ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ದೋಣಿ

ವಿಕಿಸೋರ್ಸ್ದಿಂದ

ದೋಣಿ ಜನರನ್ನೂ ಸರಕನ್ನೂ ಆಳವಾದ ನೀರಿನ ಮೇಲೆ ಸುರಕ್ಷಿತವಾಗಿ ಒಯ್ಯಲು ಬಳಸುವ ಸಾಧನ. ಬಂಡಿ ಹೇಗೆ ನೆಲದ ಮೇಲಿನ ವಾಹನವೋ ದೋಣಿ ಹಾಗೆ ನೀರ ಮೇಲಿನ ವಾಹನ. ಪುರಾತನಕಾಲದಿಂದಲೂ ಮಾನವ ಹಳ್ಳಗಳ ಮತ್ತು ಹೊಳೆಗಳ ಮೇಲೆ ಜನರನ್ನೂ ಸಾಮಾನನ್ನೂ ಸಾಗಿಸುವುದಕ್ಕೆ ಮತ್ತು ಸಮುದ್ರದಲ್ಲಿ ಮೀನುಗಳನ್ನು ಹಿಡಿಯುವುದಕ್ಕೆ ದೋಣಿಗಳನ್ನು ಉಪಯೋಗಿಸುತ್ತಿದ್ದಾನೆ. ದೋಣಿಗಳ ಆರಂಭದ ಕತೆ ಅವ್ಯಕ್ತ. ಹಡಗುಗಳ ಇತಿಹಾಸವಾದರೋ ನಿಷ್ಕøಷ್ಟವಾಗಿ ತಿಳಿದಿದೆ. ಪ್ರಾಯಶಃ ಮೊದಲಿಗೆ ಬಿದಿರು ಗಳುಗಳನ್ನು ಹಗ್ಗಗಳಿಂದ ಬಿಗಿದು ಮಾಡಿದ ತೆಪ್ಪಗಳನ್ನು ಬಳಸಿರಬಹುದು. ಆಮೇಲೆ ಮರದ ದಿಮ್ಮಿಯನ್ನು ಒಳಗಡೆ ಬೆಂಕಿಯಿಂದ ಸುಟ್ಟೋ ಇಲ್ಲವೆ ಕೊರೆದೋ ಒರಟಾದ ದೋಣಿಗಳನ್ನು ತಯಾರಿಸಿ ಅವನ್ನು ಹುಟ್ಟುಗಳಿಂದ ನೀರಿನಲ್ಲಿ ನಡೆಸಿರಬಹುದು. ಮುಂದಕ್ಕೆ ಬಿದಿರಿನಿಂದ ಹರಿಗೋಲುಗಳನ್ನು ಮಾಡಿ ಹೊರಗಡೆ ಚರ್ಮವನ್ನು ಹೊದೆಸಿ ಹುಟ್ಟುಗಳಿಂದ ನದಿಗಳನ್ನು ದಾಟಿರಬಹುದು. ಆಶ್ಚರ್ಯಕರವಾದ ಸಂಗತಿ ಏನೆಂದರೆ ಪರಸ್ಪರ ಸಂಪರ್ಕವೇ ಇಲ್ಲದಿದ್ದಂಥ ಪ್ರಪಂಚದ ಬೇರೆ ಬೇರೆ ಭೂಭಾಗಗಳಲ್ಲಿಯೂ ಜನ ಒಂದೇ ನಮೂನೆಯ ದೋಣಿಗಳನ್ನು ತಯಾರಿಸಿರುವುದು. ಅಲ್ಲಿಗೆ ಅವರು ಒಂದು ಸಮಸ್ಯೆಗೆ ಒಂದೇ ಬಗೆಯ ತಾಂತ್ರಿಕ ಪರಿಹಾರವನ್ನು ಕಂಡುಕೊಂಡಂತಾಯಿತು.

