ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಏಬ್ರಹಾಂ

ವಿಕಿಸೋರ್ಸ್ದಿಂದ

ಏಬ್ರಹಾಂ: ಯೆಹೂದಿ ನಂಬಿಕೆಯ ಪ್ರಕಾರ ಪ್ರಾಚೀನ ಹೀಬ್ರೂ ರಾಷ್ಟ್ರದ ಸ್ಥಾಪಕ. ಏಬ್ರಹಾಂ ಎಂದರೆ ಹಲವರ ತಂದೆ ಎಂದು ಬೈಬಲಿನ ಅರ್ಥ. ಈತನನ್ನು ಏಬ್ರಾಂ ಎಂದೂ ಕರೆಯಲಾಗಿದೆ. ಈ ತಂದೆ ಮಹೋನ್ನತ-ಎಂಬುದು ಏಬ್ರಾಂ ಪದವನ್ನು ಕುರಿತ ವ್ಯಾಖ್ಯಾನ. ಐಸಾಕ್ ಇವನ ಸಂತಾನ. ಆದ್ದರಿಂದ ಈತ ಯೆಹೂದ್ಯರ ಆದ್ಯಪುರುಷ. ಇಸ್ಮಾಯೀಲ್ (ಇಷ್ಮೇಅಲ್) ಈತನ ಮಗನೇ ಆದ್ದರಿಂದ ಈತ ಅರಬ್ಬರಿಗೂ ಹಿರಿಯ.

ದಕ್ಷಿಣ ಬ್ಯಾಬಿಲೋನಿಯದ ಕಾಲ್ಡೀಸಿನ ಅರ್ ನಲ್ಲಿ ಏಬ್ರಹಾಂ ಜನಿಸಿದ. ಇವನ ತಂದೆ ಟೆರಾ; ಒಬ್ಬ ವಿಗ್ರಹಾರಾಧಕ. ಇವನ ಹೆಂಡತಿಯ ಹೆಸರು ಸಾರಾ. ಅನೇಕ ಕಡೆಗಳಲ್ಲಿ ಸಂಚರಿಸಿ ಹಾರಾನ್ ನಲ್ಲಿ ನೆಲೆಸಿದ್ದಾಗ ದೇವರು ಇವನಿಗೆ ಪ್ರತ್ಯಕ್ಷನಾದ. ಆತನ ಆಜ್ಞೆಯಂತೆ ಕ್ಯಾನಾನಿಗೆ ಹೋಗಿ ಅಲ್ಲಿ ಹೊಸ ರಾಷ್ಟ್ರ ಸ್ಥಾಪಿಸುವ ಉದ್ದೇಶದಿಂದ ತನ್ನ ಮಗ ಐಸಾಕನನ್ನೇ ಬಲಿಕೊಡಲು ಉದ್ಯುಕ್ತನಾಗಿದ್ದಾಗ ದೇವರು ಪ್ರತ್ಯಕ್ಷನಾಗಿ ಈ ಬಲಿಯನ್ನು ತಡೆದನಲ್ಲದೆ ಈತನ ದೃಢಭಕ್ತಿಗೆ ಮೆಚ್ಚಿ ಅನುಗ್ರಹಿಸಿದ. ನಿನ್ನ ವಂಶಜರಿಂದ ಎಲ್ಲ ರಾಷ್ಟ್ರಗಳೂ ಪುನೀತವಾಗಲಿ ಎಂಬುದು ದೇವರು ಈತನಿಗೆ ಕೊಟ್ಟ ವರ.

