ಪುಟ:Mysore-University-Encyclopaedia-Vol-1-Part-1.pdf/೧೮೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಗ್ರಿಪ : ಪ್ರ.ಶ.ಪೂ. ಸು. 63-12. ರೋಮನ್ ಸೇನಾಪತಿ ಮತ್ತು ಸಮರ್ಥ ರಾಜ್ಯನೀತಿನಿಪುಣನಾದ ಇವನು ಆಕ್ಟೇವಿಯಸ್ (ಅಗಸ್ಟಸ್) ರೋಮನ್ ಚಕ್ರವರ್ತಿ ಯಾಗಲು ಸಹಾಯ ಮಾಡಿದ. ಗಾಲ್‍ನಲ್ಲಿ (ಈಗಿನ ಫ್ರಾನ್ಸ್) ಸೇನಾಪತಿಯಾಗಿದ್ದ. ಶತ್ರುಗಳ ಹಾವಳಿಯನ್ನು ಅಡಗಿಸಿ ಅನಂತರ ಪ್ರ..ಶ.ಪೂ. 37ರಲ್ಲಿ ಕಾನ್ಸಲ್ ಪದವಿಗೇರಿದ. ರೋಮನ್ ಚಕ್ರಾಧಿಪತ್ಯದ ನೌಕಾಬಲವನ್ನು ಬೆಳೆಸಿದ. ಮೈಲೆ ಮತ್ತು ನೌಲೋಕಸ್ ನೌಕಾಕದನಗಳಲ್ಲಿ (ಪ್ರ.ಶ.ಪೂ. 36) ಸಮರ್ಥನಾದ ಸೆಕ್ಸ್‍ಟಸ್ ಪಾಂಪೇಯಸ್ ಸೋತದ್ದು ಇವನ ಮುನ್ನೆಚ್ಚರಿಕೆಯ ಪರಿಣಾಮವಾಗಿ. ಪ್ರ.ಶ.ಪೂ. 31ರಲ್ಲಿ ಮಾರ್ಕ್ ಆಂಟೋನಿ ನಿರ್ಣಾಯಕ ಆಕ್ಟಿಯಂ ನೌಕಾಕದನದಲ್ಲಿ ಸೋತದ್ದೂ ಇವನು ಆಕ್ಟೇವಿಯಸ್‍ಗೆ ನೀಡಿದ ನೆರವಿನಿಂದ. ಅಗಸ್ಟಸ್ ಎಂಬ ಹೆಸರಿನಿಂದ ಆಕ್ಟೇವಿಯಸ್ ಚಕ್ರವರ್ತಿಯಾದ ಮೇಲೆ ಸಾಮ್ರಾಜ್ಯದ ನಾನಾಕಡೆಗಳಲ್ಲಿ ತಿರುಗಿ ಅಗ್ರಿಪ ವಿರೋಧಿಗಳನ್ನು ಅಡಗಿಸಿದ. ಇವನು ವಾಸ್ತುಶಿಲ್ಪದಲ್ಲೂ ನಿಪುಣ. ಪ್ಯಾಂಥಿಯಾನ್ ಎಂಬ ಭವ್ಯವಾದ ದೇವಾಲಯವನ್ನು ಕಟ್ಟಿಸಿದವನು ಈತನೇ. (ಎ.