ಪ್ರಾಚೀನ ಈಜಿಪ್ಟಿನಲ್ಲಿ ಜಾಲಿಮರದ ದಿಂಡುಗಳನ್ನು ಜೋಡಿಸಿ ಮಾಡಿದ ನಾಜೂಕಾದ ದೋಣಿಗಳಿಂದ ನೈಲ್ ನದಿಯ ಮೇಲೆ ಸಂಚರಿಸುತ್ತಿದ್ದರು. ಚೀನದಲ್ಲಿ ದೋಣಿಯನ್ನು ಉದ್ದವಾದ ಮರದ ಹಲಗೆಗಳಿಂದ ತಯಾರಿಸುತ್ತಿದ್ದರು. ಭಾರತದಲ್ಲಿ ಒಂದೇ ಮರದ ಕಾಂಡವನ್ನು ಕೊರೆದು ಸುರಕ್ಷಿತವಾದ ದೋಣಿಯನ್ನು ಮಾಡಿರುವುದುಂಟು. ನಾರ್ಸ್ ಜನರ ದೋಣಿಗಳನ್ನು ಯೂರೋಪಿನ ಎಲ್ಲ ದೇಶಗಳೂ ಮೀನು ಹಿಡಿಯುವುದಕ್ಕೆ ಮಾದರಿಯಾಗಿ ತೆಗೆದುಕೊಂಡರು. ಈಚೆಗೆ ಪ್ರಾಕ್ತನ ವಿಮರ್ಶಕರು ಸ್ಕ್ಯಾಂಡಿನೇವಿಯದಲ್ಲಿ ಅಗೆದು ತೆಗೆದ ಹಡಗುಗಳಲ್ಲಿ ಅಗ್ನಿಪರ್ವತದಿಂದ ಹರಿದು ಬರುವ ಶಿಲಾದ್ರವದಿಂದ ಮಾಡಿದ ಸಣ್ಣ ಮಾದರಿಗಳಿದ್ದವು. ಗ್ರೀಕರ ಮತ್ತು ರೋಮನರ ಯುದ್ಧದ ಮತ್ತು ವ್ಯಾಪಾರದ ಹಡಗುಗಳು ತಮ್ಮೊಂದಿಗೆ ದೋಣಿಗಳನ್ನೂ ಎಳೆದುಕೊಂಡು ಹೋಗುತ್ತಿದ್ದುವು. ಯೂರೋಪಿನಲ್ಲಿ ಸ್ಕ್ಯಾಂಡಿನೇವಿಯದ ವೈಕಿಂಗ್ ದೋಣಿ ಮತ್ತು ಹಡಗುಗಳನ್ನು ಮರದ ಹಲಗೆಗಳನ್ನು ಕತ್ತರಿಸಿ ಅವು ಒಂದರ ಮೇಲೆ ಒಂದು ಅನಿಕೆಗೊಳ್ಳುವಂತೆ ಮಾಡಿ ತಯಾರಿಸುತ್ತಿದ್ದರು. ಭೂಮಧ್ಯ ಸಮುದ್ರತೀರದಲ್ಲಿ ಜನ ದೋಣಿಗಳನ್ನು ಒಂದೇ ಮರದಿಂದ ಮಾಡುತ್ತಿರಲಿಲ್ಲ-ಹಲಗೆಗಳನ್ನು ಒಂದಕ್ಕೆ ಒಂದನ್ನು ಜೋಡಿಸಿ ತಯಾರಿಸುತ್ತಿದ್ದರು.

ಹಡಗುಗಳಲ್ಲಿ ಪ್ರಾಣರಕ್ಷಣೆಗಾಗಿ ಉಪಯೋಗಿಸುತ್ತಿದ್ದ ದೋಣಿಗಳನ್ನು ಇಂಗ್ಲೆಂಡಿನಲ್ಲಿಯೂ ಯೂರೋಪಿನಲ್ಲಿಯೂ ಅನೇಕ ಶತಮಾನಗಳವರೆಗೂ ಲಾಂಗ್ ಬೋಟ್ ಮತ್ತು ಕಾಕ್ ಬೋಟ್ ಎಂಬ ಎರಡು ನಮೂನೆಗಳಲ್ಲಿ ಮಾಡುತ್ತಿದ್ದರು. ಮೊದಲನೆಯ ನಮೂನೆಯನ್ನು ಸರಪಳಿಯಿಂದ ಇಲ್ಲವೆ ಹಗ್ಗದಿಂದ ಹಡಗಿಗೆ ಕಟ್ಟಿ ನೀರಿನಲ್ಲಿ ಉದ್ದಕ್ಕೂ ಎಳೆದುಕೊಂಡು ಹೋಗಬೇಕಾಗಿತ್ತು. ಎರಡನೆಯ ನಮೂನೆಯನ್ನು ಹಡಗಿನ ಅಟ್ಟದ ಮೇಲೆ ಸಾಗಿಸುತ್ತಿದ್ದರು. ಆದರೆ ಕಷ್ಟಕಾಲಗಳಲ್ಲಿ ಇಂಥ ದೋಣಿಗಳಿಂದ ಬಹುಕಾಲ ಪ್ರಯಾಣಿಕರ ಪ್ರಾಣರಕ್ಷಣೆ ಒದಗುತ್ತಿರಲಿಲ್ಲ. ಪ್ರಸಕ್ತ ಶತಮಾನದಲ್ಲಿ ಎಲ್ಲ ಪ್ರಯಾಣಿಕರೂ ಸಾಮಾನಿನ ಹಡಗುಗಳಲ್ಲಿ ಎಲ್ಲ ಕೆಲಸಗಾರರಿಗೂ ಪ್ರತ್ಯೇಕವಾದ ದೋಣಿಯ ಅನುಕೂಲತೆಯನ್ನು ಒದಗಿಸಲಾಗಿದೆ.

