ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಗಾಂಧೀನಗರ

ವಿಕಿಸೋರ್ಸ್ದಿಂದ

ಗಾಂಧೀನಗರ : ಗುಜರಾತ್ ರಾಜ್ಯದ ರಾಜಧಾನಿ; ಸಾಬರ್ಮತಿ ನದಿಯ ದಡದ ಮೇಲೆ, ಅಹಮದಾಬಾದಿನಿಂದ ಸು. 24 ಕಿಮೀ ಅಂತರದಲ್ಲಿದೆ. ಈ ನಗರ ಸಂಪುರ್ಣವಾಗಿ ಬೆಳೆದಾಗ 2163 ಚ.ಕಿಮೀ ವಿಸ್ತೀರ್ಣವುಳ್ಳದ್ದಾಗಿರುತ್ತದೆ. ಜನಗಣತಿಯ ಪ್ರಕಾರ ಇದರ ಜನಸಂಖ್ಯೆ 2,08,299 (2011).

1960ರಲ್ಲಿ ಗುಜರಾತ್ ರಾಜ್ಯ ರಚಿತವಾದಾಗ ಅಹಮದಾಬಾದ್ ಅದರ ರಾಜಧಾನಿಯಾಯಿತು. ಆದರೆ ಹೊಸ ರಾಜ್ಯಕ್ಕೆ ಹೊಸದೊಂದು ರಾಜಧಾನಿಯ ಅವಶ್ಯಕತೆಯಿತ್ತು. ಅಹಮದಾಬಾದ್ ಒಂದು ದೊಡ್ಡ ಕೈಗಾರಿಕಾ ಕೇಂದ್ರ. ಇದರ ಜನಸಂಖ್ಯೆ ತೀವ್ರವಾಗಿ ಬೆಳೆಯುತ್ತಿದೆ. ಅಹಮದಾಬಾದ್ ನಗರಗಳಲ್ಲಿ ಜಮೀನಿನ ಬೆಲೆ ಹೆಚ್ಚು. ಅತಿಯಾದ ಜನಸಂದಣಿಯಿರುವ ಆ ನಗರದಲ್ಲಿ ವಸತಿಯದೊಂದು ಸಮಸ್ಯೆ. ಜನಸಂಖ್ಯೆಯ ಬೆಳೆವಣಿಗೆಯ ವೇಗಕ್ಕೆ ಅನುಗುಣವಾಗಿ ನಾಗರಿಕ ಸೌಲಭ್ಯಗಳನ್ನು ಒದಗಿಸುವುದು ಕಷ್ಟ. ಈ ಕಾರಣಗಳಿಂದಾಗಿ ರಾಜ್ಯದ ಆಡಳಿತಕ್ಕಾಗಿ ಅಹಮದಾಬಾದಿನ ಹತ್ತಿರದಲ್ಲಿ ಹೊಸ ರಾಜಧಾನಿಯೊಂದನ್ನು ರಚಿಸುವುದು ಸೂಕ್ತವೆಂದು ತೀರ್ಮಾನಿಸಲಾಯಿತು. ಹೊಸ ರಾಜಧಾನಿಗಾಗಿ ಆಯ್ಕೆ ಮಾಡಿದ ನಿವೇಶನದ ಅಡಿಯಲ್ಲಿ ತೈಲ ಸೆಲೆಗಳಿಲ್ಲವೆಂಬುದನ್ನು ತೈಲ ಮತ್ತು ನೈಸರ್ಗಿಕ ಅನಿಲ ಆಯೋಗ 1964ರಲ್ಲಿ ಖಚಿತವಾಗಿ ಸಾರಿದ ಬಳಿಕ 1965ರ ಜೂನ್ ತಿಂಗಳಲ್ಲಿ ಈ ನಗರಯೋಜನೆಯ ಅನ್ವಯಕ್ಕೆ ಕ್ರಮ ಕೈಗೊಳ್ಳಲಾಯಿತು. ಅನಂತರದ ಐದು ವರ್ಷಗಳಲ್ಲಿ ರಾಜಧಾನಿಯ ಮುಖ್ಯ ಭಾಗಕ್ಕೆ ಒಂದು ರೂಪು ಬಂದು 1974ರಲ್ಲಿ ಇದು ಗುಜರಾತ್ ರಾಜ್ಯದ ಹೊಸ ರಾಜಧಾನಿಯಾಯಿತು. ಅಹಮದಾಬಾದಿಗಿಂತ 21 ಮೀ ಹೆಚ್ಚು ಎತ್ತರದಲ್ಲಿರುವ, 5,500 ಹೆಕ್ಟೇರ್ ವಿಸ್ತಾರವುಳ್ಳ ಗಾಂಧೀನಗರ ನಿವೇಶನ ವಿಶೇಷವಾಗಿ ಫಲವತ್ತಾದ ಉಸುಕಿನ ಪ್ರದೇಶ; ಇದು ಸುಂದರವಾದ ಮಾವಿನ ಮರಗಳ ಸಾಲುಗಳಿಂದ ಕಂಗೊಳಿಸುತ್ತದೆ. ನಗರರಚನೆಯ ಅನಂತರವೂ ಇಲ್ಲಿಯ ನಿಸರ್ಗ ಸೌಂದರ್ಯ ಕೆಡದಂತೆ ಎಚ್ಚರಿಕೆ ವಹಿಸಲಾಗಿದೆ. ಈ ನಗರರಚನೆಯಲ್ಲಿ ಮುಖ್ಯವಾದ ಐದು ವಿಭಾಗಗಳಿವೆ: 1. ರಾಜಧಾನಿ ವಿಭಾಗ ಮತ್ತು ಸರ್ಕಾರಿ ಕಾರ್ಯಾಲಯಗಳು. 2. ಔದ್ಯೋಗಿಕ ವಿಭಾಗ, 3. ನಗರ ವಿಭಾಗ, 4. ಸಾರ್ವಜನಿಕ ಸಂಸ್ಥೆಗಳ ವಿಭಾಗ ಮತ್ತು 5. ಮಾರುಕಟ್ಟೆ ಮತ್ತು ದಾಸ್ತಾನು ಮಳಿಗೆಗಳ ವಿಭಾಗ. ರಾಜಧಾನಿ ಮತ್ತು ಸರ್ಕಾರಿ ಕಾರ್ಯಾಲಯಗಳು: ಗಾಂಧೀನಗರ ರಾಜಧಾನಿಯ ಸಮಗ್ರ ಯೋಜನೆಯಲ್ಲಿ ಇದು ಅತ್ಯಂತ ಮಹತ್ತ್ವದ ವಿಭಾಗ. ಇದರಲ್ಲಿ ರಾಜ್ಯ ಸರ್ಕಾರದ ಸಚಿವಾಲಯ ಮತ್ತು ಇತರ ಕಚೇರಿಗಳು, ವಿಧಾನಸಭಾ ಗೃಹ, ಉಚ್ಚ ನ್ಯಾಯಾಲಯ, ರಾಜ್ಯ ಕೇಂದ್ರ ಸರ್ಕಾರಗಳ ವಿವಿಧ ಇಲಾಖೆಗಳ ಕಚೇರಿಗಳು ಇವೆ. ಒಟ್ಟು 150 ಹೆಕ್ಟೇರ್ ಜಮೀನಿನ ಮೇಲೆ ಸಾಬರ್ಮತಿಯ ದಂಡೆಗುಂಟ ಹರಡಿಕೊಂಡಿರುವ ಈ ವಿಭಾಗದ ಹೊಸ ರಾಜಧಾನಿಯ ಆಕರ್ಷಕ ಭಾಗಗಳಲ್ಲೊಂದು.