ಎಂ.) ಅಗ್ರೋಮೈಸಿಡೀ : ಈ ಕುಟುಂಬಕ್ಕೆ ಸೇರಿದ ನೊಣದ ಮರಿಗಳು ಎಲೆಗಳಲ್ಲಿ ಸುರಂಗ ಮಾಡಿಕೊಂಡು ಜೀವಿಸುವುದರಿಂದ ಇವನ್ನು ಎಲೆಸುರಂಗದ ನೊಣಗಳು (ಲೀಫ್ ಮೈನರ್ಸ್) ಎಂದು ಕರೆಯುತ್ತಾರೆ. ಈ ನೊಣಗಳ ಶರೀರ ಸೂಕ್ಷ್ಮವಾಗಿದ್ದು ಕಪ್ಪು ಅಥವಾ ಹಳದಿ ಬಣ್ಣದ್ದಾಗಿರುತ್ತದೆ. ಮರಿಗಳ ಶರೀರ ಆಕಾರದಲ್ಲಿ ದುಂಡಗಿದ್ದು ಮುಂಭಾಗದಲ್ಲಿ ಚೂಪಾಗಿರುತ್ತದೆ. ಕೊನೆಯ ಉಂಗುರದ ಕೆಳಭಾಗದಲ್ಲಿ ಹೀರುನಳಿಕೆ ಯಂಥ ಅಂಗವಿರುತ್ತದೆ. ಮರಿಗಳು ತಾವು ಎಲೆಗಳಲ್ಲಿ ಮಾಡಿದ ಸುರಂಗದಲ್ಲಿ ಅಥವಾ ಮಣ್ಣಿನಲ್ಲಿ ಕೋಶಾವಸ್ಥೆ ಕಳೆಯುತ್ತವೆ. ಈ ಕುಲದ ನಾನಾ ಜಾತಿಗಳಿಗೆ ಸೇರಿದ ನಾನಾ ಪ್ರಭೇದಗಳನ್ನು ಗುರುತಿಸಲು ಆಯಾ ಜಾತಿ ಮತ್ತು ಪ್ರಭೇದಗಳಿಗೆ ಸೇರಿದ ನೊಣಗಳ ಪರಿಶೀಲನೆಗಿಂತ ಮರಿಗಳು ಎಲೆಗಳಲ್ಲಿ ಮಾಡುವ ಸುರಂಗಗಳ ಮಾದರಿಯ ಪರಿಶೀಲನೆ ಹೆಚ್ಚು ಸಹಕಾರಿಯೆನಿಸಿದೆ. ಸಾಮಾನ್ಯವಾಗಿ ಮರಿಗಳು ವಿವಿಧ ರೀತಿಯ ನುಲಿಕೆಗಳಾಗಿ ಎಲೆಗಳಲ್ಲಿ ಸುರಂಗ ಮಾಡುತ್ತವೆ. ಆದರೆ ತೊಗರಿಕಾಯಿಗೆ ಬೀಳುವ ಅಗ್ರೋಮಿಕ್ಟೋಸ್ ಅಬ್ಟ್ಸುಸ ಎಂಬ ನೊಣ ತನ್ನ ಸೂಕ್ಷ್ಮವಾದ ಮೊಟ್ಟೆಗಳನ್ನು ಎಳೆ ತೊಗರಿಕಾಯಿಯೊಳಗೆ ಇಡುತ್ತದೆ. ಈ ಮೊಟ್ಟೆಗಳಿಂದ ಹೊರಬಂದ ಮರಿಗಳು ಕಾಳಿಗೆ ಹೋಗಿ ಅದನ್ನು ತಿಂದು ಜೀವಿಸುತ್ತವೆ. ಕ್ರಿಪ್ಟೋಕೀಟಂ ಮುಂತಾದ ಜಾತಿಯ ಮರಿಗಳು ಕಾಕ್ಸಿಡಿ ಕುಲಕ್ಕೆ ಸೇರಿದ ಕೀಟಗಳ ಶರೀರದಲ್ಲಿ ಸೇರಿಕೊಂಡು ಜೀವನ ನಡೆಸುತ್ತವೆ. ಕ್ರಿಪ್ಪೋಕೀಟಂ ಐಸೆರ್ಯ ಎಂಬ ನೊಣ ಕಿತ್ತಳೆ ಮತ್ತು ಸರ್ವೆ ಮರಕ್ಕೆ ಬಿದ್ದು ಹಾನಿಮಾಡುವ ಐಸೆರ್ಯ ಪರ್ಚೇಸಿ ಎಂಬ ಕಾಕ್ಸಿಡಿ ಕುಲದ ಕೀಟಗಳ ಶರೀರದಲ್ಲಿ ಮೊಟ್ಟೆಯಿಡುತ್ತದೆ. ಅದರಿಂದ ಬಂದ ಮರಿಗಳು ಆ ಕೀಟಗಳ ಶರೀರದೊಳಗೆ ಸೇರಿಕೊಂಡು ತಮ್ಮ ಜೀವನ ನಡೆಸುತ್ತವೆ. ಹಾಗೂ ಆಶ್ರಯದಾತ ಕೀಟವನ್ನು ನಾಶಪಡಿಸುತ್ತವೆ. ನೀಲಗಿರಿ ಮತ್ತು ಕೊಡೈಕನಾಲ್ ಪ್ರದೇಶಗಳ ಕಿತ್ತಳೆ ತೋಟಗಳಿಗೆ ಐಸೆರ್ಯ ಪರ್ಚೇಸಿ ಒಂದು ಅಪಾಯಕಾರಿ ಕೀಟವಾಗಿ ಪರಿಣಮಿಸಿದೆ; ಅದನ್ನು ನಿವಾರಿಸಲು ಈಚೆಗೆ ಈ ಕ್ರಿಪ್ಪೋಕೀಟಂ ಐಸೆರ್ಯವನ್ನು ಬಳಸಿಕೊಳ್ಳುತ್ತಿರುವರು. ಇದು ಒಂದು ಜೈವಿಕ ನಿಯಂತ್ರಣ ವಿಭಾಗ. (ಟಿ.ಎಸ್.ಟಿ.) ಅಗ್ಲೋನಿಮ : ಏರೇಸೀ ಕುಟುಂಬಕ್ಕೆ ಸೇರಿದ ಅಲಂಕಾರ ಸಸ್ಯ ಜಾತಿ. ಸುಂದರ ಎಲೆಗಳಾಗಿ ಪ್ರಸಿದ್ಧವಾಗಿದೆ. ಇದನ್ನು ಉದ್ಯಾನಗಳಲ್ಲೂ ಮನೆಗಳಲ್ಲೂ ಬೆಳೆಸುತ್ತಾರೆ. ಇದರ ಎಲೆಗಳು ಹಚ್ಚಹಸಿರಾಗಿದ್ದು ಅವುಗಳ ಮೇಲೆ ವಿವಿಧ ಆಕಾರದ ಮತ್ತು ವಿವಿಧ ವಿನ್ಯಾಸದ ಅಲಂಕೃತ ಮಚ್ಚೆಗಳು ಇರುವುದರಿಂದ ಬಹಳ ಭವ್ಯವಾಗಿ ಕಾಣುತ್ತದೆ. ಜೊತೆಗೆ ಎಲೆಯ ತೊಟ್ಟುಗಳು ಉದ್ದವಾಗಿ, ವಿವಿಧ ಬಣ್ಣ ಮತ್ತು ರೆಕ್ಕೆಗಳಿಂದ ಕೂಡಿರುವುದರಿಂದ ಅವುಗಳ ಅಂದ ಇನ್ನೂ ಹೆಚ್ಚಿರುತ್ತದೆ. ಅಗ್ಲೋನಿಮ ಜಾತಿಯಲ್ಲಿ ಸದಾ ಹಸಿರಾಗಿರುವ 40 ಪ್ರಭೇದಗಳಿವೆ. ಇವೆಲ್ಲವೂ ಬಹುವಾರ್ಷಿಕಸಸ್ಯಗಳು. ಇವುಗಳ ಪೈಕಿ ಕೆಲವು ಪ್ರಭೇದಗಳು ಮಾತ್ರ ಜನಪ್ರಿಯವಾಗಿವೆ. ಮುಖ್ಯವಾದುವು ಇಂತಿವೆ: