ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ದೌಲತಾಬಾದ್

ವಿಕಿಸೋರ್ಸ್ದಿಂದ

ದೌಲತಾಬಾದ್ ಮಹಾರಾಷ್ಟ್ರ ರಾಜ್ಯದ ಔರಂಗಾಬಾದ್ ಜಿಲ್ಲೆಯಲ್ಲಿ, ಔರಂಗಾಬಾದ್‍ನಿಂದ ಸುಮಾರು 9 ಮೈ. ದೂರದಲ್ಲಿರುವ ಒಂದು ಇತಿಹಾಸ ಪ್ರಸಿದ್ಧ ಸ್ಥಳ. ಮಧ್ಯಯುಗದಲ್ಲಿ ಇದು ದೇವಗಿರಿಯೆಂದು ಖ್ಯಾತಿ ಪಡೆದಿತ್ತು. ಜೈನ ಗ್ರಂಥವೊಂದರಲ್ಲಿ ಇದನ್ನು ಸುರಗಿರಿ ಎಂದು ಹೆಸರಿಸಲಾಗಿದೆ. ದೇವಗಿರಿ 12ನೆಯ ಶತಮಾನದ ಕೊನೆಯಲ್ಲಿ ರಾಜಧಾನಿಯಾಗುವ ಸುಯೋಗ ಪಡೆಯಿತು. ದೇವಗಿರಿಯ ಯಾದವರೆಂದು ಪ್ರಸಿದ್ಧರಾಗಿರುವ ಸೇವುಣರ ಅಧೀನ ಪ್ರದೇಶದಲ್ಲಿ ಈ ನಗರ ಸೇರಿದ್ದಿತು. ರಾಷ್ಟ್ರಕೂಟ 3ನೆಯ ಕೃಷ್ಣನ ಕಾಲದಿಂದ ಸಾಮಂತರಾಗಿದ್ದ ಈ ಅರಸರ ಮನೆತನದಲ್ಲಿಯ 5ನೆಯ ಭಿಲ್ಲಮ 12ನೆಯ ಶತಮಾನದ ಕೊನೆಯಲ್ಲಿ, ಚಾಳುಕ್ಯರ ಆಳ್ವಿಕೆಯ ಅಂತ್ಯದಲ್ಲಿ, ಸ್ವತಂತ್ರ ರಾಜ್ಯ ಸ್ಥಾಪಿಸಿದ. ಆಗ ಇವನ ರಾಜ್ಯ ಉತ್ತರದಲ್ಲಿ ನರ್ಮದಾ ನದಿಯ ಸಮೀಪದಿಂದ ದಕ್ಷಿಣದಲ್ಲಿ ಮಲಪ್ರಭಾ ನದಿಯವರೆಗೆ ಹಬ್ಬಿತ್ತು. ಆದ್ದರಿಂದ ಈ ರಾಜ್ಯಕ್ಕೆ ಮಧ್ಯವರ್ತಿಯಾದ ಸ್ಥಳವೊಂದನ್ನು ರಾಜಧಾನಿಯನ್ನಾಗಿ ಮಾಡುವುದು ಅಗತ್ಯವಿತ್ತು. ದೇವಗಿರಿಯನ್ನು ಭಿಲ್ಲಮ ಕಟ್ಟಿಸಿದನೆಂದು ಹೇಮಾದ್ರಿಯ ವ್ರತಖಂಡ ಮತ್ತು ಕೆಲವು ಶಾಸನಗಳಿಂದ ತಿಳಿದುಬರುತ್ತದೆ. ಆದರೆ ಅವನ ರಾಜಧಾನಿ ತೆನವಲಗೆ ಎಂಬುದಾಗಿತ್ತೆಂದು ಭಿಲ್ಲಮನ ಶಾಸನಗಳು ಹೇಳುತ್ತವೆ. ಭಿಲ್ಲಮನ ಮಗನಾದ ಜೈತುಗಿಯ ಶಾಸನವೊಂದರಲ್ಲಿ ದೇವಗಿರಿಯ ಉಲ್ಲೇಖ ದೊರೆಯುತ್ತದೆ. ಆದ್ದರಿಂದ ಭಿಲ್ಲಮ ನಿರ್ಮಿಸಿದ ನಗರ ಜೈತುಗಿಯ ಕಾಲಕ್ಕೆ ಸೇವುಣರ ರಾಜಧಾನಿಯಾಯಿತೆಂದು ಹೇಳಬಹುದು.

