ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕ್ಯಾಮರೂನ್

ವಿಕಿಸೋರ್ಸ್ದಿಂದ

ಕ್ಯಾಮರೂನ್

ಪಶ್ಚಿಮ ಆಫ್ರಿಕದ ಒಂದು ಸಂಯುಕ್ತರಾಜ್ಯ. ಪೂರ್ವ ಪಶ್ಚಿಮ ಕ್ಯಾಮರೂನ್‍ಗಳನ್ನೊಳಗೊಂಡಿದೆ. ಪಶ್ಚಿಮದಲ್ಲಿ ಅಟ್ಲಾಂಟಿಕ್ ಸಾಗರ, ವಾಯವ್ಯದಲ್ಲಿ ನೈಜೀರಿಯ, ಪೂರ್ವದಲ್ಲಿ ಚಾಡ್ ಮತ್ತು ಮಧ್ಯ ಆಫ್ರಿಕ ಗಣರಾಜ್ಯ, ದಕ್ಷಿಣದಲ್ಲಿ ಕಾಂಗೋ ಗಣರಾಜ್ಯ, ಗ್ಯಾಬಾನ್ ಮತ್ತು ರೀಯೊ ಮೂನಿ-ಇವು ಇದರ ಮೇರೆಗಳು. ಇದರ ಸಮುದ್ರತೀರದ ಉದ್ದ 220 ಮೈ. ಕ್ಯಾಮರೂನ್ ಸಂಯುಕ್ತರಾಜ್ಯದ ವಿಸ್ತೀರ್ಣ 2,00,876 ಚ.ಮೈ. ಜನಸಂಖ್ಯೆ 52,18,000 (1965ರ ಅಂದಾಜು). ರಾಜಧಾನಿ ಯಾವೂಂಡೇ. ಭೌತಲಕ್ಷಣ

ಕ್ಯಾಮರೂನಿನ ಮಧ್ಯ ದಕ್ಷಿಣಭಾಗಗಳು ಪ್ರಸ್ಥಭೂಮಿ ಪ್ರದೇಶ. ಇದರ ಎತ್ತರ ಸಾಮಾನ್ಯವಾಗಿ 2,000'. ವಾಯವ್ಯ ಭಾಗ ಪರ್ವತಮಯ. ಬೇನ್ವಾ ನದಿಗೆ ಉತ್ತರದಲ್ಲಿರುವ ಮ್ಯಾಂಡರ ಪರ್ವತ ಸುಮಾರು 5,000' ಎತ್ತರವಾಗಿದೆ. ದಕ್ಷಿಣಕ್ಕೆ ಬಂದಂತೆ ಇದರ ಎತ್ತರ ಏರುತ್ತದೆ. ವೋಗೆಲ್ ಮತ್ತು ಮ್ಯಾಂಗಿಲ ಪರ್ವತಗ್ರಂಥಿಗಳು 6,000' ಎತ್ತರವಾಗಿಯೂ ಬಮೆಂಡ 8,000' ಎತ್ತರವಾಗಿಯೂ ಉಂಟು.

