ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಮಿಖಾಯಿಲ್, ಗೋರ್ಬಚೆವ್

ವಿಕಿಸೋರ್ಸ್ದಿಂದ

ಮಿಖಾಯಿಲ್, ಗೋರ್ಬಚೆವ್ 1930-ಸೋವಿಯತ್ ಸಮಾಜವಾದಿ ಗಣರಾಜ್ಯಗಳ ಒಕ್ಕೂಟ್‍ದ ನಾಯಕ ಹಾಗೂ ಕಮ್ಯೂನಿಸ್ಟ್ ಪಕ್ಷದ ಮಹಾಕಾರ್ಯದರ್ಶಿ. 1930 ಮಾರ್ಚ್ 2ರಂದು ಕಾಕಸಸ್ ಪರ್ವತದ ಉತ್ತರಕ್ಕೆ ಸ್ಟಾವ್ರೂಪೋಲ್ ಪ್ರದೇಶದ ಪ್ರಿವೋಲ್ಯೆ ಗ್ರಾಮದಲ್ಲಿ ಜನನ. ಫಲವತ್ತಾದ ಈ ಪ್ರದೇಶ ಎರಡನೆಯ ಮಹಾಯುದ್ಧದ ಕಾಲದಲ್ಲಿ ಜರ್ಮನ್ ಆಕ್ರಮಣಕ್ಕೆ ಒಳಗಾಗಿತ್ತು.

ವಿದ್ಯಾರ್ಥಿಯಾಗಿದ್ದಾಗಲೆ ಗೋರ್ಬಚೆವ್ ಟ್ರಾಕ್ಟರ್ ಚಾಲಕರಾಗಿ ಶ್ರಮದ ಅನುಭವ ಗಳಿಸಿದರು. ಹತ್ತೊಂಬತ್ತನೆಯ ವಯಸ್ಸಿನಲ್ಲಿ (1950) ಮಾಸ್ಕೋವಿಶ್ವವಿದ್ಯಾಲಯದ ಕಾನೂನು ಶಾಲೆಯನ್ನು ಪ್ರವೇಶಿಸಿ. ಕಾನೂನಿನೊಂದಿಗೆ ರಾಜಕೀಯದಲ್ಲೂ ಆಸಕ್ತಿಬೆಳೆಸಿಕೊಂಡರು. ಯುವ ಕಮ್ಯೂನಿಸ್ಟ್ ಕೂಟವಾದ ಕಾಮ್ಸೊಮೋಲಿನ ಸದಸ್ಯರಾಗಿ, ಅದರ ಕಾರ್ಯದರ್ಶಿಯಾಗಿ ಸಂಘಟನೆಯ ಕಾರ್ಯದಲ್ಲಿ ನುರಿತರು. ಇವರು ವಿದ್ಯಾರ್ಥಿಯಾಗಿದ್ದಾಗ ಸೋವಿಯತ್ ದೇಶದಲ್ಲಿ ಮಹಾಪರಿವರ್ತನೆಗಳಾಗ ತೊಡಗಿದ್ದವು.

ವಿದ್ಯಾರ್ಥಿ ಜೀವನ ಮುಗಿದಮೇಲೆ ಮಿಖಾಯಿಲ್ ಗೋರ್ಬಚೆವ್ ಸ್ಟಾವ್ರೊಪೋಲಿಗೆ ಹಿಂದಿರುಗಿ ಅಲ್ಲಿ ಇಪ್ಪತ್ತೆರಡು ವರ್ಷ ಇದ್ದರು. ಕಾಮ್ಸೊಮೋಲ್ ಕಾರ್ಯದರ್ಶಿಸ್ಥಾನದಿಂದ ಕ್ರಮಕ್ರಮವಾಗಿ ಮೇಲೇರಿ ಕಮ್ಯೂನಿಸ್ಟ್ ಪಕ್ಷದ ಪ್ರಾದೇಶಿಕ ಘಟಕದ ಪ್ರಥಮ ಕಾರ್ಯದರ್ಶಿಯಾದರು. 1971ರಲ್ಲಿ ಸೋವಿಯತ್ ಒಕ್ಕೂಟ್ ಕಮ್ಯೂನಿಸ್ಟ ಪಕ್ಷದ ಕೇಂದ್ರ ಸಮಿತಿಯ ಸದಸ್ಯರಾದರು. 1958ರಲ್ಲಿ ಆ ಸಮಿತಿಯ ಕಾರ್ಯದರ್ಶಿ ಸ್ಥಾನಕ್ಕೆ ಏರಿದರು. ಮರುವರ್ಷ ಪಾಲಿಟ್‍ಬ್ಯೂರೋದ ಅಭ್ಯರ್ಥಿ ಸದಸ್ಯರಾದರು. 1980ರಲ್ಲಿ ಅದರ ಪೂರ್ಣ ಸದಸ್ಯರಾದರು.