ಈ ಅರಸು ಮನೆತನದ ಕೊನೆಯ ವರೆಗೂ ಈ ನಗರ ರಾಜಧಾನಿಯಾಗಿ ಉಳಿಯಿತು. ಆದರೆ 1296ರಿಂದ ಮುಂದೆ ಇದರ ಅಳಿಗಾಲ ಆರಂಭವಾಯಿತು. ಆಗ ಅಲಾ-ಉದ್-ದೀನ್ ಖಲ್ಜಿ ಇದರ ಮೇಲೆ ದಾಳಿ ಮಾಡಿದ. ಆ ಸಮಯದಲ್ಲಿ ಸೇವುಣ ರಾಮಚಂದ್ರ ಆಳುತ್ತಿದ್ದ. ಮುಂದೆ 1302ರಲ್ಲಿ ಅಲಾ-ಉದ್-ದೀನನ ಅಧೀನಾಧಿಕಾರಿಯಾದ ಮಲಿಕ್ ಕಾಫುರ್ ಮತ್ತೆ ದೇವಗಿರಿಯ ಮೇಲೆ ದಾಳಿ ಮಾಡಿ ರಾಮಚಂದ್ರನನ್ನು ಸೆರೆಹಿಡಿದು ದಿಲ್ಲಿಗೆ ಕರೆದೊಯ್ದ. ರಾಮಚಂದ್ರ ಮರಳಿ ದೇವಗಿರಿಗೆ ಬಂದು ರಾಜ್ಯವಾಳಿದ. ದೇವಗಿರಿ ವಸ್ತುತಃ ಮುಸ್ಲಿಮರಿಗೆ ಅಧೀನವಾಗಿಯೇ ಉಳಿಯಿತು.

ರಾಮಚಂದ್ರನ ಮಗನಾದ 3ನೆಯ ಸಿಂಘಣ ದಂಗೆಯೆದ್ದುದರಿಂದ 1313ರಲ್ಲಿ ಮಲಿಕ್ ಕಾಫುರ್ ಮತ್ತೆ ದೇವಗಿರಿಯ ಮೇಲೆ ದಂಡೆತ್ತಿ ಬಂದು ಸಿಂಘಣನನ್ನು ಸೋಲಿಸಿ ತಾನು ಅಲ್ಲಿಯೇ ನಿಂತ. ಅಂದಿನಿಂದ ದೇವಗಿರಿ ಪೂರ್ತಿಯಾಗಿ ದಿಲ್ಲಿಯ ಸುಲ್ತಾನರ ವಶವಾಯಿತು.

ಮುಂದೆ ಅಲಾ-ಉದ್-ದೀನನ ಮರಣ, ರಾಜ್ಯಕ್ಕಾಗಿ ಕಾದಾಟ ಮುಂತಾದವುಗಳ ಗೊಂದಲದಲ್ಲಿ ರಾಮಚಂದ್ರನ ಅಳಿಯನಾದ ಹರಪಾಲದೇವ ದಂಗೆಯೇಳಲು ಅಲಾ-ಉದ್-ದೀನನ ಮಗನಾದ ಮುಬಾರಕ್ 1318ರಲ್ಲಿ ಮತ್ತೆ ದಂಡೆತ್ತಿ ಬಂದ. ಹರಪಾಲ ಹೋರಾಟದಲ್ಲಿ ಸೆರೆಸಿಕ್ಕಿ ಕೊಲ್ಲಲ್ಪಟ್ಟ. ಅಲ್ಲಿಗೆ ಸೇವುಣರ ಆಳಿಕೆ ಮುಗಿದು ದೇವಗಿರಿಯೊಂದಿಗೆ ಸೇವುಣ ರಾಜ್ಯ ದಿಲ್ಲಿಯ ಅರಸೊತ್ತಿಗೆಗೆ ಸೇರಿತು

