ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ನಿಯಾನ್

ವಿಕಿಸೋರ್ಸ್ದಿಂದ

ನಿಯಾನ್ - ಆವರ್ತಕೋಷ್ಟಕದಲ್ಲಿ ಸೊನ್ನೆ ಗುಂಪಿಗೆ ಸೇರಿದ ಅನಿಲಧಾತು. ರಾಸಾಯನಿಕ ಪ್ರತೀಕ Ne. ಹೀಲಿಯಮ್, ನಿಯಾನ್, ಕ್ರಿಪ್ಟಾನ್, ಗ್ಝಿನಾನ್, ಆರ್ಗಾನ್ ಮತ್ತು ರೇಡಾನ್ ಇವನ್ನೊಳಗೊಂಡ ವಿರಳ ಅಥವಾ ನಿಷ್ಕ್ರಿಯ ಅನಿಲಗಳ ಕುಟುಂಬದ ಸದಸ್ಯ. ಆಂಗ್ಲ ರಸಾಯನವಿಜ್ಞಾನಿಗಳಾದ ಸರ್ ವಿಲಿಯಮ್ ರ್ಯಾಮ್ಸೆ ಮತ್ತು ಎಂ. ಡಬ್ಲ್ಯು. ಟ್ರ್ಯಾವರ್ಸ್ ಎಂಬವರು ಅಶುದ್ಧವಾದ ಅರ್ಗಾನ್ ಅನಿಲದ ದ್ರವವನ್ನು ಆಂಶಿಕ ಆಸವನ ಮಾಡುತ್ತಿದ್ದಾಗ ಹೊಸತೊಂದು ಅನಿಲವನ್ನು ಶೋಧಿಸಿದರು (1898). ಅದನ್ನು ವಿದ್ಯುತ್ತಿನಿಂದ ಉದ್ರೇಕಿಸಿದಾಗ ಕಿತ್ತಳೆಮಿಶ್ರಿತ ಕೆಂಪುಬಣ್ಣದ ಉಜ್ಜ್ವಲ ಪ್ರಕಾಶ ಹೊಮ್ಮಿದ್ದು ಕಂಡುಬಂದಿತು. ಆಗಲೆ ಇದೊಂದು ಹೊಸ ಧಾತು ಇರಬೇಕು ಎಂದು ಗುರುತಿಸಿ ಇದನ್ನು ನಿಯಾನ್ (ಹೊಸತು ಎಂಬರ್ಥ) ಎಂಬುದಾಗಿ ನಾಮಕರಿಸಲಾಯಿತು. ನಿಯಾನ್ ಅನಿಲ ಸೃಷ್ಟಿಯಲ್ಲಿ ವಿಶಾಲವಾಗಿ ಆದರೆ ಅತ್ಯಲ್ಪ ಮೊತ್ತದಲ್ಲಿ ಹರಡಿಹೋಗಿದೆ. ಇದು ವಾಯು ಮಂಡಲದಲ್ಲಿದೆ. ಭೂಮಿಯಲ್ಲಿಯ ಕಲ್ಲುಬಂಡೆಗಳಲ್ಲಿ ಸಿಕ್ಕಿಕೊಂಡು ಕೂಡ ಇದೆ. ಒಣವಾಯುವಿನಿಂದ ಗಾತ್ರರೀತ್ಯ 0.0018% ಪ್ರಮಾಣದಲ್ಲಿಯೂ ಭೂಮಿಯಲ್ಲಿ ತೂಕರೀತ್ಯ 5(10-7% ಪ್ರಮಾಣದಲ್ಲಿಯೂ ಇರುವುದು.

ದ್ರವವಾಯುವನ್ನು ಆಂಶಿಕವಾಗಿ ಆಸವಿಸಿ ನಿಯಾನನ್ನು ತಯಾರಿಸುತ್ತಾರೆ. ಆಂಶಿಕಾಸವನದಲ್ಲಿ ದೊರೆಯುವ ಅತಿ ಆವಿಶೀಲ ಘಟಕದಲ್ಲಿ ಹೀಲಿಯಮ್, ನಿಯಾನ್ ಮತ್ತು ನೈಟ್ರೊಜನ್ನುಗಳು ಇರುತ್ತವೆ. ಈ ಮಿಶ್ರಣದಲ್ಲಿದ್ದ ಹೀಲಿಯಮ್ ಮತ್ತು ನೈಟ್ರೊಜನ್ನುಗಳನ್ನು ಅಧಿಕ ಒತ್ತಡ ಮತ್ತು ಕಡಿಮೆ ಉಷ್ಣತೆಯಲ್ಲಿ ಚುರುಕಾದ ಇದ್ದಲಿನ ಮೇಲೆ ಐಚ್ಛಿಕ ಅಧಿಶೋಷಣೆ ಮಾಡುವುದರಿಂದ ಬೇರ್ಪಡಿಸಿ ನಿಯಾನನ್ನು ಶೇಖರಿಸಲಾಗುತ್ತದೆ. ನಿಯಾನ್ ಅನಿಲಕ್ಕೆ ಬಣ್ಣ ವಾಸನೆ ಮತ್ತು ರುಚಿ ಇಲ್ಲ. ಇದು ವಾಯುವಿಗಿಂತ ಹಗುರ. ಇದರ ಪರಮಾಣು ಸಂಖ್ಯೆ 10. ಪರಮಾಣುತೂಕ 20.183. ವೇಲೆನ್ಸಿ 0. ಸಾಂದ್ರತೆ (1 ಪರಮಾಣು, 0ºಅ) 0.8999 ಗ್ರಾಮ್/ಲೀಟರ್. ಕ್ವಥನಬಿಂದು-246.0480ಅ, ದ್ರವನಬಿಂದು -248.670ಅ ಎಲೆಕ್ಟ್ರಾನ್ ಜೋಡಣೆ . ನಿಯಾನ್ ಯಾವ ತರಹದ ರಾಸಾಯನಿಕ ಸಂಯುಕ್ತಗಳನ್ನೂ ಕೊಡುವುದಿಲ್ಲ.