ಅಗ್ಲೋನಿಮ ಕಾಸ್ಟೆಟಮ್: ಇದು ಕುಳ್ಳಾಗಿ ನೆಲದ ಮೇಲೆ ಹರಡಿಕೊಳ್ಳುವ ಸಸ್ಯ. ಇದರ ಕಾಂಡದ ಮೇಲೆ ಎಲೆಗಳು ನಿಬಿಡವಾಗಿ ಇರುತ್ತವೆ. ಎಲೆ ಕರನೆಯಾಕಾರವಾಗಿಯೋ ಆಯತಾಕಾರ ಅಥವಾ ಹೃದಯಾಕಾರವಾಗಿಯೋ ಇರುತ್ತವೆ. ಅಂಚು ನಯವಾಗಿರುತ್ತದೆ. ತುದಿ ಮೊನಚಾಗಿರುತ್ತದೆ. ಎಲೆಯ ಮೇಲಿನ ನಾಳಗಳು ತುದಿಯಲ್ಲಿ ಕಮಾನಿನಂತೆ ಬಾಗಿರುತ್ತವೆ. ಹೂಗೊಂಚಲು ಕವಚ ಬಿಳುಪುಮಿಶ್ರಿತ ಹಸಿರುಬಣ್ಣದ್ದಾಗಿದ್ದು ಈ ಹೂಗೊಂಚಲು ಬಹು ಸುಂದರವಾಗಿ ಕಾಣುತ್ತದೆ. ಉಗಮಸ್ಥಾನ ಮಲಯ ದೇಶ. ಅಗ್ಲೋನಿಮ ಕಮ್ಯುಟಿಟಮ್: ಈ ಪ್ರಭೇದ ಸುಮಾರು ಅರ್ಧಮೀಟರ್ ಎತ್ತರದ ತುಂಡು ಗಿಡವಾಗಿ ಬೆಳೆಯುತ್ತದೆ. ಎಲೆಯ ತೊಟ್ಟು ಎಲೆಯಷ್ಟೇ ಉದ್ದ ಅಥವಾ ಸ್ವಲ್ಪ ಚಿಕ್ಕದು; ಆಯತಾಕಾರವಾಗಿರುವ ಎಲೆಗೆ ಲಂಬಾಗ್ರ ತುದಿಯಿರುತ್ತದೆ. ಬಣ್ಣ ಹಸಿರಾಗಿದ್ದು ಮೇಲು ಭಾಗದಲ್ಲಿ ಬೂದಿಬಣ್ಣದ ಮಚ್ಚೆಗಳಿರುತ್ತವೆ. ಕವಚ ಹಸಿರುಮಿಶ್ರಿತ ಬಿಳುಪುಬಣ್ಣ. ಹಣ್ಣು ಕೆಂಪು ಅಥವಾ ಕಂದು ಬಣ್ಣದ ಬೆರಿ ಮಾದರಿಯದು. ಇದು ಮಲಯ ದೇಶದ ಮೂಲದ್ದು. ಅಗ್ಲೋನಿಮ ಪಿಕ್ಟಮ್: ಈ ಪ್ರಭೇದ ಸುಮಾರು 1 ಮೀ ಎತ್ತರಕ್ಕೆ ನೇರವಾಗಿ ಬೆಳೆಯುತ್ತದೆ. ಇದರ ಎಲೆ ಆಯತಾಕಾರ ಅಥವಾ ಕದಿರನಾಕಾರವಾಗಿದ್ದು ತುದಿ ಮೊಂಡಾಗಿರುತ್ತದೆ. ಪಕ್ಕದ ನಾಳಗಳು ಎರಡುಕಡೆ ಅಂಚುಗಳಲ್ಲಿ ಕಮಾನಿನಂತೆ ಬಾಗಿರುತ್ತವೆ. ಎಲೆಯ ಮೇಲುಭಾಗದಲ್ಲಿ ಬಿಳಿಯ ಮಚ್ಚೆಗಳು