ಮೀನುಗಾರರ ದೋಣಿಗಳು ಬೇರೆ ಬೇರೆ ದೇಶಗಳಲ್ಲಿ ಬೇರೆ ಬೇರೆ ಮಾದರಿ ಆಗಿವೆ. ಕರ್ನಾಟಕದ ಪಶ್ಚಿಮ ಕರಾವಳಿಯಲ್ಲಿ ಮರದ ಸಣ್ಣ ದೋಣಿಗಳನ್ನು ಉಪಯೋಗಿಸುವುದೇ ರೂಢಿ. ರೇವು ಪಟ್ಟಣಗಳಿರುವ ಇಂಗ್ಲೆಂಡ್ ಮೊದಲಾದ ದೇಶಗಳಲ್ಲಿ ಬೀಚ್ ಮರದ ದೋಣಿಗಳನ್ನು ಉಪಯೋಗಿಸುತ್ತಾರೆ. ನೈಲ್ ಮತ್ತು ಅದರ ಉಪನದಿಗಳ ಮೇಲೆ ಉಪಯೋಗಿಸುವ ದೋಣಿಗಳ ಉದ್ದ ಹೆಚ್ಚು. ಇಲ್ಲಿ ಸಾಮಾನಿನ ಮತ್ತು ಜನರ ಸಾಗಣೆಗೆ ದೋಣಿಯನ್ನೇ ವಿಶೇಷವಾಗಿ ಬಳಸುತ್ತಾರೆ. ಮರದಿಂದ ಕೊರೆದ ದೋಣಿ, ಜೊಂಡು ಹುಲ್ಲಿನ ದೋಣಿ ಮತ್ತು ತೆಪ್ಪ ಈ ಮೂರನ್ನು ನೈಲ್ ಮತ್ತು ಅದರ ಉಪನದಿಗಳ ಮೇಲೆ ಕಾಣಬಹುದು. ಈಚೆಗೆ ತೆಪ್ಪಗಳನ್ನು ಖಾಲಿ ಎಣ್ಣೆಯ ಪೀಪಾಯಿಗಳ ಮೇಲೆ ಕಟ್ಟುತ್ತಿದ್ದಾರೆ. ಇನ್ನೂ ಕೆಳಗಡೆ ಜಾಲಿಮರದ ಸಣ್ಣ ತುಂಡುಗಳಿಂದ ಚಮಚದ ಆಕಾರದಲ್ಲಿ ಕಟ್ಟಿದ ಉದ್ದವಾದ ದೋಣಿಗಳ ಉಪಯೋಗ ಹೆಚ್ಚು. ಇವುಗಳ ಉದ್ದ 60, ಇವು ಹೊರಬಲ್ಲ ತೂಕ 45 ಟನ್. ಕೆಳಗಿನ ನೈಲ್ ನದಿಯ ದಡದಲ್ಲಿ ತಟ್ಟೆ ದೋಣಿಗಳು ಬಳಕೆಯಲ್ಲಿವೆ. ಇವುಗಳಲ್ಲಿ ಎರಡು ಕೂವೆ ಮರಗಳಿವೆ. ಇವಕ್ಕೆ ಪಟಗಳನ್ನು ಕಟ್ಟಿರುತ್ತಾರೆ. 19ನೆಯ ಶತಮಾನದ ಮಧ್ಯಭಾಗದಲ್ಲಿ ಉಗಿ ದೋಣಿ ಬಳಕೆಗೆ ಬಂತು. ಇದನ್ನು ಸೈನ್ಯದ ಮತ್ತು ಬಂದರಿನ ಕೆಲಸಕ್ಕೂ ವಿಶೇಷವಾಗಿ ವಿಹಾರಕ್ಕೂ ಉಪಯೋಗಿಸುತ್ತಿದ್ದರು. ಪ್ರಸಕ್ತ ಶತಮಾನದ ಆದಿಭಾಗದಿಂದ ಮೋಟರ್ ದೋಣಿ ಎಲ್ಲ ಕಡೆಗಳಲ್ಲಿಯೂ ಬಳಕೆಗೆ ಬಂದಿದೆ. ಇದರ ಪರಿಣಾಮವಾಗಿ ನಾಗರಿಕ ರಾಷ್ಟ್ರಗಳಲ್ಲಿ ದೋಣಿ ನಾಮಾವಶೇಷವಾಗುತ್ತಿದೆ. ಇತರ ಕಡೆಗಳಲ್ಲಿ ಎರಡು ನಮೂನೆಗಳೂ ಬಳಕೆಯಲ್ಲಿವೆ.