ಇಸ್ಲಾಂ ನಂಬಿಕೆಯ ಪ್ರಕಾರ ನೂಹ್ ಪ್ರವಾದಿಗಳಿಗೆ ಹಾಂ, ಸಾಂ ಮತ್ತು ಯಾಫುಸ್ ಎಂಬ ಮೂವರು ಮಕ್ಕಳಿದ್ದರು. ಏಬ್ರಹಾಂನದು ಸಾಂ ವಂಶ. ಈತನ ಅಡ್ಡ ಹೆಸರು ದೇವರ ಮಿತ್ರ. ತಂದೆ ಅಜರ್, ರಾಜನಾದ ನಮ್ರೂದನ ನೌಕರ, ಜೊತೆಗೆ ವಿಗ್ರಹ ತಯಾರಕ. ತನ್ನ ಕಾಲದಲ್ಲಿ ಒಬ್ಬ ಮಹಾವ್ಯಕ್ತಿಯ ಜನ್ಮವಾಗುವುದೆಂದೂ ಅವನಿಂದ ಅವನೂ ಅವನ ರಾಜ್ಯವೂ ನಾಶವಾಗುವುದಾಗಿಯೂ ನುಡಿದ ಭವಿಷ್ಯವಾಣಿಯಿಂದ ಕಿಡಿಯಾದ ನಮ್ರೂದ್ ದೊರೆ ಎಲ್ಲ ಎಳೆ ಮಕ್ಕಳನ್ನೂ ಕೊಲ್ಲಬೇಕೆಂದು ಆಜ್ಞಾಪಿಸಿದ. ಆದ್ದರಿಂದ ಏಬ್ರಹಾಂ ಹುಟ್ಟಿದ್ದು ಊರ ಹೊರಗಿನ ಒಂದು ಗುಹೆಯಲ್ಲಿ. ತಾಯಿ ತನ್ನ ಮಗುವನ್ನು ಅಲ್ಲೇ ಗುಟ್ಟಾಗಿ ಇಟ್ಟು ಎದೆ ಹಾಲು ಕೊಟ್ಟು ಬೆಳೆಸಿದಳು. ಏಬ್ರಹಾಂ ದೊಡ್ಡವನಾದ ಮೇಲೆ ದೊರೆಯ ಕೋಪಕ್ಕೆ ಪಾತ್ರನಾಗಿ ಅವನಿಂದ ತಪ್ಪಿಸಿಕೊಂಡು ಸಿರಿಯಕ್ಕೆ ಹೋಗಿ ಅಲ್ಲಿ ಸಾರಾಳನ್ನು ಮದುವೆಯಾಗಿ ಈಜಿಪ್ಟಿಗೆ ಹೋದ. ಸುಂದರಿ ಪತ್ನಿಯ ದೆಸೆಯಿಂದ ಬಲು ಕಷ್ಟಪಟ್ಟು ಅಲ್ಲಿಂದಲೂ ತಪ್ಪಿಸಿಕೊಂಡ. ಅಲ್ಲಿ ಈತನಿಗೆ ದಾಸಿಯಾಗಿ ದೊರಕಿದ ಹಾಜರಾಳಲ್ಲಿ ಹುಟ್ಟಿದ ಮಗುವಿನ ಹೆಸರು ಇಸ್ಮಾಯಿಲ್. ಸವತಿ ಸಾರಾಳ ಮತ್ಸರಕ್ಕೆ ತುತ್ತಾದ ದಾಸಿಯೂ ಆಕೆಯ ಪುತ್ರನೂ ದೇಶಭ್ರಷ್ಟರಾಗಿ ಮೆಕ್ಕಾಕ್ಕೆ ಬಂದರು. ಅಲ್ಲಿ ಇವರು ಬಾಯಾರಿದಾಗ ಇಸ್ಮಾಯಿಲನ ಕಾಲ ಬಳಿಯಲ್ಲೇ ನೀರಿನ ಚಿಲುಮೆ ಸಿಕ್ಕಿತೆಂದೂ ಮುಂದೆ ಏಬ್ರಹಾಮನೂ ಇಲ್ಲಿಗೆ ಬಂದು ಮಗನನ್ನು ಕೂಡಿಕೊಂಡು ಇಲ್ಲಿ ಕಾಬಾ ಕಟ್ಟಡ ಕಟ್ಟಿದನೆಂದೂ ನಂಬಿಕೆಯಿದೆ. ಮುಸ್ಲಿಮರು ಪ್ರಾರ್ಥನೆ ಮಾಡುವಾಗ ಕಾಬಾದ ಕಡೆ ಮುಖ ತಿರುಗಿಸಿಕೊಳ್ಳುತ್ತಾರೆ. ಏಬ್ರಹಾಂ ಯೆಹೂದ್ಯರ ತಂದೆಯೆಂದು ಇವರೂ ನಂಬುತ್ತಾರೆ. (ಎಸ್.ಎ.ಟಿ.ಕೆ.)