ಪುಟ:Abhaya.pdf/೨೦೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಅಭಯ

೨೦೩

ಅ೦ತೀಯಾ - ಬರೇ ಬಡವರು. ನಾನು ಎಷ್ಟೋ ಸಾರಿ ನೋಡಿದೀನಿ. ಕಸಬಿನಲ್ಲಿದ್ದು ದುಡ್ಡುಗಿಡ್ಡು ಮಾಡಿರೋ ಹುಡುಗೀರ್‍ನ ಒಮ್ಮೆಯಾದರೂ ತರ್‍ಬೇಕಲ್ಲ! ಅವರ್‍ನ ಹಿಡ್ಡಾಗ್ಲೆಲ್ಲಾ ಈ ಪೋಲೀಸರಿಗೆ ಚೆನ್ನಾಗಿ ಕೈ ಬೆಚ್ಚಗೆ ಆಗತ್ತೆ...."
“ಒಳ್ಳೆಯ ಕೆಲಸಕ್ಕೇ೦ತ ಇರೋರೇ ಹೀಗ್ಮಾಡಿದ್ರೆ- ”
"ಅದಕ್ಕೆ ದೊಡ್ಡಮ್ಮ ರೇಗೋದು. ಹೋದಸಾರಿ ಅವರು ಭಾರೀ ಗಲಾಟೆ ಮಾಡಿದ್ರು. ದೂರು ಕೊಟ್ರು ಡಿ ಎಸ್. ಪಿವರೆಗೂ ಹೋಗಿ ನೋಡ್ಕೊಂಡು ಬಂದ್ರು ರಾತ್ರಿಹೊತ್ತು ಪೊಲೀಸರು ಕರಕೊಂಡ್ಬರೋ ಹುಡುಗೀರ್‍ಗೆ ಮುಂದೆ ಏನಾಗತ್ತೆ ಅನ್ನೋದನ್ನ ಅಭಯಧಾಮಕ್ಕೆ ತಿಳಿಸಿಯೇ ತೀರ್‍ಬೇಕು ಅಂತ ಹಟತೊಟ್ರು"
"ದೊಡ್ಡಮ್ಮ ಅಂತ ಗೌರವ ಇಟ್ಕೊಂಡಾದ್ರೂ ಮಾತನಾಡಿದ್ನೆ ಆತ ? ಹುಂ!"
"ಹಾದೀಲಿ ಯಾರೋ ನೋಡ್ಬಿಟ್ಟಿರ್‍ಬೇಕು ಅದಕ್ಕೇ ಇಲ್ಲಿಗೆ ಕರಕೊಂಡ್ಬಂದ ಇಲ್ಲಿದ್ರೆ-"
"ನಮ್ಮನ್ನೂ ಹ್ಯಾಗೆ ನೋಡ್ತಿದ್ದ, ಅಲ್ಲ?"
"ಹೂಂ ನಿನ್ನ ಗಮನಕ್ಕೂ ಬಿತ್ತು ಹಾಗಾದ್ರೆ"
ಅಳು ಮತ್ತು "ಮಲಕೊಳ್ಳೆ ಬೋಸುಡಿ” ಎಂಬ ಗದರಿಕೆ ಕೊಠಡಿಯೊಳಗಿಂದ ಕೇಳಿಸಿ, ತುಂಗಮ್ಮ ಜಲಜೆಯರ ಪಿಸುಮಾತಿಗೆ ತಡೆಹಾಕಿತು.
"ಪಾಪ ! ಚಿಕ್ಕೋಳು ಅಳ್ತಿದ್ದಾಳೇಂತ ಕಾಣುತ್ತೆ. ಅಲ್ವ ಜಲಜ ?”
"ಹೂಂ ಅಕ್ಕ"
"ನಂಗ್ಯಾಕೊ ಆ ಚಿಕ್ಕೋಳು ನೋಡಿ ಅಯ್ಯೋ ಅನ್ನಿಸ್ತು.”
"ನ೦ಗೂನು."
"ಯಾಕಾದರೂ ಕಸಬಿಗೆ ಬಿದ್ದಳೊ ?”
“ ನಾನು ಹೇಳ್ಲೆ ಅಕ್ಕ? ಇಂಥವರ ಬಹಳ ನೋಡಿದೀನಿ ದೊಡ್ಡೋಳು ಕಸಬಿನೋಳೇ ಸಂಶಯವೇ ಇಲ್ಲ. ಚಿಕ್ಕ ಹುಡುಗೀನ ಇದೇ ಮೊದಲ್ನೆ ಸಾರಿ ಬೀದಿಗೆ ಕರಕೊಂಡು ಬಂದಿದಾಳೆ. ಆಕೆ ಬೇರೆ ಮನೆಯೋಳು. ಖಂಡಿತ.”