ಖಲ್ಜಿ ಆಳ್ವಿಕೆ ಮುಗಿದು ತುಗಲಕ್ ಮನೆತನದ ಆಳ್ವಿಕೆ ಆರಂಭವಾದಾಗ ದೇವಗಿರಿ ಮತ್ತೆ ಸ್ವಲ್ಪ ಕಾಲ ರಾಜಧಾನಿಯಾಯಿತು. ಈ ಮನೆತನದ 2ನೆಯ ಅರಸನಾದ ಮುಹಮ್ಮದ್ ತುಗಲಕ್ 1327ರಲ್ಲಿ ತನ್ನ ರಾಜಧಾನಿಯನ್ನು ದಿಲ್ಲಿಯಿಂದ ದೇವಗಿರಿಗೆ ಸ್ಥಳಾಂತರಿಸಬೇಕೆಂದು ತೀರ್ಮಾನಿಸಿ ಇದಕ್ಕೆ ದೌಲತಾಬಾದ್ ಎಂದು ಹೆಸರಿಟ್ಟ. ಈ ಸ್ಥಳಾಂತರದ ಬಗ್ಗೆ ಮುಸ್ಲಿಮ್ ಇತಿಹಾಸಕಾರರು ಬರೆಯುತ್ತ, ದಿಲ್ಲಿಯಲ್ಲಿಯ ಪ್ರತಿಯೊಬ್ಬನನ್ನೂ ದೌಲತಾಬಾದಿಗೆ ಹೊರಡಿಸಲು ಸುಲ್ತಾನ ಯತ್ನಿಸಿದನೆಂದೂ ದಿಲ್ಲಿ ಹಾಳು ಪಟ್ಟಣವಾಯಿತೆಂದೂ ಹೇಳುತ್ತಾರೆ. ಆದರೆ ಇದೆಲ್ಲ ಉತ್ಪ್ರೇಕ್ಷೆಯೆಂಬುದು ಅರ್ವಾಚೀನ ವಿದ್ವಾಂಸರ ಅಭಿಪ್ರಾಯ. ಈ ಸ್ಥಳಾಂತರದಿಂದಾದ ಒಂದು ಮಹತ್ತ್ವದ ಪರಿಣಾಮವೆಂದರೆ ಮುಹಮ್ಮದ್ ದೌಲತಾಬಾದಿನಲ್ಲಿ ದೊಡ್ಡ ದೊಡ್ಡ ಕಟ್ಟಡಗಳನ್ನು ನಿರ್ಮಿಸಿದನಲ್ಲದೆ, ಮೊದಲಿನ ಸೇವುಣರ ಕಾಲದ ಕೋಟೆಯನ್ನು ವಿಸ್ತರಿಸಿ ಕಟ್ಟಿಸಿದ. ಆ ಕಾಲದಲ್ಲಿ ಭಾರತಕ್ಕೆ ಬಂದಿದ್ದ ಇಬ್ನ್ ಬತೂತನೆಂಬ ಪ್ರವಾಸಿ ದೌಲತಾಬಾದಿನ ವರ್ಣನೆ ಮಾಡುತ್ತ, ಇದು ದೆಹಲಿಯಷ್ಟೇ ಸುಂದರವಾದ ನಗರವೆಂದು ಹೇಳಿದ್ದಾನೆ

1347ರಲ್ಲಿ ದೇವಗಿರಿ ಅಥವಾ ದೌಲತಾಬಾದ್ ಬಹಮನಿ ಅರಸರ ವಶವಾಯಿತು. 1500ರಲ್ಲಿ ಅಹಮ್ಮದ್ ಶಹ ಅದನ್ನು ಗೆದ್ದುಕೊಂಡ. ಶಾಹಜಹಾನನ ಸೇನಾಪತಿ 1633ರಲ್ಲಿ ದೌಲತಾಬಾದನ್ನು ವಶಪಡಿಸಿಕೊಂಡ ಮೇಲೆ ಅದು ಮೊಗಲ್ ಸಾಮ್ರಾಜ್ಯದ ಭಾಗವಾಯಿತು. ಮುಂದೆ 18ನೆಯ ಶತಮಾನದಿಂದ ಹೈದರಾಬಾದ್ ನಿಜಾಮರ ಆಳ್ವಿಕೆಯಲ್ಲಿತ್ತು. ಸ್ವತಂತ್ರ ಭಾರತದಲ್ಲಿ ರಾಜ್ಯ ಪುನರ್ವಿಂಗಡಣೆಯಾದಾಗ ಅವಿಭಜಿತ ಮುಂಬಯಿ ರಾಜ್ಯಕ್ಕೆ ಸೇರಿ, ಪ್ರತ್ಯೇಕ ಮಹಾರಾಷ್ಟ್ರ ರಾಜ್ಯವಾದಾಗ ಅದರಲ್ಲಿ ಉಳಿಯಿತು. (ಎಸ್.ಆರ್.)

