ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಅಜ್ಮಲ್ಖಾನ್, ಹಕೀಂ

ವಿಕಿಸೋರ್ಸ್ದಿಂದ

ಅಜ್ಮಲ್‍ಖಾನ್, ಹಕೀಂ (1865-1928). ಪ್ರಸಿದ್ಧ ಹಕೀಂ ಮನೆತನವೊಂದರಲ್ಲಿ ಜನಿಸಿ, ವೈದ್ಯದಲ್ಲಿ ಅಸಾಧಾರಣ ಪಾಂಡಿತ್ಯ ಗಳಿಸಿ, ಹಿಂದುಳಿದ ಮುಸ್ಲಿಮರ ಏಳಿಗೆಗಾಗಿ ಶ್ರಮಿಸಿ, ಉಜ್ಜ್ವಲ ರಾಷ್ಟ್ರಭಕ್ತರಾಗಿ ನಾಡಿನ ಸೇವೆ ಮಾಡಿದ ಮುಸ್ಲಿಂ ನಾಯಕರಲ್ಲಿ ಒಬ್ಬರು. ಇವರು ಯುನಾನಿ ವೈದ್ಯದಲ್ಲಿ ಅಂತರರಾಷ್ಟ್ರೀಯ ಖ್ಯಾತಿ ಗಳಿಸಿದ್ದ ದೆಹಲಿ ವೈದ್ಯ ಮನೆತನವೊಂದಕ್ಕೆ ಸೇರಿದವರು. ಈ ಮನೆತನದವರೇ ಸ್ಥಾಪಿಸಿ, ಬೆಳೆಸಿಕೊಂಡು ಬಂದಿದ್ದ ತಿಬಿಯಾ ಯುನಾನಿ ವೈದ್ಯ ಶಿಕ್ಷಣಶಾಲೆ ಅಜ್ಮಲ್ ಖಾನರ ಶ್ರಮದ ಫಲವಾಗಿ ಪ್ರೌಢ ವಿದ್ಯಾಸಂಸ್ಥೆಯಾಯಿತು. ಇವರ ಶಿಕ್ಷಣ ನಡೆದದ್ದು ಮನೆಯಲ್ಲಿಯೇ; ಚಿಕ್ಕ ವಯಸ್ಸಿನಲ್ಲಿಯೇ ಅಸಾಧಾರಣ ಪಾಂಡಿತ್ಯ ಗಳಿಸಿದರು. 1904ರಲ್ಲಿ ಪಶ್ಚಿಮ ಏಷ್ಯ ಪ್ರವಾಸಮಾಡಿ, ಎರಡು ಸಲ ಯೂರೋಪು ದೇಶಗಳಲ್ಲೂ ಸಂಚರಿಸಿ, ಅಲ್ಲಿನ ವೈದ್ಯಕೀಯ ವಿಧಾನಗಳನ್ನು ಅಭ್ಯಾಸಮಾಡಿದರು. ವೈದ್ಯಶಾಸ್ತ್ರದ ಮೇಲೆ ಇವರು ಬರೆದಿರುವ ಗ್ರಂಥಗಳು ಪ್ರಮಾಣ ಗ್ರಂಥಗಳಾಗಿವೆ. ಅಲಿಘರ್‍ನ ಮುಸ್ಲಿಂ ಪ್ರೌಢವಿದ್ಯಾಶಾಲೆಯನ್ನು ಬೆಳೆಸಿ, ಅದು ವಿಶ್ವವಿದ್ಯಾನಿಲಯವಾಗಲು ಶ್ರಮಿಸಿದವರಲ್ಲಿ ಅಜ್ಮಲ್ ಖಾನರೊಬ್ಬರು.

1918ರ ದೆಹಲಿ ಕಾಂಗ್ರೆಸ್ಸಿನ ಸ್ವಾಗತ ಸಮಿತಿ ಅಧ್ಯಕ್ಷರಾಗಿದ್ದ ಇವರು ಮರು ವರ್ಷವೇ ರಾಜಕೀಯದಲ್ಲಿ ಧುಮುಕಬೇಕಾಯಿತು. 1919ರ ರೌಲತ್ ಕಾನೂನು, ಜಲಿಯನ್‍ವಾಲಾ ಬಾಗ್ ಕಗ್ಗೊಲೆ, ಖಿಲಾಫತ್ ವಿಷಯದಲ್ಲಿ ಬ್ರಿಟಿಷರು ಮುಸ್ಲಿಂಮರಿಗೆ ಮಾಡಿದ ಅನ್ಯಾಯ-ಇವೆಲ್ಲ ಅವರನ್ನು ರಾಜಕೀಯಕ್ಕೆ ಸೆಳೆದುವು. 1919ರಲ್ಲಿ ಬ್ರಿಟಿಷರು ನಡೆಸಿದ ಅತ್ಯಾಚಾರಗಳಿಂದ ತಮ್ಮ ರಾಜಕೀಯ ಅಭಿಪ್ರಾಯಗಳು ಒಮ್ಮೆಲೇ ಬದಲಾಯಿಸಿದವು ಎಂದು ಮಿತ್ರರೊಬ್ಬರಿಗೆ ಬರೆದ ಪತ್ರದಲ್ಲಿ ಅವರು ಹೇಳಿದ್ದಾರೆ. 1921ರಲ್ಲಿ ನಡೆದ ಅಹಮದಾಬಾದ್ ಕಾಂಗ್ರೆಸ್ಸಿಗೆ ಇವರು ಅಧ್ಯಕ್ಷರಾಗಿ ಆರಿಸಲ್ಪಟ್ಟು ಅಧ್ಯಕ್ಷಪೀಠದಿಂದ, ಸ್ವಾತಂತ್ರ್ಯದ ಹಾಗೂ ಹಿಂದೂ ಮುಸ್ಲಿಮ್ ಐಕ್ಯದ ಬಗ್ಗೆ ಭಾವೋದ್ರೇಕದಿಂದ ಜನತೆಗೆ ಕರೆಕೊಟ್ಟರು. ಮಹಾತ್ಮಾ ಗಾಂಧೀಜಿಯವರೊಂದಿಗೆ ಇವರ ಗೆಳೆತನ ಬೆಳೆಯಿತು. ಸೆರೆಮನೆಯಲ್ಲೇ ನಡೆದ ಗಾಂಧೀಜಿಯವರ ಶಸ್ತ್ರಚಿಕಿತ್ಸೆ, ದೆಹಲಿಯಲ್ಲಿ ಗಾಂಧೀಜಿಯವರು ಮಾಡಿದ ಮೂರು ವಾರಗಳ ಉಪವಾಸ (1924)-ಇಂಥ ಸಂದರ್ಭಗಳಲ್ಲಿ ಅಜ್ಮಲ್‍ಖಾನರು ತೋರಿಸಿದ ಕಾಳಜಿ, ಆಸಕ್ತಿಗಳು ಸ್ವಾತಂತ್ರ್ಯಕ್ಕಾಗಿ ನಡೆಸಿದ ಹೋರಾಟದಲ್ಲಿ ಹೃದಯಸ್ಪರ್ಶಿಯಾದ ಪ್ರಸಂಗಗಳು. (ಎ.ಎಂ.)