ಬಮೆಂಡದಿಂದ ಇನ್ನೊಂದು ಪರ್ವತಶ್ರೀಣಿ ಪೂರ್ವಕ್ಕೆ ಕವಲೊಡೆದು ಪೂರ್ವದ ಗಡಿಯ ಬಳಿ ಯೇಡ್ ಗ್ರಂಥಿಯಾಗಿ ಪರಿಣಮಿಸಿದೆ. ಇದರಲ್ಲೂ 6,000' ಗಿಂತ ಎತ್ತರವಾದ ಶಿಖರಗಳುಂಟು. ಪಶ್ಚಿಮದಲ್ಲಿ ಸಮುದ್ರದ ಬಳಿ ಇರುವ ಶ್ರೇಣಿ ಕ್ಯಾಮರೂನ್ ಪರ್ವತ. ಪಶ್ಚಿಮ ಆಫ್ರಿಕದ ಜೀವಂತ ಜ್ವಾಲಾಮುಖಿ ಇದೊಂದೇ. ಸಮುದ್ರದಿಂದ ಥಟ್ಟನೆ ಮೇಲೇರುವ ಈ ಪರ್ವತ 13,350'ನ್ನು ತಲುಪುತ್ತದೆ. ಇದರ ಪಶ್ಚಿಮಭಾಗ ಪ್ರಪಂಚದ ಅತಿ ಹೆಚ್ಚಿನ ಮಳೆ ಪ್ರದೇಶಗಳಲ್ಲೊಂದು. ಇದರ ನೈಋತ್ಯಕ್ಕಿರುವ ಜ್ವಾಲಾಮುಖಿಯ ದ್ವೀಪಗಳ ಪೈಕಿ ಅತ್ಯಂತ ಹತ್ತಿರದಲ್ಲಿರುವುದು ಫರ್ನಾಂಡೊ ಪೊ. ಈ ಪರ್ವತದ ಆಗ್ನೇಯದಲ್ಲಿ ಕ್ಯಾಮರೂನ್ಸ್ ಅಳಿವೆಯಿದೆ. ಇದರ ಗರಿಷ್ಠ ಅಗಲ 20 ಮೈ.ಗಳಿಗೂ ಹೆಚ್ಚು.

ಮೇಲೆ ಹೇಳಿದ ಎರಡು ಪರ್ವತಪಂಕ್ತಿಗಳ ನಡುವೆ ಬೇನ್ವಾ ನದಿಯೂ ಲೋಗೋನ್ ನದಿಯ ಕೆಲವು ಉಪನದಿಗಳೂ ಉಗಮಿಸುತ್ತವೆ. ಉತ್ತರಕ್ಕೆ ಹರಿದು ಚಾಡ್ ಸರೋವರವನ್ನು ಸೇರುವ ಲೋಗೋನ್ ನದಿ ಸ್ವಲ್ಪದೂರ ಕ್ಯಾಮರೂನಿನ ಪೂರ್ವದ ಎಲ್ಲೆಯಾಗಿ ಪರಿಣಮಿಸಿದೆ. ಬೇನ್ವಾದ ಒಂದು ಮುಖ್ಯ ಉಪನದಿ ಮೇಯೊ ಕೆಬ್ಬಿ. ದಕ್ಷಿಣದಲ್ಲಿರುವ ನದಿಗಳ ಪೈಕಿ ಮುಖ್ಯವಾದವು ನಿಯಾಂಗ್ ಮತ್ತು ಸಾನಗ, ಆಗ್ನೇಯದ ಕೊನೆಯಲ್ಲಿರುವುದು ಸಾಂಗ ನದಿ ವ್ಯವಸ್ಥೆ. ವಾಯುಗುಣ

ಕ್ಯಾಮರೂನಿನದು ಉಷ್ಣವಲಯದ ವಾಯುಗುಣ. ಪರ್ವತ ಪ್ರದೇಶದಲ್ಲಿ ಉಷ್ಣತೆ ಕಡಿಮೆ. ಮಧ್ಯಕ ವಾರ್ಷಿಕ ಉಷ್ಣತೆ ದಕ್ಷಿಣದಲ್ಲಿ 750-800 ಫ್ಯಾ., ಅತ್ಯಂತ ಉತ್ತರದಲ್ಲಿ 900 ಫ್ಯಾ. ಉತ್ತರದಲ್ಲಿ ನವೆಂಬರಿನಿಂದ ಏಪ್ರಿಲ್‍ನವರೆಗೆ ಬೀಸುವ ಈಶಾನ್ಯ ಮಾರುತ ಶುಷ್ಕವಾಗಿಯೂ ತಂಪಾಗಿಯೂ ಧೂಳಿನಿಂದ ಕೂಡಿಯೂ ಇರುತ್ತದೆ. ದಕ್ಷಿಣದಲ್ಲಿ ಈ ಮಾರುತದ ಅವಧಿ ಕಡಿಮೆ. ವರ್ಷದ ಉಳಿದ ಕಾಲದಲ್ಲಿ ನೈಋತ್ಯದಿಂದ ಬೀಸುವ ಗಾಳಿ ಅಟ್ಲಾಂಟಿಕ್ ಸಾಗರದಿಂದ ಮೋಡಗಳನ್ನು ಹೊತ್ತು ತಂದು ಮಳೆ ಸುರಿಸುತ್ತದೆ. ವಾರ್ಷಿಕ ಮಳೆ ವಿಕ್ಟೋರಿಯದಲ್ಲಿ 163", ಚಾಡ್ ಸರೋವರದ ಬಳಿ 15". ಕ್ಯಾಮರೂನ್ ಪರ್ವತದ ಪಶ್ಚಿಮದಲ್ಲಿರುವ ಡಿಬುಂಡ್ಷದಲ್ಲಿ 400" ಮಳೆಯಾಗುತ್ತದೆ.