ವಾಸ್ತುಶಿಲ್ಪ : ಸೇವುಣರ ಕಾಲದ ದೇವಗಿರಿಯ ಕೋಟೆ ತ್ರಿಕೋಣಾಕಾರದ ಬೆಟ್ಟದ ಮೇಲಿದೆ. ಇದನ್ನು ಗಿರಿದುರ್ಗವೆಂದು ಗುರುತಿಸಬಹುದು. ಬೆಟ್ಟದ ಎತ್ತರ ಸಮುದ್ರಮಟ್ಟದಿಂದ 2,250 ಅಡಿ. ಕೋಟೆಯ ಎತ್ತರ 150 ಅಡಿ. ಇದರ ಸುತ್ತಲೂ ಕಂದಕವಿದೆ. ಕೋಟೆಯ ಹೊರಗಿನ ಗೋಡೆಯ ಸುತ್ತಳತೆ 2 3/4 ಮೈ. ಹೊರಗಿನ ಗೋಡೆಗೂ ಕೋಟೆಗೂ ಮಧ್ಯೆ ವ್ಯೂಹರಚನೆಯ ಮೂರು ಸಾಲುಗಳುಂಟು. ಪ್ರಾಚೀನ ದೇವಗಿರಿ ಈ ಕೋಟೆಯ ಒಳಭಾಗದಲ್ಲಿತ್ತು. ಆದರೆ ಈಗ ಅಲ್ಲಿ ಒಂದು ಹಳ್ಳಿಯಿದೆ. ಕೋಟೆಗೆ ಒಟ್ಟು ಎಂಟು ಬಾಗಿಲುಗಳಿವೆ. ಗೋಡೆಗಳ ಮೇಲೆ ಅಲ್ಲಲ್ಲಿ ಇಂದಿಗೂ ಹಳೆಯ ತೋಪುಗಳ ಅವಶೇಷಗಳುಂಟು. ಕೋಟೆಯಲ್ಲಿ ಕಗ್ಗತ್ತಲಿನ ಭೂ ಮಾರ್ಗವೂ ಇದೆ. ಅದನ್ನು ಕತ್ತಲೆ ಮಾರ್ಗ ಎಂದು ಕರೆಯುತ್ತಾರೆ. ಈ ಮಾರ್ಗದಲ್ಲಿ ಅಲ್ಲಲ್ಲಿ ಆಳವಾದ ಹಳ್ಳಗಳಿವೆ. ಕಪಟೋಪಾಯದಿಂದ ಶತ್ರುಗಳನ್ನು ಬೀಳಿಸಲು ಅವನ್ನು ರಚಿಸಲಾಗಿತ್ತು. ಕತ್ತಲೆ ಮಾರ್ಗದ ಪ್ರವೇಶದ್ವಾರದಲ್ಲಿ ಕಬ್ಬಿಣದ ದೊಡ್ಡ ಆಗ್ಗಿಷ್ಟಿಕೆಗಳನ್ನು ರಚಿಸಲಾಗಿದ್ದು ಅವುಗಳಲ್ಲಿ ಬೆಂಕಿಯನ್ನುರಿಸಿ ಹೊಗೆಯನ್ನುಂಟು ಮಾಡಿ ಆಕ್ರಮಣಕಾರರು ಒಳಗೆ ಪ್ರವೇಶಿಸದಂತೆ ತಡೆಯಲು ಬಳಸುತ್ತಿದ್ದರು. ಕೋಟೆಯಿರುವ ಬೆಟ್ಟದ ಮೇಲೆ ಎಲ್ಲೋರ ಗುಹೆಗಳ ಸಮಕಾಲೀನವೆನ್ನಬಹುದಾದ ಕೆಲವು ಅಪೂರ್ವ ಗುಹೆಗಳಿವೆ.