ಇರುತ್ತವೆ. ಹೂಗೊಂಚಲ ಕವಚ ಲಂಬಾಗ್ರ ತುದಿಯನ್ನು ಹೊಂದಿದೆ. ಈ ಪ್ರಭೇದದಲ್ಲಿ ಎಲೆಯ ಮೇಲೆ ಬಿಳುಪು, ಹಳದಿ ಮತ್ತು ಹಸಿರುಮಿಶ್ರಿತ ಮಚ್ಚೆಗಳಿರುವ ತಳಿಗಳೂ ಇವೆ. ಇದನ್ನು ಮೂರು ಬಣ್ಣದ ತಳಿ ಎಂದೂ ಕರೆಯುತ್ತಾರೆ. ಅಗ್ಲೋನಿಮ ಮಾಡೆಸ್ಟಮ್: ಈ ಪ್ರಭೇದ ಉಳಿದವುಗಳಿಗಿಂತ ಹೆಚ್ಚು ಎತ್ತರವಾಗಿದೆ. ತಳಭಾಗದ ನಡುಗಿಣ್ಣು ಸುಮಾರು 2.5ಸೆಂಮೀ ದಪ್ಪವಾಗಿರುತ್ತದೆ. ಎಲೆ ಕರನೆಯಾಕಾರವಾಗಿದ್ದು ಲಂಬಾಗ್ರತುದಿಯನ್ನು ಹೊಂದಿರುತ್ತದೆ. ಹೂಗೊಂಚಲು ಕಂಕುಳಲ್ಲಿರುತ್ತದೆ. ಕವಚ 8ಸೆಂಮೀ ಉದ್ದದ್ದು ಮತ್ತು ಹಸುರು ಬಣ್ಣದ್ದು. ಇದು ಫಿಲಿಪಿನ್ಸ್ ದೇಶದ ಮೂಲದ್ದು. ಅಗ್ಲೋನಿಮ ಸಸ್ಯವನ್ನು ಕಾಂಡದ ತುಂಡುಗಳಿಂದಲು ಮೋಸುಗಳಿಂದಲೂ ವೃದ್ಧಿಮಾಡಬಹುದು. ಅದಕ್ಕೆ ಮಳೆಗಾಲ ಯೋಗ್ಯವಾದ ಕಾಲ. ಬೇಸಾಯಕ್ಕೆ ಗೋಡು, ಎಲೆಗೊಬ್ಬರ, ಮರಳು, ಇದ್ದಲು ಮತ್ತು ಹಳೆಯ ಗಾರೆ ಮುಂತಾದುವುಗಳ ಮಿಶ್ರಣದ ಮಣ್ಣು ಉತ್ತಮ. ಸರಾಗವಾಗಿ ಗಾಳಿ, ಬೆಳಕು ಬರುವ ಪಾಶ್ರ್ವ ನೆರಳಿನಲ್ಲಿ ಉತ್ಕøಷ್ಟವಾಗಿ ಬೆಳೆಯುತ್ತದೆ. ಪ್ರತಿನಿತ್ಯ ನೀರು ಸಿಂಪಡಿಸಿದಲ್ಲಿ ಲವಲವಿಕೆಯಿಂದ ಹೊಳಪಾಗಿ ಬೆಳೆಯುತ್ತದೆ. ಬಿಸಿಲಿನಲ್ಲಿ ಇಟ್ಟರೆ ಝಳವನ್ನು ತಡೆಯಲಾರದೆ ಸೊರಗಿ, ಮೇಲಿರುವ ಬಣ್ಣದ ಮಚ್ಚೆಗಳು ನಶಿಸಿಹೋಗುತ್ತವೆ. ಸದಾ ತೇವಾಂಶ ಬೇಕಿದ್ದರೂ ಅತಿಯಾದ ಜೌಗನ್ನು ಇದು ಸಹಿಸುವುದಿಲ್ಲ. (ಡಿ.