ಔದ್ಯೋಗಿಕ ವಿಭಾಗ: ಗುಜರಾತ್ ರಾಜ್ಯದ ರಾಜಧಾನಿಯಾಗಿರಬೇಕೆಂಬುದು ಗಾಂಧೀನಗರದ ರಚನೆಯ ಮುಖ್ಯ ಉದ್ದೇಶವಾದರೂ ಆರ್ಥಿಕ ಚಟುವಟಿಕೆಗಳಿಗೂ ಇಲ್ಲಿ ಎಡೆಯುಂಟು. ಇದಕ್ಕಾಗಿ ಸಣ್ಣಪುಟ್ಟ ಕೈಗಾರಿಕೆಗಳ ವಿಭಾಗವನ್ನು ಸೇರ್ಪಡೆ ಗೊಳಿಸಿದೆ. ಆದರೂ ಕೈಗಾರಿಕೆಗಳ ಹೊಗೆಯಿಂದ ಇಲ್ಲಿಯ ಬದುಕಿನ ಬಗೆ ಕೆಡದಂತೆ ಎಚ್ಚರಿಕೆ ವಹಿಸಲಾಗಿದೆ. 100 ಹೆಕ್ಟೇರ್ ಜಮೀನನ್ನು ವ್ಯಾಪಿಸಿದ ಈ ವಿಭಾಗದಲ್ಲಿ 9,000 ಕೆಲಸಗಾರರ ದುಡಿಮೆಗೆ ಅವಕಾಶವಿದೆ. ನಗರ ವಿಭಾಗ : 75 ಹೆಕ್ಟೇರ್ ಜಮೀನನ್ನು ವ್ಯಾಪಿಸಿಕೊಂಡಿರುವ ನಗರ ವಿಭಾಗ ಜನಕ್ಕೆ ನಾಗರಿಕ ಸೌಕರ್ಯಗಳನ್ನು ಸಾಂಸ್ಕೃತಿಕ ಅನುಕೂಲತೆಗಳನ್ನೂ ವ್ಯಾಪಾರ ವ್ಯವಹಾರಗಳ ಅವಕಾಶಗಳನ್ನೂ ಒದಗಿಸಿಕೊಡುತ್ತದೆ. ಸಾರ್ವಜನಿಕ ಸಂಸ್ಥೆಗಳ ವಿಭಾಗ : 50 ಹೆಕ್ಟೇರ್ ಜಮೀನನ್ನೊಳಗೊಂಡ ಈ ವಿಭಾಗದಲ್ಲಿ ರಾಜ್ಯಮಟ್ಟದಲ್ಲಿ ಮಹತ್ತ್ವದ್ದೆನಿಸುವ ಸಂಸ್ಥೆಗಳ ಕಟ್ಟಡಗಳು, ಶಾಲೆ ಕಾಲೇಜುಗಳು ಮತ್ತು ಅವುಗಳಲ್ಲಿ ಉದ್ಯೋಗನಿರತರಾದವರ ಮನೆಗಳು ಇವೆ.

ಮಾರುಕಟ್ಟೆ ಮತ್ತು ದಾಸ್ತಾನು ವಿಭಾಗ : ನಿತ್ಯದ ಬದುಕಿಗೆ ಬೇಕಾಗುವ ಸರಕುಗಳನ್ನು ಪುರೈಸುವ ಅಂಗಡಿಗಳಿಗೆ ಮತ್ತು ಸುತ್ತಲಿಂದ ಬರುವ ಸರಕುಗಳ ದಾಸ್ತಾನಿಗೆ ಮೀಸಲಾದ ಈ ವಿಭಾಗ ನಗರ ವಿಭಾಗದೊಡನೆ ಸಂಪರ್ಕವಿರಿಸಿಕೊಂಡು ಇಲ್ಲಿಯ ನಿವಾಸಿಗಳಿಗೆ ಬಹು ಅನುಕೂಲವಾಗಿದೆ.