ಸಸ್ಯ, ಪ್ರಾಣಿಗಳು: ಉತ್ತರ ಅಕ್ಷಾಂಶ 40-60 ಗಳಲ್ಲಿರುವ ಮೈದಾನಗಳು ಮಳೆಗಾಡುಗಳಿಂದ ಆವೃತವಾಗಿವೆ. ಇಲ್ಲಿಯ ಕೆಲವು ಮರಗಳು 200' ವರೆಗೂ ಎತ್ತರವಾಗಿರುವುದುಂಟು. ಜವುಗು ಪ್ರದೇಶದಲ್ಲಿ ತಾಳೆ ಜೊಂಡುಗಳೂ ಕರಾವಳಿಯಲ್ಲಿ ಗುಲ್ಮ ವೃಕ್ಷಗಳೂ ಉಂಟು. 4,000'-8,000' ಎತ್ತರದ ಪ್ರದೇಶಗಳ ನಿತ್ಯ ಹಸಿರು ವೃಕ್ಷಗಳು ಮೈದಾನದವಕ್ಕಿಂತ ಭಿನ್ನವಾದವು. ಅವುಗಳ ಎತ್ತರ ಕಡಿಮೆ. ಇನ್ನೂ ಎತ್ತರದಲ್ಲಿ ಇತರ ಬಗೆಯ ಮರಗಳೂ ಹುಲ್ಲೂ ಬಿದಿರೂ ಬೆಳೆಯುತ್ತವೆ. ಮಳೆಗಾಡುಗಳ ಉತ್ತರಕ್ಕೆ ಸವಾನ ಕಾಡುಗಳುಂಟು.

ದಟ್ಟವಾದ ಮಳೆಗಾಡುಗಳಲ್ಲಿ ಗೊರಿಲ್ಲ, ಚಿಂಪಾಂಜಿ, ಬಗೆಬಗೆಯ ಕೋತಿಗಳು ಇವೆ. ಹುಲ್ಲುಬೆರೆತ ಕಾಡುಗಳಲ್ಲಿ ಆನೆ, ಬಬೂನ್, ಜಿಂಕೆಗಳುಂಟು. ಉತ್ತರದಲ್ಲಿ ಜಿರಾಫೆಗಳನ್ನೂ ಖಡ್ಗಮೃಗಗಳನ್ನೂ ಕಾಣಬಹುದು. ಬಾವಲಿ, ಸಣ್ಣ ಮಾಂಸಾಹಾರಿ ಪ್ರಾಣಿಗಳು ಮತ್ತು ಬಗೆ ಬಗೆಯ ಹಕ್ಕಿಗಳು ಇವೆ. ಹಾವು, ಹಲ್ಲಿ, ಕಪ್ಪೆಗಳೂ ಕಡಿಮೆಯಿಲ್ಲ. ಅಪಾಯಕಾರಿಗಳಾದ ಟ್ಸೆಟ್ಸಿ ನೊಣಗಳು ಕಾಡುಗಳಲ್ಲೂ ಹುಲ್ಲುಗಾಡುಗಳಲ್ಲೂ ವ್ಯಾಪಕವಾಗಿವೆ. ಅತ್ಯಂತ ಉತ್ತರದಲ್ಲಿ ದನಗಳನ್ನು ಸಾಕುತ್ತಾರೆ. ಕುದುರೆ, ಕತ್ತೆ, ಒಂಟೆಗಳು ಹೇರುಪ್ರಾಣಿಗಳು, ಹುಲ್ಲುಗಾಡುಗಳಲ್ಲಿ ಜೇನು ಒಂದು ವಿಶೇಷ. ಕೃಷಿ, ಕೈಗಾರಿಕೆ