ಎಂ.) ಅಘೋರಶಿವ : ದೇವೀತಾಲೋತ್ತರಂ ಎಂಬ ವೀರಶೈವಧರ್ಮ ಗ್ರಂಥದ ಲೇಖಕ. ಇವನನ್ನು ಅನೇಕ ಪ್ರಾಚೀನ ವೀರಶೈವ ಕವಿಗಳು ತಮ್ಮ ಕೃತಿಗಳಲ್ಲಿ ಸ್ಮರಿಸಿದ್ದಾರೆ. ಪದ್ಮಣಾಂಕ (ಸು. 1385) ತನ್ನ ಪದ್ಮರಾಜ ಪುರಾಣದಲ್ಲಿ ಪೂರ್ವಕವಿಗಳನ್ನು ಸ್ಮರಿಸುವಾಗ ಅಘೋರಶಿವನನ್ನು ಸ್ಮರಿಸಿದ್ದನಾದ ಕಾರಣ ಈತ 14ನೆಯ ಶತಮಾನಕ್ಕಿಂತ ಹಿಂದಿನವನೆಂದು ತಿಳಿಯಬಹುದು. ಅಘೋರಶಿವಪದ್ಧತಿ, ತತ್ತ್ವತ್ರಯನಿರ್ಣಯವ್ಯಾಖ್ಯ, ತತ್ತ್ವಪ್ರಕಾಶವೃತ್ತಿ, ತತ್ತ್ವಸಂಗ್ರಹ, ಲಘುಟೀಕಾ, ನಾದಕಾರಿಕಾವೃತ್ತಿ, ಸರ್ವಜ್ಞಾನೋತ್ತರವೃತ್ತಿ, ದೀಕ್ಷಾವಿಧಿ, ವಿಗೇಂದ್ರವೃತ್ತಿದೀಪಿಕಾ, ಮಹೋತ್ಸವನಿಧಿ, ರತ್ನತ್ರಯವೃತ್ತಿ, ಭೋಗಕಾರಿಕಾವೃತ್ತಿ ಮೊದಲಾದವುಗಳನ್ನು ರಚಿಸಿದ್ದಂತೆ ತಿಳಿದಿದೆ. ಈತ ಚಿದಂಬರದ ಆಮರ್ಧಕ ಮಠದ ಗುರುವಾಗಿದ್ದ. (ಬಿ.ಎಸ್.) ಅಘೋರೀ ಪಂಥ : ನರಮಾಂಸಭಕ್ಷಣವೇ ಮೊದಲಾದ ವಾಮಾಚಾರಗಳನ್ನುಳ್ಳ ಸಂನ್ಯಾಸಿಗಳ ಪಂಥ. ಇವರು ಅಘೋರ (ಘೋರನಲ್ಲದ) ಶಿವನ ಉಪಾಸಕರು. ಭಾರತದಲ್ಲಿ ಬಹಳ ಹಿಂದಿನಿಂದಲೂ ಬಿಹಾರ, ಪಶ್ಚಿಮ ಬಂಗಾಲ, ಅಜ್ಮೀರ, ಮೇವಾಡ, ಬೀರಾರ್ ಮೊದಲಾದ ಪ್ರಾಂತಗಳಲ್ಲಿ ಇವರು ಆಗಾಗ ಕಾಣಿಸಿಕೊಂಡಿದ್ದಾರೆ. 1901ರ ಸುಮಾರಿನಲ್ಲಿ ಇವರ ಸಂಖ್ಯೆ 5580 ಇತ್ತೆಂದು ತಿಳಿದುಬರುತ್ತದೆ. ಮುಂಬಯಿಯ ಮಾನವಶಾಸ್ತ್ರಸಂಘಕ್ಕಾಗಿ ಲೀಕ್ ತೆಗೆದಿರುವ ಕೆಲವು ಛಾಯಾಚಿತ್ರಗಳ ಪ್ರಕಾರ ಅಘೋರಿಗಳ ವೇಷಭೂಷಣಗಳು ಬಹು ವಿಚಿತ್ರವಾಗಿವೆ. ಮೈಗೆ ಶ್ಮಶಾನಭಸ್ಮಲೇಪ, ಎದೆಗೆ ತ್ರಿಮೂರ್ತಿಗಳ ಐಕ್ಯವನ್ನು ತೋರುವ ಕೆಲವು ಚಿಹ್ನೆಗಳು, ರುದ್ರಾಕ್ಷಿ ಮಾಲೆ, ಕಾಡಿನ ಕರಡಿಯ ಹಲ್ಲುಗಳು ಮತ್ತು ಹಾವಿನ ಮೂಳೆಗಳಿಂದ ಮಾಡಿದ ಸರಗಳು. ಕೈಯಲ್ಲಿ ನರಕಪಾಲ. ಈ ಫಕೀರರ ಸಂಖ್ಯೆ ಈಚೆಗೆ ಬಹು ಕಡಿಮೆಯಾಗಿದೆ. (ಜಿ.ಎಚ್.) ಅಘೋರೇಶ್ವರ : ಪರಮೇಶ್ವರನ ಪಂಚಮುಖಗಳಲ್ಲಿ (ಸದ್ಯೋಜಾತ, ವಾಮದೇವ, ಅಘೋರ, ತತ್ಪುರುಷ, ಈಶಾನ) ಒಂದರ ಹೆಸರು. ಕೆಳದಿಯಲ್ಲಿ ರಾಜ್ಯಭಾರ ಮಾಡುತ್ತಿದ್ದ ದೊಡ್ಡ ಸಂಕಣ್ಣನಾಯಕ (1540-59) ಅಘೋರೇಶ್ವರನ ಹೆಸರಿನಲ್ಲಿ ಒಂದು ದೊಡ್ಡ ದೇವಾಲಯವನ್ನು ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕು ಇಕ್ಕೇರಿಯಲ್ಲಿ ಕಟ್ಟಿಸಿದ್ದಾನೆ. ಮಲೆನಾಡಿನ ಜನ ಈ ದೇವರ ಬಗ್ಗೆ ಭಕ್ತಿಯಿಂದ ನಡೆದುಕೊಳ್ಳುತ್ತಾರೆ. ವರ್ಷಕ್ಕೊಮ್ಮೆ ಜಾತ್ರೆ ನಡೆಯುತ್ತದೆ. ಶಿಲ್ಪಕಲಾ ದೃಷ್ಟಿಯಿಂದಲೂ ದೇವಾಲಯ ಭವ್ಯವಾಗಿದೆ. (ಬಿ.ಎಸ್.) ಅಚರಗಳು, ಸಹಚರಗಳು : ಅಚರವೆಂದರೆ ಬದಲಾವಣೆಯಾಗದಿರುವಿಕೆ. x, ಥಿ ಗಳಲ್ಲಿ ಒಂದು ದ್ವಿಘಾತ ಸಮೀಕರಣ ಒಂದು ವಕ್ರರೇಖೆಯನ್ನು (ಶಂಕುಜ) ಚಿತ್ರಿಸುತ್ತದೆ. ಮೂಲಬಿಂದುವನ್ನೂ ಅಕ್ಷಗಳನ್ನೂ ಬದಲಾಯಿಸುವುದರಿಂದ, ರೇಖೆಯ ಸ್ವರೂಪವಾಗಲಿ ಸ್ಥಾನವಾಗಲಿ ಬದಲಾಯಿಸುವುದಿಲ್ಲ. ಆದರೆ ಅದರ ಸಮಿÁಕರಣ ಬದಲಾವಣೆ ಹೊಂದುತ್ತದೆ.