ವಸತಿ ವ್ಯವಸ್ಥೆ : ಸು. 1,50,000 ಜನಕ್ಕೆ ವಸತಿ ಸೌಕರ್ಯ ಒದಗಿಸುವ ಯೋಜನೆಯನ್ನು ಈ ನಗರರಚನೆಯಲ್ಲಿ ಅಳವಡಿಸಲಾಗಿದೆ. ಸರ್ಕಾರಿ ಕಾರ್ಯಕರ್ತರಿಗಾಗಿ ಅವರವರ ಸಂಬಳಶ್ರೇಣಿಗನುಸಾರವಾಗಿ ಎಂಟು ಪ್ರಕಾರಗಳ ಮನೆಗಳನ್ನು ಒದಗಿಸಲಾಗಿದೆ. ರಾಜಧಾನಿಯ ವಸತಿ ಸೌಕರ್ಯ ಕೇವಲ ಸರ್ಕಾರಿ ಕಾರ್ಯಕರ್ತರಿಗೇ ಮೀಸಲಾಗಿರಬೇಕೆಂಬ ಉದ್ದೇಶವಿಲ್ಲ. ಅರ್ಧದಷ್ಟು ಮನೆಗಳನ್ನು ಸಾರ್ವಜನಿಕರ ವಸತಿಗಾಗಿ ಕೊಡುವ ಏರ್ಪಾಡು ಮಾಡಲಾಗಿದೆ. ಒಟ್ಟು 30 ಚೌಕಾಕಾರದ ವಸತಿ ಘಟಕಗಳುಳ್ಳ ಈ ನಗರದಲ್ಲಿ ಕುಡಿಯುವ ನೀರು, ಚರಂಡಿ ವ್ಯವಸ್ಥೆ, ವಿದ್ಯುಚ್ಛಕ್ತಿ, ಮಾರುಕಟ್ಟೆ, ಆಸ್ಪತ್ರೆ, ಶಾಲೆ, ಕಾಲೇಜುಗಳಂಥ ಸಕಲ ನಾಗರಿಕ ಸೌಕರ್ಯಗಳನ್ನು ಹೊಂದಿದ 7,570 ಮನೆಗಳನ್ನು ಸರ್ಕಾರಿ ಕಾರ್ಯನಿರತರಿಗಾಗಿ ಮೀಸಲಾಗಿಟ್ಟರೂ ಮಧ್ಯೆ ಸಾರ್ವಜನಿಕರಿಗೆ ವಸತಿ ಸೌಕರ್ಯವನ್ನೊದಗಿಸಿಕೊಟ್ಟು ಸಮನ್ವಯ ಜೀವನದ ಅವಕಾಶ ಮಾಡಿಕೊಟ್ಟಿರುವುದು ಒಂದು ವಿಶೇಷವಾಗಿದೆ. 3-4 ಸಾವಿರ ಜನಕ್ಕೆ ಒಂದರಂತೆ ಪ್ರಾಥಮಿಕ ಶಾಲೆಯನ್ನೂ 10-12 ಸಾವಿರ ಜನಕ್ಕೆ ಒಂದರಂತೆ ಮಾಧ್ಯಮಿಕ ಶಾಲೆಯನ್ನೂ ಇಲ್ಲಿ ಒದಗಿಸಲಾಗಿದೆ. ಒಂದೊಂದು ಘಟಕದಲ್ಲಿಯೂ ಒಂದೊಂದು ಆಸ್ಪತ್ರೆ ಇದೆ. ನಗರಕ್ಕೆ ಸಾಬರ್ಮತೀ ನದಿಯಿಂದ ಕುಡಿಯುವ ನೀರಿನ ಪುರೈಕೆ ಆಗುತ್ತದೆ. ಅವಶ್ಯಕ ಚರಂಡಿ ವ್ಯವಸ್ಥೆ ಮತ್ತು ವಿದ್ಯುತ್ ಪುರೈಕೆಯ ವ್ಯವಸ್ಥೆಯನ್ನೂ ಮಾಡಲಾಗಿದೆ.