ಆಫ್ರಿಕದ ಉಷ್ಣವಲಯ ರಾಷ್ಟ್ರಗಳ ಪೈಕಿ ಕ್ಯಾಮ ರೂನಿನಲ್ಲಿಯ ತಲಾ ವರಮಾನ ಅತ್ಯಂತ ಹೆಚ್ಚು. ಆದರೆ ಅದರ ಅರ್ಥವ್ಯವಸ್ಥೆಗೆ ಈಗಲೂ ಕೃಷಿಯೇ ತಳಹದಿ. ಮುಖ್ಯವಾದ ನಗದು ಬೆಳೆಗಳು ಕೋಕೋ, ಕಾಫಿ, ರಬ್ಬರ್ ಮತ್ತು ತಾಳೆ ಎಣ್ಣೆ. ಬನಾವವೂ ಮುಖ್ಯವಾಗಿತ್ತು. ಕಳೆದ ಕೆಲವು ವರ್ಷಗಳಲ್ಲಿ ಅದರ ಪ್ರಾಮುಖ್ಯ ಕಡಿಮೆಯಾಗಿದೆ. ಹತ್ತಿಯ ಉತ್ಪಾದನೆಯೂ ಈಚೆಗೆ ಅಭಿವೃದ್ಧಿಯಾಗುತ್ತಿದೆ. ಸಾರ್ಗಂ, ಮೆಕ್ಕೆಜೋಳ, ಬತ್ತ, ಕಬ್ಬು, ನೆಲಗಡಲೆ, ಹುರುಳಿ, ಎಳ್ಳು, ತರಕಾರಿ ಇವು ಇತರ ಬೆಳೆಗಳು. ಪಶ್ಚಿಮ ಕ್ಯಾಮರೂನಿನಲ್ಲಿ ಪ್ಲಾಂಟೇಷನ್ ಬೇಸಾಯ ವೃದ್ಧಿಯಾಗಿದ್ದರೆ ಪೂರ್ವ ಕ್ಯಾಮರೂನಿನಲ್ಲಿ ಕೈಗಾರಿಕೆ ಬೆಳೆಯುತ್ತಿದೆ. ಅಲ್ಯೂಮಿನಿಯಂ ಮತ್ತು ರಾಸಾಯನಿಕ ಕೈಗಾರಿಕೆಗಳು ಮುಖ್ಯವಾದವು. ಈಡೀಯಿ ಅಲ್ಯೂಮಿನಿಯಂ ಆಧಾರಿತ ಕೈಗಾರಿಕಾ ಕೇಂದ್ರ. ಡೌಲ ಮುಖ್ಯ ವಾಣಿಜ್ಯ ಕೇಂದ್ರ.