ದೌಲತಾಬಾದಿನ ಪ್ರಮುಖ ಸ್ಮಾರಕಗಳು ಚಾಂದ್‍ಮಿನಾರ್, ಚೀನೀಮಹಲ್ ಹಾಗೂ ಜಮಾ ಮಸೀದಿ. ಚಾಂದ್‍ಮಿನಾರ್ 210 ಅಡಿ ಎತ್ತರವಾಗಿದೆ. ಅದರ ಸುತ್ತಳತೆ 70 ಅಡಿ. ಈ ಮಿನಾರ್ ದಕ್ಷಿಣ ಭಾರತದ ಮುಸಲ್ಮಾನರ ಸುಂದರ ವಾಸ್ತು ಕೃತಿಗಳಲ್ಲಿ ಒಂದು. ಕೋಟೆಯ ವಿಜಯದ ಸಂಕೇತವಾಗಿ ಅಲಾ-ಉದ್-ದೀನ್ ಬಹಮನಿ ಇದನ್ನು ನಿರ್ಮಿಸಿದ. ಗೋಪುರದ ಎತ್ತರ 15 ಅಡಿ. ಮೊದಲು ಈ ಗೋಪುರವನ್ನು ಸಂಪೂರ್ಣವಾಗಿ ಇರಾನಿನ ಕಲ್ಲುಗಳಿಂದ ಅಲಂಕರಿಸಲಾಗಿತ್ತು. ಮಿನಾರಿನ ದಕ್ಷಿಣಕ್ಕೆ ಒಂದು ಚಿಕ್ಕ ಮಸೀದಿ ಇದೆ. ಇದು ಹಿಜರಿ 849ರಲ್ಲಿ( ಕ್ರಿ.ಶ. 1145) ನಿರ್ಮಾಣವಾದುದಾಗಿ ಪಾರಸಿ ಶಾಸನದಿಂದ ತಿಳಿದುಬರುತ್ತದೆ. ಚೀನೀಮಹಲ್ ಕೋಟೆಯ ಎಂಟನೆಯ ದ್ವಾರದಿಂದ 40 ಅಡಿಗಳ ದೂರದಲ್ಲಿ ಬಲಭಾಗದಲ್ಲಿದೆ. ಇದು ಮೊದಲು ಅತ್ಯಂತ ಸುಂದರವಾಗಿತ್ತು. ಗೋಲ್ಕೊಂಡದ ಕೊನೆಯ ಅರಸ ಅಬುಹಸನ್ ತಾನ್ ಶಾಹನನ್ನು ಔರಂಗ್eóÉೀಬ್ ಇಲ್ಲೇ ಬಂಧನದಲ್ಲಿಟ್ಟಿದ್ದ. ಸೇವುಣರ ಕಾಲದ ಕಟ್ಟಡಗಳ ಅವಶೇಷಗಳು ಈಗ ಇಲ್ಲವೆಂದೇ ಹೇಳಬಹುದು. ಮೊದಲು ಇಲ್ಲಿದ್ದ ಕಾಳಿಕಾ ದೇವಾಲಯದ ಮಧ್ಯಭಾಗವನ್ನು ಮಲಿಕ್ ಕಾಫುರ್ ಮಸೀದಿಯಾಗಿ ಪರಿವರ್ತಿಸಿದ. ಆ ಕಟ್ಟಡವಿದೆ. ಇದರ ಹತ್ತಿರವೇ ಇರುವ ಜಮಾ ಮಸೀದಿಗೆ ಪ್ರಾಚೀನ ಭಾರತೀಯ ಶೈಲಿಯ ಕಂಬ ಹಾಗೂ ಬಾಗಿಲುಗಳಿವೆ. ಇದನ್ನು 1313ರಲ್ಲಿ ಮುಬಾರಕ್ ಖಲ್ಜಿ ನಿರ್ಮಿಸಿದ. 1347ರಲ್ಲಿ ಬಹಮನಿ ವಂಶದ ಸ್ಥಾಪಕನಾದ ಹಸನ್ ಗಂಗುವಿನ ಪಟ್ಟಾಭಿಷೇಕ ಇಲ್ಲೇ ಆಯಿತೆಂದು ಹೇಳುತ್ತಾರೆ. ಅಕ್ಬರನ ಸಮಕಾಲೀನ ಇತಿಹಾಸ ಲೇಖಕ ಪೆರಿಷ್ತಾ ಇದನ್ನು ವರ್ಣಿಸಿದ್ದಾನೆ. ಟಂಕಸಾಲೆ, ಆನೆಯ ಕೊಳ, ಜನಾರ್ದನ ಸ್ವಾಮಿಯ ಸಮಾಧಿ, ಶಾಹಜಹಾನ್ ಮತ್ತು ನಿಜಾಮ್ ವಂಶದ ಸುಲ್ತಾನರು ಕಟ್ಟಿಸಿದ ಕೆಲವು ಕಟ್ಟಡಗಳ ಭಗ್ನಾವಶೇಷಗಳು ಇಲ್ಲಿ ಕಂಡು ಬರುತ್ತವೆ. (ಕೆಆರ್‍ಐ.)