ಸೋವಿಯತ್ ಅಧ್ಯಕ್ಷ ಹಾಗೂ ಪಕ್ಷದ ಮಹಾಕಾರ್ಯದರ್ಶಿಯಾಗಿದ್ದ ಲಿಯೊನಿಡ್ ಬ್ರೆಜ್ನವರ ಇಳಿವಯಸ್ಸಿನಲ್ಲಿ ಗೋರ್ಬಚೆವ್‍ರ ಪ್ರಭಾವ ಕ್ರಮೇಣ ಏರುತ್ತಿತ್ತು. ಕೃಷಿ ಕ್ಷೇತ್ರದಲ್ಲಿ ಅವರು ಮಹತ್ತರ ಬದಲಾವಣೆಗಳನ್ನು ತಂದರು. ಅದನ್ನು ವಿಕೇಂದ್ರೀಕರಿಸಲು ಸ್ಥಳೀಯ ತಂಡಗಳಿಗೆ ಅಧಿಕಾರ ಹಾಗೂ ಹೊಣೆಯನ್ನು ವರ್ಗಾಯಿಸುವ ಕ್ರಮ ತೆಗೆದುಕೊಂಡರು.

ಬ್ರೆಜ್ನವರ ನಿಧನಾನಂತರ ಸೋವಿಯತ್ ಒಕ್ಕೂಟದ ನಾಯಕರಾದ ಆಂದ್ರೊಪೋವರ ಅಧಿಕಾರದ ಕಾಲದಲ್ಲಿ ಗೋರ್ಬಚೆವರಿಗೆ ಹೆಚ್ಚಿನ ಅವಕಾಶ ದೊರಕಿತು. ಅಂದ್ರೋಪೋವ್ ತೀರಿಕೊಂಡಾಗ ಹಿರಿಯನಾಯಕ ಚೆರ್ನೈಂಕೊ ಅಧಿಕಾರಕ್ಕೆ ಬಂದರು. ಅವರು ತೀರಿಕೊಂಡ ಕೆಲವೇ ಘಂಟೆಗಳಲ್ಲಿ ಮಿಖಾಯಿಲ್ ಗೋರ್ಬಚೆವ್ ಸೋವಿಯತ್ ಒಕ್ಕೂಟ ಕಮ್ಯೂನಿಸ್ಟ್ ಪಕ್ಷದ ಮಹಾಕಾರ್ಯದರ್ಶಿ ಹಾಗೂ ದೇಶದ ಅಧ್ಯಕ್ಷ ಆದರು (11ಮಾರ್ಚ್ 1985).

ಈ ತನಕ (1988) ಅಧಿಕಾರದಲ್ಲಿ ಗೋರ್ಬಚೆವ್‍ರು ಸೋವಿಯತ್ ಆಡಳಿತದಲ್ಲಿ ಅನೇಕ ಬದಲಾವಣೆಗಳನ್ನು ತಂದಿದ್ದಾರೆ. ವಿದೇಶಾಂಗ ವ್ಯವಹಾರಗಳಲ್ಲಿ ದೇಶವನ್ನು ಶಾಂತಿ-ಸೌಹಾರ್ದಗಳ ಹಾದಿಯಲ್ಲಿ ನಡೆಸಲು ಇನ್ನಷ್ಟು ಯತ್ನ ನಡೆಸಿದ್ದಾರೆ. ಭಾರತದೊಂದಿಗಿನ ಸಖ್ಯ ಇನ್ನಷ್ಟು ಭದ್ರವಾಗಿದೆ. ಸೋವಿಯತ್ ದೇಶದ ಅಧ್ಯಕ್ಷರ ಅಧಿಕಾರವನ್ನು ಬಿಟ್ಟುಕೊಟ್ಟು ಮಹಾಕಾರ್ಯದರ್ಶಿಯ ಹೊಣೆಯನ್ನೇ ಪೂರ್ತಿಯಾಗಿ ನಿರ್ವಹಿಸತೊಡಗಿದ್ದಾರೆ. ಇವೆರಡೂ ಅಧಿಕಾರಗಳು ಒಬ್ಬ ವ್ಯಕ್ತಿಯ ಕೈಗೇ ಬಂದದ್ದು ಬ್ರೆಜ್ನೆವರ ಕಾಲದಲ್ಲಿ. ಸೋವಿಯತ್ ಸಮಾಜದ ಬಿಗಿಯಾದ ಕಟ್ಟುಗಳನ್ನು ಸಡಿಲಿಸುವುದೂ ಮುಚ್ಚುಮರೆಯನ್ನು ತೆಗೆಯುವುದೂ ಈಗಿನ ನೀತಿ. (ಎಚ್.ಎಸ್.ಕೆ.)