ನಿಯಾನ್ ಅನಿಲವನ್ನು ಅತಿ ಮುಖ್ಯವಾಗಿ ಪ್ರದರ್ಶನ ಹಾಗೂ ಪ್ರಚಾರಕ್ಕಾಗಿ ಬೇಕಾಗುವ ನಿಯಾನ್ ಗುರುತುಗಳನ್ನು ಮಾಡಲಿಕ್ಕೆ ಬಳಸುತ್ತಾರೆ. ನಿಯಾನ್ ಗುರುತುಗಳೆಂದರೆ ನಿಯಾನ್, ಆರ್ಗಾನ್ ಮತ್ತು ಹೀಲಿಯಮ್ ಅನಿಲಗಳಿಂದಾಗಲಿ ಅವುಗಳ ಮಿಶ್ರಣದಿಂದಾಗಲಿ ತುಂಬಿದ ಅಧಿಕ ವೋಲ್ಟೇಜಿನ ವಿದ್ಯುತ್ ವಿಸರ್ಜಕ ಗಾಜಿನ ಕೊಳವೆಗಳು. ಕೆಲವು ಸಲ ಈ ಕೊಳವೆಗಳಲ್ಲಿ ಪಾದರಸದ ಹಬೆಯನ್ನು ತುಂಬುವುದೂ ಉಂಟು. ಆದರೆ ಗಾಜಿನ ಕೊಳವೆಯ ಬಣ್ಣ ಹಾಗೂ ಅದರಲ್ಲಿ ತುಂಬಿದ ಅನಿಲವನ್ನು ನಿಯಾನ್ ಗುರುತಿನ ಬಣ್ಣ ಅವಲಂಬಿಸಿರುತ್ತದೆ. ವರ್ಣರಹಿತ ಗಾಜಿನ ಕೊಳವೆಯಲ್ಲಿ ನಿಯಾನ್ ಅನಿಲ ಕೆಂಪುಬಣ್ಣದ ಹೊಳಪನ್ನು ಕೊಟ್ಟರೆ ಹಳದಿ ಬಣ್ಣದ ಗಾಜಿನ ಕೊಳವೆಯಲ್ಲಿ ಅದೇ ಹೊಳಪು ಕಿತ್ತಳೆಬಣ್ಣದ ಹೊಳಪಾಗಿ ಕಾಣಿಸುತ್ತದೆ. ಅದರಂತೆಯೆ ಹೀಲಿಯಮ್, ಆರ್ಗಾನ್ ಮತ್ತು ನಿಯಾನ್ ಅನಿಲಗಳ ಮಿಶ್ರಣ ವರ್ಣರಹಿತ ಗಾಜಿನ ಕೊಳವೆಯಲ್ಲಿ ನೀಲಿಬಣ್ಣದ ಹೊಳಪನ್ನು ಕೊಟ್ಟರೆ ಅದೇ ಹೊಳಪು ಹಳದಿ ಬಣ್ಣದ ಗಾಜಿನ ಕೊಳವೆಯಲ್ಲಿ ಹಸಿರು ಬಣ್ಣದ ಹೊಳಪಾಗಿ ಕಾಣಿಸುತ್ತದೆ. ಅಧಿಕ ವೋಲ್ಟೇಜನ್ನು ಅಳೆಯುವ ಸಾಧನಗಳನ್ನು ಮಾಡಲು ನಿಯಾನ್ ಅನಿಲವನ್ನು ಉಪಯೋಗಿಸುತ್ತಾರೆ. ಅಲ್ಲದೆ ಹೈಡ್ರೋಜನ್ನಿಗಿಂತ ನಿಯಾನ್ ಬೆಲೆಯುಳ್ಳದ್ದಾದರೂ ಹೈಡ್ರೊಜನ್ನಿನಂತೆ ಜ್ವಲನಶೀಲವಲ್ಲವಾದ್ದರಿಂದ ಇದನ್ನು ಅತಿಶೀತಕಾರಕ ದ್ರವ ಎಂದು ಬಳಸುತ್ತಾರೆ. (ಎಸ್.ವೈ.ಎ.)