ಈ ಹೊಸ ನಗರದ ನಿರ್ಮಾಣಕ್ಕೆ ಕೈಹಾಕುವ ಮುನ್ನ ಇಲ್ಲಿ ವಾಸವಾಗಿದ್ದ 783 ರೈತ ಕುಟುಂಬಗಳ ಬೇಸಾಯದ ಭೂಮಿಯನ್ನು ಸರ್ಕಾರದವರು ವಶಪಡಿಸಿಕೊಂಡು ಅಂಥ ಕುಟುಂಬಗಳಿಗೆ ಅವಶ್ಯಕ ಏರ್ಪಾಡು ಮಾಡಿಕೊಡಬೇಕಾಯಿತು. ಸಾಬರ್ಮತೀ ನದೀಪ್ರದೇಶವನ್ನೂ ಒಳಗೊಂಡು ಒಟ್ಟು 1350 ಎಕರೆ ಭೂಮಿಯನ್ನು ವ್ಯಾಪಿಸಿದ ಈ ನಗರದ ರಚನೆಯನ್ನು ಅತ್ಯಂತ ಯೋಜನಾಬದ್ಧವಾಗಿ ಕೈಗೊಳ್ಳಲಾಗಿದ್ದು, ಹಳೆಯ ರಾಜಧಾನಿಗೂ ಹೊಸ ರಾಜಧಾನಿಗೂ ಸಜೀವ ಸಂಪರ್ಕವಿರಿಸಿಕೊಳ್ಳುವ ಏರ್ಪಾಡು ಮಾಡಲಾಗಿದೆ. ಅಹಮದಾಬಾದಿನಿಂದ ಗಾಂಧೀನಗರಕ್ಕೆ ಸುಂದರವಾದ ರಸ್ತೆಗಳನ್ನು ರಚಿಸಲಾಗಿದೆ. ಅಹಮದಾಬಾದ್ ವಿಮಾನ ನಿಲ್ದಾಣ ಇರುವುದು ಎರಡು ನಗರಗಳ ಮಧ್ಯದಲ್ಲಿ. ಮುಂಬೈ ದಿಲ್ಲಿಗಳನ್ನು ಕೂಡಿಸುವ ರಾಷ್ಟ್ರೀಯ ಹೆದ್ದಾರಿಗೆ (ನಂ.8) 5 ಕಿಮೀ. ಅಂತರದಲ್ಲಿ ಈ ನಗರವುಂಟು. ಇಲ್ಲಿಂದ ಖೋಡಿಯಾರ ರೈಲು ನಿಲ್ದಾಣಕ್ಕೆ ಹೋಗುವ ರಸ್ತೆ ಅಹಮದಾಬಾದ್-ಮೌಂಟ್ ಅಬೂ ನಡುವಣ ರಾಜ್ಯ ಹೆದ್ದಾರಿಗೂ ಸಂಪರ್ಕ ಕಲ್ಪಿಸುತ್ತದೆ. ನಗರದ ಒಳಗಡೆಯಲ್ಲಿ 45-100 ಮೀ. ಅಗಲದ ಸುಯೋಜಿತ ಸುಂದರ ರಸ್ತೆಗಳ ನಕ್ಷೆಯನ್ನೇ ಬರೆದಿರಿಸಿದಂತಿದೆ. ಈ ನಗರದ ಯಾವುದೇ ವಿಭಾಗದಲ್ಲಾಗಲಿ ಬಸ್ಸಿನಲ್ಲಿ ಸಂಚರಿಸುವಾಗ ಸೂರ್ಯ ಕಿರಣಗಳಿಂದ ಪ್ರಯಾಣಿಕರ ಕಣ್ಣುಗಳಿಗೆ ತೊಂದರೆಯಾಗದಂತೆ ರಸ್ತೆಗಳ ರಚನಾವಿನ್ಯಾಸವುಂಟು. ಹೀಗೆ ಈ ನಗರದ ಒಳಹೊರಗಿನ ಸಂಪರ್ಕ ಸೌಕರ್ಯಗಳಿಂದಾಗಿ ಇದಕ್ಕೆ ವಿಶೇಷ ಮಹತ್ತ್ವ ಲಭ್ಯವಾಗಿದೆ.