ಪುಟ:ಯಶೋಧರ ಚರಿತೆ.pdf/೧೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಯಶೋಧರ ಚರಿತೆ

೧೧೩

ಪ್ರಜೆಯೆಲ್ಲಂ ಜಲಗಂಧ
ಸ್ರಜ ತಂಡುಲ ಧೂಪ ದೀಪ ಚರು ತಾಂಬೂಲ
ವಜ್ರದಿಂ ಪೂಜಿಸುವುದು ಜೀ-
ವಜಾತದಿಂದೆನಗೆ ಬಲಿಯನಿತ್ತೊಡೆ ಮುನಿವೆಂ೭೩

ಎಂದು ತಿರೋಹಿತೆಯಾದೊಡೆ
ತಂದಿರಿಸಿದ ಜೀವರಾಶಿಯಂ ಬಿಡಿಸಿ ಜನಾ-
ನಂದನರಂ ತನ್ನನುಜೆಯ
ನಂದನರಂ ಮಾರಿದತ್ತವಿಭು ಲಾಲಿಸಿದಂ೭೪

ಗುಡುಗುಡನೆ ಸುರಿವ ಕಣ್ಬನಿ-
ಯೊಡವಂದಶುಭಕ್ಕೆ ಮಂಗಳಸ್ನಾನಮಂ-
ದೊಡರಿಸೆ ಸೋದರ ಶಿಶುಗಳ-

ನೊಡಲೊಳ್ ಮಡಗುವಿನಮಪ್ಪಿ ಬೆಚ್ಚನೆ ಸುಯ್ದಂ

೭೫




ಕೇಳುವಂತೆ ಅವಳು ಸೂಚನೆಯಿತ್ತಳು : ೭೩ "ಪ್ರಜೆಗಳೇ ಕೇಳಿರಿ. ನೀವು
ಇನ್ನು ಮುಂದೆ ನೀರು, ಗಂಧ, ಮಾಲೆ, ಅಕ್ಕಿ, ಧೂಪ, ದೀಪ, ಚರು, ತಾಂಬೂಲ
ಎಂಬವುಗಳಿಂದಲೇ ನನ್ನ ಪೂಜೆಯನ್ನು ಮಾಡಬೇಕು. ಎಲ್ಲಿಯಾದರೂ
ಪ್ರಾಣಿಗಳನ್ನು ಬಳಿಕೊಟ್ಟಿರೆಂದಾದರೆ ನಿಮ್ಮ ಮೇಲೆ ಕೋಪಿಸಿಕೊಂಡೇನು."
೭೪. ಇಷ್ಟನ್ನು ಉದ್ಘೋಷಿಸಿ ಚಂಡಮಾರಿ ಮಾಯವಾದಳು. ಆಗ
ಮಾರಿದತ್ತರಾಜನು ಎಲ್ಲ ಪ್ರಾಣಿಗಳ ಬಂದನವನ್ನೂ ಬಿಡಿಸಿದನು. ತನ್ನ ತಂಗಿಯ
ಮಕ್ಕಳಾದ ಹಾಗೂ ಎಲ್ಲ ಜನರಿಗೆ ಆನಂದವುಂಟುಮಾಡುವ ಅಭಯರುಚಿ
ಅಭಯಮತಿಯನ್ನು ಅವನು ಮುದ್ದಾಡಿದನು. ೭೫. ಅರಸನ ಕಣ್ಣುಗಳಿಂದ
ಎಡೆಬಿಡದೆ ಕಂಬನಿ ಸುರಿಯುತ್ತಿತ್ತು. ಬಂದೊದಗಿದ ಅಶುಭವನ್ನು
ಪರಿಹರಿಸುವುದಕ್ಕಾಗಿ ಮಂಗಳಸ್ನಾನ ಮಾಡುವಂತೆ ಅಶ್ರುಸ್ನಾನವಾಯಿತು. ತನ್ನ
ಸೋದರಳಿಯ ಮತ್ತು ಸೋದರ ಸೊಸೆಯನ್ನು ತನ್ನ ಒಡಲಲ್ಲಿ ಅಡಗಿಸುವನೋ
ಎಂಬಂತೆ ಅವರನ್ನು ಗಾಢವಾಗಿ ಆಲಿಂಗಿಸಿದನು. ಉಸಿರು ಬಿಸಿಯಾಗಿ
ಹೊಮ್ಮುತ್ತಿತ್ತು.