ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ತೊಂಡರಡಿಪ್ಪೊಡಿ ಆಳ್ವಾರ್

ವಿಕಿಸೋರ್ಸ್ದಿಂದ

ಇವರು ಚೋಳ ದೇಶದ ಮಂಡಂಗುಡಿ ಎಂಬಲ್ಲಿಯ ಬ್ರಾಹ್ಮಣ ಕುಟುಂಬವೊಂದರಲ್ಲಿ ಜನಿಸಿದರು. ಧನುರ್ಮಾಸದ ಜ್ಯೇಷ್ಠಾ ನಕ್ಷತ್ರದ ದಿನ ವನಮಾಲಾಂಶರೆನಿಸಿದ ಇವರ ಜನ್ಮೋತ್ಸವ ಜರಗುತ್ತದೆ. ಇವರಿಗೆ ತಾಯಿ ತಂದೆಗಳಿಟ್ಟ ಹೆಸರು ವಿಪ್ರನಾರಾಯಣ ಎಂದು. ಮೊದಮೊದಲು ಇವರ ಒಲವು ಕಲಿವಿನಲ್ಲೂ ಆಮೇಲೆ ಶ್ರೀರಂಗನಾಥನ ಪುಷ್ಪಕೈಂಕರ್ಯದ ತೋಟಗಾರಿಕೆಯಲ್ಲೂ ತದನಂತರ ಒಬ್ಬಳು ವೇಶ್ಯಾಸ್ತ್ರೀಯಲ್ಲೂ ಹರಿದು ಮರಳಿ ದೈವಕೃಪೆಯಿಂದ ಶ್ರೀರಂಗನಾಥನಲ್ಲೇ ಸ್ಥಿರವಾಗಿ ನೆಲೆಸಿತೆಂದು ಇವರ ವಿಷಯಕವಾದ ಕಥೆ ತಿಳಿಸುತ್ತದೆ. ಇವರ ರಚನೆಗಳು ಎರಡು. ತಿರುಮಾಲೈ ಎಂಬ ನೀಳ್ಗಬ್ಬದಲ್ಲಿ 45 ಪದಗಳಿವೆ. ಮತ್ತು ತಿರುಪಳ್ಳಿ ಎಳಿಚ್ಚಿ ಎಂಬ ಸುಪ್ರಭಾತಗೀತದಲ್ಲಿ 10 ಪದ್ಯಗಳಿವೆ. ಈ ಸುಪ್ರಭಾತಗೀತ ನಿತ್ಯಾನುಸಂಧಾನಕ್ಕೆ ಸೇರಿದೆ. ಇದು ತುಂಬ ಒಳ್ಳೆಯ ಕವಿತೆ. ಇದರೊಂದು ಪದ್ಯದಲ್ಲಿ ಮುಂಜಾನೆಯ ಹೊಳೆಯ ದಡದ ಚಿತ್ರದ ಜೊತೆಗೆ ಆಳ್ವಾರ ನಿಲವಿನ ಒಂದು ಹೊಳಪನ್ನೂ ನಾವು ಕಾಣಬಹುದು “ನರಗಂಪಿನ ಕಮಲಗಳರಳಿವೆ. ಮೊಳಗುವ ಕಡಲಿಂದ ರವಿ ಮೊಳೆತನು, ಹಿಡಿನಡುವಿನ ಹೆಂಗಳು ತಮ್ಮ ಹೆರಳನ್ನೊದರಿ ಹಿಂಡಿ ಮಡಿಬಟ್ಟೆಯುಟ್ಟು ದಡವೇರಿದರು. ಹೊಳೆ ಬಳಸಿರುವ ರಂಗನೇ. ಕಟ್ಟಿದ ತುಳಸಿಯ ಮಾಲೆಯನ್ನು ಬುಟ್ಟಿಯಲ್ಲಿಟ್ಟು ತೋಳಿಗೇರಿಸಿದ ತೊಂಡರಡಿಪ್ಪೊಡಿ ಎಂಬ ಅಡಿಯಾಳನ್ನು ಅನಾಥನೆಂದು ಕರುಣಿಸಿ ನಿನ್ನ ಭಕ್ತರಿಗೆ ಅಡಿಯಾಳನ್ನಾಗಿ ಮಾಡು; ಹಾಸಿಗೆ ಬಿಟ್ಟೆದ್ದು ಕರುಣಾಕಟಾಕ್ಷವನ್ನು ಬೀರು,” ತಿರುಮಾಲೈಯಲ್ಲೂ ಆಪನ್ನರೆಲ್ಲರೂ ನೆನೆದು ನಲ್ಮೆಗಾಣುವ ಹಲವಾರು ಪದ್ಯಗಳಿವೆ. ಅದರಲ್ಲಿ ಊರಿಲೇನ್ಕಾಣಿಯಿಲ್ಲೇನ್ ಎಂಬ ಪಾಶುರವನ್ನು ಆಳ್ವಾರರೇ ಸದಾ ಅನುಸಂಧಾನ ಮಾಡುತ್ತಿದ್ದರಂತೆ. “ನನಗೆ ಊರೊಂದಿಲ್ಲ, ನೆಲವೊಂದಿಲ್ಲ, ಸ್ವತ್ತೊಂದಿಲ್ಲ, ನೆಂಟರಿಷ್ಟರಿಲ್ಲ. ನಿನ್ನಡಿಯನ್ನು ಹಿಡಿದವನೂ ನಾನಲ್ಲ, ಎಲೈ ಪರಮಮೂರ್ತಿ ಕಾರ್ಮುಗಿಲವಣ್ಣಾ, ಕಣ್ಣಾ, ಮೊರೆಯಿಡುತ್ತಿಹೆನು, ನೀನಲ್ಲದೆ ನನಗಾರು ಗತಿ, ರಂಗನಾಥಾ.” ಈ ಪಾಶುರವನ್ನು ಶ್ರೀವೈಷ್ಣವರು ಪದೇ ಪದೇ ನೆನೆದು ನೆಮ್ಮದಿ ಪಡೆಯುತ್ತಾರೆ.