ಭಾರತದಲ್ಲಿ ಇತರ ರಾಷ್ಟ್ರಗಳಲ್ಲಿನಂತೆಯೇ ದೋಣಿಗಳನ್ನು ಹೆಚ್ಚಾಗಿ ವಿಹಾರಾರ್ಥ ಉಪಯೋಗಿಸುತ್ತಾರೆ. ದೊಡ್ಡಕೆರೆಗಳಲ್ಲಿಯೂ ಸರೋವರಗಳಲ್ಲಿಯೂ ವ್ಯವಸ್ಥಿತವಾದ ದೋಣಿ ಸಂಸ್ಥೆಗಳೇ ಕೆಲಸ ಮಾಡುತ್ತಿವೆ. ಎಲ್ಲೆಲ್ಲಿಯೂ ಕೈಯಿಂದ ನಡೆಸುವ ದೋಣಿಗಳು ಮೋಟರ್ ದೋಣಿಗಳಷ್ಟೇ ಜನಪ್ರಿಯವಾಗಿವೆ. ಹುಟ್ಟುಹಾಕಿ ನಡೆಸುವ ತೋಡು ದೋಣಿಯ ಮೇಲೆ ಸರೋವರಗಳ ಮೇಲೆ ಸಂಚರಿಸುವುದರಲ್ಲಿ ಜನರಿಗೆ ಎಷ್ಟು ಉತ್ಸಾಹವಿದೆಯೆಂದರೆ ಅದಕ್ಕಾಗಿ ಅಂತಾರಾಷ್ಟ್ರೀಯ ದೋಣಿಯ ಸಂಸ್ಥೆಯನ್ನು ಕಳೆದ ಶತಮಾನದಲ್ಲಿಯೇ ಇಂಗ್ಲೆಂಡ್ ಮತ್ತು ಅಮೆರಿಕಗಳಲ್ಲಿ ಸ್ಥಾಪನೆ ಮಾಡಿದರು. ಈ ದೋಣಿಗಳು ಉದ್ದದಲ್ಲಿ 10-12ವರೆಗೂ ಅಗಲದಲ್ಲಿ 2-2.5 ವರೆಗೂ ಇವೆ. ಇಂಗ್ಲೆಂಡಿನಲ್ಲಿ ದೊಡ್ಡ ನದಿಗಳನ್ನು ಜಲಯಾನಯೋಗ್ಯವಾದ ಅಗಲ ನಾಲೆಗಳಿಂದ ಒಂದಕ್ಕೆ ಒಂದು ಬೆಸೆದು ದೋಣಿಯಾನಕ್ಕೆ ಪ್ರೋತ್ಸಾಹವನ್ನು ಕೊಟ್ಟಿದ್ದಾರೆ. ಯೂರೋಪಿನಲ್ಲಿಯೂ ಈ ಹವ್ಯಾಸ ಜನಪ್ರಿಯವಾಗುತ್ತದೆ. ಎಲ್ಲವನ್ನೂ ದೊಡ್ಡ ರೀತಿಯಲ್ಲಿ ಮಾಡುವ ಅಮೆರಿಕ ಸಂಯುಕ್ತ ಸಂಸ್ಥಾನಗಳಲ್ಲಿಯೂ ರಷ್ಯದಲ್ಲಿಯೂ ಈಚೆಗೆ ದೋಣಿಯಲ್ಲಿ ಸರೋವರಗಳ ಮೇಲೆ ಸಂತೋಷವಾಗಿ ಕಾಲವನ್ನು ಕಳೆಯುವುದು ಸಾಮಾನ್ಯವಾಗಿದೆ. ಕಾಶ್ಮೀರದ ಸರೋವರಗಳಲ್ಲಿ ದೋಣಿಗಳಲ್ಲಿ ವಾಸ ಮಾಡುತ್ತಾರೆ.

ತೋಡುದೋಣಿಯ ಆಕಾರ ಸಂವಿಧಾನಗಳಲ್ಲಿ ಬೇರೆ ಬೇರೆ ದೇಶಗಳಲ್ಲಿ ಕೊಂಚ ವ್ಯತ್ಯಾಸಗಳಿವೆ. ತಳಭಾಗದಲ್ಲಿ ಅಡಿಗಟ್ಟಿಲ್ಲದೆ ಇರುವ ಹಗುರ ದೋಣಿ ನಡೆಸುವುದನ್ನು ಕಲಿಯುವುದಕ್ಕೆ ಕೊಂಚ ಕಾಲವೂ ಕೌಶಲವೂ ಬೇಕು. ಗಾಳಿಯ ಮತ್ತು ನೀರಿನ ಚಲನೆಯ ಪ್ರಭಾವ ಈ ದೋಣಿಗಳ ಮೇಲೆ ವಿಶೇಷವಾಗಿರುವುದು. ಚಪ್ಪಟೆ ತಳದ ದೋಣಿಗಳ ಉದ್ದ 20-30ವರೆಗೂ ಅಗಲ 2-3.5ವರೆಗೂ ವ್ಯತ್ಯಾಸವಾಗುತ್ತದೆ. ಇವನ್ನು