ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ದೃಷ್ಟಾಂತ ಕಥೆ

ವಿಕಿಸೋರ್ಸ್ದಿಂದ

ದೃಷ್ಟಾಂತ ಕಥೆ - ಯಾವುದೋ ನಿರೂಪಿತ ನೀತಿಗೂ ತತ್ತ್ವಕ್ಕೂ ದರ್ಶನವಾಗಬಲ್ಲ ಪುಟ್ಟ ಕಥೆ. ಧರ್ಮಬೋಧಕರಿಗೆ ಇದರಿಂದ ಸಲ್ಲುವ ಉಪಕಾರ ಅಷ್ಟಿಷ್ಟಲ್ಲ. ಯೇಸುಕ್ರಿಸ್ತ ಇದನ್ನು ಪದೇ ಪದೇ ಬಳಸಿಕೊಂಡು ಶ್ರೋತೃಗಳು ತನ್ನ ಉಪದೇಶಕ್ಕೆ ಮನಸೋಲುವಂತೆ ಮಾಡುತ್ತಿದ್ದ. ದೇವರಿಂದ ನಮಗೆ ದತ್ತವಾಗಿರುವ ಶಕ್ತಿ ಸಾಮಥ್ರ್ಯ ಸದ್ಬುದ್ಧಿಯನ್ನು ಸರಿಯಾದ ರೀತಿಯಲ್ಲಿ ಉಪಯೋಗಿಸಲೇಬೇಕು. ಇಲ್ಲದಿದ್ದರೆ ದೇವರೆದುರು ನಾವು ಅವಿಧೇಯರು. ಇದನ್ನು ಹೇಳಿ ಸ್ಪಷ್ಟ ಪಡಿಸುವುದಕ್ಕೆ ಆತ ಯಜಮಾನ ಮೂರು ಜನ ಭೃತ್ಯರು ಎಂಬ ಕಥೆಯನ್ನು ಹೇಳಿದ. ಯಜಮಾನ ಕೊಟ್ಟ ಒಂದೊಂದು ಟ್ಯಾಲೆಂಟು ದ್ರವ್ಯವನ್ನು ಒಬ್ಬ ನೆಲದಲ್ಲಿ ಗುಳಿ ತೋಡಿ ಹೂತಿಟ್ಟ ; ಇನ್ನೊಬ್ಬ ಯಾವಾಗ ತಿರುಗಿ ಬಿಡುತ್ತಾನೊ ಎಂದು ಅಂಜಿ ಸುಮ್ಮನೆ ತನ್ನ ಹತ್ತಿರ ಇಟ್ಟುಕೊಂಡಿದ್ದ; ಮೂರನೆಯವ ಅದರಿಂದ ಸಾಮಾನು ಕೊಂಡು ಮಾಡಿ ಮೊಬಲಗಿನ ಮೊತ್ತವನ್ನು ಹೆಚ್ಚಿಸಿದ. ಯಜಮಾನ ಮೆಚ್ಚಿದ್ದು ಮೂರನೆಯ ಮನುಷ್ಯನನ್ನೇ, ರಾಮಕೃಷ್ಣ ಪರಮಹಂಸನೂ ಇಂಥ ಕಥೆಗಳಲ್ಲಿ ಎತ್ತಿದ ಕೈ. ಪರಮಾತ್ಮನ ಗುಟ್ಟನ್ನು ತಿಳಿಯಹೋಗುವುದು ಉಪ್ಪಿನ ಬೊಂಬೆ ಸಮುದ್ರದ ಆಳವನ್ನು ತಿಳಿಯಲು ನೀರಿಗಿಳಿದಂತೆ ಎಂಬುದು ಆತನ ಒಂದು ಕಥೆ.

ದೃಷ್ಟಾಂತ ಕಥೆ ಸರಳವಾಗಿರತಕ್ಕದ್ದು. ಸುಲಭಗ್ರಾಹ್ಯವಾಗಿರತಕ್ಕದ್ದು, ನೇರವಾಗಿರತಕ್ಕದ್ದು. ಯಾವ ಬಗೆಯ ಜಟಿಲತೆಯೂ ಸಂದಿಗ್ಧತೆಯೂ ಅದನ್ನು ಬಾಧಿಸಕೂಡದು, ಮುಖ್ಯವಾಗಿ ಅದು ಕಲ್ಪಿತಕಥೆ. ಸಮಯಸ್ಪೂರ್ತಿ ಕೂಡಿದ್ದು ಹಿತಮಿತವಾಗಿರಬೇಕು. ಅದೇ ಅದರ ಸೊಗಸು. ಕಲ್ಪಿತವೆಂದರೆ ಕಾಗಕ್ಕ ಗುಬ್ಬಕ್ಕನ ಕಥೆಯಂತೆ ಸರ್ವಸಾಮಾನ್ಯವಾಗಿರಬಾರದು ; ಯಕ್ಷ ಯಕ್ಷಿಣಿ ಕಥೆಯಂತೆ ಅದ್ಭುತದಿಂದ ತುಂಬಿರಬಾರದು. ವಾಸ್ತವವೋ ಎಂಬಂತಿರಬೇಕು.

ದೊಡ್ಡ ಕವಿಗಳೂ ದೃಷ್ಟಾಂತ ಕಥೆಗಳಿಗೆ ಮೆರಗು ಕೊಟ್ಟಿದ್ದಾರೆ. ಷೇಕ್ಸ್‍ಪಿಯರ್ ಹೇಳುವ ಹೊಟ್ಟೆ ಮತ್ತು ಇತರ ಅಂಗಗಳು ಎಂಬುದು ಬಹಳ ಪ್ರಸಿದ್ಧ ಕಥೆಯೇ ಆಗಿದೆ. (ಎಸ್.ವಿ.ಆರ್.)