ಆಡಳಿತ

ಈಗ ಪೂರ್ವ ಕ್ಯಾಮರೂನ್ ಎನಿಸಿಕೊಂಡಿರುವ ಭಾಗ ಹಿಂದೆ ಫ್ರೆಂಚರಿಗೆ ಸೇರಿತ್ತು. 1958ರಲ್ಲಿ ಅದು ಸ್ವಾಯತ್ತೆಯನ್ನೂ 1960ರ ಜನವರಿ 1ರಂದು ಸ್ವಾತಂತ್ರ್ಯವನ್ನೂ ಪಡೆದು, 1960ರ ಮಾರ್ಚ್ 1ರಂದು ಗಣರಾಜ್ಯವಾಯಿತು. 1961ರ ಅಕ್ಟೋಬರ್ 1ರಂದು ಕ್ಯಾಮರೂನ್ ಗಣರಾಜ್ಯದೊಂದಿಗೆ ಬ್ರಿಟಿಷರ ನ್ಯಾಸಪ್ರದೇಶವಾಗಿದ್ದ ದಕ್ಷಿಣ ಕ್ಯಾಮರೂನ್ಸ್ ಮತ್ತು ಬ್ರಿಟಿಷ್ ಆಡಳಿತದಲ್ಲಿದ್ದ ಉತ್ತರ ಕ್ಯಾಮರೂನ್ಸ್ ಇವು ಸೇರಿ ಕ್ಯಾಮರೂನ್ ಸಂಯುಕ್ತ ಗಣರಾಜ್ಯ ಸ್ಥಾಪಿತವಾಯಿತು. ಕ್ಯಾಮರೂನಿನ ಕೇಂದ್ರ ಸರ್ಕಾರದ ಅಧ್ಯಕ್ಷನೂ ಉಪಾಧ್ಯಕ್ಷನೂ ಸಂಯುಕ್ತ ವಿಧಾನಸಭೆಯ ಸದಸ್ಯರೂ ನೇರ ಸಾರ್ವತ್ರಿಕ ಚುನಾವಣೆಗಳಲ್ಲಿ ಆಯ್ಕೆಯಾಗುತ್ತಾರೆ. ಕೇಂದ್ರ ಮಂತ್ರಿಮಂಡಲವನ್ನು ಅಧ್ಯಕ್ಷ ನೇಮಕಮಾಡುತ್ತಾನೆ. ಕ್ಯಾಮರೂನಿನ ಪೂರ್ವಪಶ್ಚಿಮ ಪ್ರಾಂತ್ಯಗಳಿಗೆ ಪ್ರತ್ಯೇಕವಾದ ಪ್ರಧಾನಿಗಳೂ ಸಂಪುಟಗಳೂ ವಿಧಾನಸಭೆಗಳೂ ಇರುತ್ತವೆ.

ಸಾರಿಗೆ

ಪೂರ್ವ ಕ್ಯಾಮರೂನಿಗೂ ಫ್ರೆಂಚ್ ಸಮಭಾಜಕ ವೃತ್ತೀಯ ರಾಜ್ಯಗಳಿಗೂ ಸಾರಿಗೆ ಸಂಪರ್ಕವುಂಟು. ಪಶ್ಚಿಮ ಕ್ಯಾಮರೂನಿನ ಮಾರ್ಗಗಳು ನೈಜೀರಿಯದೊಂದಿಗೆ ಸಂಪರ್ಕ ಕಲ್ಪಿಸಿವೆ. ಡೌಲ-ಯಾವೂಂಡೇ ಮತ್ತು ಯಾವೂಂಡೇ-ಬೆಲಾಬೊ ರೈಲುಮಾರ್ಗಗಳು ಮುಖ್ಯವಾದವು. ಬೆಲಾಬೊದಿಂದ ನ್ಗಾವೂಂಡೇರೆಗೆ ರೈಲುಮಾರ್ಗ ನಿರ್ಮಾಣವಾಗುತ್ತಿದೆ. ಪೂರ್ವ ಪಶ್ಚಿಮ ಪ್ರಾಂತ್ಯಗಳನ್ನು ಸೇರಿಸುವ ಮುಖ್ಯ ರಸ್ತೆಯೊಂದುಂಟು. ಡೌಲ (2,00,000) ಮತ್ತು ವಿಕ್ಟೋರಿಯ ಮುಖ್ಯ ರೇವುಪಟ್ಟಣಗಳು. ಕ್ಯಾಮರೂನಿನ ಹಲವು ಭಾಗಗಳೊಂದಿಗೂ ಇತರ ದೇಶಗಳೊಂದಿಗೂ ಸಂಪರ್ಕ ಕಲ್ಪಿಸುವ ವಿಮಾನ ಸಂಚಾರ ವ್ಯವಸ್ಥೆಯೂ ಉಂಟು. ಕ್ಯಾಮರೂನ್ ಸಂಯುಕ್ತ ರಾಜ್ಯಕ್ಕೂ ಪೂರ್ವ ಕ್ಯಾಮರೂನಿಗೂ ರಾಜಧಾನಿ ಯಾವೂಂಡೇ (1,10,000). ಪಶ್ಚಿಮ ಕ್ಯಾಮರೂನಿನ ರಾಜಧಾನಿ ಬೂಯೇಯ. (ಟಿ.ಇ.ಎಚ್.)