ಹುಟ್ಟುಗಳಿಂದ ಕೂಡ ನಡೆಸಬಹುದು. ಅದರೆ ನದಿಯ ತಳ ಗಟ್ಟಿಯಾಗಿದ್ದು ನೀರು ಬಹಳ ಆಳವಾಗಿ ಇಲ್ಲದೆ ಇದ್ದರೆ ಸುಮಾರು 15 ಉದ್ದರ ಮರದ ಗಣೆಗಳಿಂದ ನಡೆಸುವುದೇ ರೂಢಿ. ದೋಣಿಯನ್ನು ನಡೆಸುವಾತ ಅದರ ಹಿಂಭಾಗದಲ್ಲಿ ಕೊಂಚವೇ ಮುಂದಕ್ಕೆ ಬಾಗಿ ನಿಂತು ಗಣೆಯನ್ನು ನದಿಯ ತಳಕ್ಕೆ ಮೀಟುತ್ತಾನೆ. ಚಾಕಚಕ್ಯದಿಂದ ಗಣೆಯನ್ನು ನೀರಿನಿಂದ ಮೇಲಕ್ಕೆ ಎತ್ತಿ ಮತ್ತೆ ಕೆಳಕ್ಕೆ ಬಿಡುವನು. ದೋಣಿಯ ದಿಕ್ಕನ್ನು ತಿರುಗಿಸಬೇಕಾದಾಗ ಗಣೆಯನ್ನು ತಳ್ಳುವ ಕೋನವನ್ನು ದೇಹದ ಭಾರವನ್ನು ಉಪಯೋಗಿಸಿಕೊಂಡು ಎರಡು ತೋಳುಗಳಿಂದಲೂ ಬದಲಾಯಿಸುತ್ತಾನೆ. ಈ ದೋಣಿಗಳನ್ನು ಸಣ್ಣ ಹೊಳೆಗಳ ಮೇಲೆ ಮಾತ್ರ ಉಪಯೋಗಿಸಬಹುದು. ಹಗುರ ಹುಟ್ಟಿನ ದೋಣಿಗಳನ್ನು ನಡೆಸುವಾಗ ಜೋಡಿ ಹುಟ್ಟುಗಳನ್ನು ಉಪಯೋಗಿಸುವರು. ಉದ್ದವಾದ ಹುಟ್ಟು ದೋಣಿಯ ಹಿಂತುದಿಯಲ್ಲಿರುವ ಹಿಡಿಕೆಯಲ್ಲಿ ಇರುತ್ತದೆ. ಹುಟ್ಟನ್ನು ಹಾಕುವಾತ ಇದನ್ನು ಹಡಗಿನ ತಿರುಪಿನಂತೆ ತಿರಿಚು ವರಸೆಗಳಿಂದ ನಡೆಸುತ್ತಾನೆ. ಅತಿಯಾದ ಕಾವಿನಲ್ಲಿ ಗಾಜಿನಂತೆ ತಯಾರಿಸಿದ ಇಟ್ಟಿಗೆಗಳಿಂದ ಹಾಲೆಂಡಿನಲ್ಲಿ ದೋಣಿಯ ಮೇಲ್ಮೈಯನ್ನು ಕಟ್ಟುತ್ತಾರೆ. ಹುಟ್ಟುಗಳು 8-9 ವರೆಗೆ ಉದ್ದವಾಗಿರುತ್ತವೆ. ಈ ದೋಣಿಗಳನ್ನು ನಡೆಸುವಾಗ ಹುಟ್ಟಿನ ಅಲಗುಗಳು ನೀರಿನ ಮಟ್ಟದ ಕೆಳಗೆ ಹೆಚ್ಚಾಗಿ ಹೋಗುವುದಿಲ್ಲ.

ವಿಹಾರಕ್ಕಾಗಿ ನದಿಗಳಲ್ಲಿ ಹೋಗುವ ದೋಣಿಗಳ ಮಾರ್ಗಗಳ ವಿಚಾರವಾಗಿ ಎಲ್ಲರೂ ಒಪ್ಪಿರುವ ಕೆಲವು ನಿಬಂಧನೆಗಳಿವೆ. ನದಿಯ ಪ್ರವಾಹದ ದಿಕ್ಕಿನಲ್ಲಿ ಹೋಗುವ ದೋಣಿಗಳು ನಡುಹೊಳೆಯಲ್ಲಿ ಹೋಗುತ್ತವೆ. ಪ್ರವಾಹಕ್ಕೆ ಎದುರಾಗಿ ಹೋಗುವ ಸಣ್ಣ ದೋಣಿಗಳು ದಡವನ್ನು ಒತ್ತಿಹೋಗಬೇಕು. ನೀರಿನ ಪಾತ್ರ ಕಿರಿದಾಗಿರುವ ಕಡೆಗಳಲ್ಲಿ ಬಲದಡದಲ್ಲಿ ಹೋಗಬೇಕು.

