಲದ ಉಷ್ಣತೆ (ಟೆಂಪರೇಚರ್) ಸ್ಥಿರವಾಗಿರುವಾಗ ಒತ್ತಡವನ್ನು (ಠಿ) ಮಾತ್ರ ಹೆಚ್ಚಿಸುತ್ತ ಹೋದರೆ ಅದರ ಘನಗಾತ್ರ (v) ಕುಗ್ಗಲಾರಂಭಿಸುವುದು. ಪ್ರತಿಯೊಂದು ಸಲವೂ ಠಿ,v ಗಳು ಠಿv=ಸ್ಥಿರಾಂಕ ಎಂಬ ನಿಯಮವನ್ನು ಪಾಲಿಸುವುವು. 2. ಚಾಲ್ರ್ಸ್ ನಿಯಮ : ದ್ರವ್ಯರಾಶಿಯ ಅನಿಲದ ಒತ್ತಡ ಸ್ಥಿರವಾಗಿರುವಾಗ ಅದರ ಘನಗಾತ್ರ ನಿರಪೇಕ್ಷ ಉಷ್ಣತೆಗೆ ಅನುಪಾತೀಯವಾಗಿರುವುದು. ಇದನ್ನು v/ಣ = ಸ್ಥಿರಾಂಕ ಎಂದು ಬರೆಯಬಹುದು. ಗೇಲ್ಯುಸಾಕ್ ನಿಯಮವೆಂದರೂ ಇದೇ : ಸ್ಥಿರ ಗಾತ್ರದಲ್ಲಿ ಅನಿಲದ ಒತ್ತಡ (ಠಿ) ನಿರಪೇಕ್ಷ ಉಷ್ಣತೆಗೆ (ಣ) ಅನುಪಾತೀಯವಾಗಿರುವುದು. ಅಂದರೆ ಠಿ/ಣ =ಸ್ಥಿರಾಂಕ ಈ ಮೂರು ನಿಯಮಗಳು ಆದರ್ಶ ಅನಿಲಗಳಿಗೆ ಮಾತ್ರ ಅನ್ವಯಿಸುತ್ತವೆ. ಒತ್ತಡ, ಗಾತ್ರ ಮತ್ತು ಉಷ್ಣತೆಗಳಲ್ಲಿ ವ್ಯತ್ಯಾಸವಾದಾಗ : ಎಂದು ಬರೆಯಬಹುದು. 3. ಡಾಲ್ಟನ್ ಆಂಶಿಕ ಒತ್ತಡಗಳ ನಿಯಮ : ಒಂದು ಪಾತ್ರೆಯಲ್ಲಿ ಎರಡು ಅಥವಾ ಹೆಚ್ಚು ಅನಿಲಗಳಿದ್ದು ಅವು ರಾಸಾಯನಿಕನ್ನಡ ಕ್ರಿಯೆಯಲ್ಲಿ ತೊಡಗಿಸಿಕೊಳ್ಳುವುದಿಲ್ಲವೆಂದು ಊಹಿಸೋಣ. ಈ ಅನಿಲಗಳ ಎಲ್ಲಾ ಅಣುಗಳೂ ಪಾತ್ರೆಯ ಒಟ್ಟಾರೆ ಗಾತ್ರವನ್ನು ಆವರಿಸುತ್ತವೆ. ಅನಿಲಗಳ ಮಿಶ್ರಣದ ಒಟ್ಟು ಒತ್ತಡ ಆ ಮಿಶ್ರಣದ ಘಟಕ ಅನಿಲಗಳು ಒಂಟಿಯಾಗಿದ್ದಾಗ ಉಂಟುಮಾಡುವ ಆಂಶಿಕ ಒತ್ತಡಗಳ ಮೊತ್ತಕ್ಕೆ ಸಮನಾಗಿರುತ್ತದೆ. ಜಾನ್ ಡಾಲ್ಟನ್ (1766-1844) ಆವಿಷ್ಕರಿಸಿದ್ದರಿಂದ ಇದಕ್ಕೆ ಈ ಹೆಸರು ಬಂದಿದೆ. 4. ಜೌಲ್ ನಿಯಮ : ಈ ನಿಯಮದಂತೆ ಒಂದು ಅನಿಲದ ರಾಶಿ ಸ್ಥಿರವಾಗಿರುವಾಗ ಅದರಲ್ಲಿ ಅಡಕವಾಗಿರುವ ಶಕ್ತಿ ಅನಿಲದ ಘನಗಾತ್ರವನ್ನವಲಂಬಿಸಿರುವುದಿಲ್ಲ. ಗಾಳಿ ಹಿಗ್ಗಿ ಶೂನ್ಯ ಪ್ರದೇಶವನ್ನು ತುಂಬುವಂತೆ ಮಾಡಿದಾಗ ಅದರ ಶಕ್ತಿಯಲ್ಲಿ ಯಾವ ವ್ಯತ್ಯಾಸವೂ ಏರ್ಪಡುವುದಿಲ್ಲ. ಇಲ್ಲಿ ಅನಿಲದ ಉಷ್ಣತೆ ವ್ಯತ್ಯಾಸವಾಗುವುದಿಲ್ಲ. ಈ ಬಗೆಯ ಬದಲಾವಣೆಗಳನ್ನು ಸಮೋಷ್ಣತಾರೇಖೆಗಳ (ಐಸೋಥರ್ಮಲ್ಸ್) ನಕ್ಷೆಗಳಿಂದ ತೋರಿಸಬಹುದು. 