ದೋಣಿಯ ಮನೆ: ಸಮುದ್ರತೀರದಲ್ಲಿ ಈ ಜೋಪಡಿಗಳನ್ನು ಚಪ್ಪಟೆಯಾದ ತಳದ ದೋಣಿಯ ಮೇಲೆ ಒಂದೋ ಎರಡೋ ಕೊಠಡಿಗಳಿರುವ ಹಾಗೆ ಕಟ್ಟಿ ಎರಡು ಕೊನೆಗಳಲ್ಲಿಯೂ ಜಗಲಿಗಳನ್ನು ಬಿಟ್ಟು ಬೇಸಗೆಯ ಕಾಲದಲ್ಲಿ ವಾಸಮಾಡುತ್ತಾರೆ. ಕಾಶ್ಮೀರದ ಸರೋವರಗಳಲ್ಲಿ ಇಂಥ ಕುಟೀರಗಳು ಸಾಮಾನ್ಯವಾಗಿವೆ. ಮೀನುಗಳು ಸಿಕ್ಕುವ ಸಮುದ್ರತೀರದ ಬಂದರುಗಳಲ್ಲಿಯೂ ಸಣ್ಣ ಹೊಳೆಗಳಲ್ಲಿಯೂ ಪಾಶ್ಚಾತ್ಯದೇಶಗಳಲ್ಲಿ ದೋಣಿಯ ಮನೆಗಳನ್ನು ಕಟ್ಟುತ್ತಾರೆ.

ಪ್ರಾಚ್ಯದೇಶಗಳಲ್ಲಿ ಬೇಸಗೆಯ ಕಾಲದಲ್ಲಿ ವಾಸಮಾಡುವುದಕ್ಕಾಗಿ ಕಟ್ಟುವ ದೋಣಿಯ ಮನೆಗಳು ಮೂರು ನಾಲ್ಕು ಕೊಠಡಿಗಳಿಂದಲೂ ವರಾಂಡಗಳಿಂದಲೂ ಕೂಡಿ ವಿಶಾಲವಾಗಿರುತ್ತವೆ. ತಳದ ದೋಣಿಗಳನ್ನು ಹುಟ್ಟು ಹಾಕಿ ನೀರಿನಲ್ಲಿ ಸಂಚರಿಸುವ ಹಾಗೆ ಮಾಡಬಹುದು. ಪೆಟ್ರೋಲಿನ ಎಂಜಿನ್ನುಗಳು ಬಂದ ಬಳಿಕ ದೋಣಿಗಳನ್ನು ನೀರಿನ ಮೇಲೆ ತೇಲಿಸುವುದು ಸಾಧ್ಯವಾಯಿತು. ಆಗ ದೋಣಿಯ ಮನೆಗಳು ಎಲ್ಲೆಲ್ಲಿಯೂ ಜನಪ್ರಿಯವಾದುವು. ವಾಸದ ಮನೆಗಳು ದೋಣಿಗಳ ಮೇಲುಗಡೆ ಅಟ್ಟದ ಮೇಲಿದ್ದು ಅಗಲವಾದ ಕಿಟಕಿಗಳ ಮೂಲಕ ಯಥೇಚ್ಛವಾಗಿ ವಾಯುವನ್ನು ಒದಗಿಸಿ ಬೇಸಗೆಯ ಕಾಲದಲ್ಲಿ ಬಹಳ ಹಿತವಾಗಿರುತ್ತವೆ. ಅಮೆರಿಕದ ಸಂಯುಕ್ತ ಸಂಸ್ಥಾನದ ಉತ್ತರದ ತೀರದಲ್ಲಿ ಈ ಯಂತ್ರಚಾಲಿತವಾದ ದೋಣಿಯ ಮನೆಗಳನ್ನು ಬೇಸಗೆಯಲ್ಲಿ ದಕ್ಷಿಣದ ಶೀತದೇಶಗಳ ಕಡೆಗೂ ಚಳಿಗಾಲದಲ್ಲಿ ಬೆಚ್ಚಗಿರುವ ಫ್ಲಾರಿಡ ತೀರಕ್ಕೂ ಸಾಗಿಸುತ್ತಾರೆ.

ಸಾಮಾನಿನ ದೋಣಿ : ಒಳನಾಡಿನಲ್ಲಿ ಅನುಕೂಲತೆಗಳಿರುವ ಕಡೆ ನೆಲದ ಮೇಲೆ ಸಾಮಾನುಗಳನ್ನು ಸಾಗಿಸುವುದಕ್ಕಿಂತ ನದಿ ಮತ್ತು ನಾಲೆಗಳ ಮೇಲೆ ದೋಣಿಗಳಲ್ಲಿ ಸಾಗಿಸುವುದು ಹೆಚ್ಚಿನ ಸೌಕರ್ಯದ್ದು. ಇದರಲ್ಲಿ ವೆಚ್ಚವೂ ಕಡಿಮೆ. ಕರ್ನಾಟಕದ ಪಶ್ಚಿಮ ಕರಾವಳಿಯಲ್ಲಿಯೂ ಆಂಧ್ರಪ್ರದೇಶದಲ್ಲಿ ಕೃಷ್ಣಾ ಮತ್ತು ಗೋದಾವರಿ ನದಿಗಳಿಂದ ತೆಗೆದ ಜಲಯಾನ ಯೋಗ್ಯವಾದ ನಾಲೆಗಳಲ್ಲಿಯೂ ಬತ್ತ, ಹತ್ತಿ ಮತ್ತು ದಿನಸುಗಳನ್ನು ದೋಣಿಗಳಲ್ಲಿ ಸಾಗಿಸುವುದೇ ರೂಢಿ. ಕಾವೇರಿ ನದಿಯಿಂದ ಕೃಷ್ಣರಾಜಸಾಗರದ ಮೇಲುಗಡೆಯೂ ಕೆಳಗಡೆಯೂ ನೀರಾವರಿಗಾಗಿ ತೆಗೆದ ನಾಲೆಗಳು ಉಬ್ಬುತಗ್ಗಿನ ಭೂಮಿಯಲ್ಲಿ ಸಾಗುವುದರಿಂದ ಜಲಯಾನ ಯೋಗ್ಯವಾಗಿಲ್ಲ. ಆದರೆ ತಂಜಾವೂರು ಜಿಲ್ಲೆಯ ನಾಲೆಗಳಲ್ಲಿ ಈ ಅನುಕೂಲತೆ ಉಂಟು. ಉತ್ತರ ಭಾರತದ ಮಟ್ಟಸ ಭೂಮಿಯಲ್ಲಿ ಗಂಗಾ, ಯಮುನಾ ನದಿಗಳಿಂದ ನೀರಾವರಿಗಾಗಿ ತೆಗೆದ ದೊಡ್ಡನಾಲೆಗಳಲ್ಲಿ ಎಲ್ಲ ಬಗೆಯ ಸಾಮಾನುಗಳನ್ನೂ ದೋಣಿಗಳ ಮೇಲೆ ಸಾಗಿಸುವುದು ಸಾಮಾನ್ಯವಾಗಿದೆ.

ಸಾಮಾನುಗಳ ಸಾಗಣೆಗಾಗಿ ಉಪಯೋಗವಾಗುವ ದೋಣಿಗಳಲ್ಲಿ ವಿಶೇಷವಾದ ವೈವಿಧ್ಯ ಉಂಟು. ಇವನ್ನು ಎರಡು ಅಥವಾ ನಾಲ್ಕು ಹುಟ್ಟುಗಳಿಂದ ನಡೆಸುವುದೇ ರೂಢಿ. ಪಟಗಳನ್ನು ಕಟ್ಟುವುದಾಗಲಿ ಯಂತ್ರ ಸಾಮಥ್ರ್ಯವನ್ನು ಬಳಸುವುದಾಗಲಿ ಇನ್ನೂ ಎಲ್ಲ ಕಡೆಗಳಲ್ಲಿ ಬಳಕೆಗೆ ಬಂದಿಲ್ಲ. ಪಾಶ್ಚಾತ್ಯ ದೇಶಗಳಲ್ಲಿ ನಾಲೆಗಳ ಮತ್ತು ಹೊಳೆಗಳ ಮೇಲೂ ಸಮುದ್ರ ತೀರದಲ್ಲಿಯೂ ದೋಣಿಗಳು ಸಾಮಾನುಗಳನ್ನು ಸಾಗಿಸುತ್ತವೆ. ಬಲು ಹಿಂದೆ ನಾಲೆಯ ಪಕ್ಕದ ಕಾಲು ದಾರಿಯಲ್ಲಿ ನಡೆಯುವ ಕುದುರೆಗಳೂ ಕತ್ತೆಗಳೂ ಸಣ್ಣ ದೋಣಿಗಳನ್ನು ಎಳೆಯುತ್ತಿದ್ದುವು. ಈಚೆಗೆ ಇವು ಯಂತ್ರ ಸಹಾಯದಿಂದ ಚಲಿಸುತ್ತವೆ. 18ನೆಯ ಶತಮಾನದಲ್ಲಿ ದೋಣಿಗಳು ಸುಮಾರು 10 ಉದ್ದವಾಗಿದ್ದವು. ಈಗ 120 ಉದ್ದ, 17 ಅಗಲದ ದೋಣಿಗಳು 7.5 ಆಳದ ನೀರಿನಲ್ಲಿ ಓಡಾಡುತ್ತಿವೆ. ತೆಟ್ಟೆ ತಳವುಳ್ಳ ಸಾಮಾನಿನ ದೋಣಿಗಳನ್ನು ಈಗ ಎಲ್ಲ ನದಿಗಳ ಮೇಲೂ ನಡೆಸುತ್ತಾರೆ. ಪಟಗಳನ್ನು ಕಟ್ಟುವ ದೋಣಿಗಳ ಜೊತೆಗೆ ಆವಿಯಿಂದಲೂ ಪೆಟ್ರೋಲಿನಿಂದಲೂ ನಡೆಯುವ ಸಾಮಾನಿನ ದೋಣಿಗಳನ್ನು ಸಮುದ್ರತೀರದ ಪ್ರದೇಶಗಳಲ್ಲಿ ಕಾಣಬಹುದು.