5. ಗೇಲ್ಯುಸಾಕ್ ನಿಯಮ : ಅನಿಲಗಳು ರಾಸಾಯನಿಕವಾಗಿ ಪ್ರತಿಕ್ರಿಯಿಸಿದಾಗ ಅವುಗಳ ಘನಗಾತ್ರಗಳನ್ನೂ ಅನಿಲ ಸ್ಥಿತಿಯಲ್ಲಿ ಫಲಿಸುವ ವಸ್ತುಗಳ ಘನಗಾತ್ರಗಳನ್ನೂ ಒಂದೇ ಉಷ್ಣತೆ ಮತ್ತು ಒತ್ತಡಗಳಲ್ಲಿ ಅಳೆದಾಗ ಸರಳ ಅನುಪಾತೀಯವಾಗಿರುತ್ತವೆ. ಜೋಸೆಫ್ ಲೂಯಿ ಗೇಲ್ಯುಸಾಕ್ (1778-1850) ಗೌರವಾರ್ಥ ಈ ಹೆಸರು. ನೋಡಿ: ಚಾಲ್ರ್ಸ್ ನಿಯಮ ಉದಾ: 2 ಲೀಟರ್ ಜಲಜನಕ + 1 ಲೀಟರ್ ಆಮ್ಲಜನಕ = 2 ಲೀಟರ್ ನೀರಿನ ಆವಿ; 2 ಲೀಟರ್ ಜಲಜನಕ + 1 ಲೀಟರ್ ಕ್ಲೋರಿನ್ = 2 ಲೀಟರ್ ಹೈಡ್ರೊಕ್ಲೋರಿಕ್ ಆಮ್ಲ ಅನಿಲ. 6. ಅವೊಗ್ಯಾಡ್ರೊ ನಿಯಮ : ಉಷ್ಣತೆ ಮತ್ತು ಒತ್ತಡಗಳು ಒಂದೇ ಆಗಿರುವಾಗ ಎಲ್ಲ ಅನಿಲಗಳ ಸಮ ಘನಗಾತ್ರಗಳು ಸಮಸಂಖ್ಯೆಯ ಅಣುಗಳಿಂದ ಕೂಡಿರುತ್ತವೆ. ಇದು ಆದರ್ಶ ಅನಿಲಗಳ ವಿಷಯದಲ್ಲಷ್ಟೆ ಸತ್ಯ. ಕೌಂಟ್ ಅಮೆಡಿಯೊ ಅವೊಗ್ಯಾಡ್ರೊ (1776-1856) 1811 ರಲ್ಲಿ ಮೊದಲು ಪ್ರತಿಪಾದಿಸಿದ. ಅವೊಗ್ಯಾಡ್ರೊ ನಿಯಮದ ಪ್ರಕಾರ, ಪರಮಾಣುಗಳ / ಅಯಾನ್‍ಗಳ / ಎಲೆಕ್ಟ್ರಾನ್‍ಗಳ ಸಂಖ್ಯೆ [ಯಾವುದೇ ಪದಾರ್ಥಗಳ 1 ಮೋಲ್‍ನಲ್ಲಿರುವ ಅಣುಗಳ / 1 ಮೋಲ್‍ನಲ್ಲಿನ ಅಣುಗಳ ಸಂಖ್ಯೆ . (ನೋಡಿ- ಪರಮಾಣುತೂಕ) ಎಲ್ಲ ಅನಿಲಗಳೂ ಒತ್ತಡ ಅತ್ಯಲ್ಪವಾಗಿರುವ ಸ್ಥಿತಿಯಲ್ಲಿ ವರ್ತಿಸುವ ರೀತಿಯನ್ನು ಈವರೆಗೂ ತಿಳಿಸಿರುವ ಸುಲಭರೂಪದ ನಿಯಮಗಳಿಂದ ವಿವರಿಸಬಹುದು. ಈ ಅನುಭವ ದಿಂದ ಇವೆಲ್ಲದರ ರಚನೆ ಬಹುಮಟ್ಟಿಗೆ ಒಂದೇ ರೀತಿಯಲ್ಲಿರುವುದು ಕಂಡುಬರುತ್ತದೆ.