ಯೂರೋಪಿನಲ್ಲಿ ದೊಡ್ಡ ನದಿಗಳನ್ನೆಲ್ಲ ನಾಲೆಗಳಿಂದ ಒಂದಕ್ಕೊಂದಾಗಿ ಸೇರಿಸಿ ಒಳಪ್ರದೇಶದಲ್ಲಿ ಜಲಯಾನವನ್ನು ಏರ್ಪಡಿಸಿದ್ದಾರೆ. ಫ್ರಾನ್ಸಿನಲ್ಲಿ ನಾಲೆಗಳ ಏರಿಯ ಮೇಲೆ ಕಂಬಿಗಳ ಮೇಲೆ ಓಡಾಡುವ ವಿದ್ಯುತ್ತಿನ ಎಂಜಿನ್ನುಗಳು ದೋಣಿಗಳನ್ನು ಎಳೆಯುತ್ತವೆ. 14ನೆಯ ಶತಮಾನದ ಪಾಶ್ಚಾತ್ಯ ದೇಶಗಳ ದೋಣಿಗಳು 30 ಹುಟ್ಟುಗಳನ್ನು ಉಪಯೋಗಿಸುವಷ್ಟು ದೊಡ್ಡದಾಗಿದ್ದುವು. ನಾಲ್ಕು ಜನರಿರುವ ಸಣ್ಣ ದೋಣಿಯಿಂದ ಹಿಡಿದು ನೂರು ಜನರಿದ್ದು 100 ಟನ್ ಸಾಮಾನನ್ನು ಸಾಗಿಸುವ ದೋಣಿಗಳು 15ನೆಯ ಶತಮಾನದ ಇಂಗ್ಲೆಂಡಿನಲ್ಲಿ ಬಳಕೆಗೆ ಬಂದಿದ್ದುವು. ಎಲ್ಲ ಮುಖ್ಯ ನದಿಗಳ ಮೇಲೂ ಸಾಮಾನನ್ನು ಸಾಗಿಸುವುದಕ್ಕೆ ಪಟಗಳನ್ನು ಕಟ್ಟಿದ ದೋಣಿಗಳಿದ್ದವು. ಈ ದೋಣಿಗಳ ಮೇಲೆ 200 ಟನ್ ಸಾಮಾನನ್ನು ಹೇರಿಕೊಂಡು ನಾಲ್ಕು ಜನ ಸಮುದ್ರ ಮಧ್ಯದಲ್ಲಿ ಕೂಡ ಯಾನ ಮಾಡುತ್ತಿದ್ದರು.

ಪ್ರಪಂಚದಲ್ಲಿ ಹೆಚ್ಚಿನ ಸಂಖ್ಯೆಯ ಸಾಮಾನಿನ ದೋಣಿಗಳನ್ನು ನಾವು ಕಾಣುವುದು ಬಂದರುಗಳು ಮತ್ತು ರೇವು ಪಟ್ಟಣಗಳಲ್ಲಿ. ಇವುಗಳಲ್ಲಿ ಪಟಗಳೂ ಇಲ್ಲ, ಯಂತ್ರಸಾಮಥ್ರ್ಯವೂ ಇಲ್ಲ. ಅಂಥ ಸಾಮಾನಿನ ದೋಣಿಗಳ ಸಂವಿಧಾನದಲ್ಲಿ ಈಚೆಗೆ ಅನೇಕ ಮೇಲ್ಪಾಡುಗಳು ನಡೆದಿವೆ. ಪ್ರತಿಯೊಂದು ಬಂದರಿನಲ್ಲಿಯೂ ಇವು ಹಡಗಿನೊಳಕ್ಕೆ ಸಾಮಾನನ್ನು ತುಂಬುತ್ತವೆ. ಹಡಗಿನಿಂದ ಸಾಮಾನುಗಳನ್ನು ಇಳಿಸುತ್ತವೆ. ಸಾಮಾನ್ಯವಾಗಿ ಇವು ಮೇಲುಗಡೆ ತೆರೆದಿರುತ್ತವೆ. ಆದರೆ ವಿಶೇಷ ರೀತಿಯ ಸಾಮಾನನ್ನು ಸಾಗಿಸುವ ದೋಣಿಗಳನ್ನು ಮೇಲುಗಡೆ ಮುಚ್ಚಿರುತ್ತಾರೆ. ಈಚೆಗೆ ನಡೆದ ಪ್ರಯೋಗಗಳ ಫಲವಾಗಿ ದೋಣಿಯ ಒಡಲನ್ನು ಹಗುರವಾಗಿ ಮಾಡುವುದು ಸಾಧ್ಯವಾಗಿದೆ. ಯೂರೋಪಿನಲ್ಲಿ ರ್ಹೈನ್, ವೊಲ್ಗ ಈ ನದಿಗಳ ಮೇಲೆ ಬಹಳ ದೊಡ್ಡ ದೋಣಿಗಳನ್ನು ನಡೆಸುತ್ತಾರೆ. ಪೂರ್ವದಲ್ಲಿ ಇತರ ದೋಣಿಗಳನ್ನು ಸಂವಿಧಾನ ಮಾಡಿದ್ದರೂ ಇವನ್ನೂ ಈಗಿನ ಆವಿಯ ಬಲದಿಂದ ನಡೆಸುತ್ತಾರೆ. (ಎಚ್.ಸಿ.ಕೆ.)